ADVERTISEMENT

ಲಖಿಂಪುರ–ಖೇರಿ ಹಿಂಸಾಚಾರ: ಜಂಟಿ ಹೋರಾಟಕ್ಕೆ ವಿಪಕ್ಷ ಸಜ್ಜು

ಒಗ್ಗಟ್ಟಾಗಿ ಕಾರ್ಯತಂತ್ರ ರೂಪಿಸಲು ಹಲವು ಮುಖಂಡರ ಕರೆ: ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಒತ್ತಡ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 21:00 IST
Last Updated 5 ಅಕ್ಟೋಬರ್ 2021, 21:00 IST
ಕಾಂಗ್ರೆಸ್‌ ಕಾರ್ಯಕರ್ತರು ಲಖಿಂಪುರ–ಖೇರಿ ಹಿಂಸಾಚಾರವನ್ನು ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಪ್ರತಿಕೃತಿಗಳನ್ನು ಪಟ್ನಾದಲ್ಲಿ ಮಂಗಳವಾರ‍ ದಹಿಸಿದರು ಪಿಟಿಐ ಚಿತ್ರ
ಕಾಂಗ್ರೆಸ್‌ ಕಾರ್ಯಕರ್ತರು ಲಖಿಂಪುರ–ಖೇರಿ ಹಿಂಸಾಚಾರವನ್ನು ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಪ್ರತಿಕೃತಿಗಳನ್ನು ಪಟ್ನಾದಲ್ಲಿ ಮಂಗಳವಾರ‍ ದಹಿಸಿದರು ಪಿಟಿಐ ಚಿತ್ರ   

ನವದೆಹಲಿ: ಉತ್ತರ ಪ್ರದೇಶದ ಲಖಿಂಪುರ–ಖೇರಿಯಲ್ಲಿ ರೈತರ ಮೇಲೆ ಎಸ್‌ಯುವಿ ಹರಿಸಿ ನಾಲ್ವರ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ, ಉತ್ತರ ಪ್ರದೇಶ ಸರ್ಕಾರ ಹಾಗೂ ಬಿಜೆಪಿಯ ಮೇಲೆ ವಿರೋಧ ಪಕ್ಷಗಳ ಒಗ್ಗಟ್ಟಿನ ದಾಳಿಯು ಮಂಗಳವಾರವೂ ಮುಂದುವರಿದಿದೆ.

ಎಲ್ಲ ವಿರೋಧ ಪಕ್ಷಗಳು ರೈತರ ಜತೆಗೆ ಇವೆ. ಎಲ್ಲ ಪಕ್ಷಗಳು ಜತೆ ಸೇರಿ ಮುಂದಿನ ಕಾರ್ಯಯೋಜನೆ ರೂಪಿಸಲಿವೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್‌ ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಮೂರ್ತಿಯಿಂದಲೇ ಪ‍್ರಕರಣದ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಆರ್‌ಎಲ್‌ಡಿ ನಾಯಕ ಜಯಂತ್‌ ಚೌಧರಿ ಒತ್ತಾಯಿಸಿದ್ದಾರೆ. ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರವು ಲಖಿಂಪುರ–ಖೇರಿಯಲ್ಲಿ ಏನು ನಡೆಯಿತು ಎಂಬುದನ್ನು ಮುಚ್ಚಿ ಹಾಕಲು ಯತ್ನಿಸುತ್ತಿದೆ. ವಿರೋಧ ಪಕ್ಷಗಳನ್ನು ದಮನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ವಿರೋಧ ಪಕ್ಷದ ಕೆಲವೇ ನಾಯಕರಲ್ಲಿ ಜಯಂತ್ ಅವರೂ ಒಬ್ಬರು. ಅಲ್ಲಿಗೆ ತಲುಪಬೇಕಿದ್ದರೆ ಗೆರಿಲ್ಲಾ ತಂತ್ರ ಉಪಯೋಗಿಸಬೇಕಾಯಿತು ಎಂದು ಅವರು ಹೇಳಿದ್ದಾರೆ.

