ADVERTISEMENT

ಶ್ರೀಲಂಕಾಗೆ ಲಭಿಸಿದ ವಿದೇಶಿ ವಿನಿಮಯ: ಇಂಧನ, ಅಡುಗೆ ಅನಿಲ ಖರೀದಿ ಸರಾಗ

ಶ್ರೀಲಂಕಾಗೆ ವಿಶ್ವಬ್ಯಾಂಕ್‌, ಅನಿವಾಸಿಗರಿಂದ ₹1 ಲಕ್ಷ ಕೋಟಿ ನೆರವು: ಕೇಂದ್ರೀಯ ಬ್ಯಾಂಕ್‌ ಗವರ್ನರ್‌ ಪಿ. ನಂದಲಾಲ್ ವೀರಸಿಂಗ್

​ಪ್ರಜಾವಾಣಿ ವಾರ್ತೆ
Published 19 ಮೇ 2022, 13:26 IST
Last Updated 19 ಮೇ 2022, 13:26 IST
   

ಕೊಲಂಬೊ (ರಾಯಿಟರ್ಸ್):ಇಂಧನ ಮತ್ತು ಅಡುಗೆ ಅನಿಲಕ್ಕೆ ಪಾವತಿಸುವಷ್ಟು ವಿದೇಶಿ ವಿನಿಮಯ ಲಭಿಸಿದೆ ಎಂದು ಶ್ರೀಲಂಕಾ ಕೇಂದ್ರೀಯ ಬ್ಯಾಂಕ್ ಗವರ್ನರ್ಪಿ. ನಂದಲಾಲ್ ವೀರಸಿಂಗ್ ಗುರುವಾರ ತಿಳಿಸಿದರು.

ಕನಿಷ್ಠ ಒಂದು ತಿಂಗಳ ಕಾಲಇಂಧನ ಮತ್ತು ಅಡುಗೆ ಅನಿಲ ಸರಬರಾಜು ಸ್ಥಗಿತವಾಗಲಿದೆ ಎಂದು ನೂತನ ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ‌ ಹೇಳಿದ ಬೆನ್ನಲ್ಲೇ ಕೇಂದ್ರೀಯ ಬ್ಯಾಂಕ್‌ ಗವರ್ನರ್‌ ಅವರು ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

ಸುಮಾರು ₹1 ಲಕ್ಷ ಕೋಟಿ (130 ಮಿಲಿಯನ್‌ ಡಾಲರ್‌) ಬಿಡುಗಡೆ ಮಾಡಲಾಗಿದೆ. ಈ ಮೊತ್ತವನ್ನು ವಿಶ್ವಬ್ಯಾಂಕ್‌ ಮತ್ತು ಅನಿವಾಸಿ ಶ್ರೀಲಂಕಾ ಪ್ರಜೆಗಳು ನೀಡಿದ್ದಾರೆ.ಇದು ದೇಶದಲ್ಲಿನ ವಿದೇಶಿ ವಿನಿಮಯದ ತೀವ್ರ ಕೊರತೆ ನಿವಾರಿಸಲಿದೆ ಎಂದು ಅವರು ತಿಳಿಸಿದರು.

ADVERTISEMENT

ಮುಂದಿನ ಎರಡು ತಿಂಗಳಲ್ಲಿ ಹಣದುಬ್ಬರ ಶೇ 40ಕ್ಕೆ ಏರಬಹುದು. ಇದು ಹೆಚ್ಚಾಗಿ ಪೂರೈಕೆ ಬದಿಯ ಒತ್ತಡಗಳನ್ನು ಅವಲಂಬಿಸಿದೆ. ಬ್ಯಾಂಕ್ ಮತ್ತು ಸರ್ಕಾರದ ಕ್ರಮಗಳು ಈಗಾಗಲೇ ಬೇಡಿಕೆ ಬದಿಯ ಹಣದುಬ್ಬರ ನಿಯಂತ್ರಿಸುತ್ತಿವೆ ಎಂದು ಹೇಳಿದರು.

‘ದೇಶವು ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಹೆಚ್ಚು ಸ್ಥಿರವಾಗಿದೆ’ ಎಂದ ಗವರ್ನರ್‌, ಹುದ್ದೆಯಲ್ಲಿ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದರು.

ದೇಶದಲ್ಲಿ ರಾಜಕೀಯ ಅಸ್ಥಿರತೆ ಕೊನೆಗೊಳ್ಳದಿದ್ದರೆಎರಡು ವಾರಗಳಲ್ಲಿ ರಾಜೀನಾಮೆ ನೀಡುವುದಾಗಿ ಅವರು ಮೇ 11ರಂದುಘೋಷಿಸಿದ್ದರು.

ವಿರೋಧ ಪಕ್ಷದ ಸಂಸದರಾಗಿದ್ದ ರಾನಿಲ್ ವಿಕ್ರಮಸಿಂಘೆ ಪ್ರಧಾನಿಯಾದ ನಂತರ,ಅವರು ತಮ್ಮ ಸಂಪುಟಕ್ಕೆ ನಾಲ್ವರನ್ನು ಮಾತ್ರ ನೇಮಿಸಿದ್ದಾರೆ.ಆದರೆ, ಇನ್ನೂ ಹಣಕಾಸು ಸಚಿವರನ್ನು ನೇಮಿಸಿಲ್ಲ‌.

ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಶ್ರೀಲಂಕಾದ ಆಡಳಿತಾರೂಢ ಸಂಸದರ ವಿಚಾರಣೆಯನ್ನು ಪೊಲೀಸರು ಮುಂದುವರಿಸಿದ್ದಾರೆ. ಈ ಮಧ್ಯೆ ಹಿಂಸಾಚಾರ ವೇಳೆ ಕಂಡಲ್ಲಿ ಗುಂಡಿಕ್ಕಲು ಆದೇಶಿಸಿಲ್ಲ ಎಂದು ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರು ಸಂಸತ್ತಿನಲ್ಲಿ ತಿಳಿಸಿದ್ದಾರೆ.

‘ಲಂಕಾದಲ್ಲಿ ಸಂವಿಧಾನದ 21ನೇ ತಿದ್ದುಪಡಿ’

ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರು ಅಟಾರ್ನಿ ಜನರಲ್ ಮತ್ತು ಪ್ರಮುಖ ಸಂಸದರೊಂದಿಗೆ ಸುದೀರ್ಘ ಚರ್ಚೆ ನಡೆಸಿದ ನಂತರ ಮುಂದಿನ ವಾರ ಸಚಿವ ಸಂಪುಟದ ಮುಂದೆ ಸಂವಿಧಾನದ ಪ್ರಮುಖ 21ನೇ ತಿದ್ದುಪಡಿ ಮಂಡಿಸಲು ಯೋಜಿಸಿದ್ದಾರೆ.

ಸಂಸದರಾದ ವಿಜಯದಾಸ ರಾಜಪಕ್ಷ ಮತ್ತು ಸುಸಿಲ್ ಪ್ರೇಮಜಯಂತ ಅವರು 21ನೇ ತಿದ್ದುಪಡಿಯ ಷರತ್ತುಗಳನ್ನು ಪರಿಶೀಲಿಸಲಿದ್ದಾರೆ. ಹಾಗೆಯೇ 19ನೇ ತಿದ್ದುಪಡಿಯ ನವೀಕರಿಸಿದ ಆವೃತ್ತಿಯನ್ನು ಸಂಪುಟದ ಮುಂದಿಡುವ ಮೊದಲು ಅಂತಿಮಗೊಳಿಸಲಿದ್ದಾರೆ ಎಂದು ಆನ್‌ಲೈನ್ ಸುದ್ದಿ ತಾಣ ‘ಡೈಲಿ ಮಿರರ್’ ಗುರುವಾರ ವರದಿ ಮಾಡಿದೆ.

21ನೇ ತಿದ್ದುಪಡಿಯು ಸಂವಿಧಾನದಲ್ಲಿ 20ಎ ಅನ್ನು ರದ್ದುಗೊಳಿಸುವ ನಿರೀಕ್ಷೆಯಿದೆ. ಇದು ಸಂಸತ್ತನ್ನು ಬಲಪಡಿಸುವ 19ನೇ ತಿದ್ದುಪಡಿ ರದ್ದುಗೊಳಿಸಿದ ನಂತರ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರಿಗೆ ಮುಕ್ತ ಅಧಿಕಾರ ನೀಡಲಿದೆ.

ರಾನಿಲ್‌ ಅವರು ಪ್ರಮುಖ ಪಕ್ಷಗಳ ಸಂಸದರೊಂದಿಗೆ ಸಂಪುಟ ರಚನೆ ಬಗ್ಗೆಯೂ ರಹಸ್ಯ ಸಭೆಗಳನ್ನು ನಡೆಸಿದರು ಎಂದುಅದು ವರದಿ ಮಾಡಿದೆ.

‘ಎಲ್‌ಟಿಟಿಇ ಸಂಘರ್ಷ ಅಂತ್ಯ: ಸೇನಾ ಕಾರ್ಯ ಶ್ಲಾಘನೀಯ’

ಎಲ್‌ಟಿಟಿಇ ಜೊತೆಗೆ ಮೂರು ದಶಕಗಳವರೆಗೆ ನಡೆದ ಅಂತರ್‌ಯುದ್ಧವನ್ನು ಮಾನವೀಯ ಕಾರ್ಯಾಚರಣೆ ಮೂಲಕ ಸೇನೆಯು 2009ರಲ್ಲಿ ಅಂತ್ಯಗೊಳಿಸಿ, ಶಾಂತಿ ಸ್ಥಾಪಿಸಿತು ಎಂದು ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಶ್ಲಾಘಿಸಿದರು.

ಎಲ್‌ಟಿಟಿಇ ಸಂಘರ್ಷದ ಸಮಯದಲ್ಲಿ ರಕ್ಷಣಾ ಕಾರ್ಯದರ್ಶಿಯಾಗಿದ್ದ, ರಕ್ಷಣಾ ಸಚಿವರೂ ಆದ ಗೊಟಬಯ ರಾಜಪಕ್ಸ ಬುಧವಾರ ‘ಯುದ್ಧ ವೀರರ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದ ಸ್ವಾತಂತ್ರ್ಯ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಿದ ಸಶಸ್ತ್ರ ಪಡೆಗಳ ಶೌರ್ಯವನ್ನು ಯಾವುದೇ ಸಂದರ್ಭದಲ್ಲೂ ಮರೆಯಲಾಗದು ಎಂದು ಪ್ರಶಂಸಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.