ADVERTISEMENT

ನೆನಪು ಮತ್ತು ಕಲಿಕೆಗಳ ಸಾಂಗತ್ಯ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 19:30 IST
Last Updated 8 ಆಗಸ್ಟ್ 2022, 19:30 IST
   

‘ಪ್ರಪಂಚದಲ್ಲಿ ಇರೋದೆಲ್ಲ ನೆನಪಿರುತ್ತದೆ – ಪಠ್ಯ-ಪಾಠ ಒಂದು ಬಿಟ್ಟು’ ಎನ್ನುವುದು ಮಕ್ಕಳ ಬಗ್ಗೆ ಅನೇಕ ಪೋಷಕರ ಅಳಲು.

‘ಪಾಪ ಮಗು ಎಷ್ಟೊಂದು ಸಾರಿ ಪಾಠ ಓದಿದರೂ ಪರೀಕ್ಷೆ ವೇಳೆಗೆ ನೆನಪೇ ಉಳಿಯೋದಿಲ್ಲ’ ಎಂದು ಪೇಚಾಡುವವರೂ ಇದ್ದಾರೆ.

ಮಕ್ಕಳ ನೆನಪಿನ ಶಕ್ತಿಯನ್ನೇ ಮುಖ್ಯವಾಗಿ ಪರೀಕ್ಷಿಸಲು ನಿರ್ಮಾಣವಾಗಿರುವ ನಮ್ಮ ಪರೀಕ್ಷಾ ವ್ಯವಸ್ಥೆ ಈ ಸಂಕಟಗಳಿಗೆ ಮತ್ತಷ್ಟು ಇಂಬು ನೀಡುತ್ತದೆ. ಕಲಿಕೆ ಎಂಬುದು ಯಾವುದೇ ವಿಷಯದ ಮೂಲತತ್ತ್ವಗಳ ಸರಿಯಾದ ಗ್ರಹಿಕೆ ಎಂದು ಅನಾದಿಕಾಲದಿಂದ ಹೇಳಲಾಗಿದೆ. ಆದರೆ ಈಗಲೂ ನಮ್ಮ ದೇಶದ ಶಿಕ್ಷಣವ್ಯವಸ್ಥೆ ವಿದ್ಯಾರ್ಥಿಯ ಬಾಯಿಪಾಠದ ಸಾಮರ್ಥ್ಯವನ್ನು ಬಹುವಾಗಿ ಓರೆಹಚ್ಚುತ್ತದೆ. ನೆನಪಿನ ಶಕ್ತಿಯ ಕುರಿತಾಗಿ ಆಧುನಿಕ ವಿಜ್ಞಾನ ಏನು ಹೇಳುತ್ತದೆ? ಕಲಿಕೆಯ ಬಗೆಗಿನ ಅಧ್ಯಯನಗಳು ತೋರುವ ದಾರಿ ಯಾವುದು? ಇದರ ಬಗ್ಗೆ ಒಂದು ಜಿಜ್ಞಾಸೆ.