ADVERTISEMENT

ಲಖಿಂಪುರ–ಖೇರಿಗೆ ಹೋಗಲು ವಿರೋಧ ಪಕ್ಷದ ನಾಯಕರಿಗೆ ಅವಕಾಶ ನಿರಾಕರಿಸಿರುವುದು ಶಿವಸೇನಾವನ್ನು ಕೆರಳಿಸಿದೆ. ಈ ದಮನ ನೀತಿಯ ವಿರುದ್ಧ ವಿರೋಧ ಪಕ್ಷಗಳೆಲ್ಲ ಜಂಟಿ ಹೋರಾಟ ನಡೆಸಬೇಕು ಎಂದು ಶಿವಸೇನಾ ಮುಖಂಡ ಸಂಜಯ ರಾವುತ್‌ ಹೇಳಿದ್ದಾರೆ. ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಈ ಬಗ್ಗೆ ಚರ್ಚೆ ನಡೆಸುವುದಾಗಿ ಅವರು ಹೇಳಿದ್ದಾರೆ.

‘ಲಖಿಂಪುರ–ಖೇರಿ ಹಿಂಸಾಚಾರವು ದೇಶವನ್ನು ನಡುಗಿಸಿದೆ. ಪ್ರಿಯಾಂಕಾ ಗಾಂಧಿ ಅವರನ್ನು ಉತ್ತರ ಪ್ರದೇಶ ಸರ್ಕಾರ ಬಂಧಿಸಿದೆ. ವಿರೋಧ ಪಕ್ಷದ ನಾಯಕರು ರೈತರನ್ನು ಭೇಟಿ ಆಗುವುದನ್ನು ತಡೆಯಲಾಗಿದೆ. ಉತ್ತರ ಪ್ರದೇಶ ಸರ್ಕಾದ ದಮನ ನೀತಿಯ ವಿರುದ್ಧ ವಿರೋಧ ಪಕ್ಷಗಳು ಒಂದಾಗಬೇಕಿದೆ’ ಎಂದು ರಾವುತ್‌ ಟ್ವೀಟ್‌ ಮಾಡಿದ್ದಾರೆ.

ರಾಮ ಮತ್ತು ರಹೀಮನ ಅನುಯಾಯಿಗಳನ್ನು ಪರಸ್ಪರ ಸಂಘರ್ಷಕ್ಕಿಳಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಈಗ ರಕ್ತದ ರುಚಿ ನೋಡಿದೆ. ದೇಶದಲ್ಲಿ ನಿರುದ್ಯೋಗ ಮತ್ತು ಬೆಲೆ ಏರಿಕೆಯ ಸಮಸ್ಯೆ ತೀವ್ರವಾಗಿದೆ. ಆದರೆ ಅವುಗಳನ್ನು ಪರಿಹರಿಸುವ ಆಸಕ್ತಿಯೇ ಸರ್ಕಾರಕ್ಕೆ ಇಲ್ಲ ಎಂದು ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಹೇಳಿದ್ದಾರೆ. ಲಖಿಂಪುರ–ಖೇರಿ ಹಿಂಸಾಚಾರವನ್ನು ಖಂಡಿಸಿದ್ದಾರೆ.

ಜಲಿಯನ್‌ವಾಲಾ ಬಾಗ್‌ ನೆನಪು

ಲಖಿಂಪುರ–ಖೇರಿ ಹಿಂಸಾಕಾಂಡವನ್ನು ಜಲಿಯನ್‌ವಾಲಾ ಬಾಗ್‌ ಹಿಂಸಾಕಾಂಡಕ್ಕೆ ಹಲವು ಮಂದಿ ನಾಯಕರು ಹೋಲಿಸಿದ್ದಾರೆ. ಜಲಿಯನ್‌ವಾಲಾ ಬಾಗ್‌ನಲ್ಲಿ ಬ್ರಿಟಿಷರು ಸೃಷ್ಟಿಸಿದ್ದ ಅದೇ ಪರಿಸ್ಥಿತಿ ಈಗ ಉತ್ತರ ಪ್ರದೇಶದಲ್ಲಿ ಕಾಣಿಸುತ್ತಿದೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಹೇಳಿದ್ದಾರೆ.

