ADVERTISEMENT

ಟ್ವಿಟರ್‌ ಎಂ.ಡಿ ಪ್ರಕರಣ: ಕರ್ನಾಟಕ ಹೈಕೋರ್ಟ್ ವಿರುದ್ಧ ಉತ್ತರ ಪ್ರದೇಶ ಅರ್ಜಿ

ಪಿಟಿಐ
Published 8 ಸೆಪ್ಟೆಂಬರ್ 2021, 19:30 IST
Last Updated 8 ಸೆಪ್ಟೆಂಬರ್ 2021, 19:30 IST
ಮನೀಶ್ ಮಹೇಶ್ವರಿ
ಮನೀಶ್ ಮಹೇಶ್ವರಿ   

ನವದೆಹಲಿ: ‘ಕೋಮು ಸೂಕ್ಷ್ಮ ವಿಡಿಯೊ ವಿಚಾರವಾಗಿ ಆಗಿನ ‘ಟ್ವಿಟರ್‌ ಇಂಡಿಯಾ’ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿಗೆ ನೀಡಿದ್ದ ನೋಟಿಸ್‌ ಅನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್‌ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ತ್ವರಿತವಾಗಿ ನಡೆಸಬೇಕು’ ಎಂದು ಉತ್ತರ ಪ್ರದೇಶ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

ಈ ಬಗ್ಗೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಅನಿರುದ್ಧ ಬೋಸ್ ಅವರನ್ನೊಳಗೊಂಡ ಪೀಠವು, ‘ಈ ಬಗ್ಗೆ ಪರಿಶೀಲಿಸಿ, ದಿನಾಂಕ ನಿಗದಿ ಮಾಡುತ್ತೇವೆ’ ಎಂದು ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ ತಿಳಿಸಿದೆ.

ಕೋಮು ಸೂಕ್ಷ್ಮ ವಿಡಿಯೊವೊಂದನ್ನು ಟ್ವಿಟರ್‌ನಲ್ಲಿ ಬಳಕೆದಾರರೊಬ್ಬರು ಅಪ್‌ಲೋಡ್ ಮಾಡಿದ್ದರು. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಮಹೇಶ್ವರಿ ಅವರಿಗೆ ಉತ್ತರ ಪ್ರದೇಶ ಪೊಲೀಸ್ ಸಮನ್ಸ್‌ ಜಾರಿ ಮಾಡಿತ್ತು.

ADVERTISEMENT

ಆದರೆ ಈ ನೋಟಿಸ್ ಅನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್‌, ಮಹೇಶ್ವರಿ ಅವರನ್ನು ವಿಡಿಯೊ ಕಾನ್ಫರೆನ್ಸ್‌ ಇಲ್ಲವಾದ್ದಲ್ಲಿ ಬೆಂಗಳೂರಿನಲ್ಲಿರುವ ಅವರ ಮನೆ ಅಥವಾ ಕಚೇರಿಯಲ್ಲಿ ವಿಚಾರಣೆ ನಡೆಸುವಂತೆ ಪೊಲೀಸರಿಗೆ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.