ADVERTISEMENT

ಇಸ್ರೊದಿಂದ ಭೂವೀಕ್ಷಣಾ ಉಪಗ್ರಹ ಇಒಎಸ್‌–04 ಸೇರಿ ಮೂರು ಉಪಗ್ರಹಗಳ ಯಶಸ್ವಿ ಉಡಾವಣೆ

ಪಿಟಿಐ
Published 14 ಫೆಬ್ರುವರಿ 2022, 18:28 IST
Last Updated 14 ಫೆಬ್ರುವರಿ 2022, 18:28 IST
ಇಸ್ರೊದಿಂದ ‘ಇಒಎಸ್‌–04’ ಸೇರಿ ಮೂರು ಉಪಗ್ರಹಗಳ ಯಶಸ್ವಿ ಉಡಾವಣೆ - ಪಿಟಿಐ ಚಿತ್ರ
ಇಸ್ರೊದಿಂದ ‘ಇಒಎಸ್‌–04’ ಸೇರಿ ಮೂರು ಉಪಗ್ರಹಗಳ ಯಶಸ್ವಿ ಉಡಾವಣೆ - ಪಿಟಿಐ ಚಿತ್ರ   

ಶ್ರೀಹರಿಕೋಟಾ (ಎ.ಪಿ): ಭೂವೀಕ್ಷಣಾ ಉಪಗ್ರಹ ‘ಇಒಎಸ್ 04’ ಮತ್ತು ಎರಡು ಕಿರು ಉಪಗ್ರಹಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಸೋಮವಾರ ಯಶಸ್ವಿಯಾಗಿ ಕಕ್ಷೆಗೆ ಉಡಾವಣೆ ಮಾಡಿತು.

ಈ ಉಪಗ್ರಹಗಳನ್ನು ಹೊತ್ತಿದ್ದ ಪಿಎಸ್‌ಎಲ್‌ವಿ–ಸಿ52 ವಾಹಕವನ್ನು ಬೆಳಿಗ್ಗೆ 5.59 ಗಂಟೆಗೆ ಉಡಾವಣೆ ಮಾಡಲಾಗಿದ್ದು, ನಿರೀಕ್ಷೆಯಂತೆ ಇಒಎಸ್‌–04 ಒಳಗೊಂಡಂತೆ ಮೂರೂ ಉಪಗ್ರಹಗಳನ್ನು ನಿಗದಿತ ಭೂಕಕ್ಷೆಗೆ ಸೇರಿಸುವಲ್ಲಿ ವಾಹಕ ಯಶಸ್ವಿಯಾಯಿತು.

ವಾಹಕವು ಗಗನದತ್ತ ಚಿಮ್ಮುತ್ತಿದ್ದಂತೆಯೇ ವಿಜ್ಞಾನಿಗಳು ಹರ್ಷ ವ್ಯಕ್ತಪಡಿಸಿದರು. ವರ್ಷದ ಮೊದಲ ಉಪಗ್ರಹ ಉಡಾವಣೆ ಕಾರ್ಯವನ್ನು ಇಸ್ರೊ ‘ಅತ್ಯುತ್ತಮ ಸಾಧನೆ’ ಎಂದು ಬಣ್ಣಿಸಿದೆ. ಇನ್‌ಸ್ಪೈರ್‌ ಸ್ಯಾಟ್‌–1, ಐಎನ್‌ಎಸ್‌ಟಿ–2ಟಿಡಿ ಕಕ್ಷೆಯನ್ನು ಸೇರಿದ ಇತರ ಎರಡು ಉಪಗ್ರಹಗಳು.

ADVERTISEMENT

‘ಎಲ್ಲವೂ ನಿಗದಿತ ಯೋಜನೆಯಂತೆಯೇ ನಡೆಯಿತು. ಉಡಾವಣೆಗೊಂಡ 17 ನಿಮಿಷ 34 ಕ್ಷಣಗಳಲ್ಲಿ ಉಪಗ್ರಹಗಳು ಭೂಮಿಯಿಂದ 529 ಕಿ.ಮೀ. ಎತ್ತರದಲ್ಲಿರುವ ಕಕ್ಷೆಗೆ ಸೇರಿದವು’ ಎಂದು ಇಸ್ರೊ ಪ್ರಕಟಿಸಿದೆ.

ಇಒಎಸ್‌ –04 ಉಪಗ್ರಹ ಕಕ್ಷೆಗೆ ತಲುಪುತ್ತಿದ್ದಂತೆ ಬೆಂಗಳೂರಿನ ಐಸ್ಟ್ರ್ಯಾಕ್‌ ಕೇಂದ್ರವು ಸಂಪರ್ಕ ಪಡೆದುಕೊಂಡಿದ್ದು, ಇಲ್ಲಿಂದಲೇ ನಿರ್ವಹಣೆ ಮಾಡಲಾಗುತ್ತಿದೆ. ಬರುವ ದಿನಗಳಲ್ಲಿ ಅಂತಿಮ ಕಾರ್ಯವಿಧಾನಕ್ಕೆ ಉಪಗ್ರಹವನ್ನುಸಜ್ಜುಗೊಳಿಸಲಿದ್ದು, ಬಳಿಕ ಅದು ಮಾಹಿತಿ ರವಾನಿಸಲಿದೆ.

