ADVERTISEMENT

ರೈತರ ಮೇಲೆ ವ್ಯವಸ್ಥಿತ ದಾಳಿ: ಕೇಂದ್ರದ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಪಿಟಿಐ
Published 6 ಅಕ್ಟೋಬರ್ 2021, 20:33 IST
Last Updated 6 ಅಕ್ಟೋಬರ್ 2021, 20:33 IST
ಲಖಿಂಪುರ–ಖೇರಿಗೆ ತೆರಳುವುದಕ್ಕಾಗಿ ಲಖನೌ ವಿಮಾನ ನಿಲ್ದಾಣದಿಂದ ಬಿಗಿ ಭದ್ರತೆಯಲ್ಲಿ ಹೊರ ಬಂದ ರಾಹುಲ್‌ ಪಿಟಿಐ ಚಿತ್ರ
ಲಖಿಂಪುರ–ಖೇರಿಗೆ ತೆರಳುವುದಕ್ಕಾಗಿ ಲಖನೌ ವಿಮಾನ ನಿಲ್ದಾಣದಿಂದ ಬಿಗಿ ಭದ್ರತೆಯಲ್ಲಿ ಹೊರ ಬಂದ ರಾಹುಲ್‌ ಪಿಟಿಐ ಚಿತ್ರ   

ನವದೆಹಲಿ: ದೇಶದಲ್ಲಿ ಈಗ ಪ್ರಜಾಪ್ರಭುತ್ವ ಇಲ್ಲ, ನಿರಂಕುಶಾಧಿಪತ್ಯ ಇದೆ. ರೈತರ ಮೇಲೆ ವ್ಯವಸ್ಥಿತ ದಾಳಿ ನಡೆಯುತ್ತಿದೆ. ಲಖಿಂಪುರ–ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ರೈತರ ಕುಟುಂಬವನ್ನು ಭೇಟಿ ಮಾಡಲು ರಾಜಕಾರಣಿಗಳಿಗೆ ಅವಕಾಶ ನಿರಾಕರಿಸಲಾಗುತ್ತಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್‌ ಬಘೆಲ್‌ ಮತ್ತು ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್ ಚನ್ನಿ ಅವರ ಜತೆಗೆ ರಾಹುಲ್‌ ಅವರು ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

‘ದೇಶದ ರೈತರ ಮೇಲೆ ವ್ಯವಸ್ಥಿತ ದಾಳಿ ನಡೆಯುತ್ತಿದೆ. ಭೂ ಸ್ವಾಧೀನ ಮಸೂದೆಯನ್ನು ತದ್ವಿರುದ್ಧಗೊಳಿಸಿದ್ದು ಮೊದಲ ದಾಳಿ. ಮೂರು ಕೃಷಿ ಕಾಯ್ದೆಗಳು ಎರಡನೇ ದಾಳಿ. ಈಗ, ರೈತರ ಹಕ್ಕುಗಳನ್ನು ವ್ಯವಸ್ಥಿತವಾಗಿ ಕಸಿದುಕೊಳ್ಳಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಪ್ರಿಯಾಂಕಾ ಗಾಂಧಿ ಬಂಧನ ಮತ್ತು ಅವರನ್ನು ನಡೆಸಿಕೊಂಡ ಬಗ್ಗೆ ಕೇಳಲಾದ ಪ್ರಶ್ನೆಗೆ, ಇದು ಅವರನ್ನು ಕೇಂದ್ರೀಕರಿಸಿರುವ ವಿಚಾರ ಅಲ್ಲ, ಇದು ರೈತರಿಗೆ ಸಂಬಂಧಿಸಿದ ವಿಚಾರ ಎಂದರು.

‘ಪ್ರಿಯಾಂಕಾ ಆಗಲಿ, ನಾನಾಗಲಿ ಅಥವಾ ನಮ್ಮ ಕುಟುಂಬದ ಯಾರೇ ಆಗಲಿ, ಕೆಟ್ಟದಾಗಿ ನಡೆಸಿಕೊಂಡರು ಎಂಬ ಕಾರಣಕ್ಕೆ ಹಿಮ್ಮೆಟ್ಟುವುದಿಲ್ಲ. ನಮ್ಮ ಮೇಲೆ ಕೈಮಾಡಿ, ನಮ್ಮನ್ನು ವಶಕ್ಕೆ ಪಡೆಯಿರಿ, ನಮಗೆ ಹೊಡೆಯಿರಿ ಅಥವಾ ನಮ್ಮನ್ನು ಹೂತು ಹಾಕಿ. ಅದರ ಬಗ್ಗೆ ನಮಗೆ ಚಿಂತೆ ಇಲ್ಲ. ಇಂತಹ ವಿಚಾರದಲ್ಲಿ ನಮ್ಮ ಕುಟುಂಬದಲ್ಲಿ ವರ್ಷಗಳ ತರಬೇತಿ ನೀಡಲಾಗುತ್ತದೆ’ ಎಂದು ಅವರು ಹೇಳಿಕೊಂಡರು.

