ADVERTISEMENT

ಪ್ರಿಯಾಂಕಾ–ಉ.ಪ‍್ರದೇಶ ಪೊಲೀಸ್‌ ಮತ್ತೆ ಜಟಾಪಟಿ

ಪೊಲೀಸ್ ಕಸ್ಟಡಿಯಲ್ಲಿ ಸತ್ತ ಯುವಕನ ಕುಟುಂಬ ಭೇಟಿಗೆ ತಡೆ, ನಂತರ ಅನುಮತಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 19:30 IST
Last Updated 20 ಅಕ್ಟೋಬರ್ 2021, 19:30 IST
ಪ್ರಿಯಾಂಕಾ ಗಾಂಧಿ ಅವರನ್ನು ವಶಕ್ಕೆ ಪಡೆದಿದ್ದ ಪೊಲೀಸರು ಪಿಟಿಐ ಚಿತ್ರ
ಪ್ರಿಯಾಂಕಾ ಗಾಂಧಿ ಅವರನ್ನು ವಶಕ್ಕೆ ಪಡೆದಿದ್ದ ಪೊಲೀಸರು ಪಿಟಿಐ ಚಿತ್ರ   

ಲಖನೌ/ಆಗ್ರಾ: ಉತ್ತರ ಪ್ರದೇಶ ಪೊಲೀಸರು ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಮಧ್ಯೆ ಬುಧವಾರ ಮತ್ತೆಜಟಾಪಟಿ ನಡೆದಿದೆ. ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ದಲಿತ ಯುವಕನ ಕುಟುಂಬವನ್ನು ಭೇಟಿ ಮಾಡಲು ಮುಂದಾಗಿದ್ದ ಪ್ರಿಯಾಂಕಾ ಅವರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕಬಿಡುಗಡೆ ಮಾಡಿದ್ದಾರೆ.

ಆಗ್ರಾದಲ್ಲಿ ಪೊಲೀಸ್ ಠಾಣೆಯಿಂದ ₹25 ಲಕ್ಷ ಕದ್ದ ಆರೋಪದಲ್ಲಿ ಅರುಣ್ ವಾಲ್ಮೀಕಿ ಎಂಬ ಯುವಕನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದರು. ಆದರೆಕೆಲವೇ ಗಂಟೆಗಳಲ್ಲಿ ಅರುಣ್ ಮೃತಪಟ್ಟಿದ್ದಾರೆ. ‘ಆರೋಗ್ಯ ಸಮಸ್ಯೆಯೇ ಸಾವಿಗೆ ಕಾರಣ’ ಎಂದು ಪೊಲೀಸರು ಹೇಳಿದ್ದಾರೆ.ಆದರೆ ಆತನ ಕುಟುಂಬದವರು, ‘ಪೊಲೀಸರ ಹಿಂಸೆಯಿಂದ ಅವನು ಮೃತಪಟ್ಟಿದ್ದಾನೆ’ ಎಂದು ಆರೋಪಿಸಿದ್ದಾರೆ.

ಮೃತ ಯುವಕನ ಕುಟುಂಬದವರನ್ನು ಭೇಟಿ ಮಾಡಲು ಪ್ರಿಯಾಂಕಾ ಅವರು ಆಗ್ರಾಗೆ ತೆರಳಲು ಮುಂದಾಗಿದ್ದರು. ಆದರೆ ಅವರನ್ನು ಆಗ್ರಾ–ದೆಹಲಿ ಎಕ್ಸ್‌ಪ್ರೆಸ್‌ವೇ ಟೋಲ್‌ ಘಟಕದಲ್ಲೇ ತಡೆಯಲಾಯಿತು. ಪ್ರಿಯಾಂಕಾ ಅವರಿದ್ದ ಕಾರು, ಅವರ ಬೆಂಗಾವಲು ವಾಹನಗಳು ಮತ್ತು ಹಿಂಬಾಲಕರ ವಾಹನಗಳು ಟೋಲ್‌ ಘಟಕದಲ್ಲಿ ಸಾಲುಗಟ್ಟಿ ನಿಂತವು.

ADVERTISEMENT

‘ಆಗ್ರಾದಲ್ಲಿ ಸೆಕ್ಷನ್ 144ರ ಅನ್ವಯ ನಿರ್ಬಂಧ ವಿಧಿಸಲಾಗಿದೆ. ನೀವು ಅಲ್ಲಿಗೆ ಹೋದರೆ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತದೆ. ಅಲ್ಲಿಗೆ ಹೋಗಲು ಬಿಡುವುದಿಲ್ಲ’ ಎಂದು ಪೊಲೀಸರು, ಪ್ರಿಯಾಂಕಾ ಅವರನ್ನು ತಡೆದರು. ಇದನ್ನು ಪ್ರತಿಭಟಿಸಿದ ಪ್ರಿಯಾಂಕಾ ಅವರನ್ನು ಪೊಲೀಸರು ವಶಕ್ಕೆ ಪಡೆದರು.

