ADVERTISEMENT

ಜನ್ಮ ದಿನಾಂಕ ಬದಲಾವಣೆಗೆ ಅವಕಾಶ ನೀಡಲಾಗದು: ಸುಪ್ರೀಂ ಕೋರ್ಟ್

'ಸೇವೆಯ ಆರಂಭದಲ್ಲಿ ಮಾತ್ರ ಅನುಮತಿ'

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 22:56 IST
Last Updated 21 ಸೆಪ್ಟೆಂಬರ್ 2021, 22:56 IST
   

ನವದೆಹಲಿ: ‘ನಿವೃತ್ತಿಯ ಅಂಚಿನಲ್ಲಿರುವ ಉದ್ಯೋಗಿಯು, ತನ್ನ ಜನ್ಮ ದಿನಾಂಕವನ್ನು ಬದಲಿಸುವಂತೆ ಸಲ್ಲಿಸಿದ ಮನವಿಯನ್ನು ಪುರಸ್ಕರಿಸುವುದು ಅಸಾಧ್ಯ’ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.

ತನ್ನ ನೌಕರರೊಬ್ಬರ ಜನ್ಮ ದಿನಾಂಕ ತಿದ್ದುಪಡಿಗೆ ಅನುಮತಿ ನೀಡಿ ರಾಜ್ಯ ಹೈಕೋರ್ಟ್ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಆರ್‌. ಶಾ ಹಾಗೂ ಎ.ಎಸ್‌. ಬೋಪಣ್ಣ ಅವರಿದ್ದ ಪೀಠ ತೀರ್ಪು ನೀಡಿದೆ.

ರಾಜ್ಯ ಸರ್ಕಾರಿ ನೌಕರರ ವಯಸ್ಸನ್ನು ನಿರ್ಧರಿಸಲು ಜಾರಿಗೆ ತರಲಾದ ಕರ್ನಾಟಕ ರಾಜ್ಯ ನೌಕರರ (ವಯಸ್ಸಿನ ನಿರ್ಣಯ) ಕಾಯ್ದೆ–1974 ಅನ್ನು ಅವಲೋಕಿಸಿದ ಪೀಠ, ಯಾವುದೇ ನೌಕರ ಸೇವಾ ಪುಸ್ತಕದಲ್ಲಿ ಅಗತ್ಯ ವಿವರಗಳನ್ನು ನಮೂದಿಸಿದ ಮೂರು ವರ್ಷಗಳೊಳಗೆ ಅಥವಾ ಕಾಯ್ದೆ ಜಾರಿಯಾದ ಒಂದು ವರ್ಷದೊಳಗೆ ಜನ್ಮ ದಿನಾಂಕದಲ್ಲಿ ಬದಲಾವಣೆಗಾಗಿ ಮನವಿ ಸಲ್ಲಿಸಬಹುದು ಎಂದು ಪೀಠ ಅಭಿಪ್ರಾಯಪಟ್ಟಿದೆ.

ADVERTISEMENT

ಮನವಿ ಸಲ್ಲಿಸಲು ಅನುಸರಿಸಿದ ವಿಳಂಬದ ಆಧಾರದ ಮೇಲೆ ಉದ್ಯೋಗಿಯ ಜನ್ಮ ದಿನಾಂಕದ ಬದಲಾವಣೆಗೆ ಅಥವಾ ತಿದ್ದುಪಡಿಗೆ ಅನುಮತಿ ನೀಡಲಾಗದು. ಸೇವೆಗೆ ಸೇರಿದ 24 ವರ್ಷಗಳ ನಂತರ ಹಾಗೂ ಕಾಯ್ದೆ ಜಾರಿಗೊಂಡು 16 ವರ್ಷಗಳ ನಂತರ ಸಲ್ಲಿಸಲಾದ ಮನವಿಯನ್ನು ಪುರಸ್ಕರಿಸುವುದು ಅಸಾಧ್ಯ ಎಂದು ಪೀಠ ತಿಳಿಸಿದೆ.

ನೌಕರ ತಾನು ಸೇವೆ ಸಲ್ಲಿಸುವ ಸಂಸ್ಥೆಯ ಉದ್ಯೋಗಿಗಳಿಗೆ ಅನ್ವಯವಾಗುವ ಎಲ್ಲ ನಿಯಮಗಳು ಮತ್ತು ನಿಬಂಧನೆಗಳನ್ನು ಅರಿತಿರಬೇಕು. ಕಾನೂನಿನ ತಿಳಿವಳಿಕೆಯ ಕೊರತೆಯ ಸಬೂಬು ಹೇಳುವ ಮೂಲಕ ಶಾಸನಬದ್ಧ ನಿಬಂಧನೆಗಳಿಂದ ವಿನಾಯಿತಿ ಪಡೆಯಲು ಸಾಧ್ಯವಿಲ್ಲ ಎಂದೂ ಪೀಠ ಹೇಳಿದೆ.

ಜನ್ಮ ದಿನಾಂಕ ಬದಲಾವಣೆಯ ಮನವಿಗಳನ್ನು ಸಂಬಂಧಿತ ನಿಬಂಧನೆಗಳು ಅಥವಾ ಅನ್ವಯವಾಗುವ ನಿಯಮಗಳ ಅನ್ವಯ ಮಾತ್ರ ಪರಿಗಣಿಸಬಹುದೇ ವಿನಾ, ದೃಢವಾದ ಪುರಾವೆಗಳಿದ್ದರೂ ಅದೊಂದು ಹಕ್ಕು ಎಂದು ಹೇಳಲಾಗುವುದಿಲ್ಲ. ಅಲ್ಲದೆ, ಇಂತಹ ಮನವಿಯನ್ನು ವಿಳಂಬದ ಆಧಾರದಲ್ಲೇ ತಿರಸ್ಕರಿಸಬಹುದಾಗಿದೆ. ಮೇಲಾಗಿ ನಿವೃತ್ತಿಯ ಅಂಚಿನಲ್ಲಿ ಇರುವವರ ಮನವಿಯನ್ನು ಪರಿಗಣಿಸುವುದು ಅಸಾಧ್ಯ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ವಕೀಲರಾದ ಗುರುದಾಸ್ ಕಣ್ಣೂರ, ಚಿನ್ಮಯ್ ದೇಶಪಾಂಡೆ ಹಾಗೂ ಅನಿರುದ್ಧ್ ಸಂಗನೇರಿಯಾ ಅವರು ನಿಗಮದ ಪರ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.