ADVERTISEMENT

ಅಳುವು ಸಹಜದ ಧರ್ಮ, ಅಳಿಸುವುದು ಪರಧರ್ಮ

ಅಳುವ ಕಡಲೊಳು... ನಗೆಯ ಹಾಯಿದೋಣಿ

ಎಸ್.ದಿವಾಕರ್
Published 15 ಮೇ 2021, 19:30 IST
Last Updated 15 ಮೇ 2021, 19:30 IST
ಎಡ್ವರ್ಡ್ ಮಂಖ್‍ನ ‘ದಿ ಶ್ರೀಕ್’ ಕಲಾಕೃತಿ ಕೃಪೆ: ವಿಕಿಕಾಮನ್ಸ್‌
ಎಡ್ವರ್ಡ್ ಮಂಖ್‍ನ ‘ದಿ ಶ್ರೀಕ್’ ಕಲಾಕೃತಿ ಕೃಪೆ: ವಿಕಿಕಾಮನ್ಸ್‌   

ಮನೆಯಲ್ಲಿರಲಾಗದ, ಹೊರಗೆ ಹೆಜ್ಜೆಯಿಡಲಾಗದ ತ್ರಿಶಂಕು ಸ್ಥಿತಿ ನಮ್ಮದು. ಕಣ್ಣಿಗೆ ಕಾಣದ ಸಾಂಕ್ರಾಮಿಕವೊಂದು ತನ್ನ ದೈತ್ಯ ಪಾದಗಳನ್ನೂರಿ ಸಹಸ್ರ ಸಹಸ್ರ ಬಾಹುಗಳಿಂದ ನಮ್ಮೆಲ್ಲರನ್ನೂ ಬಂಧಿಸತೊಡಗಿದೆ. ಎಲ್ಲಿ ನೋಡಿದರೂ ಅಸಹಾಯಕತೆ, ನೋವು, ಯಾತನೆ, ಸಾವು. ಪರಿಸ್ಥಿತಿ ಹೀಗಿರುವಾಗ ಯಾರಿಗಾದರೂ ಅಳದೆ ಇರಲಾದೀತೆ?

ನನಗೀಗ ಪ್ರಸಿದ್ಧ ಜರ್ಮನ್ ಲೇಖಕ ಗ್ಯುಂಥರ್ ಗ್ರಾಸ್ ಬರೆದಿರುವ ‘ದಿ ಟಿನ್ ಡ್ರಮ್’ ಎಂಬ ಕಾದಂಬರಿ ನೆನಪಾಗುತ್ತಿದೆ. ಈ ಕಾದಂಬರಿಯ ನಾಯಕ ಆಸ್ಕರ್ ಮತ್ಜೆರಾತ್ ಒಂದು ಹುಚ್ಚಾಸ್ಪತ್ರೆಯಲ್ಲಿ ಇದ್ದುಕೊಂಡು ತನ್ನ ಸುತ್ತ ನಡೆಯುತ್ತಿರುವ ಭೀಕರ ಘಟನೆಗಳಿಗೆ ಪ್ರತಿಕ್ರಿಯಿಸುತ್ತಿರುವವನು. ಜರ್ಮನಿಯಲ್ಲಿ ನಾಜಿಗಳು ಪ್ರಬಲರಾಗುತ್ತಿದ್ದ ಸಮಯದಲ್ಲಿ ತನಗೆ ಮೂರು ವರ್ಷ ತುಂಬಿದ್ದೇ ತಾನು ಬೆಳೆಯಲೇಬಾರದೆಂದು ನಿರ್ಧರಿಸುವ ಈತ, ದೈಹಿಕವಾಗಿ ಬೆಳೆಯದಿದ್ದರೂ ಬೌದ್ಧಿಕವಾಗಿ ಬೆಳೆದುಬಿಡುವವನು; ಜೊತೆಗೆ ಬೇರೆ ಯಾರಿಗೂ ಸಾಧ್ಯವಾಗದಂತೆ ಕಿರಿಚಿಕೊಳ್ಳುವ, ಆ ಮೂಲಕ ಗಾಜುಗಳನ್ನು ಪುಡಿಗಟ್ಟುವ ಅತಿಮಾನುಷ ಶಕ್ತಿಯೊಂದನ್ನು ಬೆಳೆಸಿಕೊಳ್ಳುವವನು. ಗಾಜು ಪುಡಿಗಟ್ಟುವ ಅವನ ಆ ಶಕ್ತಿಯುಂಟಲ್ಲ, ಅದು ಕಣ್ಣು, ಕಿವಿ, ಪ್ರಜ್ಞೆಗಳನ್ನು ಕಳೆದುಕೊಂಡ ಒಂದು ವ್ಯವಸ್ಥೆಯನ್ನು ಬಡಿದೆಚ್ಚರಿಸುವ ಸಂಕೇತ. ಇರಲಿ, ಇದು ಹೇಳಿಕೇಳಿ ಕಾದಂಬರಿ. ಆದರೆ ನಮ್ಮ ಅಳುವಿಗೆ ಅಥವಾ ರೋದನಕ್ಕೆ ಅಂಥ ಶಕ್ತಿಯಾದರೂ ಎಲ್ಲಿದೆ? ಸದ್ಯ ನಮಗೆ ‘ಅಳುವು ಸಹಜದ ಧರ್ಮ; ಅಳಿಸುವುದು ಪರಧರ್ಮ’!

