ADVERTISEMENT

ಲಸಿಕೆ ಉತ್ಪಾದನೆ ಚುರುಕು: ’ಕ್ವಾಡ್‌’ ಚರ್ಚೆ

ದೇಶದಲ್ಲಿ 1 ಬಿಲಿಯನ್‌ ಡೋಸ್‌ ಉತ್ಪಾದನೆ : ಶೃಂಗಸಭೆಯಲ್ಲಿ ಮೋದಿ ಪ್ರಸ್ತಾಪ ಸಂಭವ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 16:13 IST
Last Updated 21 ಸೆಪ್ಟೆಂಬರ್ 2021, 16:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್‌ ಲಸಿಕೆಗಳನ್ನು ರಫ್ತು ಮಾಡಲು ಭಾರತ ಸಿದ್ಧತೆ ನಡೆಸಿರುವಂತೆಯೇ, ಭಾರತದ ‘ಬಯಾಲಾಜಿಕಲ್‌ ಇ ಲಿಮಿಟೆಡ್‌’ನಿಂದ 100 ಕೋಟಿ ಡೋಸ್‌ ಲಸಿಕೆ ಉತ್ಪಾದನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಕ್ವಾಡ್‌ ಸದಸ್ಯ ರಾಷ್ಟ್ರಗಳಾದ ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್‌ನ ಮುಖ್ಯಸ್ಥರ ಜೊತೆಗೆ ಚರ್ಚಿಸುವ ಸಂಭವವಿದೆ.

ಅಮೆರಿಕ ಪ್ರವಾಸದ ವೇಳೆ, ವಾಷಿಂಗ್ಟನ್‌ ಡಿ.ಸಿ.ಯಲ್ಲಿ ನಡೆಯಲಿರುವ ಕ್ವಾಡ್‌ ಸದಸ್ಯ ರಾಷ್ಟ್ರಗಳ ಸಭೆಯಲ್ಲಿ ಪ್ರಧಾನಿ, ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್‌ ಮಾರಿಸನ್, ಜಪಾನ್‌ನ ಯೋಷಿಹಿಡೆ ಸುಗಾ ಜೊತೆ ಚರ್ಚಿಸಲಿದ್ದಾರೆ.

ಈ ವರ್ಷದ ಮಾರ್ಚ್ 12ರಂದು ನಡೆದಿದ್ದ ವರ್ಚುವಲ್‌ ಸಭೆಯಲ್ಲಿ ಈ ಮುಖಂಡರು, ಭಾರತದ ಬಯಾಲಾಜಿಕಲ್ ಇ ಲಿಮಿಟೆಡ್ ಸಂಸ್ಥೆಯ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಅಮೆರಿಕ ಅಭಿವೃದ್ಧಿ ಹಣಕಾಸು ಸಂಸ್ಥೆ ನೆರವು ನೀಡಲಿದೆ ಎಂದು ಸಮ್ಮತಿಸಿದ್ದರು. ‘ಜಾನ್ಸನ್‌ ಅಂಡ್ ಜಾನ್ಸನ್’ ಅಭಿವೃದ್ಧಿಪಡಿಸಿರುವ ಲಸಿಕೆಯ 100 ಕೋಟಿ ಡೋಸ್‌ ಅನ್ನು 2022ರ ಅಂತ್ಯದ ವೇಳೆಗೆ ಉತ್ಪಾದಿಸಬೇಕು. ಇವುಗಳನ್ನು ಇಂಡೊ ಫೆಸಿಫಿಕ್‌ ವಲಯದ ರಾಷ್ಟ್ರಗಳಿಗೆ ಪೂರೈಸುವುದು ಗುರಿಯಾಗಿದೆ.

ADVERTISEMENT

24ರಂದು ಶ್ವೇತಭವನದಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಈ ವಿಷಯ ಚರ್ಚೆಗೆ ಒಳಪಡುವ ಸಂಭವವಿದೆ.

2022ರ ಅಂತ್ಯದ ವೇಳೆಗೆ ಅಗತ್ಯ ಗುರಿಯ ಲಸಿಕೆ ಉತ್ಪಾದಿಸುವುದು ಮಾರ್ಚ್‌ನಲ್ಲಿ ಚರ್ಚೆಯಾಗಿತ್ತು. ಕೋವಿಡ್ ನೆರವು ಕುರಿತ ಸಭೆ ಬಳಿಕ ಪ್ರಕಟಿಸುವ ಸಂಭವವಿದೆ ಎಂದು ಬೈಡನ್‌ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ವಾಷಿಂಗ್ಟನ್‌ ಡಿ.ಸಿ.ಯಲ್ಲಿ ಪತ್ರಕರ್ತರಿಗೆ ತಿಳಿಸಿದರು.

ಕೋವಿಡ್ –19 ವಿರುದ್ಧ ತಾನು ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ಪೂರೈಸಲು ಚೀನಾ ಮಾಡುತ್ತಿದ್ದ ಪ್ರಯತ್ನವನ್ನು ತಡೆಯಲು ಕ್ವಾಡ್‌ ಸದಸ್ಯ ರಾಷ್ಟ್ರಗಳು ಒಗ್ಗೂಡಿವೆ.

ದೇಶಿಯವಾಗಿ ತಯಾರಿಸಲಾದ 107.15 ಲಕ್ಷ ಡೋಸ್ ಲಸಿಕೆಯನ್ನು ಮೋದಿ ನೇತೃತ್ವದ ಸರ್ಕಾರ ಈ ವರ್ಷದ ಏಪ್ರಿಲ್‌ 22ರವರೆಗೆ ವಿವಿಧ ದೇಶಗಳಿಗೆ ಪೂರೈಸಿದೆ. ಹೆಚ್ಚುವರಿಯಾಗಿ 357.92 ಲಕ್ಷ ಡೋಸ್‌ ಲಸಿಕೆಯನ್ನು ವಾಣಿಜ್ಯವಾಗಿ ರಫ್ತು ಮಾಡಿದ್ದು, 198.628 ಲಕ್ಷ ಡೋಸ್‌ ಲಸಿಕೆಯನ್ನು ಕೋವ್ಯಾಕ್ಸ್‌ ಒಪ್ಪಂದದ ಅನುಸಾರ ನೆರವು ನೀಡಲಾಗಿದೆ.

ವಿಶ್ವ ಆರೋಗ್ಯ ಸಂಘಟನೆಯು ಕೋವಿಡ್ 2ನೇ ಅಲೆಯ ವೇಳೆ ’ಕೋವ್ಯಾಕ್ಸ್‌’ ಪರಸ್ಪರ ನೆರವು ಕಾರ್ಯಕ್ರಮ ರೂಪಿಸಿದ್ದು, ದೇಶದಲ್ಲಿ 2ನೇ ಅಲೆ ತೀವ್ರ ಸ್ವರೂಪದಲ್ಲಿ ಇದ್ದುದರಿಂದ ‘ಲಸಿಕೆ ಮೈತ್ರಿ’ ಕಾರ್ಯಕ್ರಮವನ್ನು ಸರ್ಕಾರ ಮುಂದೂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.