ADVERTISEMENT

ಸುಧಾರಿತ ಸ್ಫೋಟಕ ಸಾಧನ ಪತ್ತೆ; ಜಮ್ಮು–ಕಾಶ್ಮೀರದಲ್ಲಿ ತಪ್ಪಿದ ಅನಾಹುತ

ಪಿಟಿಐ
Published 21 ಸೆಪ್ಟೆಂಬರ್ 2021, 7:23 IST
Last Updated 21 ಸೆಪ್ಟೆಂಬರ್ 2021, 7:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಭದ್ರತಾ ಪಡೆಗಳು ನಡೆಸಿರುವ ಸಕಾಲಿಕ ಕಾರ್ಯಾಚರಣೆಯಲ್ಲಿ ಸುಧಾರಿತ ಸ್ಫೋಟಕ ಸಾಧನ(ಐಇಡಿ) ಪತ್ತೆ ಮಾಡಲಾಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಬಹುದಾಗಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ. ತೀವ್ರ ಭದ್ರತೆ ಇರುವ ಬುಡಗಾಮ್‌ನ ಗೊಗೊ ಪ್ರದೇಶದಲ್ಲಿ ಐಇಡಿ ಪತ್ತೆಯಾಗಿದೆ ಎಂದು ಮಂಗಳವಾರ ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀನಗರ ವಿಮಾನ ನಿಲ್ದಾಣ, ತಾಂತ್ರಿಕ ನೆರವು ಒದಗಿಸುವ ವಿಮಾನ ನಿಲ್ದಾಣ, ಸೇನೆಯ ಪದಾತಿದಳದ ಜಮ್ಮು ಮತ್ತು ಕಾಶ್ಮೀರದ ಮುಖ್ಯಕಚೇರಿ ಸೇರಿದಂತೆ ರಕ್ಷಣಾ ಪಡೆ ಹಾಗೂ ಸಾರ್ವಜನಿಕರ ಬಳಕೆಯ ಸೂಕ್ಷ್ಮ ಕಟ್ಟಡಗಳಿರುವ ವಲಯಕ್ಕೆ ಸಮೀಪದಲ್ಲಿ ಸ್ಫೋಟಕ ವಸ್ತು ಪತ್ತೆಯಾಗಿದೆ.

ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುವ ಚಟುವಟಿಕೆಗಳ ಕುರಿತ ಮಾಹಿತಿಯನ್ನು ಆಧರಿಸಿ ಗೊಗೊ ಪ್ರದೇಶದಲ್ಲಿ ಸೇನೆ ಮತ್ತು ಪೊಲೀಸರು ಸೋಮವಾರ ರಾತ್ರಿ ಶೋಧ ಕಾರ್ಯಾಚರಣೆ ನಡೆಸಿದ್ದರು.

ADVERTISEMENT

ಅಧಿಕಾರಿಗಳ ಪ್ರಕಾರ, ಶೋಧ ಕಾರ್ಯಾಚರಣೆ ವೇಳೆ ಐಇಡಿ ಪತ್ತೆಯಾಗಿದೆ. ಬಾಂಬ್‌ ನಿಷ್ಕ್ರಿಯ ದಳವು ಸ್ಫೋಟಕ ಸಾಧನವನ್ನು ನಾಶಪಡಿಸಿದೆ.

ಬಾರಾಮುಲ್ಲಾದ ಉರಿ ಸೆಕ್ಟರ್‌ನಲ್ಲಿ ಮೊಬೈಲ್ ದೂರವಾಣಿ ಮತ್ತು ಇಂಟರ್ನೆಟ್‌ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಅನುಮಾನಾಸ್ಪದ ಚಲನವಲನ ಪತ್ತೆಯಾದ ಹಿನ್ನೆಲೆಯಲ್ಲಿ ಸೇನೆಯ ಕೂಂಬಿಂಗ್ ಕಾರ್ಯಾಚರಣೆಗೆ ನೆರವಾಗಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.