ADVERTISEMENT

ಶೇಕಡ 10 ಪಾಸಿಟಿವಿಟಿ ದರ: ಕಂಟೈನ್‌ಮೆಂಟ್‌ ಕ್ರಮಕ್ಕೆ ಸೂಚನೆ

14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಕೇಂದ್ರದ ನಿರ್ದೇಶನ

ಪಿಟಿಐ
Published 30 ಜೂನ್ 2021, 15:16 IST
Last Updated 30 ಜೂನ್ 2021, 15:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್‌–19 ಪಾಸಿಟಿವಿಟಿ ದರ ಶೇಕಡ 10ಕ್ಕಿಂತ ಹೆಚ್ಚು ಇರುವ ಜಿಲ್ಲೆಗಳಲ್ಲಿ ಕಂಟೈನ್‌ಮೆಂಟ್‌ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಕೇಂದ್ರ ಸರ್ಕಾರವು 14 ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.

ಕೋವಿಡ್‌–19 ಪ್ರಕರಣಗಳು ದೇಶದಾದ್ಯಂತ ಕಡಿಮೆಯಾಗುತ್ತಿದ್ದರೂ ನಿರ್ಲಕ್ಷ್ಯವಹಿಸಬಾರದು. ನಿರಂತರ ನಿಗಾವಹಿಸುವುದು ಅಗತ್ಯ. ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಹೆಚ್ಚು ಗಮನಹರಿಸಬೇಕು ಎಂದು ತಿಳಿಸಿದೆ.

ರಾಜಸ್ಥಾನ, ಮಣಿಪುರ, ಸಿಕ್ಕಿಂ, ತ್ರಿಪುರಾ, ಪಶ್ಚಿಮ ಬಂಗಾಳ, ಪುದುಚೇರಿ, ಒಡಿಶಾ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್‌, ಕೇರಳ, ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳಿಗೆ ಕೇಂದ್ರವು ಪತ್ರ ಬರೆದಿದೆ.

ADVERTISEMENT

ಜೂನ್‌ 21ರಿಂದ 27ರ ಅವಧಿಯಲ್ಲಿ ಹೆಚ್ಚು ಪಾಸಿಟಿವಿಟಿ ದರ ಕಂಡು ಬಂದಿರುವ ಜಿಲ್ಲೆಗಳಲ್ಲಿ ಕಠಿಣ ನಿಯಂತ್ರಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಪತ್ರ ಬರೆದಿದ್ದಾರೆ.

ಸೋಂಕು ಕಂಡು ಬಂದ ತಕ್ಷಣವೇ ಆಸ್ಪತ್ರೆಗೆ ದಾಖಲಿಸಬೇಕು ಅಥವಾ ಪ್ರತ್ಯೇಕ ವಾಸವಾಗಿರಿಸಿಲು ಕ್ರಮಕೈಗೊಳ್ಳಬೇಕು ಹಾಗೂ ವಾರ್ಡ್‌ವಾರು ಪರಿಶೀಲನೆ ನಡೆಸುವುದು ಸೇರಿದಂತೆ ಹಲವು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸಲಹೆ ನೀಡಿದ್ದಾರೆ.

ಹಂತ ಹಂತವಾಗಿ ನಿರ್ಬಂಧ ಸಡಿಲಿಸಿ: ರಾಜ್ಯ ಸರ್ಕಾರಗಳು ನಿರ್ಬಂಧಗಳನ್ನು ಎಚ್ಚರಿಕೆಯಿಂದ ಹಂತ ಹಂತವಾಗಿ ಸಡಿಲಿಸಬೇಕು ಎಂದು ಅವರು ಸೂಚಿಸಿದ್ದಾರೆ.

ಸೋಂಕು ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಬಂಧಗಳನ್ನು ಹೇರುವುದು ಅಥವಾ ಸಡಿಲಿಕೆ ಮಾಡಬೇಕು. ಜತೆಗೆ, ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಕಲ್ಪಿಸಲು ಸಹ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.