ADVERTISEMENT

ವೈದ್ಯಕೀಯ ವಿದ್ಯಾರ್ಥಿನಿಯ ಮರ್ಯಾದೆಗೇಡು ಹತ್ಯೆ: ತಂದೆ ಸೇರಿ ಐವರ ಬಂಧನ

ಪಿಟಿಐ
Published 27 ಜನವರಿ 2023, 16:04 IST
Last Updated 27 ಜನವರಿ 2023, 16:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಮಹಾರಾಷ್ಟ್ರದ ನಾಂದೇಡ್‌ ಜಿಲ್ಲೆಯಲ್ಲಿ 22 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಶುಭಾಂಗಿ ಜೋಗದಂದ್ ಅವರನ್ನು ಆಕೆಯ ತಂದೆ, ಸಹೋದರ ಮತ್ತು ಇತರ ಮೂವರು ಸಂಬಂಧಿಕರು ಕತ್ತು ಹಿಸುಕಿ ಕೊಂದು ಸುಟ್ಟು ಹಾಕಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಲಿಂಬಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಪಿಂಪ್ರಿ ಮಹಿಪಾಲ್ ಗ್ರಾಮದಲ್ಲಿ ಇದೇ 22ರಂದು ನಡೆದ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಶುಕ್ರವಾರ ಐವರನ್ನು ಬಂಧಿಸಿದ್ದಾರೆ. ಶುಭಾಂಗಿಯನ್ನು ಆಕೆಯ ಕುಟುಂಬ ಸದಸ್ಯರು ಹಗ್ಗದಿಂದ ಬಿಗಿದು ಕೊಂದಿದ್ದಾರೆ. ನಂತರ ಆಕೆಗೆ ಬೆಂಕಿ ಹಚ್ಚಿ, ಸಾಕ್ಷಿ ನಾಶಪಡಿಸಲು ಆಕೆಯ ಅವಶೇಷಗಳನ್ನು ಹೊಳೆಯಲ್ಲಿ ಎಸೆದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಂತ್ರಸ್ತ ಯುವತಿ ಬ್ಯಾಚುಲರ್ ಆಫ್ ಹೋಮಿಯೋಪಥಿಕ್ ಮೆಡಿಸಿನ್ ಆ್ಯಂಡ್ ಸರ್ಜರಿ (ಬಿಎಚ್‌ಎಂಎಸ್) ಮೂರನೇ ವರ್ಷದ ವಿದ್ಯಾರ್ಥಿನಿಯಾಗಿದ್ದು, ಆಕೆಯ ಮದುವೆ ನಿಶ್ಚಯವಾಗಿತ್ತು. ಆದರೆ, ಆಕೆ ತನ್ನ ಗ್ರಾಮದ ಇನ್ನೊಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿರುವುದಾಗಿ ತನ್ನ ಕುಟುಂಬದವರು ಆಯ್ಕೆ ಮಾಡಿದ ವ್ಯಕ್ತಿಗೆ ತಿಳಿಸಿದ್ದಳು. ಇದರಿಂದ ನಿಶ್ಚಯಗೊಂಡಿದ್ದ ಮದುವೆ ಮುರಿದುಬಿದ್ದಿತ್ತು. ಹೀಗಾಗಿ ಕುಟುಂಬದವರು ಅಸಮಾಧಾನಗೊಂಡು, ಜ.22ರ ರಾತ್ರಿ ಶುಂಭಾಗಿಯ ತಂದೆ, ಸಹೋದರ, ಚಿಕ್ಕಪ್ಪ ಮತ್ತು ಸೋದರ ಸಂಬಂಧಿಗಳು ಆಕೆಯನ್ನು ಜಮೀನಿಗೆ ಕರೆದೊಯ್ದು, ಹತ್ಯೆ ಮಾಡಿ ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಆರೋಪಿಗಳನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.