ADVERTISEMENT

‘ರಾವಣ’ ಖ್ಯಾತಿಯ ನಟ ಅರವಿಂದ ತ್ರಿವೇದಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ

ಪಿಟಿಐ
Published 6 ಅಕ್ಟೋಬರ್ 2021, 7:54 IST
Last Updated 6 ಅಕ್ಟೋಬರ್ 2021, 7:54 IST
ಅರವಿಂದ ತ್ರಿವೇದಿ
ಅರವಿಂದ ತ್ರಿವೇದಿ   

ಮುಂಬೈ:ರಮಾನಂದ ಸಾಗರ್‌ ಅವರ ಜನಪ್ರಿಯ 'ರಾಮಾಯಣ' ಧಾರಾವಾಹಿಯಲ್ಲಿ ರಾವಣ ಪಾತ್ರ ನಿರ್ವಹಿಸಿದ್ದ ನಟ ಅರವಿಂದ ತ್ರಿವೇದಿ (82) ಕಳೆದ ರಾತ್ರಿ ನಿಧನರಾದರು.

ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಾಲಿವುಡ್ ಹಾಗೂ ಸಿನಿಮಾ ರಂಗದ ಗಣ್ಯರು ಕಂಬನಿ ಮಿಡಿದಿದ್ದು, ಸಂತಾಪ ಸೂಚಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ‘ನಾವು ಅರವಿಂದ ತ್ರಿವೇದಿ ಅವರನ್ನು ಕಳೆದುಕೊಂಡಿದ್ದೇವೆ. ಅವರೊಬ್ಬ ಅಸಾಧಾರಣ ನಟ ಮಾತ್ರ ಆಗಿರಲಿಲ್ಲ. ಸಾರ್ವಜನಿಕ ಸೇವೆ ಬಗ್ಗೆ ಅವರು ಬಹಳ ಆಸಕ್ತಿ ಹೊಂದಿದ್ದರು’ ಎಂದು ಅರವಿಂದ ಅವರಜೊತೆ ಇರುವ ಫೋಟೊವನ್ನು ಹಂಚಿಕೊಂಡಿದ್ದಾರೆ.

ADVERTISEMENT

‘ರಾಮಾಯಣದಲ್ಲಿ ಅವರ ಪಾತ್ರ ಅನೇಕ ತಲೆಮಾರುಗಳವರೆಗೆ ಸ್ಮರಣೆಯಲ್ಲಿರಲಿದೆ’ಎಂದು ತ್ರಿವೇದಿ ಅವರಿಗೆ ಮೋದಿ ಸಂತಾಪ ಸೂಚಿಸಿದ್ಧಾರೆ. ಸಿನಿರಂಗದ ಅನೇಕರು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಕಳೆದ ವಾರ ನಿಧನರಾದ ನಟ ಘನಶ್ಯಾಮ್ ನಾಯಕ್ ಅವರನ್ನೂಮೋದಿ ಸ್ಮರಿಸಿ, ಕೆವಲೇ ದಿನಗಳಲ್ಲಿ ನಾವು ಇಬ್ಬರು ಪ್ರತಿಭಾವಂತ ನಟರನ್ನು ಕಳೆದುಕೊಂಡೆವು ಎಂದಿದ್ದಾರೆ.

ಮುಂಬೈನ ದಹನುಕರವಾಡಿಯಲ್ಲಿ ಇಂದುಅರವಿಂದ ತ್ರಿವೇದಿ ಅವರ ಅಂತ್ಯಸಂಸ್ಕಾರ ನಡೆಯಲಿದೆ.

ಗುಜರಾತಿ ಸಿನಿಮಾಗಳಲ್ಲಿ 40 ವರ್ಷಗಳ ನಟನೆಯ ಸುದೀರ್ಘ ಪ್ರಯಾಣದಲ್ಲಿ ಅವರ ಹಲವು ಚಿತ್ರಗಳು ಜನಪ್ರಿಯತೆ ಪಡೆದಿವೆ. ಹಿಂದಿ ಮತ್ತು ಗುಜರಾತಿಯ ಸಾಮಾಜಿಕ, ಪೌರಾಣಿಕ ಕಥೆಯಾಧಾರಿತ ಸುಮಾರು 300 ಸಿನಿಮಾಗಳಲ್ಲಿ ಅರವಿಂದ ಅಭಿನಯಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ಅವರನ್ನು ಗುರುತಿಸುವಂತೆ ಮಾಡಿದ್ದು ರಾಮಾಯಣ ಧಾರಾವಾಹಿಯ 'ರಾವಣ' ಪಾತ್ರ. ಇದರೊಂದಿಗೆ ಖ್ಯಾತಿ ತಂದುಕೊಟ್ಟ ಮತ್ತೊಂದು ಧಾರಾವಾಹಿ 'ವಿಕ್ರಮ್‌ ಔರ್‌ ಬೇತಾಳ್‌'.

ಅರವಿಂದ ತ್ರಿವೇದಿ ಅವರು 1991ರಿಂದ 1996ರ ವರೆಗೂ ಸಂಸತ್‌ ಸದಸ್ಯರಾಗಿದ್ದರು. ಗುಜರಾತ್‌ನ ಸಾಬರ್‌ಕಾಂಠಾ ಜಿಲ್ಲೆಯಿಂದ ಅವರು ಆಯ್ಕೆಯಾಗಿದ್ದರು. ವಿಜಯ್‌ ಆನಂದ್‌ ಅವರ ನಂತರ 2002ರಿಂದ 2003ರವರೆಗೂ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (ಸಿಬಿಎಫ್‌ಸಿ) ಮುಖ್ಯಸ್ಥರಾಗಿದ್ದರು.

ಕಳೆದ ವರ್ಷ ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ದೂರದರ್ಶನ ರಾಮಾಯಣ ಧಾರವಾಹಿಯನ್ನು ಮರುಪ್ರಸಾರ ಮಾಡಿದಾಗ, ಆ ಧಾರಾವಾಹಿಯ ಎಲ್ಲ ಹಿರಿಯ ನಟರು ಮತ್ತೆ ಮುನ್ನೆಲೆಗೆ ಬಂದರು. ಹಲವು ಕಲಾವಿದರು ಸಾಮಾಜಿಕ ಮಾಧ್ಯಮಗಳಲ್ಲಿ ಖಾತೆ ತೆರೆದು ಸಕ್ರಿಯರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.