ಉತ್ತರ ಪ್ರದೇಶದಲ್ಲಿ ಹೊಸ ರೀತಿಯ ರಾಜಕೀಯ ನಡೆಯುತ್ತಿದೆ. ಅಪರಾಧಿಗಳು ತಮಗೆ ಏನು ಬೇಕೋ ಅದೆಲ್ಲವನ್ನೂ ಮಾಡಿ ಮುಕ್ತವಾಗಿ ತಿರುಗಾಡಿಕೊಂಡು ಇರಬಹುದು. ಆದರೆ, ಸಂತ್ರಸ್ತರಿಗೆ ನ್ಯಾಯ ಕೊಡಿ ಎಂದು ಕೇಳಿದವರನ್ನು ಬಂಧಿಸಲಾಗುತ್ತದೆ ಎಂದು ರಾಹುಲ್‌ ಹೇಳಿದರು.

‘ಉತ್ತರ ಪ್ರದೇಶದಲ್ಲಿ ಈಗ ರೈತರ ಹತ್ಯೆ ಆಗುತ್ತಿದೆ. ಈ ಹಿಂದೆ ಕೂಡ, ಹಾಥರಸ್‌ನಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಆಯಿತು. ಅತ್ಯಾಚಾರ ಪ್ರಕರಣದಲ್ಲಿಯೂ ಬಿಜೆಪಿಯ ಶಾಸಕರೊಬ್ಬರ ಹೆಸರು ಕೇಳಿ ಬಂತು. ಇದು ಉತ್ತರ ಪ್ರದೇಶದ ಹೊಸ ರೀತಿಯ ರಾಜಕಾರಣ. ಅತ್ಯಾಚಾರ, ರೈತರ ಹತ್ಯೆ ಏನೇ ಇರಲಿ, ಅಪರಾಧಿಗಳು ತಮಗೆ ಬೇಕಾದ್ದನ್ನು ಮಾಡಬಹುದಾಗಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

₹50 ಲಕ್ಷ ನೆರವು: ಪಂಜಾಬ್‌, ಛತ್ತೀಸಗಡ ಘೋಷಣೆ

ಉತ್ತರ ಪ್ರದೇಶದ ಲಖಿಂಪುರ–ಖೇರಿಯಲ್ಲಿ ಭಾನುವಾರ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ನಾಲ್ವರು ರೈತರು ಮತ್ತು ಒಬ್ಬ ಪತ್ರಕರ್ತನ ಕುಟುಂಬಗಳಿಗೆ ತಲಾ ₹50 ಲಕ್ಷ ನೆರವು ನೀಡುವುದಾಗಿ ಕಾಂಗ್ರೆಸ್‌ ಆಳ್ವಿಕೆಯ ಛತ್ತೀಸಗಡ ಮತ್ತು ಪಂಜಾಬ್‌ ಸರ್ಕಾರಗಳೆರಡೂ ಬುಧವಾರ ಘೋಷಿಸಿವೆ.

ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಮತ್ತು ಛತ್ತೀಸಗಡ ಮುಖ್ಯಮಂತ್ರಿ ಭೂಫೇಶ್‌ ಬಘೆಲ್‌ ಅವರು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಜತೆಗೆ ಲಖಿಂಪುರ–ಖೇರಿಗೆ ಹೋಗುವುದಕ್ಕಾಗಿ ಲಖನೌಗೆ ಬಂದರು. ನೆರವಿನ ಕೊಡುಗೆಯನ್ನು ಇಬ್ಬರೂ ಮುಖ್ಯಮಂತ್ರಿಗಳು ಲಖನೌ ವಿಮಾನ ನಿಲ್ದಾಣದಲ್ಲಿ ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.