ADVERTISEMENT

ಕೋವಿಡ್‌ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ, ಭಾರತವೇ ಮುಂದು: ಅಧ್ಯಯನ

ಪಿಟಿಐ
Published 15 ಸೆಪ್ಟೆಂಬರ್ 2021, 7:13 IST
Last Updated 15 ಸೆಪ್ಟೆಂಬರ್ 2021, 7:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ‘ಕೋವಿಡ್‌–19‘ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಹಂಚಿಕೆ ಮಾಡಿರುವ ರಾಷ್ಟ್ರಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

‘138 ದೇಶಗಳಲ್ಲಿ ಕೋವಿಡ್‌ ಕುರಿತು ತಪ್ಪು ಮಾಹಿತಿ ಹರಡುವಿಕೆ ಮತ್ತು ಮೂಲ ವಿಶ್ಲೇಷಣೆ‘ ಕುರಿತ ಅಧ್ಯಯನದಿಂದ ಈ ಮಾಹಿತಿ ಲಭ್ಯವಾಗಿದೆ. ಸೇಜ್‌ನ ‘ಇಂಟರ್‌ನ್ಯಾಷನಲ್‌ ಫೆಡರೇಷನ್‌ ಆಫ್ ಲೈಬ್ರರಿ ಅಸೋಸಿಯೇಷನ್ಸ್‌ ಅಂಡ್‌ ಇನ್‌ಸ್ಟಿಟ್ಯೂಷನ್ಸ್‌ ಜರ್ನಲ್‌‘ನಲ್ಲಿ ಈ ಅಧ್ಯಯನದ ವರದಿ ಪ್ರಕಟವಾಗಿದೆ.

ಇಂಟರ್ನೆಟ್‌ ಸೌಲಭ್ಯ ವಿಸ್ತಾರ, ಹೆಚ್ಚುತ್ತಿರುವ ಸಾಮಾಜಿಕ ಮಾಧ್ಯಮಗಳ ಬಳಕೆ ಮತ್ತು ಬಳಕೆದಾರರಲ್ಲಿರುವ ಅಂತರ್ಜಾಲ ಜ್ಞಾನದ ಕೊರತೆಗಳು ಭಾರತದ ಸಾಮಾಜಿಕ ಮಾಧ್ಯಮಗಳಲ್ಲಿ ಕೋವಿಡ್ ಕುರಿತು ಹೆಚ್ಚು ತಪ್ಪು ಮಾಹಿತಿ ಹರಡಲು ಕಾರಣವಾಗಿದೆ ಎಂದು ಹೊಸ ಅಧ್ಯಯನದಿಂದ ತಿಳಿದುಬಂದಿದೆ.

ADVERTISEMENT

ಈ ಅಧ್ಯಯನದಲ್ಲಿ 138 ದೇಶಗಳಲ್ಲಿ ಸೃಷ್ಟಿಯಾಗಿರುವ 9,657 ತಪ್ಪು ಮಾಹಿತಿಯಿರುವ ಸುದ್ದಿಯ ತುಣುಕುಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ವಿವಿಧ ದೇಶಗಳಿಂದ ಹರಡಿರುವ ತಪ್ಪು ಮಾಹಿತಿಯ ಮೂಲಗಳನ್ನು ಅರ್ಥಮಾಡಿ ಕೊಳ್ಳಲು 94 ಸಂಸ್ಥೆಗಳು ಈ ಸುದ್ದಿಗಳ ‘ಫ್ಯಾಕ್ಟ್‌ ಚೆಕ್‌‘ ಅಥವಾ ಸತ್ಯಾಸತ್ಯತೆಯನ್ನು ಪರಿಶೀಲಿಸಿವೆ.