ADVERTISEMENT

ಪ್ರಪಂಚದ ಹಲವಾರು ದೇಶಗಳಲ್ಲಿ ‘ನೆನಪಿನ ಶಕ್ತಿಯ ಸ್ಪರ್ಧೆಗಳು’ ನಡೆಯುತ್ತವೆ. ನೂರಾರು ಅಪರಿಚಿತ ವ್ಯಕ್ತಿಗಳ ಛಾಯಾಚಿತ್ರಗಳನ್ನು ಒಂದರ ಹಿಂದೆ ಮತ್ತೊಂದರಂತೆ ಕೆಲವು ಕ್ಷಣಗಳ ಕಾಲ ತೋರಿಸಿ, ಸ್ವಲ್ಪ ಕಾಲದ ನಂತರ ಅವುಗಳನ್ನು ಗುರುತಿಸುವುದು; ಪರಸ್ಪರ ಸಂಬಂಧವಿಲ್ಲದ ನೂರಾರು ಪದಗಳನ್ನು ಒಮ್ಮೆ ಕೇಳಿ, ಕೆಲವು ನಿಮಿಷಗಳ ನಂತರ ಅಂತೆಯೇ ಹೇಳುವುದು; ದೊಡ್ಡ ಸಂಖ್ಯೆಗಳನ್ನು ನಿಖರವಾಗಿ ಪುನರುಚ್ಚರಿಸುವುದು; ಒಂದು ಕಟ್ಟು ಇಸ್ಪೀಟು ಎಲೆಗಳನ್ನು ಚೆನ್ನಾಗಿ ಕಲೆಸಿ ಒಮ್ಮೆ ತೋರಿದಾಗ, ಸ್ಪರ್ಧಿ ಅದೇ ಅನುಕ್ರಮದಲ್ಲಿ ಯಾವ್ಯಾವ ಎಲೆಗಳು ಇವೆಯೆಂದು ಹೇಳುವುದು – ಹೀಗೆ ಹಲವಾರು ವಿಧದ ಸ್ಪರ್ಧೆಗಳು ನೆನಪಿನ ಶಕ್ತಿಗೆ ಕುರುಹಾಗಿ ಪರೀಕ್ಷೆಗೆ ಒಳಪಡುತ್ತವೆ. ಒಂದರ ಹಿಂದೊಂದರಂತೆ ಹೇಳಿದ ನೂರಾರು ಪದಗಳನ್ನು ಕೇಳಿದ ಮೇಲೆ ಹದಿನೈದು ನಿಮಿಷಗಳ ನಂತರ ಅವೆಲ್ಲವನ್ನೂ ಯಥಾವತ್ತಾಗಿ ಮತ್ತೆ ಹೇಳುವ ಸ್ಪರ್ಧಿಗಳನ್ನು ನೋಡಿದರೆ, ‘ಇವರೆಲ್ಲಾ ಹುಟ್ಟಿನಿಂದಲೇ ಅಪಾರ ನೆನಪಿನ ಶಕ್ತಿಯ ಸಿದ್ಧಿಯನ್ನು ಪಡೆದಿರುತ್ತಾರೆ’ ಎನಿಸುವುದು ಸಾಮಾನ್ಯ.

ಆದರೆ ವಾಸ್ತವ ಹಾಗಿಲ್ಲ. 2005ನೆಯ ಇಸವಿಯಲ್ಲಿ ಅಮೆರಿಕಾದಲ್ಲಿ ನಡೆದ ಇಂತಹ ಸ್ಪರ್ಧೆಯನ್ನು ವರದಿ ಮಾಡಲು ಹೋಗಿದ್ದ ಜೋಶುವಾ ಫೊಯರ್ ಎಂಬ 23 ವರ್ಷ ವಯಸ್ಸಿನ ಪತ್ರಕರ್ತರೊಬ್ಬರು ವಿಜೇತರ ಜೊತೆ ಸಂದರ್ಶನ ಮಾಡುವಾಗ, ಅವರೆಲ್ಲರೂ ಇಂತಹ ಸ್ಪರ್ಧೆಗೆ ತರಬೇತಿ ಪಡೆದದ್ದನ್ನು ಕೇಳಿ ನಿಬ್ಬೆರಗಾದರು. ಅಂದರೆ, ಅಸಾಧಾರಣ ನೆನಪಿನ ಶಕ್ತಿ ಎನ್ನುವುದು ದೈವದತ್ತವಾಗಿ ಬಂದ ಪ್ರತಿಭೆ ಅಲ್ಲವೆಂದೂ, ಅದು ಕಠಿಣ ಪರಿಶ್ರಮದ ಸಾಧನೆಯೆಂದೂ ತಿಳಿಯಿತು. ಇದನ್ನು ಪರೀಕ್ಷಿಸಲು ಫೊಯರ್ ಬ್ರಿಟನ್ನಿನ ‘ನೆನಪಿನ ಶಕ್ತಿಯ ಗ್ರಾಂಡ್ ಮಾಸ್ಟರ್’ ಎಂದು ಖ್ಯಾತರಾದ ಎಡ್ ಕುಕ್ ಅವರಲ್ಲಿ ತರಬೇತಿಗೆ ಸೇರಿದರು. ಅಲ್ಲಿನ ವ್ಯವಸ್ಥಿತ ತರಬೇತಿಯ ಮೂಲಕ ತಯಾರಾಗಿ, ಮರುವರ್ಷ 2006ರ ನೆನಪಿನ ಶಕ್ತಿಯ ಸ್ಪರ್ಧೆಗಳಲ್ಲಿ ಭಾಗವಹಿಸಿ, ಚೆನ್ನಾಗಿ ಕಲೆಸಿದ 52 ಇಸ್ಪೀಟು ಎಲೆಗಳ ಸರಣಿಯನ್ನು ಕೇವಲ ಒಂದು ನೂರು ಸೆಕೆಂಡುಗಳ ಕಾಲ ನೋಡಿ, ಅದೇ ಅನುಕ್ರಮದಲ್ಲಿ ಒಂದೂ ತಪ್ಪಿಲ್ಲದಂತೆ ಹೇಳಿ, ಸ್ಪರ್ಧೆಯ ವಿಜೇತರೂ ಆದರು! ತಮ್ಮ ಈ ಕುತೂಹಲಕಾರಿ ಅನುಭವದ ಪ್ರಯಾಣವನ್ನು ಅವರು ‘Moonwalking with Einstein’ ಎನ್ನುವ ಪುಸ್ತಕದಲ್ಲಿ ಬರೆದಿದ್ದಾರೆ; ನೆನಪಿನ ಶಕ್ತಿಯ ಬಗ್ಗೆ ಹಲವಾರು ಹೊಸನೋಟಗಳನ್ನು, ಒಳಸುಳಿಗಳನ್ನು ಚರ್ಚಿಸಿದ್ದಾರೆ.

