ADVERTISEMENT

ಕೆ.ಜಿಗೆ ₹2.70 ಲಕ್ಷ ಬೆಲೆ ಬಾಳುವ ಮಾವು ಬೆಳೆದು ರಕ್ಷಣೆಗೆ ಭದ್ರತೆ ನಿಯೋಜನೆ!

ಏಜೆನ್ಸೀಸ್
Published 18 ಜೂನ್ 2021, 13:05 IST
Last Updated 18 ಜೂನ್ 2021, 13:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಜಬಲಪುರ: ಜಗತ್ತಿನ ಅತ್ಯಂತ ವಿರಳ, ದುಬಾರಿ ತಳಿ ಎನಿಸಿಕೊಂಡಿರುವ ಜಪಾನ್‌ನ ಮಿಯಾಝಾಕಿ ಎಂಬ ಮಾವನ್ನು ತಮ್ಮ ತೋಟದಲ್ಲಿ ಬೆಳೆದಿರುವ ಮಧ್ಯಪ್ರದೇಶದ ಜಬಲಪುರದ ದಂಪತಿ ಅದರ ರಕ್ಷಣೆಗಾಗಿ ನಾಲ್ವರು ಭದ್ರತಾ ಸಿಬ್ಬಂದಿ ಮತ್ತು ಆರು ಶ್ವಾನಗಳ ಪಡೆಯನ್ನು ನೇಮಿಸಿಕೊಂಡಿದ್ದಾರೆ.

ಚೆನ್ನೈಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಜಬಲಪುರದ ದಂಪತಿಗೆ ವ್ಯಕ್ತಿಯೊಬ್ಬರು ಎರಡು ಮಾವಿನ ಸಸಿಗಳನ್ನು ನೀಡಿದ್ದರು. ಇದನ್ನು ತೋಟಕ್ಕೆ ತಂದಿದ್ದ ದಂಪತಿ ಸಾಮಾನ್ಯ ಮಾವಿನ ಮರಗಳ ಜೊತೆಗೇ ಬೆಳೆದಿದ್ದರು. ಆದರೆ, ಬೆಳೆದ ನಂತರ ಅದರಲ್ಲಿ ಬಂದ ಫಲಸು ದಂಪತಿಯಲ್ಲಿ ಆಶ್ಚರ್ಯ ಹುಟ್ಟಿಸಿತ್ತು. ಸಾಮಾನ್ಯವಾಗಿ ಹಸಿರು, ಹಳದಿ ಬಣ್ಣದಲ್ಲಿ ಮೂಡುವ ಮಾವಿನ ಕಾಯಿಗಳು ಈ ಮರಗಳಲ್ಲಿ ಮಾತ್ರ ಕಡುಕೆಂಪಗೆ ಮೂಡಿದ್ದವು.

ಎರಡೂ ಮಾವಿನ ಮರಗಳಿಂದ ಮೂಡಿದ ಕಾಯಿಗಳು ಅಚ್ಚರಿ ಹುಟ್ಟಿಸುತ್ತಿದ್ದ ಹಿನ್ನೆಲೆಯಲ್ಲಿ ದಂಪತಿ ಇದರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಆಗಲೇ ಗೊತ್ತಾಗಿದ್ದು, ಇದು ವಿರಳ ಮತ್ತು ದುಬಾರಿ ಎನಿಸಿರುವ ಜಪಾನಿನ ಮಿಯಾಝಾಕಿ ತಳಿ ಮಾವು ಎಂಬುದು. ತೋಟದ ಮಾಲೀಕ ಸಂಕಲ್ಪ್‌ ಅವರು ಈ ಮಾವಿನ ತಳಿಗೆ ದಾಮಿನಿ ಎಂದು ತಮ್ಮ ತಾಯಿಯ ಹೆಸರನ್ನೇ ಇಟ್ಟಿದ್ದಾರೆ ಈ ಕುರಿತು ಸುದ್ದಿ ಸಂಸ್ಥೆ ‘ಇಂಡಿಯಾ ಟಿ.ವಿ’ ವರದಿ ಮಾಡಿದೆ.

ADVERTISEMENT

ವಿಶ್ವದಲ್ಲೇ ಅತಿ ದುಬಾರಿ ಎನಿಸಿರುವ ಮಿಯಾಝಾಕಿ ತಳಿಯ ಮಾವಿನಹಣ್ಣುಗಳು ಕಳೆದ ವರ್ಷ ಮಾರುಕಟ್ಟೆಯಲ್ಲಿ ಕೆ.ಜಿಗೆ ₹2.70 ಲಕ್ಷದ ವರೆಗೆ ಮಾರಾಟವಾಗಿದೆ. ಈ ಕುರಿತು ಜಪಾನಿನ ಮಾಧ್ಯಮಗಳು ವರದಿ ಮಾಡಿವೆ. ಅಪರೂಪದ ಈ ಹಣ್ಣನ್ನು ‘ಸೂರ್ಯನ ಮೊಟ್ಟೆ’ ಎಂದೂ ಕರೆಯಲಾಗುತ್ತದೆ. ಜಪಾನ್‌ನ ಮಿಯಾಝಕಿ ಪ್ರಾಂತ್ಯದಲ್ಲಿ ಇದನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.

ಮಾವಿಗಾಗಿ ಈಗಾಗಲೇ ಬೇಡಿಕೆ ಬರಲಾರಂಭಿಸಿದೆ. ಒಂದು ಮಾವಿನ ಹಣ್ಣಿಗೆ ₹21 ಸಾವಿರ ನೀಡುವ ಪ್ರಸ್ತಾಪವೂ ಬಂದಿದೆ. ಆದರೆ ಮಾರಾಟದ ಬಗ್ಗೆ ಇನ್ನೂ ತೀರ್ಮಾನ ಕೈಗೊಳ್ಳದ ದಂಪತಿ, ಮೊದಲ ಫಸಲನ್ನು ತಮ್ಮ ಆರಾಧ್ಯ ದೈವ ಮಹಾಕಾಳನಿಗೆ ಅರ್ಪಿಸಲು ನಿರ್ಧಾರ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.