ಸತ್ಯಜಿತ್ ರಾಯ್‌ಅವರ ‘ಪಥೇರ್ ಪಾಂಚಾಲಿ’ ಚಿತ್ರದ ಕೊನೆಯಲ್ಲಿರುವ ಒಂದು ದಾರುಣ ದೃಶ್ಯವನ್ನು ತೆಗೆದುಕೊಳ್ಳಿ. ಮನೆಯ ಯಜಮಾನ ಹರಿಹರ್ ಕಾಶಿಯಿಂದ ಹಿಂತಿರುಗುವ ಹೊತ್ತಿಗೆ ಅವನ ಮನೆ ಹಾಳುಬಿದ್ದಿರುತ್ತದೆ. ಅವನ ಮಗಳು ದುರ್ಗಾ ನ್ಯುಮೋನಿಯಾದಿಂದ ಸತ್ತಿರುತ್ತಾಳೆ. ಹೆಂಡತಿ ಸರ್ಬಜಯಾ ಅತೀವ ದುಃಖದಲ್ಲಿರುತ್ತಾಳೆ. ಸತ್ಯಜಿತ್ ರಾಯ್‌ ಅವಳ ಮಿತಿಮೀರಿದ ದುಃಖವನ್ನು ಹೇಗೆ ದೃಶ್ಯೀಕರಿಸಿದ್ದಾರೆಂದರೆ ಚಿತ್ರದಲ್ಲಿ ಆ ದುಃಖಭಾವ ಸರ್ಬಜಯಾಳ ಧ್ವನಿಯಲ್ಲಿ ಅಭಿವ್ಯಕ್ತಗೊಳ್ಳುವುದಿಲ್ಲ; ಅದು ಅಭಿವ್ಯಕ್ತಗೊಳ್ಳುವುದು ಅವಳು ಆ ಎಂದು ಬಾಯಿ ತೆರೆದಿರುವ ಚಿತ್ರಿಕೆಯಲ್ಲಿ. ಶಹನಾಯ್ ತಾರಸ್ಥಾಯಿಯಲ್ಲಿ ನುಡಿಸಿರುವ ಕೆಲವು ಸ್ವರಗಳಿಂದಾಗಿ ಸರ್ಬಜಯಾಳ ಆ ರೋದನ ತೀವ್ರವಾಗಿರುವುದಲ್ಲದೆ ಅದೊಂದು ಸಾರ್ವತ್ರಿಕವೆನಿಸುವ ಹೃದಯಸ್ಪರ್ಶಿ ಅನುಭವವಾಗಿಯೂ ಮಾರ್ಪಟ್ಟಿದೆ.