ನೆನಪಿನ ಶಕ್ತಿಯನ್ನು ವೈಜ್ಞಾನಿಕ ತರಬೇತಿಯ ಮೂಲಕ ಯಾರು ಬೇಕಾದರೂ ಗಳಿಸಬಹುದು ಎಂದಾಯಿತು. ನಮ್ಮ ಮಿದುಳಿನಲ್ಲಿ ಅಪಾರವಾದ ಸಂಗತಿಗಳನ್ನು ದಾಖಲಿಸಬಹುದು. ಅದನ್ನು ವ್ಯವಸ್ಥಿತವಾಗಿ ಮರುಕಳಿಕೆ ಮಾಡುವುದು ನೆನಪಿನ ಶಕ್ತಿ ಎನಿಸಿಕೊಳ್ಳುತ್ತದೆ; ಇದನ್ನು ಕ್ರಮಬದ್ಧವಾಗಿ ಮಾಡಿದಷ್ಟೂ ನೆನಪು ಹರಿತವಾಗುತ್ತದೆ. ಈ ಬಗ್ಗೆ ವಿಜ್ಞಾನಿಗಳು ಸಂಶೋಧನೆಗಳನ್ನು ನಡೆಸಿದ್ದಾರೆ. ಇಂತಹ ಒಂದು ಅಧ್ಯಯನದಲ್ಲಿ ಸರಿಸುಮಾರು ಒಂದೇ ಓದಿನ ಮಟ್ಟದ ವಿದ್ಯಾರ್ಥಿಗಳ ಎರಡು ಗುಂಪುಗಳನ್ನು ಮಾಡಲಾಯಿತು. ಈ ವಿದ್ಯಾರ್ಥಿಗಳು ನಿಯಮಿತವಾಗಿ ಕಲಿಯುವ ವಿಷಯಗಳಿಗೆ ಯಾವುದೇ ನೇರ ಸಂಬಂಧವಿಲ್ಲದ ಒಂದು ಪುಟದಷ್ಟು ಮಾಹಿತಿಯ ಹಲವಾರು ಪ್ರತಿಗಳನ್ನು ಅಧ್ಯಯನ ತಂಡ ಮುದ್ರಿಸಿ ಇರಿಸಿಕೊಂಡಿತ್ತು.

