ADVERTISEMENT

ಲಖಿಂಪುರ–ಖೇರಿ ಪ್ರಕರಣ | ತನಿಖೆ ಆಮೆಗತಿ: ‘ಸುಪ್ರೀಂ’ ಮತ್ತೆ ಅತೃಪ್ತಿ

44 ಸಾಕ್ಷಿಗಳಲ್ಲಿ ನಾಲ್ವರ ಹೇಳಿಕೆ ಮಾತ್ರ ದಾಖಲು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 20:12 IST
Last Updated 20 ಅಕ್ಟೋಬರ್ 2021, 20:12 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ರೈತರ ಮೇಲೆ ಎಸ್‌ಯುವಿ ಹರಿಸಿ ಹತ್ಯೆಗೈದ ಲಖಿಂಪುರ–ಖೇರಿ ಪ್ರಕರಣದ ತನಿಖೆಯು ಎಂದೂ ಮುಗಿಯದ ಪ್ರಕ್ರಿಯೆಯಾಗುವುದು ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ. ತನಿಖೆಯನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗುತ್ತಿದೆ ಎಂಬ ಭಾವನೆಯನ್ನು ಹೋಗಲಾಡಿಸಬೇಕು ಎಂದೂ ಸೂಚಿಸಿದೆ.

ಸಾಕ್ಷಿಗಳ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್‌ ಮುಂದೆ ಆದಷ್ಟು ಬೇಗನೆ ದಾಖಲಿಸುವಂತೆ ನೋಡಿಕೊಳ್ಳಿ. ಸಾಕ್ಷಿಗಳಿಗೆ ಅಗತ್ಯ ಭದ್ರತೆ ಒದಗಿಸಿ ಎಂದು ಉತ್ತರ ಪ್ರದೇಶ ಸರ್ಕಾರದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಹರೀಶ್‌ ಸಾಳ್ವೆ ಅವರಿಗೆ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ಪೀಠವು ಹೇಳಿತು.

ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್‌ ಮಿಶ್ರಾ ಅವರ ಮಗ ಆಶಿಶ್‌ ಮಿಶ್ರಾ ಅವರು ಪ್ರಮುಖ ಆರೋಪಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಪೀಠವು ನಡೆಸಿತು.

ADVERTISEMENT

ಸಾಕ್ಷಿಗಳ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್‌ ಮುಂದೆ ದಾಖಲಿಸಲು ವಿಳಂಬ ಏಕೆ ಎಂದು ಕೋರ್ಟ್ ಪ್ರಶ್ನಿಸಿತು. ಸರ್ಕಾರವು ಸಲ್ಲಿಸಿದ್ದ ವರದಿಯನ್ನು ಅವಲೋಕಿಸಿದ ಪೀಠವು 44 ಸಾಕ್ಷಿಗಳ ಪೈಕಿ ನಾಲ್ವರ ಹೇಳಿಕೆ ಮಾತ್ರ ದಾಖಲಾಗಿದೆ ಎಂಬುದನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿತು. ಮ್ಯಾಜಿಸ್ಟ್ರೇಟ್‌ ಮುಂದೆ ದಾಖಲಿಸಲಾದ ಸಾಕ್ಷ್ಯಕ್ಕೆ ಹೆಚ್ಚು ಮೌಲ್ಯವಿದೆ ಎಂಬುದನ್ನು ನೆನಪಿಸಿತು. ತನಿಖೆಯ ಆಮೆಗತಿಯ ಬಗ್ಗೆ ಪೀಠವು ಹಿಂದೆಯೂ ಅಸಮಾಧಾನ ವ್ಯಕ್ತಪಡಿಸಿತ್ತು.

ಆರೋಪಿಗಳನ್ನು ಬಂಧಿಸಲಾಗಿದೆಯೇ ಎಂದು ಪೀಠವು ಪ್ರಶ್ನಿಸಿತು. ಹತ್ತು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ ಮತ್ತು ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ರೈತರ ಮೇಲೆ ಎಸ್‌ಯುವಿ ಹರಿಸಿ ನಾಲ್ವರ ಹತ್ಯೆ ಪ್ರಕರಣದಲ್ಲಿ ಒಂದು ಮತ್ತು ಎಸ್‌ಯುವಿಯಲ್ಲಿ ಇದ್ದವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇನ್ನೊಂದು ಎಫ್‌ಐಆರ್ ದಾಖಲಾಗಿದೆ ಎಂದು ಸಾಳ್ವೆ ಅವರು ಮಾಹಿತಿ ನೀಡಿದರು. ಪ್ರಕರಣವು ಇದೇ 3ರಂದು ನಡೆದಿತ್ತು.

ಪ್ರಕರಣಕ್ಕೆ ಸಂಬಂಧಿಸಿದ ಹಲವು ವಿಡಿಯೊಗಳನ್ನು ಸಂಗ್ರಹಿಸಲಾಗಿದೆ. ಅವುಗಳನ್ನು ವಿಧಿವಿಜ್ಞಾನ ಪರಿಶೀಲನೆಗೆ ಕಳುಹಿಸಲಾಗಿದೆ ಎಂದು ಸಾಳ್ವೆ ತಿಳಿಸಿದರು.

ತನಿಖೆಯ ಸ್ಥಿತಿಗತಿ ವರದಿಯನ್ನು ಕೊನೆಯ ಕ್ಷಣದಲ್ಲಿ ಅದೂ ಮೊಹರು ಮಾಡಿದ ಲಕೋಟೆಯಲ್ಲಿ ಸಲ್ಲಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಪೀಠವು ತರಾಟೆಗೆ ತೆಗೆದುಕೊಂಡಿದೆ. ಮುಂದಿನ ಸ್ಥಿತಿಗತಿ ವರದಿಯನ್ನು ವಿಚಾರಣೆಗೆ ಒಂದು ದಿನ ಮೊದಲೇ ಸಲ್ಲಿಸಲಾಗುವುದು ಎಂದು ಸಾಳ್ವೆ ಭರವಸೆ ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.