ADVERTISEMENT

ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ₹50 ಸಾವಿರ ಪರಿಹಾರ: ಕೇಂದ್ರ ಸರ್ಕಾರ

'ಮೃತರ ಕುಟುಂಬಕ್ಕೆ ಹಣ ನೀಡಿಕೆ ಮಾರ್ಗಸೂಚಿ ಸಿದ್ಧ'

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 20:48 IST
Last Updated 22 ಸೆಪ್ಟೆಂಬರ್ 2021, 20:48 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ₹50 ಸಾವಿರ ಪರಿಹಾರ ನೀಡುವುದಕ್ಕಾಗಿ ರಾಜ್ಯಗಳು ಅನುಸರಿಸಬೇಕಾದ ಮಾರ್ಗಸೂಚಿಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸಿದ್ಧಪಡಿಸಿದೆ. ಜೂನ್‌ 30ರಂದು ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿಗೆ ಅನುಗುಣವಾಗಿ ಈ ಮಾರ್ಗಸೂಚಿ ರೂಪಿಸಲಾಗಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಬುಧವಾರ ತಿಳಿಸಿದೆ.

ವ್ಯಕ್ತಿಯ ಸಾವಿಗೆ ಕೋವಿಡ್‌–19 ಕಾರಣ ಎಂಬ ಪ್ರಮಾಣಪತ್ರವನ್ನು ಸಲ್ಲಿಸಿ ಪರಿಹಾರ ಪ‍ಡೆಯಬಹುದಾಗಿದೆ.ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ (ಐಸಿಎಂಆರ್‌) ರೂಪಿಸಿರುವ ಮಾರ್ಗಸೂಚಿ ಅನುಸಾರವೇ ಈ ಪ್ರಮಾಣಪತ್ರ ಪಡೆದಿರಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಹೇಳಲಾಗಿದೆ.

ರಾಜ್ಯ ಸರ್ಕಾರಗಳು ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಈ ಮೊತ್ತವನ್ನು ಭರಿಸಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಮರಣ ಪ್ರಮಾಣಪತ್ರ ಮತ್ತು ಇತರ ದಾಖಲೆಗಳನ್ನು ಪಡೆದುಕೊಂಡ ಬಳಿಕ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು (ಡಿಡಿಎಂಎ) ಹಣ ಬಿಡುಗಡೆ ಮಾಡಬೇಕು.

ADVERTISEMENT

ಪರಿಹಾರಕ್ಕೆ ಕೋರಿಕೆ ಸಲ್ಲಿಕೆ, ದೃಢೀಕರಣ, ಮಂಜೂರು ಮತ್ತು ಅಂತಿಮವಾಗಿ ಪ‍ರಿಹಾರದ ಮೊತ್ತ ಬಿಡುಗಡೆಯ ಇಡೀ ಪ್ರಕ್ರಿಯೆಗೆ ಸರಳವಾದ, ಸಮರ್ಪಕವಾದ ಮತ್ತು ಜನಸ್ನೇಹಿಯಾದ ವ್ಯವಸ್ಥೆ ರೂಪಿಸುವುದು ಡಿಡಿಎಂಎಯ ಹೊಣೆಯಾಗಿದೆ. ಅಗತ್ಯ ದಾಖಲೆಪತ್ರಗಳು ಸಲ್ಲಿಕೆಯಾದ 30 ದಿನಗಳ ಒಳಗೆ ಪರಿಹಾರದ ಕೋರಿಕೆ ಅರ್ಜಿಯ ವಿಲೇವಾರಿ ಆಗಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.ಇದೇ 11ರಂದು ಮಾರ್ಗಸೂಚಿ ಪ್ರಕಟ ಆಗಿದೆ.