ಲಖಿಂಪುರ–ಖೇರಿ ಪ್ರಕರಣವು ಜಲಿಯನ್‌ವಾಲಾ ಬಾಗ್‌ ಘಟನೆಯನ್ನು ನೆನಪಿಸಿತು. ಈ ಹಿಂಸಾಚಾರಕ್ಕಾಗಿ ಪ್ರಧಾನಿಯವರು ಕ್ಷಮೆ ಯಾಚಿಸಿಬೇಕು ಎಂದು ಕರ್ನಾಟಕ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಲಖಿಂಪುರದ ಘಟನೆಯು 1919ರಲ್ಲಿ ಜಲಿಯನ್‌ವಾಲಾ ಬಾಗ್‌ನ ದುರಂತವನ್ನು ನೆನಪಿಗೆ ತಂದಿತು ಎಂದು ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಹೇಳಿದ್ದಾರೆ.

ಇನ್ನೂ ಏಕೆ ಬಂಧಿಸಿಲ್ಲ: ಕಾಂಗ್ರೆಸ್‌ ಪ್ರಶ್ನೆ

ಹಿಂಸಾಚಾರ ಪ್ರಕರಣದ ತನಿಖೆಯು ‘ಕಡತದ ಕೆಲಸ’ ಮಾತ್ರ ಎಂದು ಕಾಂಗ್ರೆಸ್‌ ಆರೋಪಿಸಿದೆ. ಕೇಂದ್ರ ಸಚಿವ ಅಜಯ್‌ ಮಿಶ್ರಾ ಮಗ ಆಶಿಶ್‌ ಮಿಶ್ರಾ ಅವರನ್ನು ಇನ್ನೂ ಏಕೆ ಬಂಧಿಸಿಲ್ಲ, ಅಜಯ್‌ ಮಿಶ್ರಾ ಅವರನ್ನು ಸಚಿವ ಸ್ಥಾನದಿಂದ ಏಕೆ ವಜಾ ಮಾಡಿಲ್ಲ ಎಂದು ಪ್ರಶ್ನಿಸಿದೆ.

ಲಖಿಂಪುರದಲ್ಲಿ ಮೃತಪಟ್ಟ ಎಂಟು ಮಂದಿಯ ಕುಟುಂಬವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಏಕೆ ಭೇಟಿ ಮಾಡಿಲ್ಲ ಎಂದು ಕಾಂಗ್ರೆಸ್‌ ಮುಖಂಡ ಅಶ್ವನಿ ಕುಮಾರ್‌ ಅವರು ಪ್ರಶ್ನಿಸಿದ್ದಾರೆ. ಮೋದಿ ಅವರು ಮಂಗಳವಾರ ಲಖನೌದಲ್ಲಿಯೇ ಇದ್ದರು.

ಜನರ ಆಕ್ರೋಶವನ್ನು ತಣಿಸುವುದಕ್ಕಾಗಿ ತನಿಖೆಯ ಹೆಸರಿನಲ್ಲಿ ಕಡತ ಕಟ್ಟುವ ಕೆಲಸ ಮಾಡಲಾಗುತ್ತಿದೆ. ಆದರೆ, ಈಗಿನ ಆಕ್ರೋಶವನ್ನು ಆ ರೀತಿಯಲ್ಲಿ ತಣಿಸಲು ಆಗದು ಎಂಬುದಕ್ಕೆ ಇತಿಹಾಸವು ಸಾಕ್ಷಿಯಾಗಲಿದೆ ಎಂದು ಅವರು ಹೇಳಿದ್ದಾರೆ.

‘ಮುನ್ನೆಚ್ಚರಿಕೆ ಕ್ರಮವಾಗಿ ಬಂಧನ’

ಸೀತಾಪುರ (ಉತ್ತರ ಪ್ರದೇಶ):ಶಾಂತಿ ಭಂಗವಾಗುವ ಸಾಧ್ಯತೆ ಇದ್ದುದರಿಂದ, ಮುನ್ನೆಚ್ಚರಿಕೆ ಕ್ರಮವಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಇತರ ಹತ್ತು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಉತ್ತರ ಪ್ರದೇಶ ಕಾಂಗ್ರೆಸ್‌ ಮುಖ್ಯಸ್ಥ ಅಜಯ್‌ ಕುಮಾರ್‌ ಲಲ್ಲು ಮತ್ತು ಪಕ್ಷದ ಮುಖಂಡ ದೀಪೇಂದರ್‌ ಹೂಡಾ ವಿರುದ್ಧವೂ ಪ್ರಕರಣ ದಾಖಲಾಗಿದೆ. ಅಪರಾಧ ಪ್ರಕ್ರಿಯೆ ಸಂಹಿತೆಯ ಸೆಕ್ಷನ್‌ 144, 151, 107, 116 (ಶಾಂತಿ ಭಂಗ ಸಾಧ್ಯತೆ ಇದ್ದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಂಧನಕ್ಕೆ ಸಂಬಂಧಿಸಿದವು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇವರಿಂದ ಶಾಂತಿಗೆ ಭಂಗವಾಗುವುದಿಲ್ಲ ಎಂಬುದು ಖಚಿತವಾದ ನಂತರ ಈ ಸೆಕ್ಷನ್‌ಗಳನ್ನು ರದ್ದು ಮಾಡಲಾಗುತ್ತದೆ ಎಂದು ಉಪ ವಿಭಾಗಾಧಿಕಾರಿ ಪ್ಯಾರೇಲಾಲ್‌ ಮೌರ್ಯ ತಿಳಿಸಿದ್ದಾರೆ.

