ADVERTISEMENT

‘ನೀಟ್‌–ಎಸ್‌ಎಸ್‌’ ಪರೀಕ್ಷಾ ಕ್ರಮ ಬದಲಾವಣೆ; ಅರ್ಜಿ ವಿಚಾರಣೆಗೆ ‘ಸುಪ್ರೀಂ‘ ಅಸ್ತು

ಪಿಟಿಐ
Published 20 ಸೆಪ್ಟೆಂಬರ್ 2021, 15:02 IST
Last Updated 20 ಸೆಪ್ಟೆಂಬರ್ 2021, 15:02 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ (ಪಿಟಿಐ): ಮುಂದಿನ ನವೆಂಬರ್‌ನಲ್ಲಿ ನಡೆಯುವ ‘ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ – ವಿಶೇಷ ಪರಿಣತಿ (ನೀಟ್‌–ಎಸ್‌ಎಸ್‌)’ ಪರೀಕ್ಷೆ ಕ್ರಮದಲ್ಲಿನ ‘ಕಡೆಗಳಿಗೆಯ ಬದಲಾವಣೆ’ಯನ್ನು ಪ್ರಶ್ನಿಸಿದ್ದ ಅರ್ಜಿಗಳನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್‌ ಸಮ್ಮತಿಸಿದೆ.

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಮತ್ತು ಬಿ.ವಿ.ನಾಗರತ್ನ ಅವರಿದ್ದ ಪೀಠ ಈ ಬಗ್ಗೆ ಪ್ರತಿಕ್ರಿಯಿಸಲು ಸೂಚಿಸಿ ಕೇಂದ್ರ ಸರ್ಕಾರ, ರಾಷ್ಟ್ರೀಯ ಪರೀಕ್ಷಾ ಮಂಡಳಿ, ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ (ಎನ್‌ಎಂಸಿ) ನೋಟಿಸ್‌ ನೀಡಿತು. 41 ಮಂದಿ ಸ್ನಾತಕೋತ್ತರ ಪದವೀಧರ ವೈದ್ಯರು ಅರ್ಜಿ ಸಲ್ಲಿಸಿದ್ದರು.

ವಿಚಾರಣೆಯನ್ನು ಸೆ. 27ಕ್ಕೆ ನಿಗದಿಪಡಿಸಿದ್ದು, ಲಿಖಿತ ಸ್ವರೂಪದಲ್ಲಿ ದೂರಿನ ವಿವರಣೆ ಸಲ್ಲಿಸಲು ಅರ್ಜಿದಾರರಿಗೆ ಅವಕಾಶ ಕಲ್ಪಿಸಿತು.

ADVERTISEMENT

ಸ್ನಾತಕೋತ್ತರ ಪದವಿ ವೈದ್ಯರಾದ ಅರ್ಜಿದಾರರು ನೀಟ್‌–ಎಸ್‌ಎಸ್‌ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸೂಪರ್‌ ಸ್ಪೆಷಲಿಸ್ಟ್‌ ಅರ್ಹತೆ ಪಡೆಯುವ ಆಕಾಂಕ್ಷೆ ಹೊಂದಿದ್ದಾರೆ. ಇವರು ಪರೀಕ್ಷಾ ದಿನಾಂಕವನ್ನು ಜುಲೈ 23ರಂದು, ಪರೀಕ್ಷೆ ಸ್ವರೂಪದ ಬದಲಾವಣೆಯನ್ನು ಆ. 31ರಂದು ಪ್ರಕಟಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಶ್ಯಾಮ್‌ ದಿವನ್‌ ಅವರು, ನೀಟ್‌–ಎಸ್ಎಸ್‌ 2021 ಪರೀಕ್ಷೆಯು ನಿಗದಿಯಂತೆ ನವೆಂಬರ್ 13–14ರಂದು ನಡೆಯಲಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಒಮ್ಮೆ ವೇಳಾಪಟ್ಟಿ ಪ್ರಕಟಿಸಿದ ಬಳಿಕ ಪರೀಕ್ಷಾ ಸ್ವರೂಪದಲ್ಲಿ ಬದಲಾವಣೆ ತರುವಂತಿಲ್ಲ ಎಂದು ವಾದಿಸಿದರು.

ಒಂದು ಹಂತದಲ್ಲಿ ನಡೆಯುವ ಸೂಪರ್‌ ಸ್ಪೆಷಾಲಿಟಿ ಪರೀಕ್ಷೆಗೆ ವಿವಿಧ ಸ್ತರದ ಸ್ನಾತಕೋತ್ತರ ಪದವೀಧರ ವೈದ್ಯರು ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಸದ್ಯದ ಮೂಲ ವಿಷಯದಿಂದ 40, ಐಚ್ಛಿಕ ಕೋರ್ಸ್‌ಗಳಿಂದ 60 ಅಂಕ ಪರಿಗಣಿಸಲಾಗುತ್ತದೆ. ವಿದ್ಯಾರ್ಥಿಗಳೇ ಆಸಕ್ತಿಗೆ ಅನುಗುಣವಾಗಿ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವರು. ಇದು, ಲಿಖಿತ ಅನುಭವದ ಜೊತೆಗೆ ಪ್ರಾಯೋಗಿಕ ಅನುಭವವನ್ನು ಒದಗಿಸಲಿದೆ. ಈಗ ಪರೀಕ್ಷಾ ಕ್ರಮವನ್ನು ಪೂರ್ಣ ಬದಲಾಯಿಸಲಾಗಿದೆ ಎಂದು ವಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.