ಕೋವಿಡ್‌ನಿಂದ ಮೃತಪ‍ಟ್ಟ ವ್ಯಕ್ತಿಗಳ ಕುಟುಂಬಕ್ಕೆ ಪರಿಹಾರ ನೀಡುವುದಕ್ಕೆ ಬೇಕಾದ ಮಾರ್ಗಸೂಚಿಯನ್ನು ಸಿದ್ಧಪಡಿಸಬೇಕು ಎಂದು ಪ್ರಧಾನಿ ನೇತೃತ್ವದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಸುಪ್ರೀಂ ಕೋರ್ಟ್‌ ಜೂನ್‌ 30ರಂದು ಸೂಚನೆ ನೀಡಿತ್ತು. ಈ ಮಾರ್ಗಸೂಚಿ ಸಿದ್ಧಪಡಿಸಲು ಆರು ವಾರಗಳ ಸಮಯವನ್ನೂ ನೀಡಲಾಗಿತ್ತು. ಆಗಸ್ಟ್‌ 16ರಂದು ಕಾಲಾವಕಾಶವನ್ನು ಮತ್ತೆ ನಾಲ್ಕು ವಾರ ವಿಸ್ತರಿಸಲಾಗಿತ್ತು.

ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ವಕೀಲರಾದ ಗೌರವ್‌ ಕುಮಾರ್‌ ಬನ್ಸಲ್‌ ಮತ್ತು ರೀಪಕ್‌ ಕನ್ಸಲ್‌ ಅವರು ಅರ್ಜಿ ಸಲ್ಲಿಸಿದ್ದರು. ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಿಕೆಗಾಗಿ ಕನಿಷ್ಠ ಮಾನದಂಡವನ್ನು ರೂಪಿಸುವಲ್ಲಿ ವಿಫಲವಾಗಿರುವ ಕೇಂದ್ರವು, ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿನ ಸಾಂವಿಧಾನಿಕ ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ಸು‍ಪ‍್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತ್ತು.

ಮಾರ್ಗಸೂಚಿಯಲ್ಲಿ ಏನಿದೆ?
* ಆಧಾರ್‌ ಜೋಡಣೆಯಿರುವ ನೇರ ನಗದು ವರ್ಗಾವಣೆ ಮೂಲಕ ಮೊತ್ತ ಸಂದಾಯ ಆಗಬೇಕು
* ದೂರುಗಳ ಪರಿಹಾರಕ್ಕೆ ಜಿಲ್ಲಾ ಮಟ್ಟದ ಸಮಿತಿ ರಚಿಸಬೇಕು
* ಕೋರಿಕೆ ತಿರಸ್ಕರಿಸಿದ್ದರೆ ಅದರ ಕಾರಣಗಳನ್ನು ಸ್ಪಷ್ಟವಾಗಿ ನಮೂದಿಸಬೇಕು
* ಕೋರಿಕೆ ಸಲ್ಲಿಕೆಯಾಗಿ 30 ದಿನಗಳ ಒಳಗೆ ಅರ್ಜಿ ವಿಲೇವಾರಿ ಮಾಡಬೇಕು
* ಕೋವಿಡ್‌ ಸಾಂಕ್ರಾಮಿಕವು ವಿಪತ್ತು ಎಂದು 2020ರ ಮಾರ್ಚ್‌ನಲ್ಲಿಯೇ ಘೋಷಿಸಲಾಗಿದೆ. ಹಾಗಾಗಿ, ಪರಿಹಾರ ನೀಡುವುದು ಅನಿವಾರ್ಯ

ರಾಜ್ಯದಲ್ಲಿ ₹1 ಲಕ್ಷ:ಕೆಲವು ರಾಜ್ಯಗಳು ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡುವ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿವೆ. ಹೆಚ್ಚಿನ ಮೊತ್ತವನ್ನೂ ನೀಡುತ್ತಿವೆ. ಬಿಹಾರದಲ್ಲಿ ಪರಿಹಾರದ ಮೊತ್ತವನ್ನು ₹4 ಲಕ್ಷ ಎಂದು ನಿಗದಿ ಮಾಡಲಾಗಿದೆ. ಕರ್ನಾಟಕ ಮತ್ತು ಮಧ್ಯ ಪ್ರದೇಶದಲ್ಲಿ ₹1 ಲಕ್ಷ ನೀಡಲಾಗುತ್ತಿದೆ. ದೆಹಲಿಯಲ್ಲಿ ₹50 ಸಾವಿರ ನಿಗದಿ ಮಾಡಲಾಗಿದೆ. ಮುಖ್ಯಮಂತ್ರಿಯವರ ಪರಿಹಾರ ನಿಧಿ ಅಥವಾ ಇತರ ನಿಧಿಯಿಂದ ಈ ಮೊತ್ತವನ್ನು ಭರಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.