ADVERTISEMENT

ಚಿತ್ರೀಕರಣದ ಸಮಯದಲ್ಲಿ ಈ ಸನ್ನಿವೇಶ ರೇ ಅವರ ಮನಸ್ಸಿನಲ್ಲಿರಲಿಲ್ಲ. ಹಿಂದಿನ ದಿನ ಅವರು ಸರ್ಬಜಯಾ ಪಾತ್ರಧಾರಿ ಕರುಣಾ ಬ್ಯಾನರ್ಜಿಯವರಿಗೆ ಆ ಸಂದರ್ಭವನ್ನು ವಿವರಿಸುವ ಒಂದು ಚೀಟಿ ಕಳಿಸಿ, ಅದರಲ್ಲಿ ‘ಅಳುವುದರಿಂದ ನಿನ್ನ ಮುಖ ವಿರೂಪಗೊಳ್ಳಬಹುದೆಂಬ ಅಂಜಿಕೆ ಬೇಡ. ಒಂದುವೇಳೆ ವಿರೂಪಗೊಂಡರೂ ಚಿಂತೆ ಇಲ್ಲ. ನಿನಗೆ ಹೇಗೆ ಸ್ವಾಭಾವಿಕವೆನ್ನಿಸುತ್ತದೋ ಹಾಗೆ ಅಳು’ ಎಂದು ಬರೆದಿದ್ದರಂತೆ. ಆದರೆ ಎಡಿಟಿಂಗ್ ಕೊಠಡಿಯಲ್ಲಿ ಅವರಿಗೆ ಧ್ವನಿಗಷ್ಟೇ ಸಾಧ್ಯವಿರದ ಒಂದು ವಿಶೇಷ, ತೀವ್ರತಮ ಗುಣ ಆ ದೃಶ್ಯಕ್ಕೆ ಅಗತ್ಯವೆಂದು ತೋರಿತು. ಸಂಗೀತವನ್ನು ಸೇರಿಸಿದ ಮೇಲೆ ಕರುಣಾರ ಅಳುದನಿಯನ್ನೂ ಇರಿಸಿಕೊಂಡರೆ ಹೇಗೆ? ಸಂಗೀತ ಮತ್ತು ಅಳು ಪರಸ್ಪರ ಪರಿಣಾಮಕಾರಿ ಆಗುವುದಿಲ್ಲವೆಂದು ತೋರಿತು. ಹಾಗೆಂದು ಅವರು ಕರುಣಾ ಅವರಿಗೆ ಹೇಳಲಿಲ್ಲವಂತೆ. ಸಿನಿಮಾ ನೋಡಿದಾಗ ಆಕೆಗೆ ಆಶ್ಚರ್ಯವಾಯಿತು, ತುಸು ನಿರಾಶೆಯೂ ಆಯಿತು. ಆದರೇನು, ರಾಯ್ ಅವರ ಕಲ್ಪನೆ ಅತೀವ ದುಃಖಕ್ಕೊಂದು ಮಹೋಪಮೆಯಾಯಿತಷ್ಟೆ.

ಈ ದೃಶ್ಯವನ್ನು ರೂಪಿಸುವ ಮುನ್ನ ರಾಯ್ ಅವರ ಮನಸ್ಸಿನಲ್ಲಿ ಎಡ್ವರ್ಡ್ ಮಂಖ್‍ನ ‘ದಿ ಶ್ರೀಕ್’ ಎಂಬ ಪೇಂಟಿಂಗ್ ಇದ್ದಿರಲಾರದು. ಆದರೆ ಅವರು ಸ್ವತಃ ಕಲಾವಿದರಾಗಿದ್ದರಿಂದ ಯಾವುದಾದರೊಂದು ಪುಸ್ತಕದಲ್ಲಿ ಆ ಪೇಂಟಿಂಗಿನದೊಂದು ಪ್ರಿಂಟನ್ನಾದರೂ ನೋಡಿದ್ದಿರಬೇಕು; ಹಾಗೆ ನೋಡಿದ್ದು ಅವರ ಸುಪ್ತಪ್ರಜ್ಞೆಯಲ್ಲೆಲ್ಲೋ ಅನುರಣಿಸುತ್ತಿದ್ದಿರಲಿಕ್ಕೆ ಸಾಕು.

ನಾರ್ವೆಯ ಕಲಾವಿದ ಎಡ್ವರ್ಡ್ ಮಂಖ್ 1893-1895ರ ಅವಧಿಯಲ್ಲಿ ಚಿತ್ರಿಸಿದ ಪೇಂಟಿಂಗ್ ‘ದಿ ಶ್ರೀಕ್’. ಇದರ ನಾಲ್ಕು ಅವತರಣಿಕೆಗಳಿವೆ - ಲಿಥೋಗ್ರಾಫ್, ಟೆಂಪೆರಾ, ಪ್ಯಾಸ್ಟಲ್‌ ಮುಂತಾದ ಮಾಧ್ಯಮಗಳಲ್ಲಿ. ವಿನ್ಸೆಂಟ್ ವ್ಯಾಂಗೊ ತನ್ನ ‘ದಿ ಸ್ಟಾರಿ ನೈಟ್’ ಪೇಂಟಿಂಗಿನಲ್ಲಿ ಉಪಯೋಗಿಸಿದ ಹಾಗೆ ಮಂಖ್ ಕೂಡ ಈ ಪೇಂಟಿಂಗಿನಲ್ಲಿ ತೀವ್ರವೇಗದ ಚಲನೆಯನ್ನು ಉಂಟುಮಾಡುವುದಕ್ಕಾಗಿ ಸುಳಿ ಸುತ್ತುವ ರೇಖೆಗಳನ್ನು ಉಪಯೋಗಿಸಿದ್ದಾನೆ. ಇಲ್ಲಿರುವ ಸೇತುವೆ, ಎಡಭಾಗದಲ್ಲಿರುವ ಇನ್ನೆರಡು ಮಾನವ ರೂಪಗಳು, ದೂರದಲ್ಲಿ ನೀರಲ್ಲಿರುವ ಬೋಟುಗಳು, ಎಲ್ಲವೂ ಪೆಡಸಾದ ರೇಖೆಗಳಲ್ಲಿವೆ. ಎಡ ಭಾಗದ ಎರಡು ಮಾನವ ರೂಪಗಳು ಸರಳವಾಗಿವೆ, ಅಮೂರ್ತವಾಗಿವೆ. ಆದರೂ ಅವು ಅಷ್ಟೇನೂ ವಿರೂಪಗೊಳ್ಳದೆ ಮುಖ್ಯ ಮಾನವ ರೂಪವನ್ನು ಪ್ರತ್ಯೇಕಿಸುವಂತಿವೆ.

