ADVERTISEMENT

ಸಾಮೂಹಿಕ ಅತ್ಯಾಚಾರದಿಂದ ನೊಂದು ವಿಷ ಸೇವಿಸಿದ್ದ ಅಪ್ರಾಪ್ತೆ ಸಾವು

ಪಿಟಿಐ
Published 21 ಸೆಪ್ಟೆಂಬರ್ 2021, 12:58 IST
Last Updated 21 ಸೆಪ್ಟೆಂಬರ್ 2021, 12:58 IST
   

ಮುಂಬೈ: ಸಾಮೂಹಿಕ ಅತ್ಯಾಚಾರದಿಂದ ಮನನೊಂದು ವಿಷ ಸೇವಿಸಿದ್ದ 16 ವರ್ಷದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಮಹಾರಾಷ್ಟ್ರದ ಪರಭಾನಿ ಜಿಲ್ಲೆಯಲ್ಲಿ ಘಟನೆ ನಡೆದಿದೆ.

ಸೋನೆಪತ್‌ ಎಂಬಲ್ಲಿ ಸೆ. 12ರಂದು ಇಬ್ಬರು ಅಪ್ರಾಪ್ತರು ಸೇರಿ ಮೂವರು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದರು. ಘಟನೆಯಿಂದ ನೊಂದಿದ್ದ ಸಂತ್ರಸ್ತ ಬಾಲಕಿ ಎರಡು ದಿನಗಳ ನಂತರ ಸೆ. 14ರಂದು ವಿಷ ಸೇವಿಸಿದ್ದಳು. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಸೋಮವಾರ ಸಂಜೆ ಆಕೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲೇ ಸೆ. 18ರಂದು ಸಂತ್ರಸ್ತೆ ಪೊಲೀಸರಿಗೆ ತನ್ನ ಹೇಳಿಕೆ ದಾಖಲಿಸಿದ್ದಾಳೆ.‘ಅತ್ಯಾಚಾರದ ಪರಿಣಾಮವಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದೆ,‘ ಎಂದು ಆಕೆ ಹೇಳಿದ್ದಾಳೆ. ‌

ADVERTISEMENT

ಆರೋಪಿಗಳಲ್ಲಿ ಒಬ್ಬಾತ ಸಂತ್ರಸ್ತೆಗೆ ಪರಿಚಿತನಾಗಿದ್ದ. ದೃಷ್ಕೃತ್ಯವೆಸಗಿದ ಮೂವರು ಎರಡು ವರ್ಷಗಳಿಂದ ಆಕೆಯ ಹಿಂದೆ ಬಿದ್ದಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಪೊಲೀಸರು ಮೂವರ ವಿರುದ್ಧ ಐಪಿಸಿ, ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.