ADVERTISEMENT

ಸೀರಂ ಇನ್‌ಸ್ಟಿಟ್ಯೂಟ್, ಭಾರತ್ ಬಯೋಟೆಕ್‌ನಿಂದ ಲಸಿಕೆ ಉತ್ಪಾದನೆ ಹೆಚ್ಚಿಸುವ ಭರವಸೆ

ಪಿಟಿಐ
Published 12 ಮೇ 2021, 16:24 IST
Last Updated 12 ಮೇ 2021, 16:24 IST
ಸಾಂದರ್ಭಿಕ ಚಿತ್ರ – ಎಎಫ್‌ಪಿ ಕೃಪೆ
ಸಾಂದರ್ಭಿಕ ಚಿತ್ರ – ಎಎಫ್‌ಪಿ ಕೃಪೆ   

ನವದೆಹಲಿ: ಅನೇಕ ರಾಜ್ಯಗಳು ಕೋವಿಡ್‌–19 ಲಸಿಕೆ ಪೂರೈಕೆಯಾಗುತ್ತಿಲ್ಲ ಎಂದು ಹೇಳುತ್ತಿರುವ ಸಂದರ್ಭದಲ್ಲೇ, ಲಸಿಕೆ ಉತ್ಪಾದನೆ ಹೆಚ್ಚಿಸುವುದಾಗಿ ಸೀರಂ ಇನ್‌ಸ್ಟಿಟ್ಯೂಟ್ ಆಫ್‌ ಇಂಡಿಯಾ ಮತ್ತು ಭಾರತ್ ಬಯೋಟೆಕ್‌ ಹೇಳಿವೆ.

ತಿಂಗಳ ಲಸಿಕೆ ಉತ್ಪಾದನೆಯನ್ನು 10 ಕೋಟಿ ಡೋಸ್‌ವರೆಗೆ ಹೆಚ್ಚಿಸುವುದಾಗಿ ಸೀರಂ ಇನ್‌ಸ್ಟಿಟ್ಯೂಟ್ ಆಫ್‌ ಇಂಡಿಯಾ ಹೇಳಿದ್ದು, 7.8 ಕೋಟಿ ಡೋಸ್‌ವರೆಗೆ ಹೆಚ್ಚಿಸುವುದಾಗಿ ಭಾರತ್ ಬಯೋಟೆಕ್ ಹೇಳಿದೆ. ಎರಡೂ ಕಂಪನಿಗಳು ಮುಂದಿನ ನಾಲ್ಕು ತಿಂಗಳ ಲಸಿಕೆ ಉತ್ಪಾದನೆ ಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಿವೆ ಎಂದು ಮೂಲಗಳು ತಿಳಿಸಿವೆ.

ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಪನಿಯು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಕೊವ್ಯಾಕ್ಸಿನ್ ಲಸಿಕೆಯನ್ನು ಉತ್ಪಾದಿಸುತ್ತಿದ್ದು, ಆಕ್ಸ್‌ಫರ್ಡ್–ಆಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ಸೀರಂ ಇನ್‌ಸ್ಟಿಟ್ಯೂಟ್ ಉತ್ಪಾದಿಸುತ್ತಿದೆ.

ಕೊವ್ಯಾಕ್ಸಿನ್ ಉತ್ಪಾದನೆಯು ಜುಲೈನಲ್ಲಿ 3.32 ಕೋಟಿ ಹಾಗೂ ಆಗಸ್ಟ್‌ನಲ್ಲಿ 7.82 ಕೋಟಿ ಆಗಿರಲಿದೆ. ಆಗಸ್ಟ್‌ನ ಮಾಸಿಕ ಉತ್ಪಾದನೆ ಸೆಪ್ಟೆಂಬರ್‌ನಲ್ಲಿಯೂ ಹಾಗೆಯೇ ಮುಂದುವರಿಯಲಿದೆ ಎಂದು ಭಾರತ್ ಬಯೋಟೆಕ್‌ನ ನಿರ್ದೇಶಕ ಡಾ. ವಿ.ಕೃಷ್ಣ ಅವರು ಸರ್ಕಾರಕ್ಕೆ ತಿಳಿಸಿದ್ದಾರೆ.

ಅದೇ ರೀತಿ, ಆಗಸ್ಟ್‌ ವೇಳೆಗೆ ತಿಂಗಳ ಉತ್ಪಾದನೆ 10 ಕೋಟಿ ಆಗಿರಲಿದೆ. ಸೆಪ್ಟೆಂಬರ್‌ನಲ್ಲಿಯೂ ಇದು ಮುಂದುವರಿಯಲಿದೆ ಎಂದು ಸೀರಂ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ (ಸರ್ಕಾರದ ಜತೆಗಿನ ವ್ಯವಹಾರ) ಪ್ರಕಾಶ್ ಕುಮಾರ್ ಸಿಂಗ್ ಸರ್ಕಾರಕ್ಕೆ ತಿಳಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.