ADVERTISEMENT

ನಿಜ ಜೀವನದಲ್ಲಿ ಹೀರೋ ಆಗಿ: ತಮಿಳು ನಟ ವಿಜಯ್‌ಗೆ ಹೈಕೋರ್ಟ್ ತಾಕೀತು

ಆಮದು ಕಾರಿಗೆ ಪ್ರವೇಶ ತೆರಿಗೆ ಪ್ರಶ್ನಿಸಿದ್ದ ನಟ ವಿಜಯ್‌ಗೆ ಕೋರ್ಟ್ ತಾಕೀತು. ₹ 1 ಲಕ್ಷ ದಂಡ

ಪಿಟಿಐ
Published 13 ಜುಲೈ 2021, 12:30 IST
Last Updated 13 ಜುಲೈ 2021, 12:30 IST
ನಟ ವಿಜಯ್
ನಟ ವಿಜಯ್   

ಚೆನ್ನೈ (ಪಿಟಿಐ): ‘ಬೆಳ್ಳಿ ಪರದೆಯಲ್ಲಷ್ಟೇ ನಾಯಕರಾಗಿ ಉಳಿಯಬೇಡಿ. ಸಕಾಲದಲ್ಲಿ, ಪ್ರಾಮಾಣಿಕವಾಗಿ ತೆರಿಗೆಯನ್ನೂ ಪಾವತಿಸಿ‘ ಎಂದು ಮದ್ರಾಸ್‌ ಹೈಕೋರ್ಟ್‌ ತಮಿಳು ಚಿತ್ರನಟ ವಿಜಯ್ ಅವರಿಗೆ ತಾಕೀತು ಮಾಡಿದೆ.

ಇಂಗ್ಲೆಂಡ್‌ನಿಂದ 2012ರಲ್ಲಿ ಆಮದು ಮಾಡಿಕೊಂಡಿದ್ದ ಐಷಾರಾಮಿ ‘ರೋಲ್ಸ್‌ ರಾಯ್ ಘೋಸ್ಟ್‘ ಕಾರಿಗೆ ಹೆಚ್ಚು ಪ್ರವೇಶ ತೆರಿಗೆ ವಿಧಿಸಲಾಗಿದೆ ಎಂದು ಪ್ರಶ್ನಿಸಿ ವಿಜಯ್‌ ರಿಟ್‌ ಅರ್ಜಿ ಸಲ್ಲಿಸಿದ್ದರು.

ಅರ್ಜಿಯನ್ನು ವಜಾ ಮಾಡುವುದರ ಜೊತೆಗೆ ₹ 1 ಲಕ್ಷ ದಂಡವನ್ನೂ ವಿಧಿಸಿದ ಕೋರ್ಟ್‌, ದಂಡದ ಮೊತ್ತವನ್ನು ಎರಡು ವಾರಗಳಲ್ಲಿ ಮುಖ್ಯಮಂತ್ರಿಗಳ ಕೋವಿಡ್‌ ಪರಿಹಾರ ನಿಧಿಗೆ ಸಲ್ಲಿಸಬೇಕು ಎಂದು ಆದೇಶಿಸಿತು.

ADVERTISEMENT

‘ಜನಪ್ರಿಯ ಚಿತ್ರನಟರಾಗಿ ಸಕಾಲದಲ್ಲಿ, ಪ್ರಾಮಾಣಿಕವಾಗಿ ತೆರಿಗೆ ಪಾವತಿಸಬೇಕು ಎಂಬ ನಿರೀಕ್ಷೆ ಇರುತ್ತದೆ. ತೆರೆ ಮೇಲಷ್ಟೇ ನಾಯಕರಾಗಿದ್ದರೆ ಸಾಲದು‘ ಎಂದು ನ್ಯಾಯಮೂರ್ತಿ ಎಸ್‌.ಎಂ.ಸುಬ್ರಹ್ಮಣಿಯಂ ಹೇಳಿದರು.

‘ಅರ್ಜಿದಾರರಾದ ಸಿ.ಜೋಸೆಫ್ ವಿಜಯ್‌ ಅವರು ತಮ್ಮ ಅರ್ಜಿಯಲ್ಲಿ ತಮ್ಮ ವೃತ್ತಿ ಅಥವಾ ಪ್ರವೃತ್ತಿಯನ್ನೂ ದಾಖಲಿಸಿಲ್ಲ. ಈ ಕಾಲಂ ಖಾಲಿ ಬಿಡಲಾಗಿದೆ. ವಿಜಯ್‌ ಪರ ವಕೀಲರು, ಅರ್ಜಿದಾರರು ಹೆಸರಾಂತ ನಟ ಎಂಬುದನ್ನು ಉಲ್ಲೇಖಿಸಿದ ಬಳಿಕವಷ್ಟೇ ಇದು ಗೊತ್ತಾಗಿದೆ’ ಎಂದು ನ್ಯಾಯಮೂರ್ತಿ ಉಲ್ಲೇಖಿಸಿದರು.

‘ತೆರಿಗೆ ಪಾವತಿಯನ್ನು ತಪ್ಪಿಸಿಕೊಳ್ಳುವುದನ್ನು ದೇಶ ವಿರೋಧಿ ಹವ್ಯಾಸ ಎಂದೇ ಪರಿಗಣಿಸಬೇಕು. ಇಂಥ ವರ್ತನೆ ಮತ್ತು ಮನೋಭಾವ ಕೂಡಾ ಅಸಾಂವಿಧಾನಿಕವಾದುದು’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಅರ್ಜಿಯನ್ನು ವಜಾ ಮಾಡಿ, ನಿಯಮದಂತೆ ಪ್ರವೇಶ ತೆರಿಗೆಯನ್ನು ಈ ಆದೇಶದ ಪ್ರತಿಯನ್ನು ಪಡೆದ ಎರಡು ವಾರದಲ್ಲಿ ಸಂದಾಯ ಮಾಡಬೇಕು. ಈಗಾಗಲೇ ಪಾವತಿಸಿದ್ದರೆ, 2012ರ ಜುಲೈ 17ರ ಮಧ್ಯಂತರ ಆದೇಶದಲ್ಲಿ ತಿಳಿಸಿದ್ದಂತೆ ಶೇ 20ರಷ್ಟು ಪ್ರವೇಶ ತೆರಿಗೆಯನ್ನು ಹೊಂದಾಣಿಸಿಕೊಳ್ಳಬೇಕು’ ಎಂದು ಆದೇಶಿಸಿತು.

ಕಾಲಮಿತಿಯಲ್ಲಿ ಪ್ರವೇಶ ತೆರಿಗೆಯನ್ನು ಪಾವತಿಸದಿದ್ದರೆ ಕಾನೂನು ಕ್ರಮವನ್ನು ಜರುಗಿಸಬೇಕು ಎಂದು ಪ್ರತಿವಾದಿಗಳಾಗಿದ್ದ ಗೃಹ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆಗೂ ಕೋರ್ಟ್‌ ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.