ADVERTISEMENT

ಪ್ರಧಾನಿ ಗಾದಿಗೆ ರಾಹುಲ್‌ಗಿಂತ ಮೋದಿಯೇ ಸೂಕ್ತ: ಚುನಾವಣೆ ರಾಜ್ಯಗಳ ಸಮೀಕ್ಷಾ ವರದಿ

ಐಎಎನ್ಎಸ್
Published 9 ಅಕ್ಟೋಬರ್ 2021, 13:43 IST
Last Updated 9 ಅಕ್ಟೋಬರ್ 2021, 13:43 IST
ರಾಹುಲ್ ಗಾಂಧಿ ಮತ್ತು ನರೇಂದ್ರ ಮೋದಿ (ಪಿಟಿಐ ಸಂಗ್ರಹ ಚಿತ್ರ)
ರಾಹುಲ್ ಗಾಂಧಿ ಮತ್ತು ನರೇಂದ್ರ ಮೋದಿ (ಪಿಟಿಐ ಸಂಗ್ರಹ ಚಿತ್ರ)   

ನವದೆಹಲಿ: ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿಯವರೇ ಸೂಕ್ತ ಎಂದು ಎಬಿಪಿ– ಸಿವೋಟರ್–ಐಎಎನ್‌ಎಸ್ ನಡೆಸಿದ ಸಮೀಕ್ಷೆಯಲ್ಲಿ ಪಾಲ್ಗೊಂಡ ಹೆಚ್ಚಿನವರು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶ, ಮಣಿಪುರ, ಗೋವಾ ಮತ್ತು ಉತ್ತರಾಖಂಡಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಚುನಾವಣೆ ನಡೆಯಲಿರುವ ಇನ್ನೊಂದು ರಾಜ್ಯ ಪಂಜಾಬ್‌ನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಪರ ಒಲವು ವ್ಯಕ್ತವಾಗಿದೆ.

ಸಮೀಕ್ಷೆಯ ಪ್ರಕಾರ ಶೇ 43.1ರಷ್ಟು ಮಂದಿ ದೇಶವನ್ನು ಮುನ್ನಡೆಸಲು ಮೋದಿಯೇ ಸೂಕ್ತ ಎಂದಿದ್ದಾರೆ. ಶೇ 9.1ರಷ್ಟು ಮಂದಿ ರಾಹುಲ್ ಗಾಂಧಿ ಉತ್ತಮ ಎಂದಿದ್ದರೆ, ಶೇ 5.2ರಷ್ಟು ಮಂದಿ ಅರವಿಂದ್ ಕೇಜ್ರಿವಾಲ್, ಶೇ 3.5ರಷ್ಟು ಮಂದಿ ಮನಮೋಹನ್ ಸಿಂಗ್ ಹಾಗೂ ಶೇ 3.2ರಷ್ಟು ಜನ ಯೋಗಿ ಆದಿತ್ಯನಾಥ್ ಉತ್ತಮ ಎಂದು ಪ್ರತಿಕ್ರಿಯಿಸಿದ್ದಾರೆ.

ರಾಜ್ಯವಾರು ಸಮೀಕ್ಷಾ ವರದಿಯ ಪ್ರಕಾರ ಮೋದಿಯವರು ಪಂಜಾಬ್ ಹೊರತುಪಡಿಸಿ ಎಲ್ಲ ರಾಜ್ಯಗಳಲ್ಲಿ ಶೇ 42ಕ್ಕಿಂತಲೂ ಹೆಚ್ಚು ಬೆಂಬಲ ಪಡೆದಿದ್ದಾರೆ. ಪಂಜಾಬ್‌ನಲ್ಲಿ ಶೇ 13.8 ಮಂದಿ ಮಾತ್ರ ಮೋದಿ ಪರ ಒಲವು ವ್ಯಕ್ತಪಡಿಸಿದ್ದಾರೆ.

ADVERTISEMENT

ಮೋದಿ ಅವರಿಗೆ ಗೋವಾದಲ್ಲಿ ಶೇ 46.1, ಮಣಿಪುರದಲ್ಲಿ ಶೇ 45.1 ಉತ್ತರ ಪ್ರದೇಶದಲ್ಲಿ ಶೇ 43.1 ಹಾಗೂ ಉತ್ತರಾಖಂಡದಲ್ಲಿ ಶೇ 47.3ರಷ್ಟು ಮಂದಿ ಬೆಂಬಲ ಸೂಚಿಸಿದ್ದಾರೆ.

ರಾಹುಲ್ ಗಾಂಧಿ ಅವರಿಗೆ ಗೋವಾದಲ್ಲಿ ಶೇ 16.5, ಮಣಿಪುರದಲ್ಲಿ ಶೇ 18.3, ಪಂಜಾಬ್‌ನಲ್ಲಿ ಶೇ 2.1, ಉತ್ತರ ಪ್ರದೇಶದಲ್ಲಿ ಶೇ 5.8 ಹಾಗೂ ಉತ್ತರಾಖಂಡದಲ್ಲಿ ಶೇ 4.7ರಷ್ಟು ಬೆಂಬಲ ದೊರೆತಿದೆ.

ಕೇಜ್ರಿವಾಲ್ ಅವರಿಗೆ ಗೋವಾದಲ್ಲಿ ಶೇ 15.7, ಪಂಜಾಬ್‌ನಲ್ಲಿ ಶೇ 26.5 ಹಾಗೂ ಉತ್ತರಾಖಂಡದಲ್ಲಿ ಶೇ 13.6ರಷ್ಟು ಬೆಂಬಲ ವ್ಯಕ್ತವಾಗಿದೆ.

ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಐದು ರಾಜ್ಯಗಳ 690 ವಿಧಾನಸಭಾ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು. 98,121 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.

ಉತ್ತರ ಪ್ರದೇಶ, ಮಣಿಪುರ, ಗೋವಾ ಮತ್ತು ಉತ್ತರಾಖಂಡದ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಜಯಗಳಿಸಲಿದ್ದು, ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಎಬಿಪಿ ಸಿ-ವೋಟರ್ ಸಮೀಕ್ಷೆ ಈಗಾಗಲೇ ಭವಿಷ್ಯ ನುಡಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.