ಪೊಲೀಸರು ಪ್ರಿಯಾಂಕಾ ಅವರನ್ನು ವಶಕ್ಕೆ ಪಡೆದಾಗ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು.

‘ನಾನು ಅತಿಥಿಗೃಹದಲ್ಲೇ ಇರಬೇಕು ಎಂದು ಪೊಲೀಸರು ಬಯಸಿದ್ದಾರೆ. ನಾನು ಎಲ್ಲಿಗಾದರೂ ಹೋಗುವಾಗಲೆಲ್ಲಾ, ಇವರ ಅನುಮತಿ ಪಡೆಯಬೇಕೆ? ತನ್ನ ಆಪ್ತರನ್ನು ಕಳೆದುಕೊಂಡಿರುವ ಕುಟುಂಬವನ್ನು ನಾನು ಭೇಟಿ ಮಾಡುವುದು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಹೇಗಾಗುತ್ತದೆ’ ಎಂದು ಅವರು ಪ್ರಶ್ನಿಸಿದರು.

‘ಇಂದು ವಾಲ್ಮೀಕಿ ಜಯಂತಿ. ಪೊಲಿಸ್ ಕಸ್ಟಡಿಯಲ್ಲಿ ಸತ್ತ ಯುವಕ ವಾಲ್ಮೀಕಿ ಜನಾಂಗದವನು. ಅವನ ಕುಟುಂಬಕ್ಕೆ ನ್ಯಾಯ ಸಿಗಬೇಕು. ಅವರನ್ನು ನಾನು ಭೇಟಿ ಮಾಡಿದರೆ, ಉತ್ತರ ಪ್ರದೇಶ ಸರ್ಕಾರಕ್ಕೆ ಭಯವೇಕೆ’ ಎಂದು ಅವರು ಪ್ರಶ್ನಿಸಿದರು.ಸಂತ್ರಸ್ತ ಕುಟುಂಬದವರನ್ನು ಭೇಟಿ ಮಾಡಲು ಪ್ರಿಯಾಂಕಾ ಮತ್ತು ಇಬ್ಬರಿಗೆ ಮಾತ್ರವೇ ಅವಕಾಶ ನೀಡಿದರು.

ರೈತರ ಹತ್ಯೆ ನಡೆದಿದ್ದ ಲಖಿಂಪುರ-ಖೇರಿ ಜಿಲ್ಲೆಗೆ ಭೇಟಿ ನೀಡಲು ಮುಂದಾಗಿದ್ದ ಪ್ರಿಯಾಂಕಾ ಅವರನ್ನು ಪೊಲೀಸರು ಬಂಧಿಸಿ, 36 ಗಂಟೆಗೂ ಹೆಚ್ಚು ಕಾಲ ಬಂಧನದಲ್ಲಿ ಇರಿಸಿದ್ದರು.

ಶೇ 40ರಷ್ಟು ಟಿಕೆಟ್‌ ಮೊದಲು ನೀಡಿದ್ದು ನಾವು: ಟಿಎಂಸಿ

‘ಚುನಾವಣೆಯಲ್ಲಿ ಶೇ 40ರಷ್ಟು ಟಿಕೆಟ್‌ಗಳನ್ನು ಮಹಿಳೆಯರಿಗೆ ಮೀಸಲಿರಿಸುವ ಕೆಲಸ ಮೊದಲು ಮಾಡಿದ್ದು ಟಿಎಂಸಿ. ಕಾಂಗ್ರೆಸ್‌ ಅದನ್ನು ಈಗ ಯಥಾವತ್ ಅನುಸರಿಸುತ್ತಿದೆ. ಆದರೆ ಇದು ಕೇವಲ ಘೋಷಣೆಯಾಗದೆ, ಕಾರ್ಯರೂಪಕ್ಕೆ ಬರಬೇಕು’ ಎಂದು ಟಿಎಂಸಿ ಹೇಳಿದೆ.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ 40ರಷ್ಟು ಟಿಕೆಟ್ ನೀಡುತ್ತೇವೆ ಎಂದು ಪ್ರಿಯಾಂಕಾ ಗಾಂಧಿ ಅವರು ಮಂಗಳವಾರ ಘೋಷಿಸಿದ್ದರು. ಅದರ ಮರುದಿನವೇ ಟಿಎಂಸಿ ಈ ಪ್ರತಿಕ್ರಿಯೆ ನೀಡಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ ಶೇ 40ರಷ್ಟು ಟಿಕೆಟ್‌ಗಳನ್ನು ಮಹಿಳೆಯರಿಗೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.