‘ಎಲ್ಲ ದೇಶಗಳಿಗೆ ಹೋಲಿಸಿದರೆ, ಭಾರತ (ಶೇ 18.07) ಸಾಮಾಜಿಕ ಜಾಲತಾಣದ ಮೂಲಕ ಅತಿ ಹೆಚ್ಚು ತಪ್ಪು ಮಾಹಿತಿ ಹರಡಿದ ದೇಶವಾಗಿದೆ. ದೇಶದಲ್ಲಿ ಅಂತರ್ಜಾಲದ ಬಳಕೆ ಹೆಚ್ಚಾಗಿರುವುದು, ಸಾಮಾಜಿಕ ಮಾಧ್ಯಮವನ್ನು ಹೆಚ್ಚಾಗಿ ಬಳಸುವುದು ಮತ್ತು ಬಳಕೆದಾರರಲ್ಲಿರುವ ಅಂತರ್ಜಾಲದ ಜ್ಞಾನದ ಕೊರತೆಯಿಂದ ಇಂಥ ತಪ್ಪು ಮಾಹಿತಿ ಹರಡುವುದಕ್ಕೆ ಕಾರಣವಾಗಿರಬಹುದು‘ ಎಂದು ಅಧ್ಯಯನ ಹೇಳಿದೆ.

ಅಧ್ಯಯನದ ವರದಿ ಪ್ರಕಾರ, ಭಾರತ (ಶೇ 15.94), ಅಮೆರಿಕ (ಶೇ 9.7), ಬ್ರೆಜಿಲ್‌(ಶೇ 8.57) ಮತ್ತು ಸ್ಪೇನ್‌ (ಶೇ 8.03) ಹೆಚ್ಚು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಡಿದ ಪ್ರಮುಖ ನಾಲ್ಕು ದೇಶಗಳಾಗಿವೆ.

ಅಧ್ಯಯನದ ವರದಿಯ ಫಲಿತಾಂಶದ ಪ್ರಕಾರ ‘ಕೋವಿಡ್‌–19 ಕುರಿತ ತಪ್ಪು ಮಾಹಿತಿ ಹರಡುವಿಕೆಯು ಪಿಡುಗಿನ ಪರಿಸ್ಥಿತಿಯಲ್ಲಿ ಸಕಾರಾತ್ಮಕ ಸಂಬಂಧವನ್ನು ಹೊಂದಿರಬಹುದು ಎಂದು ಊಹಿಸಲಾಗಿದೆ.

‘ಸಾಮಾಜಿಕ ಮಾಧ್ಯಮ (ಶೇ 84.94) ಅತಿದೊಡ್ಡ ಪ್ರಮಾಣದ ತಪ್ಪು ಮಾಹಿತಿ ಉತ್ಪಾದಿಸುವ ತಾಣವಾಗಿದೆ. ಅದೇ ರೀತಿ ಶೇ 90.5ರಷ್ಟು ತಪ್ಪು ಮಾಹಿತಿ ಅಂತರ್ಜಾಲದ ಮೂಲಕ ಹರಡುತ್ತದೆ. ಮೇಲಾಗಿ, ಫೇಸ್‌ಬುಕ್ ಶೇ 66.87ರಷ್ಟು ತಪ್ಪು ಮಾಹಿತಿಯನ್ನು ಉತ್ಪಾದಿಸುವ ಸಾಮಾಜಿಕ ಮಾಧ್ಯಮ ವೇದಿಕೆಯಾಗಿದೆ‘ ಎಂದು ಅಧ್ಯಯನ ತಿಳಿಸಿದೆ.

‘ಕೋವಿಡ್‌–19 ಸಾಂಕ್ರಾಮಿಕದ ಕುರಿತು ಸುಳ್ಳು ಮಾಹಿತಿಯನ್ನು ಹರಡುವುದರಿಂದ ಜನರು ಆತಂಕಕ್ಕೆ ಒಳಗಾಗುತ್ತಾರೆ‘ ಎಂದು ವಿಶ್ವ ಆರೋಗ್ಯ ಸಂಸ್ಥೆ ಕೆಲವು ದಿನಗಳ ಹಿಂದೆ ಎಚ್ಚರಿಸಿತ್ತು. ಇದೇ ವೇಳೆ ‘ಕೋವಿಡ್‌ ಕುರಿತ ಯಾವುದೇ ಮಾಹಿತಿ ಲಭ್ಯವಾದರೆ, ಆ ಮಾಹಿತಿಯ ಮೂಲದ ವಿಶ್ವಾಸರ್ಹತೆಯನ್ನು ಎರಡು ಬಾರಿ ಪರಿಶೀಲಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಒತ್ತಾಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.