‘ಉಪಗ್ರಹ ಉಡಾವಣಾ ಕಾರ್ಯ ಯಶಸ್ವಿಯಾಗಿ ಜರುಗಿತು‘ ಎಂದು ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್‌ ಪ್ರತಿಕ್ರಿಯಿಸಿದರು. ಇವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದು ಮೊದಲನೇ ಉಪಗ್ರಹ ಉಡಾವಣಾ ಕಾರ್ಯಕ್ರಮವಾಗಿದೆ.

‘ದೇಶಕ್ಕೆ ಸೇವೆ ಸಲ್ಲಿಸುವಲ್ಲಿ ಇಒಎಸ್‌–04 ದೊಡ್ಡ ಆಸ್ತಿಯಾಗಲಿದೆ’ ಎಂದು ಉಡಾವಣಾ ಕಾರ್ಯಕ್ರಮದ ನಿರ್ದೇಶಕ ಎಸ್‌.ಆರ್‌.ಬಿಜು ಅವರು ಹೇಳಿದರೆ, ‘ನಿಜಕ್ಕೂ ಇದೊಂದು ಅತ್ಯದ್ಭುತ ಸಾಧನೆ’ ಎಂದು ಉಪಗ್ರಹ ನಿರ್ದೇಶಕ ಶ್ರೀಕಾಂತ್‌ ಪ್ರತಿಕ್ರಿಯಿಸಿದರು.

ಶ್ರೀಹರಿಕೋಟಾ ಕೇಂದ್ರದಿಂದ ನಡೆದ 80ನೇ ಉಪಗ್ರಹ ಉಡಾವಣೆ ಹಾಗೂ ಪಿಎಸ್‌ಎಲ್‌ವಿ ರಾಕೆಟ್‌ ಬಳಸಿದ 54ನೇ ಕಾರ್ಯಕ್ರಮವಾಗಿದೆ.

‘ಉಪಗ್ರಹಗಳು, ಅದರ ಕಾರ್ಯಶೈಲಿ’ (ಶ್ರೀಹರಿಕೋಟಾ): ಇಂದು ಉಡಾವಣೆಗೊಂಡ ಇಒಎಸ್‌ –24 ಉಪಗ್ರಹ 1,710 ಕೆ.ಜಿ. ತೂಕವಿದ್ದು, ಬಾಳಿಕೆ ಅವಧಿ 10 ವರ್ಷ. ಸರ್ವಋತುವಿನಲ್ಲಿ ಭೂ ಪರಿವೀಕ್ಷಣೆ ನಡೆಸುವ ಉಪಗ್ರಹವು ಉನ್ನತ ಗುಣಮಟ್ಟದ ಚಿತ್ರಗಳನ್ನು ಕೇಂದ್ರಕ್ಕೆ ರವಾನಿಸಲಿದೆ.


Launch of PSLV-C52/EOS-04 https://t.co/naTQFgbm7b

ತೇಜಸ್‌: ಉಷ್ಣ ವಿನಿಮಯ ಘಟಕ ಪೂರೈಸಿದ ಬಿಎಚ್ಇಎಲ್‌

ನವದೆಹಲಿ (ಪಿಟಿಐ): ತೇಜಸ್‌ ವಿಮಾನಕ್ಕಾಗಿ ಸಮಗ್ರ ಉಷ್ಣ ವಿನಿಮಯ ಘಟಕಗಳನ್ನು ಹಿಂದೂಸ್ತಾನ್‌ ಏರೊನಾಟಿಕ್ಸ್‌ ಲಿಮಿಟೆಡ್‌ ಸಂಸ್ಥೆಗೆ, ಕೇಂದ್ರ ಸರ್ಕಾರದ ಅಧೀನದ ಭಾರತ್‌ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್‌ (ಬಿಎಚ್ಇಎಲ್‌) ಸಂಸ್ಥೆಯು ಪೂರೈಸಲಿದೆ. ಹಗುರ ಯುದ್ಧವಿಮಾನ ‘ತೇಜಸ್‌ ಎಂ.ಕೆ 1ಎ’ಯ 83 ವಿಮಾನಗಳಿಗೆ ಇಂತಹ ಘಟಕಗಳನ್ನು ಬಿಎಚ್‌ಇಎಲ್‌ ಪೂರೈಸಲಿದೆ ಎಂದು ಸಂಸ್ಥೆಯ ಹೇಳಿಕೆಯು ತಿಳಿಸಿದೆ. ಉತ್ಪಾದನೆ, ಜೋಡಣೆ, ಪರೀಕ್ಷೆ ಮತ್ತು ಉಷ್ಣ ವಿನಿಮಯ ಘಟಕಗಳ ಪೂರೈಕೆಯನ್ನು ಸಂಸ್ಥೆ ನಿಭಾಯಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.