ವಿಶಿಷ್ಟ ಭಾವನೆಯನ್ನೂ ನಾಟಕೀಯ ಅಭಿವ್ಯಕ್ತಿಯನ್ನೂ ಸಾಧಿಸುವುದಕ್ಕಾಗಿ ಮಂಖ್ ಇಲ್ಲಿ ಉಪಯೋಗಿಸಿರುವ ಬಣ್ಣಗಳು ವಾಸ್ತವಿಕತೆಗಿಂತ ಮಿಗಿಲಾಗಿ ವಿಚಾರವೊಂದನ್ನು ಸ್ಫುರಿಸುವಂತಿವೆ. ಹಿನ್ನೆಲೆಯಲ್ಲಿ ಸೂರ್ಯಾಸ್ತಕ್ಕಾಗಿ ಬಳಕೆಯಾಗಿರುವುದು ಢಾಳಾದ ಕೆಂಪು, ಕಿತ್ತಳೆ ಬಣ್ಣಗಳು; ಉಳಿದೆಲ್ಲಕ್ಕೂ ಮಂಕಾದ ನೀಲಿ, ಹಸಿರು, ನೇರಳೆ ಮತ್ತು ಬೂದು ಬಣ್ಣಗಳು. ಮತ್ತೆ ಬಣ್ಣಗಳ ಈ ತಾರತಮ್ಯವೇ ಸೂರ್ಯಾಸ್ತದ ಕಡುಗೆಂಪಿನ ತೀವ್ರತೆಯನ್ನೂ ಸೇತುವೆಯ ಮೇಲಿರುವ ಪೈಶಾಚಿಕ ರೂಪದ ಭೀಕರ ನಾಟಕೀಯತೆಯನ್ನೂ ಸ್ಪಷ್ಟಪಡಿಸುವಂತಿದೆ.

ಮಂಖ್ ತನ್ನ ಜೀವಿತ ಕಾಲದಲ್ಲಿ ಖಿನ್ನತೆ, ನಿರಾಶೆ, ಕಾಯಿಲೆಗಳಿಂದ ಬಳಲಿದವನು. ಐದನೇ ವಯಸ್ಸಿಗೆ ಅವನ ತಾಯಿ, ಹದಿಮೂರನೆಯ ವರ್ಷಕ್ಕೆ ಅವನ ಒಬ್ಬ ಸೋದರಿ ಕ್ಷಯರೋಗಕ್ಕೆ ಬಲಿಯಾದರು. ಇನ್ನೊಬ್ಬ ಸೋದರಿ ಮಾನಸಿಕ ವ್ಯಾಧಿಯಿಂದ ಹುಚ್ಚಾಸ್ಪತ್ರೆಗೆ ಸೇರಿದಳು. ಅವನ ತಂದೆಯಾದರೋ, ದಬ್ಬಾಳಿಕೆಯ ಪ್ರತಿರೂಪ. ಇದು ಸಾಲದೆಂಬಂತೆ ಕಲಾರಸಿಕರು ಅವನ ಅದುವರೆಗಿನ ಚಿತ್ರಗಳನ್ನು ಇಷ್ಟಪಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ನೋಡಿದಾಗ ಈ ಪೇಂಟಿಂಗು ಅವನದೇ ಯಾತನಾಮಯ ಮನಸ್ಸಿನ ಪ್ರತಿಫಲನ ಎನ್ನಬಹುದೇನೊ.

