ADVERTISEMENT

ಬಿಹಾರದ ಸರ್ಕಾರಿ ಸಭೆಗಳಲ್ಲಿ ಲಾಲೂ ಪ್ರಸಾದ್‌ ಅಳಿಯ ಭಾಗಿ: ಬಿಜೆಪಿ ಖಂಡನೆ

ಪಿಟಿಐ
Published 19 ಆಗಸ್ಟ್ 2022, 15:35 IST
Last Updated 19 ಆಗಸ್ಟ್ 2022, 15:35 IST
ನಿತೀಶ್‌ ಕುಮಾರ್‌
ನಿತೀಶ್‌ ಕುಮಾರ್‌   

ಪಟ್ನಾ: ಬಿಹಾರದ ನಡೆದ ಸರ್ಕಾರಿ ಸಭೆಗಳಿಗೆ, ರಾಷ್ಟ್ರೀಯ ಜನತಾದಳದ (ಆರ್‌ಜೆಡಿ) ಸಂಸ್ಥಾಪಕ ಲಾಲೂ ಪ್ರಸಾದ್‌ ಯಾದವ್‌ ಅವರ ಅಳಿಯ ಶೈಲೇಶ್‌ ಕುಮಾರ್‌ ಹಾಜರಾಗಿರುವ ವಿಡಿಯೊ ದೃಶ್ಯಗಳು ಶುಕ್ರವಾರ ಹೊರಬಿದ್ದಿದ್ದು, ಇದರಿಂದ ಹೊಸದಾಗಿ ಆಡಳಿತ ಚುಕ್ಕಾಣಿ ಹಿಡಿದಿರುವ ನಿತೀಶ್‌ ಕುಮಾರ್‌ ನೇತೃತ್ವದಸಮ್ಮಿಶ್ರ ಸರ್ಕಾರ ಮುಜುಗರ ಅನುಭವಿಸಿದೆ.

ಲಾಲೂ ಅವರ ಹಿರಿಯ ಮಗ ತೇಜ್‌ ಪ್ರತಾಪ್‌ ಯಾದವ್‌ ಅವರು ಈ ಎರಡೂ ಸಭೆಗಳ ಅಧ್ಯಕ್ಷತೆ ವಹಿಸಿದ್ದರು. ತೇಜ್‌ ಪ್ರತಾ‍ಪ್‌ ಅವರು ಈ ವಾರದ ಆರಂಭದಲ್ಲಿ, ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಖಾತೆಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಶೈಲೇಶ್‌ ಕುಮಾರ್‌ ಅವರು, ತೇಜ್ ಪ್ರತಾಪ್‌ ಅವರ ಅಕ್ಕ, ರಾಜ್ಯಸಭೆಯ ಸದಸ್ಯೆಯೂ ಆಗಿರುವ ಮಿಸಾ ಭಾರತಿ ಅವರನ್ನು ಮದುವೆಯಾಗಿದ್ದಾರೆ.

‌ಜುಲೈ 17ರಂದು ತೇಜ್‌ ಪ್ರತಾಪ್‌ ಸಚಿವರಾಗಿ ಭಾಗವಹಿಸಿದ ಮೊದಲ ಸಭೆಯಲ್ಲಿ, ಶೈಲೇಶ್‌ ಅವರು ಕೊನೆಯ ಸಾಲಿನಲ್ಲಿ ಕೂತಿರುವುದುವಿಡಿಯೊದಲ್ಲಿ ಕಾಣಿಸಿದೆ.

ಅದಾದ ಒಂದು ದಿನದ ನಂತರ ನಡೆದ ಮಾಲಿನ್ಯ ನಿಯಂತ್ರಣ ಮಂಡಳಿಯ ಸಭೆಯಲ್ಲಿ, ಶೈಲೇಶ್‌ ಅವರು ತೇಜ್‌ ಪ್ರತಾಪ್‌ ಅವರ ಪಕ್ಕದಲ್ಲೇ ಕೂತಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ಈ ಎರಡೂ ಘಟನೆಗಳ ಬಗ್ಗೆ ಬಿಜೆಪಿ ತೀವ್ರ ಖಂಡನೆ ವ್ಯಕ್ತಪಡಿಸಿದೆ. ‘ತೇಜ್‌ ಪ್ರತಾಪ್‌ ಯಾವಾಗಲೂ ತಪ್ಪು ಕಾರಣಗಳಿಂದಾಗಿ ಸುದ್ದಿಯಲ್ಲಿರುತ್ತಾರೆ. ಈಗ, ಒಬ್ಬ ಸಚಿವರಾಗಿ ತೇಜ್‌ ಪ್ರತಾಪ್‌ ಅವರು ತಮ್ಮ ಎಲ್ಲ ಕರ್ತವ್ಯಗಳನ್ನು ತಮ್ಮ ಭಾವನಿಗೆ ಹೊರಗುತ್ತಿಗೆ ನೀಡಿದ್ದಾರೆಂದು ಕಾಣುತ್ತದೆ’ ಎಂದು ಬಿಜೆಪಿಯ ಹಿರಿಯ ನಾಯಕ, ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.