ADVERTISEMENT

ತಮಿಳುನಾಡು: ಮಾಜಿ ಸಿ.ಎಂ ಪಳನಿಸ್ವಾಮಿ ಈಗ ವಿರೋಧ ಪಕ್ಷದ ನಾಯಕ

ಪಿಟಿಐ
Published 10 ಮೇ 2021, 12:03 IST
Last Updated 10 ಮೇ 2021, 12:03 IST
ಕೆ. ಪಳನಿಸ್ವಾಮಿ
ಕೆ. ಪಳನಿಸ್ವಾಮಿ   

ಚೆನ್ನೈ: ಎಐಎಡಿಎಂಕೆ ಪಕ್ಷದ ಕೇಂದ್ರ ಕಚೇರಿಯಲ್ಲಿ ಸೋಮವಾರ ಸುಮಾರು ಮೂರು ಗಂಟೆಗಳ ಸಭೆಯ ನಂತರ ಅಂತಿಮವಾಗಿ ಸರ್ವಾನುಮತದಿಂದ ಮಾಜಿ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರು ಎಐಎಡಿಎಂಕೆಯ ಶಾಸಕಾಂಗ ಪಕ್ಷದ ನಾಯಕರಾಗಿ ಹಾಗೂ ತಮಿಳುನಾಡು ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ.

‘ಸದನದಲ್ಲಿ ಪಕ್ಷವನ್ನು ಯಾರು ಮುನ್ನಡೆಸಬೇಕು ಎನ್ನುವುದು ಸಭೆಯಲ್ಲಿ ಚರ್ಚಿತವಾಗಿ ಅಂತಿಮವಾಗಿ ಪಳನಿಸ್ವಾಮಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು’ ಎಂದು ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ ಅವರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಂತರ ಎಐಎಡಿಎಂಕೆಯ ಮುಖಂಡರು ತಮಿಳುನಾಡು ವಿಧಾನಸಭೆಯ ಕಾರ್ಯದರ್ಶಿ ಕೆ. ಶ್ರೀನಿವಾಸನ್ ಅವರನ್ನು ಭೇಟಿ ಮಾಡಿ ಪಳನಿಸ್ವಾಮಿ ಆಯ್ಕೆಯ ಕುರಿತು ಪತ್ರವೊಂದನ್ನು ಹಸ್ತಾಂತರಿಸಿದರು.

ADVERTISEMENT

ಮೇ 7ರಂದು ನಡೆದ ಪಕ್ಷದ ಶಾಸಕರ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಯಾರನ್ನು ಆಯ್ಕೆಮಾಡಬೇಕು ಎನ್ನುವ ವಿಚಾರದಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ.

ಸೋಮವಾರ ಸಭೆ ನಡೆಯುತ್ತಿದ್ದಾಗ ತೀರ್ಮಾನದ ಗೊಂದಲದ ನಿವಾರಣೆಗಾಗಿ ಮಾಜಿ ವಿಧಾನಸಭಾ ಸ್ಪೀಕರ್ ಪಿ. ಧನಪಾಲ್ ಅವರನ್ನು ಪರಿಗಣಿಸಬೇಕೆಂಬ ಅಭಿಪ್ರಾಯವೂ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿವ್ಯಕ್ತವಾಯಿತು. ಎಐಎಡಿಎಂಕೆ ಕಚೇರಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪನ್ನೀರ್ ಸೆಲ್ವಂ ಅವರ ಕಾರ್ಯವನ್ನು ಶ್ಲಾಘಿಸಿ ಕಾರ್ಯಕರ್ತರು ಕೆಲ ಭಿತ್ತಿಪತ್ರಗಳನ್ನೂ ಅಂಟಿಸಿ, ಅವರೇ ಪ್ರತಿಪಕ್ಷದ ನಾಯಕರಾಗಬೇಕು ಎಂದು ಒತ್ತಾಯಿಸಿದ್ದರು.

ಆದರೆ, ಪಕ್ಷಕ್ಕಾಗಿ ಪಳನಿಸ್ವಾಮಿ ಅವರು ಸಲ್ಲಿಸಿದ್ದ ಸೇವೆಯನ್ನು ಪರಿಗಣಿಸಿ ಅಂತಿಮವಾಗಿ ಅವರನ್ನೇ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕನನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಕೆ. ಪಳನಿಸ್ವಾಮಿ ಅವರು 2017ರಿಂದ 2021ರ ಅವಧಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.