ಈ ಪೇಂಟಿಂಗು ಪ್ರಸಿದ್ಧವಾಗಿರುವುದಕ್ಕೆ ಇದರಲ್ಲಿರುವ ಕಾಲಾತೀತ ಧ್ವನಿಯೂ ಕಾರಣವಾಗಿರಬಹುದು. ನಾವೆಲ್ಲರೂ ಒಂದಲ್ಲ ಒಂದು ಕಾಲದಲ್ಲಿ ಚಿಂತೆಯನ್ನೋ ವ್ಯಾಕುಲತೆಯನ್ನೋ ಅನುಭವಿಸಿದವರೇ ಅಲ್ಲವೆ? ಅಂಥ ಅನುಭವವನ್ನು ಇಮ್ಮಡಿಸುವಂತಿರುವ ನಮ್ಮ ಈ ಕಾಲದಲ್ಲಿ ಕೂಡ ಈ ಪೇಂಟಿಂಗು ನಿರಂತರವಾದ ಭಯಭೀತಿಯ ಚೀತ್ಕಾರವೊಂದರಲ್ಲಿ ಘನೀಭವಿಸಿದಂತಿರುವ ನಮ್ಮನ್ನೇ ನಮಗೆ ತೋರಿಸಿಕೊಡುವಂತಿದೆ. ಇದರಲ್ಲಿರುವುದು ನಮ್ಮ ಆತಂಕ, ನಮ್ಮ ನೋವು, ನಮ್ಮ ಯಾತನೆ, ಮಾನಸಿಕ ತುಮುಲ, ನಮ್ಮ ನಿಶ್ಶಬ್ದ ಚೀತ್ಕಾರ.

ಈ ಪೇಂಟಿಂಗಿನ ರೂಪರೇಖೆ ಸಿದ್ಧವಾಗುವುದಕ್ಕೆ ಒಂದು ವರ್ಷ ಮುಂಚೆಯೇ ಮಂಖ್‍ಗೆ ಇದರ ಅಂತರಾರ್ಥದ ದರ್ಶನವಾಗಿತ್ತು. ಅವನು 1892ರ ಜನವರಿ 22ರಂದು ತನ್ನ ಡೈರಿಯಲ್ಲಿ ಬರೆದಿಟ್ಟ ಕವನ ಇದು:

ನಡೆಯುತ್ತಿದ್ದೆ ಗೆಳೆಯರಿಬ್ಬರ ಜೊತೆ

ಮುಳುಗುತ್ತಿರುವಾಗ ಸೂರ್ಯ; ಇದ್ದಕಿದ್ದಂತೆ

ಕೆಂಪೇರಿತು ಆಕಾಶ ನೆತ್ತರಿನಂತೆ.

ಹೇಳಿಕೊಳ್ಳಲಾಗದಷ್ಟು ಸುಸ್ತೋ ಸುಸ್ತು ನನಗೆ;

ನಿಂತುಕೊಂಡುಬಿಟ್ಟೆ ಒರಗಿಕೊಂಡು ಬೇಲಿಗೆ.

ನೀಲಿಗಟ್ಟಿದ ಕಪ್ಪು ಕಡಲ ತೀರದ ಮೇಲೆ

ಚಾಚುತ್ತಿರುವ ಬೆಂಕಿ, ನೆತ್ತರಿನ ನಾಲಗೆ.

ಹೊರಟುಹೋದರು ಗೆಳೆಯರು ಮುಂದೆ ಮುಂದೆ

ಉಳಿದೇಬಿಟ್ಟೆ ಅಂಜಿಕೆಯಿಂದ ನಡುಗುತ್ತ ಹಿಂದೆ ಹಿಂದೆ

ಅದಾಗ ಕೇಳಿಸಿತೊಂದು ಅನಂತಾನಂತ ಸ್ಫೋಟ

ನಿಸರ್ಗದೊಂದು ಚೀತ್ಕಾರ, ಬಹು ಭಯಂಕರ ಕಿರಿಚಾಟ

ಮಂಖ್‍ನ ಕಾಲದಲ್ಲಿ ಪ್ರಚಲಿತವಾಗಿದ್ದದ್ದು ಸಂಕೇತವಾದೀ ಶೈಲಿಯ ಕಲಾಪಂಥ. ಆದರೂ ಅವನು ಈ ಪೇಂಟಿಂಗಿನಲ್ಲಿ ವಾಸ್ತವವಾದೀ ಶೈಲಿಯನ್ನು ಬಿಟ್ಟುಕೊಟ್ಟು, ಅವಾಸ್ತವಿಕವೆನಿಸುವ ಶೈಲಿಯೊಂದನ್ನು ಅನುಸರಿಸುವ ಮೂಲಕ ಅಸ್ತಿತ್ವವಾದೀ ಕ್ಷೋಭೆಯ ಕ್ಷಣವೊಂದನ್ನು ಹಿಡಿದುಕೊಟ್ಟ. ಇದು ಮುಂದೆ ಅಭಿವ್ಯಕ್ತಿವಾದೀ (ಎಕ್ಸ್‌ಪ್ರೆಶನಿಸಂ) ಕಲಾಪಂಥಕ್ಕೆ ಬುನಾದಿಯಾಯಿತು.

