ADVERTISEMENT

ಅಂಗಾಂಗ ಕಸಿಗೆ ಒಳಗಾದವರಿಗೆ ಲಸಿಕೆ ಪಡೆದ ಬಳಿಕವೂ ಕೋವಿಡ್‌ನಿಂದ ಅಪಾಯವಿದೆ: ಅಧ್ಯಯನ

ಪಿಟಿಐ
Published 10 ಮೇ 2021, 10:07 IST
Last Updated 10 ಮೇ 2021, 10:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ಅಂಗಾಂಗ ಕಸಿಗೆ ಒಳಗಾದ ವ್ಯಕ್ತಿಗಳಿಗೆ ಕೋವಿಡ್‌ ಲಸಿಕೆಯ ಎರಡು ಡೋಸ್‌ಗಳು ರಕ್ಷಣೆಯನ್ನು ನೀಡುತ್ತದೆ. ಆದರೂ ಅವರು ಮಾಸ್ಕ್‌ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಇತರೆ ಸುರಕ್ಷತಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಅಧ್ಯಯನವೊಂದು ಹೇಳಿದೆ.

‘ಅಂಗಾಂಗ ಕಸಿಗೆ ಒಳಗಾದಶೇಕಡ 17ರಷ್ಟು ‌ವ್ಯಕ್ತಿಗಳಲ್ಲಿ ಕೋವಿಡ್‌ ಲಸಿಕೆಯ ಮೊದಲ ಡೋಸ್‌ ಪಡೆದ ಬಳಿಕವೇ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಿದೆ. ಎರಡನೇ ಡೋಸ್‌ ಬಳಿಕ ಇದರ ಪ್ರಮಾಣವು ಇನ್ನಷ್ಟು ಹೆಚ್ಚಿದೆ. ಆದರೆ ಇದು ಆರೋಗ್ಯವಂತ ಜನರಲ್ಲಿ ಉತ್ಪತ್ತಿಯಾಗುವ ರೋಗನಿರೋಧಕ ಶಕ್ತಿಗಿಂತ ಬಹಳ ಕಡಿಮೆ ಇರುತ್ತದೆ’ ಎಂದು ಅಮೆರಿಕದ ಜಾನ್ಸ್‌ ಹಾಪ್ಕಿನ್ಸ್‌ ಯುನಿವರ್ಸಿಟಿ ಸ್ಕೂಲ್‌ ಆಫ್ ಮೆಡಿಸಿನ್‌ನ ಬ್ರಿಯಾನ್ ಬೊಯಾರ್ಸ್ಕಿ ನೇತೃತ್ವದ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.

‘ಅಂಗಾಂಗ ಕಸಿಗೆ ಒಳಗಾದ ಮತ್ತು ರೋಗನಿರೋಧಕ ಶಕ್ತಿ ಕಡಿಮೆಯಿರುವ ಇತರೆ ರೋಗಿಗಳು ಲಸಿಕೆ ಸ್ವೀಕರಿಸಿದ ಬಳಿಕವೂ ಅವರಿಗೆ ಕೋವಿಡ್‌ ತಗುಲುವ ಅಪಾಯವಿದೆ. ಹಾಗಾಗಿ ಅವರು ಕಡ್ಡಾಯವಾಗಿ ಕೋವಿಡ್‌ ಮಾರ್ಗಸೂಚಿಗಳನ್ನು ಅನುಸರಿಸಬೇಕು’ ಎಂದು ಅವರು ಹೇಳಿದ್ದಾರೆ.

ADVERTISEMENT

ಹೃದಯ, ಶ್ವಾಸಕೋಶ, ಮೂತ್ರಪಿಂಡದಂತಹ ಅಂಗಾಂಗ ಕಸಿಗೆ ಒಳಗಾದವರು ರೋಗನಿರೋಧಕ ಶಕ್ತಿಯನ್ನು ಕಡಿಮೆಗೊಳಿಸುವ ಔಷಧಿಗಳನ್ನು ಹೆಚ್ಚಾಗಿ ತೆಗೆದುಕೊಳ್ಳುತ್ತಾರೆ ಎಂಬುದು ಸಂಶೋಧನೆಯಲ್ಲಿ ತಿಳಿದುಬಂದಿದೆ.

ಈ ಅಧ್ಯಯನವನ್ನು ಜರ್ನಲ್‌ ಆಫ್‌ ದಿ ಅಮೆರಿಕನ್‌ ಮೆಡಿಕಲ್‌ ಅಸೋಸಿಯೇಷನ್‌ನಲ್ಲಿ(ಜಿಎಎಂಎ) ಪ್ರಕಟಿಸಲಾಗಿದೆ. ಈ ಅಧ್ಯಯನದಲ್ಲಿ ಮಾರ್ಡೆನಾ ಮತ್ತು ಫೈಜರ್‌ ಸಂಸ್ಥೆಯ ಲಸಿಕೆಯನ್ನು ಪಡೆದ ಹಾಗೂ ಅಂಗಾಂಗ ಕಸಿಗೆ ಒಳಗಾದ 658 ಮಂದಿಯನ್ನು ಬಳಸಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.