ADVERTISEMENT

ಯುನಸ್ಕೊ ವಿಶ್ವ ಪಾರಂಪರಿಕ ತಾಣಗಳ ಮಾಹಿತಿವುಳ್ಳ ಕೃತಿ ಬಿಡುಗಡೆ

40 ಸ್ಥಳಗಳ ಕುರಿತ ಸಮಗ್ರ ವಿವರ ‘ಇನ್‌ಕ್ರೆಡಿಬಲ್‌ ಟ್ರೆಜರ್ಸ್‌’ನಲ್ಲಿ ದಾಖಲು

ಪಿಟಿಐ
Published 28 ಆಗಸ್ಟ್ 2021, 13:12 IST
Last Updated 28 ಆಗಸ್ಟ್ 2021, 13:12 IST
ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ ಹಂಪಿಯ ವಿಜಯವಿಠ್ಠಲ ದೇವಸ್ಥಾನ ಆವರಣದಲ್ಲಿರುವ ಕಲ್ಲಿನ ರಥ (ಸಂಗ್ರಹ ಚಿತ್ರ)
ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ ಹಂಪಿಯ ವಿಜಯವಿಠ್ಠಲ ದೇವಸ್ಥಾನ ಆವರಣದಲ್ಲಿರುವ ಕಲ್ಲಿನ ರಥ (ಸಂಗ್ರಹ ಚಿತ್ರ)   

ನವದೆಹಲಿ: ಯುನೆಸ್ಕೊ ಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ ಭಾರತದ ಐತಿಹಾಸಿಕ ಸ್ಥಳಗಳ ಕುರಿತು ಸಮಗ್ರ ಮಾಹಿತಿಯನ್ನು ಒಳಗೊಂಡ ‘ಇನ್‌ಕ್ರೆಡಿಬಲ್ ಟ್ರೆಜರ್ಸ್‌’ ಎಂಬ ಕೃತಿಯನ್ನು ಹೊರತರಲಾಗಿದೆ.

ಯುನೆಸ್ಕೊ ಹಾಗೂ ಎಂಎಪಿಐಎನ್‌ ಪ್ರಕಾಶನ ಸಂಸ್ಥೆ ಜಂಟಿಯಾಗಿ ಈ ಕೃತಿಯನ್ನು ಪ್ರಕಟಿಸಿವೆ. ಶುಕ್ರವಾರ ಆನ್‌ಲೈನ್‌ ಕಾರ್ಯಕ್ರಮದಲ್ಲಿ ಈ ಕೃತಿಯನ್ನು ಬಿಡುಗಡೆ ಮಾಡಲಾಯಿತು ಎಂದು ಯುನೆಸ್ಕೊ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಯುನೆಸ್ಕೊ ಪಟ್ಟಿಯಲ್ಲಿ ಸ್ಥಾನಪಡೆದಿರುವ 40 ವಿಶ್ವ ಪಾರಂಪರಿಕ ತಾಣಗಳು ಭಾರತದಲ್ಲಿವೆ. ಕೆಲವು ತಾಣಗಳು ಗತವೈಭವ ಸಾರುತ್ತಿದ್ದರೆ, ಇನ್ನೂ ಕೆಲವು ಸಾಂಸ್ಕೃತಿಕ, ಪ್ರಾಕೃತಿಕ ಶ್ರೀಮಂತಿಕೆಯಿಂದ ಗಮನ ಸೆಳೆಯುತ್ತವೆ. ಇಂತಹ ತಾಣಗಳ ಕುರಿತು ಲೇಖನಗಳು, ಅದ್ಭುತ ಛಾಯಾಚಿತ್ರಗಳು, ಸಂಗ್ರಹದಲ್ಲಿರುವ ಚಿತ್ರಗಳನ್ನು ಈ ಕೃತಿ ಒಳಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಕಳೆದ ಜುಲೈನಲ್ಲಷ್ಟೇ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ತೆಲಂಗಾಣದಲ್ಲಿರುವ 13ನೇ ಶತಮಾನದ ರಾಮಪ್ಪ ದೇವಸ್ಥಾನ, ಹರಪ್ಪ ನಾಗರಿಕತೆ ಕಾಲದ ತಾಣ ಗುಜರಾತ್‌ನ ಧೋಲಾವಿರ್‌ ಕುರಿತು ಈ ಕೃತಿಯಲ್ಲಿ ಮಾಹಿತಿ ಇದೆ.

‘ಭಾರತದ ಭವ್ಯ ಇತಿಹಾಸಕ್ಕೆ ಈ ಕೃತಿ ಮೂಲಕ ಗೌರವ ಸಲ್ಲಿಸಲಾಗಿದೆ. ಇಲ್ಲಿನ ಜೀವೈವಿಧ್ಯ, ವಿವಿಧ ಸಮುದಾಯಗಳು, ಕಲೆ, ಕುಸುರಿ, ಧಾರ್ಮಿಕ ಆಚರಣೆಗಳನ್ನು ಈ ಕೃತಿಯಲ್ಲಿ ಸಮರ್ಥವಾಗಿ ದಾಖಲಿಸಲಾಗಿದೆ’ ಎಂದು ಯುನೆಸ್ಕೊದ ನವದೆಹಲಿ ಕಚೇರಿಯ ನಿರ್ದೇಶಕ ಎರಿಕ್‌ ಫಾಲ್ಟ್‌ ಹೇಳಿದ್ದಾರೆ.

‘ವಿಶ್ವದ ಗಮನ ಸೆಳೆದಿರುವ ಈ ಪಾರಂಪರಿಕ ತಾಣಗಳ ಸಂರಕ್ಷಣೆಗೆ ಈ ಕೃತಿ ಉತ್ತೇಜನ ನೀಡುತ್ತದೆ ಎಂಬ ವಿಶ್ವಾಸ ನಮ್ಮದು’ ಎಂದು ಅವರ ಹೇಳಿಕೆ ಉಲ್ಲೇಖಿಸಿ ಯುನೆಸ್ಕೊ ಟ್ವೀಟ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.