ಪ್ರಪಂಚದ ಜೀವಕೋಟಿಯಲ್ಲಿ ಮನುಷ್ಯನೊಬ್ಬನೇ ಅಳುತ್ತಾನಂತೆ. ಆದರೂ ಅನೇಕ ಭಾಷೆಗಳಲ್ಲಿ ‘ಮೊಸಳೆ ಕಣ್ಣೀರು’ ಎಂಬ ರೂಪಕವಿದೆ. (ಅಮೆರಿಕದ ಅಧ್ಯಕ್ಷನಾಗಿದ್ದ ಲಿಂಡನ್ ಜಾನ್ಸನ್ನನ ‘ಅನುಕಂಪ’ ವನ್ನು ಲೇವಡಿಮಾಡಿದ ವ್ಯಂಗ್ಯಚಿತ್ರ ಬಹು ಪ್ರಸಿದ್ಧ). ಮೊಸಳೆ ಕಣ್ಣೀರಿನ ಸತ್ಯಾಸತ್ಯತೆಯನ್ನು ಕಂಡುಹಿಡಿಯುವುದಕ್ಕಾಗಿ ಅಮೆರಿಕದ ವೈಜ್ಞಾನಿಕ ಸಂಶೋಧಕರೊಬ್ಬರು ಬಗೆಬಗೆಯ ಮೊಸಳೆಗಳ ಕಣ್ಣುಗಳಿಗೆ ಈರುಳ್ಳಿಯ ರಸ ಬಿಟ್ಟು ನೋಡಿದರು. ಆದರೆ ಮೊಸಳೆಗಳ ಕಣ್ಣುಗಳಲ್ಲಿ ಮಾತ್ರ ಒಂದೇ ಒಂದು ಹನಿ ಒಸರಲಿಲ್ಲ!

ಪ್ರಸಿದ್ಧ ಮಾನವಶಾಸ್ತ್ರಜ್ಞ ಆಷ್ಲೀ ಮಾಂಟೆಗು ಬರೆದಿರುವ ‘ಮ್ಯಾನ್ ಇನ್ ಪ್ರಾಸೆಸ್’ ಎಂಬ ಪುಸ್ತಕದಲ್ಲಿ ‘ವೈ ಮ್ಯಾನ್ ವೀಪ್ಸ್’ ಎಂಬ ಅಧ್ಯಾಯವಿದೆ. ಅದರ ಸಾರಾಂಶ ಇಷ್ಟು: ಹುಟ್ಟಿದ ಮಗು ಸುಮಾರು ಹತ್ತು ವಾರ ತುಂಬುವವರೆಗೂ ಸಾಮಾನ್ಯವಾಗಿ ಅಳುವುದಿಲ್ಲ. ಆದ್ದರಿಂದ ಅಳು ಹುಟ್ಟಿನಿಂದಲ್ಲ, ತಡವಾಗಿ ಗಳಿಸಿಕೊಂಡ ವರ್ತನೆ. ಮಗುವಿಗೆ ಮೊದಲ ವರ್ಷ ಅಥವಾ ಅದಕ್ಕೂ ಹೆಚ್ಚು ಕಾಲ ಮಾತಾಡುವುದಕ್ಕೆ ಬರುವುದಿಲ್ಲ. ಆ ಅವಧಿಯಲ್ಲಿ ಅದು ತನ್ನ ಅಗತ್ಯಕ್ಕಾಗಿ ಅಳುವುದರ ಮೂಲಕವಷ್ಟೇ ಇತರರ ಗಮನ ಸೆಳೆಯಬಲ್ಲುದು.

ಅಳುವುದಿದೆಯಲ್ಲ, ಅದು ಭೌತಿಕ ಕಾರ್ಯಗಳ ಜೊತೆಗೆ ಒಂದು ಅತ್ಯಂತ ಮಹತ್ವದ ಸಂವಹನ ವಿಧಾನವೂ ಆಗಿದೆ. ನೋವಿನಿಂದ ಸುರಿಯುವ ಕಣ್ಣೀರಿಗೂ ಅತೀವಸಂತೋಷದಿಂದಸುರಿಯುವ ಆನಂದಬಾಷ್ಪಕ್ಕೂ ನಡುವೆ ಮನುಷ್ಯರು ಅಳುವುದಕ್ಕೆ ಕಾರಣವಾಗುವ ಸಂಗತಿಗಳ ಒಂದು ಸುದೀರ್ಘ ವ್ಯಾಪ್ತಿಯೇ ಇದೆ.

