ADVERTISEMENT

ತಮಿಳುನಾಡಿನಲ್ಲಿ ಆಗಸ್ಟ್‌ 9ರವರೆಗೆ ಲಾಕ್‌ಡೌನ್‌ ಮುಂದುವರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಜುಲೈ 2021, 1:32 IST
Last Updated 31 ಜುಲೈ 2021, 1:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚೆನ್ನೈ: ಕೋವಿಡ್‌-19 ಪ್ರಕರಣಗಳು ಏಕಾಏಕಿ ಏರಿಕೆಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ತಮಿಳುನಾಡು ಸರ್ಕಾರವು ರಾಜ್ಯದಲ್ಲಿ ಆಗಸ್ಟ್9ರವರೆಗೆ ಲಾಕ್‌ಡೌನ್‌ ಮುಂದುವರಿಕೆಯಾಗಲಿದೆ ಎಂದು ಆದೇಶಿಸಿದೆ. ಹಾಗೆಯೇ ಹಿಂದಿನ ಆದೇಶಕ್ಕೆ ಅನುಗುಣವಾಗಿ ಲಾಕ್‌ಡೌನ್‌ ಜಾರಿಯಲ್ಲಿರಲಿದೆ. ಯಾವುದೇ ನಿಯಮಗಳಲ್ಲಿ ಸಡಿಲಿಕೆ ಇಲ್ಲ ಎಂದೂ ತಿಳಿಸಿದೆ.

ಜುಲೈ 16ರಂದು ಹೊರಡಿಸಿದ್ದ ಹಿಂದಿನ ಆದೇಶದಂತೆ, ಈಜುಕೊಳಗಳು, ಬಾರ್‌-ರೆಸ್ಟೋರೆಂಟ್‌ಗಳು,ಶಿಕ್ಷಣ ಸಂಸ್ಥೆಗಳು, ಮೃಗಾಲಯಗಳು ಮತ್ತು ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನಿರಾಕರಿಸಲಾಗಿತ್ತು. ಪುದುಚೇರಿ ಹೊರತುಪಡಿಸಿ ಅಂತರರಾಜ್ಯ ಪ್ರಯಾಣವನ್ನು ನಿರ್ಬಂಧಿಸಲಾಗಿತ್ತು. ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮಗಳಿಗೆ ಅವಕಾಶ ನೀಡಿರಲಿಲ್ಲ. ಆದರೆ,50ಕ್ಕಿಂತ ಹೆಚ್ಚು ಜನರು ಸೇರದೆ ಮದುವೆ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶ ನೀಡಲಾಗಿತ್ತು. ಅಂತ್ಯಕ್ರಿಯೆ ವೇಳೆ20ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ ಎಂದೂ ಸೂಚಿಸಿತ್ತು.

ಕಳೆದ ತಿಂಗಳು ತಮಿಳುನಾಡಿನ31 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಎರಡಂಕಿಗೆ ಇಳಿದಿತ್ತು. ಆದರೆ,ಕಳೆದ ಮೂರು ದಿನಗಳಿಂದಈಸಂಖ್ಯೆಯು ಏಕಾಏಕಿ ಏರಿಕೆಯಾಗಿದೆ.ಶುಕ್ರವಾರ1,947 ಹೊಸ ಪ್ರಕರಣಗಳು ವರದಿಯಾಗಿವೆ.ಬುಧವಾರ ಮತ್ತುಗುರುವಾರ ಕ್ರಮವಾಗಿ 1,756 ಹಾಗೂ1,859 ಹೊಸ ಪ್ರಕರಣಗಳು ವರದಿಯಾಗಿದ್ದವು.

ADVERTISEMENT

ತಮಿಳುನಾಡು ಆರೋಗ್ಯ ಸಚಿವ ಎಂ.ಎ. ಸುಬ್ರಮಣಿಯನ್ ರಾಜ್ಯದಲ್ಲಿ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ಹೆಚ್ಚಿನ ಜನರು ಮಾಸ್ಕ್‌ಗಳನ್ನು ಧರಿಸುತ್ತಿಲ್ಲ. ಕೋವಿಡ್‌ ಮಾರ್ಗಸೂಚಿಯನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೊರೊನಾವೈರಸ್‌ನ ಡೆಲ್ಟಾ ಹಾಗೂ ಡೆಲ್ಟಾಪ್ಲಸ್‌ರೂಪಾಂತರ ತಳಿಗಳು ಸೋಂಕು ಪ್ರಕರಣಗಳ ಏರಿಕೆಗೆ ಕಾರಣವಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

ತಮಿಳುನಾಡಿನಲ್ಲಿ ಇದುವರೆಗೆ 25,00,434 ಜನರು ಸೋಂಕಿನಿಂದ ಗುಣಮುಖರಾಗಿದ್ದು,ಸಾವಿನ ಸಂಖ್ಯೆ34,023ಕ್ಕೆ ತಲುಪಿದೆ.ಸದ್ಯ21,207 ಸಕ್ರಿಯ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.