ADVERTISEMENT

ವಿಶೇಷ ಕೋರ್ಸ್‌ಗಳ ಕಲಿಕೆ: ‘ಕೊರ್ಸೆರಾ’ ಜೊತೆ ಪ್ರತಿಷ್ಠಿತ ಸಂಸ್ಥೆಗಳ ಒಪ್ಪಂದ

ಪಿಟಿಐ
Published 5 ಮೇ 2022, 12:48 IST
Last Updated 5 ಮೇ 2022, 12:48 IST
ಕೊರ್ಸೆರಾ
ಕೊರ್ಸೆರಾ   

ನವದೆಹಲಿ: ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ಜೊತೆಗೇ ಉದ್ಯೋಗಕ್ಕೆ ಸಿದ್ಧತೆ ಮಾಡಿಕೊಳ್ಳಲು ನೆರವಾಗುವ ವಿಶೇಷ ಕೋರ್ಸ್‌ಗಳನ್ನು ಕಲಿಯಲು ಅನುಕೂಲ ಕಲ್ಪಿಸಲು ದೇಶದ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳು ಆನ್‌ಲೈನ್‌ ಕಲಿಕಾ ವೇದಿಕೆ ‘ಕೊರ್ಸೆರಾ’ ಜೊತೆ ಒಪ್ಪಂದ ಮಾಡಿಕೊಂಡಿವೆ.

‘ಐಎಸ್‌ಬಿ–ಹೈದರಾಬಾದ್‌, ಐಐಎಂ–ಅಹಮದಾಬಾದ್, ಐಐಟಿ–ರೂರ್ಕಿ, ಐಐಟಿ– ಗುವಾಹಟಿ ಹಾಗೂ ಬೆಂಗಳೂರಿನ ಐಐಎಸ್‌ಸಿ, ಐಐಐಟಿ ಸಂಸ್ಥೆಗಳು ವಿವಿಧ ಕೋರ್ಸ್‌ಗಳ ಕಲಿಕೆಗಾಗಿ ಒಪ್ಪಂದ ಮಾಡಿಕೊಂಡಿವೆ’ ಎಂದು ‘ಕೊರ್ಸೆರಾ ತಿಳಿಸಿದೆ.

ಐಐಟಿ–ರೂರ್ಕಿಯ ಎಂಬಿಎ, ಬೆಂಗಳೂರಿನ ಐಐಐಟಿಯ ಎಂಎಸ್‌ಸಿ (ಡಾಟಾ ಸೈನ್ಸ್‌), ಐಎಸ್‌ಬಿ–ಹೈದರಾಬಾದ್‌ನ ‘ಗ್ಲೊಬಲ್ ಮ್ಯಾನೇಜ್‌ಮೆಂಟ್ ಪ್ರೊಗ್ರಾಮ್ಸ್‌ ಇನ್‌ ಇನ್ಫ್ರಾಸ್ಟ್ರಕ್ಚರ್ ಆ್ಯಂಡ್ ಇನ್ ಆಪರೇಷನ್ಸ್‌ ಆ್ಯಂಡ್ ಸಪ್ಲೈ ಚೈನ್’ ಸೇರಿದಂತೆ ವಿವಿಧ ವಿಷಯದಲ್ಲಿ ಪದವಿ ಕೋರ್ಸ್‌ಗಳನ್ನು ಕಲಿಯಬಹುದಾಗಿದೆ ಎಂದು ‘ಕೊರ್ಸೆರಾ’ದ ಮುಖ್ಯ ಕಂಟೆಂಟ್ ಅಧಿಕಾರಿ ಬೆಟ್ಟಿ ವಂದೆನ್‌ಬಾಷ್ ತಿಳಿಸಿದ್ದಾರೆ.

ADVERTISEMENT

‘ಭಾರತದ ಮಹತ್ವಾಕಾಂಕ್ಷೆಯ ನೂತನ ಶಿಕ್ಷಣ ನೀತಿ ಬಗ್ಗೆ ನಾವು ಹೆಚ್ಚು ಉತ್ಸುಕರಾಗಿದ್ದೇವೆ. ಒಟ್ಟು ವಿದ್ಯಾರ್ಥಿಗಳ ಪೈಕಿ ಶೇ 50ರಷ್ಟು ವಿದ್ಯಾರ್ಥಿಗಳು 2035ರ ವೇಳೆಗೆ ಉನ್ನತ ಶಿಕ್ಷಣ ಕೋರ್ಸ್‌ಗಳಿಗೆ ನೋಂದಣಿ ಮಾಡಿಸಿಕೊಂಡಿರಬೇಕು ಎಂಬ ಗುರಿಯನ್ನು ಈ ನೀತಿ ಹೊಂದಿದೆ. ಇಷ್ಟೊಂದು ಸಂಖ್ಯೆಯ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಗಳಲ್ಲಿಯೇ ಕಲಿಕಾ ಸೌಲಭ್ಯ ಒದಗಿಸುವುದು ಅಸಾಧ್ಯ. ಹೀಗಾಗಿ, ಆನ್‌ಲೈನ್‌ ಕೋರ್ಸ್‌ಗಳಿಗೆ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಮಾಡಿಸಲು ಕ್ರಮಕೈಗೊಳ್ಳಲಾಗುವುದು’ ಎಂದೂ ಅವರು ಹೇಳಿದ್ದಾರೆ.

ಕೊರ್ಸೆರಾ, ಜಗತ್ತಿನ ಪ್ರಮುಖ ಆನ್‌ಲೈನ್ ಕಲಿಕಾ ವೇದಿಕೆ. ವಿಶ್ವದ 190 ವಿಶ್ವವಿದ್ಯಾಲಯಗಳು/ಉದ್ದಿಮೆಗಳು ಈ ವೇದಿಕೆ ಸಹಯೋಗದಲ್ಲಿ ಉನ್ನತ ಶಿಕ್ಷಣ ನೀಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.