ಸಂದರ್ಭ ಯಾವುದೇ ಇರಲಿ, ಅಳುತ್ತಿರುವವರನ್ನು ಕಂಡಾಗ ನೋಡುವವರಲ್ಲಿ ಉಂಟಾಗುವುದು ಅನುಕಂಪ ಅಥವಾ ಸಹಾನುಭೂತಿ. ಅಳುವುದೆಂದರೆ ದುಃಖ ಯಾತನೆಗಳನ್ನು ವ್ಯಕ್ತಪಡಿಸುವ ಒಂದು ಶಕ್ತ ವಿಧಾನವಷ್ಟೇ ಅಲ್ಲ, ಬೇರೆಯವರ ಅನುಕಂಪವನ್ನೂ ನೆರವನ್ನೂ ಪಡೆದುಕೊಳ್ಳುವ ವಿಶಿಷ್ಟ ಮಾಧ್ಯಮವೂ ಹೌದು. ಆದ್ದರಿಂದ ಅಳುವಿನದು ಒಬ್ಬ ವ್ಯಕ್ತಿಯನ್ನು ಹೇಗೋ ಹಾಗೆ ಒಂದು ಸಮುದಾಯವನ್ನೂ ‘ಮಾನವೀಯ’ಗೊಳಿಸುವ, ದಯಾಮಯಗೊಳಿಸುವ ಪರಿಣಾಮ. ಕೆಲವು ಸಮಾಜಗಳಲ್ಲಿ ಬಹಿರಂಗವಾಗಿ ಅಳುವುದುನಿಷಿದ್ಧವಾಗಿರಬಹುದು.ಆದರೆ ಅಳುವೆನ್ನುವುದೊಂದು ಸಾಮಾಜಿಕವಾಗಿ ಪರಸ್ಪರ ಸಂಬಂಧವುಂಟುಮಾಡುವ ಶಕ್ತಿಯೆಂದು ಬಗೆದಿರುವ ನಮ್ಮಂಥ ದೇಶಗಳಲ್ಲಿ ಮನುಷ್ಯ ಮನುಷ್ಯರ ನಡುವೆ ಆಳವಾದ ಸ್ನೇಹಪರತೆ ಇರುವುದನ್ನು ಮರೆಯುವಂತಿಲ್ಲ.

ಒಂದು ವೇಳೆ ಅಂತಹ ಸ್ನೇಹಪರತೆ ಇಲ್ಲದಿದ್ದರೂ ಉಳ್ಳವರು ಕೆಲವರು ಅಳುವವರನ್ನು ನೇಮಿಸಿಕೊಂಡು ಅಳಿಸುವ ಪರಂಪರೆ ನಮ್ಮಲ್ಲಿದೆ. ಮಹಾಶ್ವೇತಾದೇವಿ ಅವರು ಬರೆದಿರುವ ‘ರುಡಾಲಿ’ ಹತಭಾಗ್ಯಳೊಬ್ಬಳ ಜೀವನವನ್ನು ಚಿತ್ರಿಸುವ ಕತೆ. ಶನಿಚರಿ ಎಂಬ ಈಕೆ ತನ್ನ ಹೆಸರೇ ಸೂಚಿಸುವಂತೆ ಶನಿವಾರ ಹುಟ್ಟಿದವಳು; ಆದ್ದರಿಂದ ಜೀವನದಲ್ಲಿ ಒಂದಿಷ್ಟು ಸುಖವೋ ಸಂಭ್ರಮವೋ ಇಲ್ಲದೆ ಬದುಕಬೇಕಾದವಳು. ಎಳೆಯ ವಯಸ್ಸಿನಲ್ಲೇ ತಬ್ಬಲಿಯಾಗುವ ಈಕೆ ತನ್ನ ಬಂಧುಗಳನ್ನು, ಗಂಡನನ್ನು, ಮಗನನ್ನು ಕಳೆದುಕೊಂಡ ಸಂದರ್ಭಗಳಲ್ಲಿ ಅಳುವುದಿಲ್ಲ. ಆದರೆ ಬದುಕುವುದಕ್ಕಾಗಿ ಉಳ್ಳವರ ಶವಸಂಸ್ಕಾರದ ಸಂದರ್ಭಗಳಲ್ಲಿ ಸಾರ್ವಜನಿಕವಾಗಿ ಎದೆಬಡಿದುಕೊಂಡು ಅಳುತ್ತಾಳೆ. ಅದೇ ಅವಳ ದಂಧೆಯಾಗುತ್ತದೆ. ಲೇಖಕಿ ಮಹಾಶ್ವೇತಾದೇವಿ ಪರಿಸ್ಥಿತಿಯ ವ್ಯಂಗ್ಯವನ್ನು ಸೂಕ್ಷ್ಮವಾಗಿ ಸೂಚಿಸುವ ಮೂಲಕ ಈ ಕತೆಯ ಭಾವತೀವ್ರತೆಯನ್ನು ಹೆಚ್ಚಿಸಿದ್ದಾರೆ.

