ADVERTISEMENT

ರೈಲು ಒತ್ತೆ ಪ್ರಕರಣ: ಟಿಎಂಸಿ ಸದಸ್ಯ ಸೇರಿ12 ಜನರ ವಿರುದ್ಧ ಆರೋಪಪಟ್ಟಿ ದಾಖಲು

ಪಿಟಿಐ
Published 24 ಸೆಪ್ಟೆಂಬರ್ 2021, 11:55 IST
Last Updated 24 ಸೆಪ್ಟೆಂಬರ್ 2021, 11:55 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೋಲ್ಕತ್ತ (ಪಿಟಿಐ): 2009ರಲ್ಲಿ ನಡೆದಿದ್ದ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಒತ್ತೆ ಪ್ರಕರಣದಲ್ಲಿ ಎನ್‌ಐಎ ಶುಕ್ರವಾರ ಆರೋಪಪಟ್ಟಿ ಸಲ್ಲಿಸಿದ್ದು, ತೃಣಮೂಲ ಕಾಂಗ್ರೆಸ್‌ ಸದಸ್ಯ ಛತ್ರಧರ್ ಮಹತೊ ಮತ್ತು ಇತರೆ 12 ಮಂದಿಯನ್ನು ಹೆಸರಿಸಿದೆ.

ಮಹತೊ ಅವರು ಮಾವೋವಾದಿ ಬೆಂಬಲಿತ ಪೀಪಲ್ ಎಗೇನ್ಸ್ಟ್ ಪೊಲೀಸ್‌ ಅಟ್ರಾಸಿಟಿಸ್‌ (ಪಿಸಿಪಿಎ) ಸಂಘಟನೆಯ ಸಂಚಾಲಕ. ಇವರನ್ನು ಮುಖ್ಯ ಆರೋಪಿಯಾಗಿ, ಅವರ ಸಹೋದರ ಶಶಧರ್‌ ಮಹತೊ, ಮಾವೋವಾದಿ ಕಮಾಂಡರ್‌ ದಿವಂಗತ ಕ್ಷೇಂಜಿ ಅವರನ್ನು ಇತರೆ ಆರೋಪಿಗಳಾಗಿ 50 ಪುಟಗಳ ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ.

ಈ ಎಲ್ಲ ಆರೋಪಿಗಳ ವಿರುದ್ಧಜಾಮೀನುರಹಿತವಾದ, ಐಪಿಸಿ ಮತ್ತು ಕಾನೂನುಬಾಹಿರ ಚಟುವಟಿಕಗಳ ನಿಯಂತ್ರಣ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಮೊಕದ್ದಮೆ ದಾಖಲಿಸಲಾಗಿದೆ.

ADVERTISEMENT

ಆರೋಪಿ ಕ್ಷೇಂಜಿ ನವೆಂಬರ್ 24, 2011ರಲ್ಲಿ ಕೋಬ್ರಾ ಕೈಗೊಂಡಿದ್ದ ಕಾರ್ಯಾಚರಣೆಯಲ್ಲಿ ಹತ್ಯೆಗೀಡಾಗಿದ್ದರು. ಬಂಗಾಳ –ಜಾರ್ಖಂಡ್ ಗಡಿಯ ಮಿಡ್ನಾಪುರ್‌ ‍ಪಶ್ಚಿಮ ಜಿಲ್ಲೆಯ ಅರಣ್ಯಭಾಗದಲ್ಲಿ ಬೃಹತ್ ಕಾರ್ಯಾಚರಣೆ ನಡೆದಿತ್ತು.

ಪತ್ರಕರ್ತನ ಸೋಗು ಧರಿಸಿದ್ದ ಛತ್ರಧರ್ ಮಹತೊರನ್ನು ಸೆಪ್ಟೆಂಬರ್ 2009ರಲ್ಲಿ ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದರು. ನಂತರ ಸಂತೋಷ್‌ ಪಾತ್ರಾ ಪಿಸಿಪಿಎ ಸಂಘಟನೆಯ ನಾಯಕತ್ವವನ್ನು ವಹಿಸಿಕೊಂಡಿದ್ದರು, ಪಿಸಿಪಿಎ ಅಕ್ಟೋಬರ್ 27, 2009ರಲ್ಲಿ ದೆಹಲಿ –ಭುವನೇಶ್ವರ ರಾಜಧಾನಿ ಎಕ್ಸ್‌‌ಪ್ರೆಸ್‌ ರೈಲು ಒತ್ತೆಯಾಗಿರಿಸಿಕೊಂಡಿತ್ತು.

ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಮಹತೊ 11 ವರ್ಷಗಳ ನಂತರ ಫೆಬ್ರುವರಿ 2020ರಲ್ಲಿ ಬಿಡುಗಡೆಯಾಗಿದ್ದರು. ಹಿಂದೆಯೇ ತೃಣಮೂಲ ಕಾಂಗ್ರೆಸ್ ಪಕ್ಷ ಸೇರಿದ್ದರು. ಇದೇ ವರ್ಷ ಮಾರ್ಚ್‌ 26ರಂದು ಎನ್‌ಐಎ ಇವರನ್ನು ಬಂಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.