ADVERTISEMENT

ಅಂದು SBI ಬ್ಯಾಂಕ್‌ನಲ್ಲಿ ಕಸ ಗುಡಿಸುತ್ತಿದ್ದ ಮಹಿಳೆ ಇಂದು ಅದೇ ಬ್ಯಾಂಕ್ ಎಜಿಎಂ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಆಗಸ್ಟ್ 2022, 9:25 IST
Last Updated 3 ಆಗಸ್ಟ್ 2022, 9:25 IST
ಪ್ರತೀಕ್ಷಾ ತೊಂಡವಾಲಕರ್
ಪ್ರತೀಕ್ಷಾ ತೊಂಡವಾಲಕರ್   

ಮುಂಬೈ: ಸರ್ಕಾರಿ ಸ್ವಾಮ್ಯದ ಬಹುದೊಡ್ಡ ಬ್ಯಾಂಕ್ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಶಾಖೆ ಒಂದರಲ್ಲಿ ಕಸ ಗುಡಿಸುತ್ತಿದ್ದ ಮಹಿಳೆಯೊಬ್ಬರು ಅದೇ ಬ್ಯಾಂಕ್‌ನ ಉನ್ನತ ಹುದ್ದೆಯಾದ ಅಸಿಸ್ಟಂಟ್ ಜನರಲ್ ಮ್ಯಾನೇಜರ್‌ (ಎಜಿಎಂ) ಹುದ್ದೆಗೆ ಏರಿದ್ದರ ರೋಚಕ ಕಥೆಯಿದು.

37 ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ಗಂಡನನ್ನು ಕಳೆದುಕೊಂಡ ಪುಣೆ ಮೂಲದಪ್ರತೀಕ್ಷಾತೊಂಡವಾಲಕರ್ ಎನ್ನುವ ಮಹಿಳೆಗೆ ಅನುಕಂಪದ ಆಧಾರದಲ್ಲಿ ಮುಂಬೈ ಎಸ್‌ಬಿಐ ಶಾಖೆ ಒಂದರಲ್ಲಿಕಸ ಗುಡಿಸುವುದು, ಶೌಚಾಲಯ ತೊಳೆಯುವ ಕೆಲಸ ಸಿಕ್ಕಿತ್ತು. ಅವರಿಗೆ ಪ‍್ರಾರಂಭದಲ್ಲಿ ತಿಂಗಳಿಗೆ ₹65 ಸಂಬಳ ಸಿಗುತ್ತಿತ್ತು.

ಇದಕ್ಕೂ ಮುಂಚೆ ಅದೇ ಬ್ಯಾಂಕ್‌ನಲ್ಲಿ ಪ್ರತೀಕ್ಷಾಅವರ ಗಂಡ ಸದಾಶಿವ ಕಾಡು ಬುಕ್ ಬೈಂಡರ್ ಆಗಿ ಕೆಲಸ ಮಾಡುತ್ತಿದ್ದರು. ಕೇವಲ ಪ್ರಾಥಮಿಕ ಶಿಕ್ಷಣ ಮುಗಿಸಿದ್ದ ಪ್ರತಿಕ್ಷಾ ಅವರು 16 ನೇ ವಯಸ್ಸಿನಲ್ಲಿ ಮದುವೆಯಾಗಿದ್ದರು. 20 ನೇ ವರ್ಷಕ್ಕೆ ಗಂಡನನ್ನು ಕಳೆದುಕೊಂಡು ವಿಧವೆಯಾಗಿದ್ದರು.

ADVERTISEMENT

ಇಂತಹ ಕಠಿಣ ಪರಿಸ್ಥಿತಿಯಲ್ಲಿ ಹೊಟ್ಟೆಪಾಡಿಗೆ ಹಾಗೂ ಇದ್ದೊಬ್ಬ ವಿನಾಯಕ ಎಂಬ ಮಗನನ್ನು ಸಾಕಲುಎಸ್‌ಬಿಐನಲ್ಲಿ ಕಸ ಗುಡಿಸುವ ಕೆಲಸ ಮಾಡಲು ಪ್ರಾರಂಭಿಸಿದರು.