ಈಗ ಅರ್ಜೆಂಟೀನಾದ ಸರ್‍ರಿಯಲಿಸ್ಟ್ ಕತೆಗಾರ, ಕಾದಂಬರಿಕಾರ ಹುಲಿಯೊ ಕೋರ್ತಜಾರ್ ರಚಿಸಿರುವ ಒಂದು ಗಪದ್ಯವನ್ನು ಓದಿ - ನನ್ನ ಅನುವಾದದಲ್ಲಿ:

ಅಳಬೇಕು ಹೇಗೆ?

ಈ ಕ್ಷಣ ಅಳುವಿನ ಕಾರಣವನ್ನು ಬದಿಗಿಟ್ಟು

ಗಮನ ಕೊಡೋಣ ಅಳುವುದರ ಬಗ್ಗೆ

ಅಳುವುದೆಂದರೆ ಹೇಗೆ

ಅದೂ ಸರಿಯಾಗಿ

ಭಾರೀ ಉದ್ವೇಗದಿಂದಲ್ಲ, ನಗುವಿಗೆ ಸಮನಾಗಲ್ಲ

ಕರಾರುವಾಕ್ಕಾಗಿ

ದಿನನಿತ್ಯದ ಅಳುವೆಂದರೆ ಮುಖ

ತುಸು ಹಿಂಡಿದಂತಾಗುತ್ತೆ, ಕಣ್ಣೀರಿನ ಜೊತೆ ಉಕ್ಕುಕ್ಕಿ

ಬರುತ್ತೆ ಮೂಗಲ್ಲಿ ತುಸುವೇ ತುಸು ನೀರು. ಅದೂ ಕೊನೆಗೆ.

ಯಾಕೆಂದರೆ ಜೋರಾಗಿ ಮೂಗು ಸೊರಗುಟ್ಟಿದ್ದೆ

ನಿಂತುಹೋಗುತ್ತೆ ಅಳು

ಅಳಬೇಕಾದರೆ ನೀವು ಯೋಚಿಸಬೇಕು ನಿಮ್ಮ ಬಗ್ಗೆ

ಹಾಗಿರದೆ ನೀವು ಹೊರಗಣ ಪ್ರಪಂಚವನ್ನೇ ನಂಬುವವರಾದರೆ

ಯೋಚಿಸಿ ಇರುವೆಗಳು ಮುತ್ತಿಕೊಂಡ

ಒಂದು ಬಾತುಕೋಳಿಯ ಬಗ್ಗೆ

ಅಥವಾ ಯಾರೂ ಯಾನಮಾಡಲಾಗದ

ಜಲಸಂಧಿಯ ಬಗ್ಗೆ

ಅಳುವ ವಿಷಯಕ್ಕೇ ಬರುವುದಾದರೆ ಎರಡೂ ಕೈಯಿಗಳಿಂದ

ಮುಖ ಮುಚ್ಚಿಕೊಳ್ಳಿ ಮುಚ್ಚಟೆಯಾಗಿ

ಮಕ್ಕಳು ತಮ್ಮ ಅಂಗಿಯ ತೋಳನ್ನು

ಮುಖಕ್ಕಿಟ್ಟುಕೊಂಡು ಅಳಬೇಕು ಸಾಧ್ಯವಾದರೆ

ರೂಮಿನೊಂದು ಮೂಲೆಯಲ್ಲಿ

ಅಳುವಿನ ಸರಾಸರಿ ಅವಧಿ ಮೂರು ನಿಮಿಷ

ಅಳುವೆನ್ನುವುದು ಮೂರು ನಿಮಿಷದಷ್ಟು ದೀರ್ಘವಾಗಿರಲಿ ಅಥವಾ ಮೂರು ಸೆಕೆಂಡಿನಷ್ಟು ಹ್ರಸ್ವವಾಗಿರಲಿ, ಅದು ಮನಸ್ಸಿನ ಮೇಲೆ ಉಂಟುಮಾಡುವ ಪರಿಣಾಮ ಮಾತ್ರ ಅನೂಹ್ಯ, ಅಪಾರ. ಅದೊಂದು ರೀತಿ ಸದಾ ನೋಯುವ ಗಾಯದಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.