ಮೊದಲನೆಯ ಗುಂಪಿನ ವಿದ್ಯಾರ್ಥಿಗಳಲ್ಲಿ ಪ್ರತಿಯೊಬ್ಬರಿಗೂ ಇಂತಹ ಮಾಹಿತಿಯ ಒಂದೊಂದು ಪ್ರತಿಯನ್ನು ನೀಡಿ, ಇಪ್ಪತ್ತು ನಿಮಿಷಗಳ ಕಾಲ ಅದನ್ನು ಪದೇಪದೇ ಸಾಧ್ಯವಾದಷ್ಟು ಬಾರಿ ಓದಿಕೊಳ್ಳಲು ಹೇಳಲಾಯಿತು. ಎರಡನೆಯ ಗುಂಪಿಗೆ ಕೂಡ ಅದೇ ಮಾಹಿತಿಯ ಒಂದೊಂದು ಪ್ರತಿಯನ್ನು ನೀಡಿ, ಓದಲು ಕೇವಲ ಐದು ನಿಮಿಷಗಳ ಅವಧಿ ನೀಡಲಾಯಿತು. ಅವಧಿ ಮುಗಿದ ಕೂಡಲೇಆ ಪ್ರತಿಗಳನ್ನು ಪ್ರತಿಯೊಬ್ಬರಿಂದಲೂ ಹಿಂಪಡೆಯಲಾಯಿತು. ಇಪ್ಪತ್ತು ನಿಮಿಷಗಳ ನಂತರ ಮೊದಲು ಗುಂಪು ನಿರ್ಗಮಿಸಿದಾಗ ಎರಡನೆಯ ಗುಂಪಿಗೆ ಖಾಲಿ ಹಾಳೆಗಳನ್ನು ನೀಡಿ, ತಮಗೆ ನೆನಪಿರುವಷ್ಟು ಮಾಹಿತಿಯನ್ನು ಅದರಲ್ಲಿ ಬರೆಯುವಂತೆ ಹೇಳಲಾಯಿತು. ಕೆಲವು ನಿಮಿಷಗಳ ನಂತರ ಅವರು ಬರೆದಿರುವುದನ್ನು ವಾಪಸ್ ಪಡೆದು, ಮತ್ತೊಂದು ಖಾಲಿ ಹಾಳೆಯ ಮೇಲೆ ಮತ್ತೊಮ್ಮೆ ನೆನಪಿರುವಷ್ಟನ್ನು ಬರೆಯಲು ಹೇಳಿದರು. ಇದೇ ಪ್ರಕ್ರಿಯೆಯನ್ನು ಮೂರನೆಯ ಬಾರಿಯೂ ಮಾಡಿದರು. ಯಾರು ಎಷ್ಟು ಬರೆದರೆಂಬ ಯಾವುದೇ ವಿವರಣೆಯನ್ನೂ ಯಾರಿಗೂ ನೀಡಲಿಲ್ಲ. ಕೆಲವು ದಿನಗಳ ನಂತರ ಆ ಎರಡೂ ಗುಂಪಿನ ವಿದ್ಯಾರ್ಥಿಗಳನ್ನು ಕರೆಸಿ, ಖಾಲಿ ಹಾಳೆಯ ಮೇಲೆ ಹಿಂದೆ ಓದಿದ್ದ ಮಾಹಿತಿಯನ್ನು ನೆನಪಿರುವಷ್ಟು ಬರೆಯಲು ಹೇಳಿದರು. ಇಪ್ಪತ್ತು ನಿಮಿಷಗಳ ಕಾಲ ಮಾಹಿತಿಯನ್ನು ಪದೇಪದೇ ಓದಿದ್ದ ಮೊದಲನೆಯ ಗುಂಪಿನ ವಿದ್ಯಾರ್ಥಿಗಳು ಸರಾಸರಿ ಶೇಕಡ ನಲವತ್ತು ಭಾಗ ಬರೆದಿದ್ದರು. ಅಚ್ಚರಿ ಎನ್ನುವಂತೆ, ಕೇವಲ ಐದು ನಿಮಿಷಗಳ ಕಾಲ ಮಾಹಿತಿಯನ್ನು ಓದಿ, ಮೂರು ಬಾರಿ ಅದನ್ನು ಮರುಕಳಿಕೆ ಮಾಡಿದ್ದ ಎರಡನೆಯ ಗುಂಪಿನ ವಿದ್ಯಾರ್ಥಿಗಳು ಸರಾಸರಿ ಶೇಕಡ ಅರವತ್ತೆರಡು ಭಾಗದ ಮಾಹಿತಿಯನ್ನು ಬರೆದಿದ್ದರು.