ಎಫ್‌ಐಆರ್‌ ಇಲ್ಲದೇ ಅಕ್ರಮ ಬಂಧನ: ಪ್ರಿಯಾಂಕಾ

ಎಫ್‌ಐಆರ್‌ ದಾಖಲಿಸದೇ ತಮ್ಮನ್ನು 24 ಗಂಟೆಗಳ ನಂತರವೂ ಬಂಧನದಲ್ಲಿ ಇರಿಸಿದ್ದಕ್ಕೆ ಪ್ರಿಯಾಂಕಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನರೇಂದ್ರ ಮೋದಿಯವರೇ, ನಿಮ್ಮ ಸರ್ಕಾರವು ಯಾವುದೇ ಆದೇಶ ಇಲ್ಲದೇ, ಎಫ್‌ಐಆರ್‌ ಇಲ್ಲದೇ ಕಳೆದ 28 ಗಂಟೆಗಳಿಂದ ನನ್ನನ್ನು ಬಂಧನದಲ್ಲಿರಿಸಿದೆ. ರೈತರ ಮೇಲೆ ವಾಹನ ಹರಿಸಿದ ವ್ಯಕ್ತಿಯನ್ನೇಕೆ ಬಂಧಿಸಿಲ್ಲ’ ಎಂದು ಪ್ರಶ್ನಿಸಿರುವ ವಿಡಿಯೊವನ್ನು ಅವರು ಮಂಗಳವಾರ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಸೀತಾಪುರದ ಅತಿಥಿಗೃಹದ ಮೇಲೆ ಡ್ರೋನ್ ಕ್ಯಾಮೆರಾ ಕಣ್ಗಾವಲು ಇಡಲಾಗಿದೆ ಎಂದೂ ದೂರಿದ್ದಾರೆ.

ಕಾಂಗ್ರೆಸ್‌ ಮುಖಂಡರನ್ನು ಬಂಧಿಸಿಡಲಾದ ಅತಿಥಿಗೃಹದ ಮೇಲೆ ಡ್ರೋನ್ ಹಾರಾಟ ನಡೆಸುತ್ತಿದೆ ಎನ್ನಲಾದ ಮತ್ತೊಂದು ವಿಡಿಯೊವನ್ನು ಪಕ್ಷದ ಮುಖಂಡ ಗುಜ್ಜರ್‌ ಹಂಚಿಕೊಂಡಿದ್ದಾರೆ. ಬಂಧನದಲ್ಲಿಟ್ಟ ಮೇಲೂ ಪ್ರಿಯಾಂಕಾ ಬಗ್ಗೆ ಸರ್ಕಾರಕ್ಕೆ ಭಯವಿದೆ. ಹೀಗಾಗಿಯೇ ಅವರ ಮೇಲೆ ನಿಗಾ ಇಡಲು ಡ್ರೋನ್‌ ಬಳಸುತ್ತಿದೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ತಮ್ಮ ವಕೀಲರನ್ನು ಭೇಟಿ ಮಾಡಲೂ ಪ್ರಿಯಾಂಕಾಗೆ ಅವಕಾಶ ನೀಡುತ್ತಿಲ್ಲ ಎಂದು ಕಾಂಗ್ರೆಸ್‌ನ ಮಾಧ್ಯಮ ಹಾಗೂ ಸಂವಹನ ವಿಭಾಗದ ಮುಖ್ಯಸ್ಥ ಪಂಕಜ್‌ ಶ್ರೀವಾತ್ಸವ್ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.