ADVERTISEMENT

ಜಮ್ಮು-ಕಾಶ್ಮೀರದಲ್ಲಿ ಮತದಾರರ ಪಟ್ಟಿಗೆ ವಲಸಿಗರ ಸೇರಿಕೆ: ಪಿಡಿಪಿ ಪ್ರತಿಭಟನೆ

ಪಿಟಿಐ
Published 19 ಆಗಸ್ಟ್ 2022, 15:49 IST
Last Updated 19 ಆಗಸ್ಟ್ 2022, 15:49 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ವಲಸಿಗರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿರುವುದನ್ನು ವಿರೋಧಿಸಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಇಲ್ಲಿನ ಶೇರ್-ಎ-ಕಾಶ್ಮೀರ್ ಪಾರ್ಕ್ ಬಳಿಯ ಪಕ್ಷದ ಕೇಂದ್ರ ಕಚೇರಿಯಿಂದ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿತು.

ಪಕ್ಷದ ಮುಖ್ಯ ವಕ್ತಾರ ಸುಹೇಲ್ ಬುಖಾರಿ ನೇತೃತ್ವದಲ್ಲಿ ಹಲವಾರು ಪಿಡಿಪಿ ನಾಯಕರು ಇ ಮೆರವಣಿಗೆ ನಡೆಸಿದರು.

‘ಜಮ್ಮು ಮತ್ತು ಕಾಶ್ಮೀರದ ಮತದಾರರ ಪಟ್ಟಿಯಲ್ಲಿ ಆಮದು ಮಾಡಿಕೊಂಡ ಮತದಾರರನ್ನು ಸೇರಿಸುವ ಮೂಲಕ, ಬಿಜೆಪಿಯು ಬಲವಂತವಾಗಿ ನಡೆಸುತ್ತಿರುವ ಚುನಾವಣಾ ಜನಸಂಖ್ಯಾ ಬದಲಾವಣೆ ವಿರುದ್ಧ ಈ ಪ್ರತಿಭಟನೆ ನಡೆಸಲಾಗಿದೆ. ಇಲ್ಲಿನ ಜನರ ಹಕ್ಕುಗಳು ‌ತುಳಿತಕ್ಕೊಳಗಾಗುತ್ತಿವೆ’ ಎಂದು ಬುಖಾರಿ ಹೇಳಿದರು.

‘ಜನರ ಹಕ್ಕುಗಳನ್ನು ಕಸಿದುಕೊಳ್ಳುವ ಮತ್ತು ಸಾರ್ವಜನಿಕ ಇಚ್ಛೆಯನ್ನು ದುರ್ಬಲಗೊಳಿಸುವ ಪ್ರಕ್ರಿಯೆಯನ್ನು ಬಿಜೆಪಿಯವರು ಆಗಸ್ಟ್ 5, 2019ರಿಂದಲೇ ಪ್ರಾರಂಭಿಸಿದದ್ದಾರೆ. ಈಗ ಅವರು (ಬಿಜೆಪಿ) ಸ್ಥಳೀಯೇತರ ಮತದಾರರನ್ನು ಸೇರಿಸುವುದಾಗಿ ಹೇಳುವ ಮೂಲಕ ಹೊಸ ಅಧ್ಯಾಯವನ್ನು ಸೇರಿಸಿದ್ದಾರೆ’ ಎಂದರು.

‘ಜಮ್ಮು ಮತ್ತು ಕಾಶ್ಮೀರದ ಜನರ ಗುರುತು, ಪ್ರಜಾಪ್ರಭುತ್ವ ಹಕ್ಕುಗಳು ಮತ್ತು ಚುನಾವಣಾ ಜನಸಂಖ್ಯಾಶಾಸ್ತ್ರವನ್ನು ಬದಲಾಯಿಸಲು ಬಿಜೆಪಿ ಶ್ರಮಿಸುತ್ತಿದೆ. ಆದರೆ ಯಾವುದೇ ಪರಿಸ್ಥಿತಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಇದು ಸ್ವೀಕಾರಾರ್ಹವಲ್ಲ’ ಎಂದು ಬುಖಾರಿ ಸುದ್ದಿಗಾರರಿಗೆ ತಿಳಿಸಿದರು.

ಜನಸಂಖ್ಯಾ ಬದಲಾವಣೆಯ ಆತಂಕ ಹೆಚ್ಚಿದೆ: ‘ವಲಸಿಗರನ್ನು ಅಥವಾ ಸ್ಥಳೀಯೇತರರನ್ನು ಜಮ್ಮು ಮತ್ತು ಕಾಶ್ಮೀರದ ಮತದಾರರ ಪಟ್ಟಿಗೆ ಸೇರಿಸಿರುವದರಿಂದ ಜನಸಂಖ್ಯಾ ಬದಲಾವಣೆಯ ಆತಂಕ ಹೆಚ್ಚಿದೆ’ ಎಂದು ಪೀಪಲ್ಸ್‌ ಕಾನ್ಫರೆನ್ಸ್‌ನ ಅಧ್ಯಕ್ಷ ಸಜಾದ್‌ ಲೋನ್‌ ಹೇಳಿದರು.

‘ಜನರ ಆತಂಕವನ್ನು ಸರ್ಕಾರ ಹೋಗಲಾಡಿಸಬೇಕು’ ಎಂದು ಮನವಿ ಮಾಡಿರುವ ಲೋನ್‌, ‘ಜಮ್ಮು ಮತ್ತು ಕಾಶ್ಮೀರದಲ್ಲಿ ಮುಂಬರಲಿರುವ ವಿಧಾನಸಭಾ ಚುನಾವಣೆಗೆ ಮತ ನೀಡಲು ಸಹಾಯವಾಗುವಂತೆ, ಸ್ಥಳಿಯೇತರರನ್ನು ಮತದಾದರರ ಪಟ್ಟಿಗೆ ಸೇರಿಸಲಾಗುವುದು ಎಂದು ಚುನಾವಣಾ ಆಯೋಗದ ಅಧಿಕಾರಿಗಳು ನೀರಿವ ಹೇಳಿಕೆಯು ಜನರಲ್ಲಿ ಭಯ ತಂದಿದೆ. ಸರ್ಕಾರವು ಅಸ್ಪಷ್ಟವಾಗಿರುವ ಸತ್ಯವನ್ನು ಹೊರತರಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.