ಇಂತಹುದೇ ಅಧ್ಯಯನಗಳು ಅನೇಕ ವಿಧಾನಗಳಲ್ಲಿ ನಡೆದಿವೆ. ಪ್ರತಿಬಾರಿಯೂ ಪದೇಪದೇ ಓದುವುದಕ್ಕಿಂತ, ಓದಿನ ಮರುಕಳಿಕೆಯಿಂದ ಲಾಭವನ್ನು ಗಳಿಸಬಹುದು. ಓದಿದ್ದನ್ನು ಮೆಲುಕು ಹಾಕುವುದು ಸರಳವಾದರೂ ಪರಿಣಾಮಕಾರಿ ಕಲಿಕೆಯ ವಿಧಾನ ಎಂದು ತಜ್ಞರ ಅಭಿಪ್ರಾಯ. ಆದರೆ ನಮ್ಮ ವ್ಯವಸ್ಥೆಯಲ್ಲಿ ಇದರ ಬಳಕೆ ಕಡಿಮೆ. ಓದಿದ್ದನ್ನೇ ಮತ್ತೆ ಮತ್ತೆ ಓದಲು ಇರುವ ಪ್ರೋತ್ಸಾಹ, ಅದರ ವ್ಯವಸ್ಥಿತ ಮೆಲುಕು ಹಾಕುವುದರಲ್ಲಿ ಇಲ್ಲ. ಈ ವಿಧಾನ ಶಾಲೆಯಿಂದ ಹಿಡಿದು ಕಾಲೇಜು ವಿದ್ಯಾರ್ಥಿಗಳವರೆಗೆ ಪ್ರತಿಯೊಂದು ವಯೋಮಾನದವರಿಗೂ ಸಾಫಲ್ಯ ನೀಡುತ್ತದೆ. ಹೀಗೆ ಮೆಲುಕು ಹಾಕುವುದನ್ನು ಕಾಲಕಾಲಕ್ಕೆ ಆಗಾಗ ಮಾಡುವುದು ಹೆಚ್ಚು ಪರಿಣಾಮಕಾರಿ. ಸಮರ್ಥವಾಗಿ ಬಳಸಿಕೊಂಡರೆ ಓದಿನ ಕುರಿತಾದ ಆಸಕ್ತಿ ಹೆಚ್ಚಿ, ಕಲಿಕೆಯ ಆಳ ಮತ್ತು ವಿಸ್ತಾರಗಳೂ ಹೆಚ್ಚುತ್ತವೆ ಎಂದು ಸಾಬೀತಾಗಿದೆ.

ನಿರಂತರ ಕಲಿಕೆಯ, ತಾನು ಕಲಿತದ್ದನ್ನು ಮತ್ತೊಬ್ಬರಿಗೆ ಹೇಳಿಕೊಡುವ ವಿಧಾನಗಳನ್ನು ಅಳವಡಿಸಿಕೊಂಡಿರುವ ಶಿಕ್ಷಣ ವ್ಯವಸ್ಥೆ ನಮ್ಮ ಆಧುನಿಕ ಕಲಿಕೆಯ ಸೂಕ್ಷ್ಮತೆಯನ್ನು, ಸಾಮರ್ಥ್ಯವನ್ನು ಹೆಚ್ಚಿಸಬಲ್ಲವು ಎಂಬುದು ವೈಜ್ಞಾನಿಕವಾಗಿ ಧೃಢಪಟ್ಟಿದೆ. ಇದಕ್ಕೆ ಪೂರಕವಾದ ಕಲಿಕೆಯ ಪದ್ದತಿಗಳನ್ನು ಅಳವಡಿಸಿಕೊಳ್ಳಬಲ್ಲ ವಿಧಾನಗಳನ್ನು ಶಿಕ್ಷಣನೀತಿಯಲ್ಲಿ ಸೇರ್ಪಡೆಗೊಳಿಸುವುದು ಸೂಕ್ತ. ಆರಂಭದ ಹಂತದಿಂದಲೇ ಕಲಿಯುವಿಕೆ ಮತ್ತು ಕಲಿಸುವಿಕೆ ಜೊತೆಗೂಡಿ ಸಾಗಿದರೆ ಸಮಾಜಕ್ಕೆ ಉತ್ತಮ ಶಿಕ್ಷಕರನ್ನು ನೀಡುವ ಸಾಧ್ಯತೆಗಳು ವೃದ್ಧಿಸುತ್ತವೆ. ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣನೀತಿ ಗಮನ ಹರಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.