ಪ್ರತೀಕ್ಷಾಅವರ ಸೇವಾದಕ್ಷತೆ ನೋಡಿ ಬ್ಯಾಂಕ್ ಸಿಬ್ಬಂದಿ ಹತ್ತನೇ ತರಗತಿ ಪರೀಕ್ಷೆ ಬರೆಯುವಂತೆ ಬೆಂಬಲ ನೀಡಿದರು. 10 ನೇ ತರಗತಿಯಲ್ಲಿ ಶೇ 60 ಅಂಕಗಳೊಂದಿಗೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಪ್ರತೀಕ್ಷಾಅವರಿಗೆ ಎಸ್‌ಬಿಐ ಬ್ಯಾಂಕ್‌ನಲ್ಲಿ ಕೆಲ ವರ್ಷಗಳ ನಂತರ ಅಟೆಂಡರ್ ಆಗಿ ಭಡ್ತಿ ಸಿಕ್ಕಿತು. ಆದರೆ, ಪ್ರತೀಕ್ಷಾಅವರಿಗೆ ಕಲಿಯುವ ಛಲ ಕಡಿಮೆ ಆಗಲಿಲ್ಲ. 12 ನೇ ತರಗತಿ ಕೂಡ ಪಾಸಾಗಿ ಅದೇ ಬ್ಯಾಂಕ್‌ನಲ್ಲಿ ಕ್ಲರ್ಕ್ ಆಗಿ ಬಡ್ತಿ ಪಡೆದರು.

ನಂತರ 2004ರಲ್ಲಿ ಪ್ರತೀಕ್ಷಾಅವರಿಗೆ ‘ಎಸ್‌ಬಿಐ ಟ್ರೈನಿ ಆಫೀಸರ್’ ಹುದ್ದೆ ಒಲಿಯಿತು. ಸಾಧನೆಯ ಒಂದೊಂದೆ ಮೆಟ್ಟಿಲುಗಳನ್ನು ಏರುತ್ತಾ ಸಾಗಿದ ಪ್ರತೀಕ್ಷಾಅವರು ಕಳೆದ ಜೂನ್‌ನಲ್ಲಿ ಎಸ್‌ಬಿಐ ಅಸಿಸ್ಟಂಟ್ ಜನರಲ್ ಮ್ಯಾನೇಜರ್ ಆಗಿ ಭಡ್ತಿ ಪಡೆದು ದೇಶದ ಗಮನ ಸೆಳೆದಿದ್ದಾರೆ.

37 ವರ್ಷಗಳ ಸುದೀರ್ಘ ಸೇವೆಯಲ್ಲಿರುವ ಪ್ರತೀಕ್ಷಾಅವರು ಇನ್ನೂ ಎರಡು ವರ್ಷ ಸೇವೆಯಲ್ಲಿರಲಿದ್ದಾರೆ.

ನಾನು ನನ್ನ ಜೀವನವನ್ನು ಹಿಂತಿರುಗಿ ನೋಡಿದಾಗ ಇಂತಹದೊಂದು ಸಾಧನೆ ನನ್ನಿಂದ ಸಾಧ್ಯವಿತ್ತೇ? ಎಂದುಕೊಳ್ಳುತ್ತೇನೆ. ಆದರೆ, ಮಗನಿಗೋಸ್ಕರ ನಾನು ಪಟ್ಟ ಪರಿಶ್ರಮದಿಂದ ಹಾಗೂ ಕಷ್ಟಪಟ್ಟು ಮುಂದೆ ಬರಬೇಕು ಎಂದುಈ ಹಂತಕ್ಕೆ ಬಂದಿದ್ದೇನೆ. ಕಾಯಕದಲ್ಲಿ ನಿಷ್ಠೆ, ಗುರಿ ತಲುಪುವ ಛಲ ಇದ್ದರೆಏನನ್ನಾದರೂ ಸಾಧಿಸಬಹುದು ಎಂದು ಪ್ರತೀಕ್ಷಾತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಎಸ್‌ಬಿಐನಲ್ಲಿಅಸಿಸ್ಟಂಟ್ ಜನರಲ್ ಮ್ಯಾನೇಜರ್‌ (ಎಜಿಎಂ) ಸ್ಥಾನವು11 ಅಧಿಕಾರ ಹುದ್ದೆಗಳಲ್ಲಿ 5 ನೇ ಶ್ರೇಣಿಯ ಉನ್ನತ ಹುದ್ದೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.