ADVERTISEMENT

ವಿದೇಶದಲ್ಲಿ ಭಾರತೀಯ ಸಂಸ್ಕೃತಿ ಅಧ್ಯಯನ: ವಿದ್ಯಾರ್ಥಿ ವೇತನ ರದ್ದುಪಡಿಸಿದ ಕೇಂದ್ರ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2022, 14:36 IST
Last Updated 23 ಫೆಬ್ರುವರಿ 2022, 14:36 IST
.
.   

ನವದೆಹಲಿ: ‘ಭಾರತೀಯ ಸಂಸ್ಕೃತಿ’, ’ಪರಂಪರೆ’, ’ಇತಿಹಾಸ’ ಹಾಗೂ ’ಭಾರತ ಮೂಲದ ಸಾಮಾಜಿಕ ಅಧ್ಯಯನ’ ಕುರಿತ ಕೋರ್ಸ್‌ಗಳನ್ನು ವಿದೇಶದಲ್ಲಿ ಅಭ್ಯಸಿಸಲು ಬಯಸಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿ ವೇತನವನ್ನು ರದ್ದುಪಡಿಸಿರುವ ಕೇಂದ್ರ ಸರ್ಕಾರ,ಈ ಸಂಬಂಧ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ.

ಮಾನವಿಕ ಮತ್ತು ಸಮಾಜ ವಿಜ್ಞಾನ ಕೋರ್ಸ್‌ಗಳ ಅಧ್ಯಯನ ನಿರತರಿಗೆ ಕಳೆದ ಒಂದು ದಶಕದಿಂದ ನೀಡಲಾಗುತ್ತಿದ್ದ ಈ ವಿದ್ಯಾರ್ಥಿ ವೇತನವನ್ನು ದಿಢೀರ್‌ ಸ್ಥಗಿತಗೊಳಿಸಿದ್ದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಮುಂಬರುವ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಮಾರ್ಚ್ 31 ಅಂತಿಮ ದಿನವಾಗಿದೆ. ಆದರೆ, ಪರಿಷ್ಕೃತ ಮಾರ್ಗಸೂಚಿಯು ಅರ್ಜಿ ಸಲ್ಲಿಕೆಗೆ ಕೆಲವೇ ದಿನ ಮೊದಲು ಪ್ರಕಟವಾಗಿದ್ದರಿಂದ ಈ ಕೋರ್ಸ್‌ಗಳಿಗೆ ಸೇರಬಯಸಿರುವ ವಿದ್ಯಾರ್ಥಿಗಳ ಆಶಯಕ್ಕೆ ಧಕ್ಕೆ ತಂದಿದೆ.

ADVERTISEMENT

ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳ ಬಡ ವಿದ್ಯಾರ್ಥಿಗಳು ಸ್ನಾತಕೋತ್ತರ ಹಾಗೂ ಪಿಎಚ್‌.ಡಿ ಪದವಿ ಪಡೆಯುವುದಕ್ಕೆ ನೆರವು ನೀಡಲೆಂದೇ 1952ರಿಂದಲೇ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಮೂಲಕ ಅನುದಾನ ಒದಗಿಸಲಾಗುತ್ತಿತ್ತು. 2012ರಿಂದ ಮಾನವಿಕ ಮತ್ತು ಸಮಾಜ ವಿಜ್ಞಾನ ಕೋರ್ಸ್‌ಗಳ ವಿದ್ಯಾರ್ಥಿಗಳಿಗೂ ಈ ಸೌಲಭ್ಯ ವಿಸ್ತರಿಸಲಾಗಿತ್ತು.

ಪರಿಶಿಷ್ಟ ಜಾತಿ, ಅಧಿಸೂಚಿತ ಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟುಗಳು, ಭೂರಹಿತ ಕೃಷಿ ಕಾರ್ಮಿಕರು ಹಾಗೂ ಸಾಂಪ್ರದಾಯಿಕ ಕುಶಲಕರ್ಮಿ ವಿಭಾಗದ ಒಟ್ಟು 100 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮಂಜೂರು ಮಾಡುವುದಕ್ಕೆ ಅನುದಾನ ಮೀಸಲಿತ್ತು.

ಈ ಪೈಕಿ, ಪರಿಶಿಷ್ಟ ಜಾತಿಯವರಿಗೆ 90, ಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟು ವಿದ್ಯಾರ್ಥಿಗಳಿಗೆ 6, ಭೂರಹಿತ ಕೃಷಿ ಕಾರ್ಮಿಕರು ಹಾಗೂ ಸಾಂಪ್ರದಾಯಿಕ ಕುಶಲಕರ್ಮಿ ವಿಭಾಗದ ನಾಲ್ವರಿಗೆ ಈ ವಿದ್ಯಾರ್ಥಿ ವೇತನ ನೀಡಲೆಂದೇ ಕೇಂದ್ರ ಸರ್ಕಾರ ವಾರ್ಷಿಕ ₹ 30 ಕೋಟಿ ಅನುದಾನ ನೀಡುತ್ತಿತ್ತು.

ಕಳೆದ ಆರು ವರ್ಷಗಳ ಅವಧಿಯಲ್ಲಿ ಹಂತಹಂತವಾಗಿ ಅನುದಾನ ಕಡಿತ ಮಾಡಲಾಗಿದ್ದು, ಶೇ 50ಕ್ಕಿಂತ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿಗೆ ಮಾತ್ರ ಮಂಜೂರಾಗಿದೆ.

2021–22ರಲ್ಲಿ 39, 2020–21ರಲ್ಲಿ 72, 2019–20ರಲ್ಲಿ 46, 2018–19ರಲ್ಲಿ 50, 2017–18ರಲ್ಲಿ 65 ಮತ್ತು 2016–17ರಲ್ಲಿ 46 ವಿದ್ಯಾರ್ಥಿಗಳು ಮಾತ್ರ ಈ ಸೌಲಭ್ಯ ಪಡೆದಿದ್ದಾಗಿ ಮಾಹಿತಿ ಹಕ್ಕು ಯೋಜನೆ ಅಡಿ ತಿಳಿದುಬಂದಿದೆ.

ಸಮಾಜ ವಿಜ್ಞಾನ ಕೋರ್ಸ್‌ಗೆ ಪ್ರವೇಶ ಪಡೆಯುವ ಮೂಲಕ ವಿದೇಶದಲ್ಲಿ ಅಧ್ಯಯನ ಮಾಡಲು ಬಯಸಿದ್ದ ದೆಹಲಿಯ ಬಡ ವಿದ್ಯಾರ್ಥಿನಿಯೊಬ್ಬರು, ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಯಸಿದ್ದರು. ಆದರೆ, ಪರಿಷ್ಕೃತ ಮಾರ್ಗಸೂಚಿಯಿಂದಾಗಿ ನಿರಾಸೆಗೆ ಒಳಗಾಗಿರುವ ಅವರಿಗೆ, ಸಾರ್ವಜನಿಕರಿಂದ ಹಣ ಸಂಗ್ರಹಿಸುವಂತೆ (ಕ್ರೌಡ್‌ ಫಂಡಿಂಗ್‌) ಸ್ನೇಹಿತರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.