ADVERTISEMENT

ಅಳು ಎಂಬ ಸಾಂತ್ವನ

ರಮ್ಯಾ ಶ್ರೀಹರಿ
Published 13 ಡಿಸೆಂಬರ್ 2021, 19:30 IST
Last Updated 13 ಡಿಸೆಂಬರ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಳು ಬಲಹೀನತೆಯ ಲಕ್ಷಣವಲ್ಲ; ಬಹುದೀರ್ಘಕಾಲ ಬದುಕಿನ ಹೋರಾಟದಲ್ಲಿ ಗಟ್ಟಿಯಾಗಿ ನಿಂತು, ಬಂದದ್ದನ್ನೆಲ್ಲಾ ಧೈರ್ಯವಾಗಿ ಎದುರಿಸುವ ಛಾತಿಯಿರುವವರೂ ಅಳುತ್ತಾರೆ.

***

ಮಾತು ಬಾರದ ಚಿಕ್ಕ ಮಕ್ಕಳು ದನಿ ತೆಗೆದು ಅಳುವುದು ಸಂವಹಿಸುವುದಕ್ಕಾಗಿ, ‘ನನಗೇನೋ ತೊಂದರೆ ಆಗಿದೆ, ಇಲ್ಲಿ ಗಮನ ಕೊಡು’ ಎಂದು ಹೇಳುವುದಕ್ಕಾಗಿ. ನಿಧಾನವಾಗಿ ಮಾತು ಕಲಿತ ಮೇಲೆ ಭಾವನೆಗಳ ಒತ್ತಡದಿಂದ ಉಮ್ಮಳಿಸಿ ಬರುವ ಕಣ್ಣೀರೂ ಕೂಡ ಸಂವಹಿಸುವುದಕ್ಕಾಗಿಯೇ. ತನ್ನ ನೋವನ್ನು ಬೇರೆಯವರಿಗೆ ನಿವೇದಿಸಿಕೊಂಡು ಅವರಿಂದ ಸಾಂತ್ವನ ಪಡೆಯುವುದಕ್ಕಾಗಿಯೇ. ಆದರೂ ಹಾಗೆಲ್ಲ ‘ಎಲ್ಲರ ಮುಂದೆ ಅಳುವುದು ಏನು ಚೆಂದ’ ಎನ್ನುತ್ತದೆ ಅಹಂ. ಸಹಜವಾದ ದುಃಖದ ಅಭಿವ್ಯಕ್ತಿಯಾದ ಕಣ್ಣೀರು ಎದೆಯ ಭಾರವನ್ನು ಕಡಿಮೆ ಮಾಡುವುದಲ್ಲದೆ, ದುಃಖವನ್ನು ಸಂಪೂರ್ಣವಾಗಿ ಅನುಭವಿಸುವ ಅವಕಾಶ ಮಾಡಿಕೊಡುವುದರಿಂದ ವಾಸ್ತವಕ್ಕೆ ಬೇಗ ಹೊಂದಿಕೊಳ್ಳುವ ಶಕ್ತಿಯನ್ನೂ ನೀಡುತ್ತದೆ. ಎಷ್ಟೋ ಬಾರಿ ಬಿಕ್ಕಳಿಸಿ ಜೋರಾಗಿ ಅತ್ತು ಹೊರಳಾಡಿದ ನಂತರ ಎಲ್ಲ ನಿಚ್ಚಳವಾಗಿ ಕಾಣಲಾರಂಭಿಸಿ ಹೊಸದಾಗಿ ಮತ್ತೆ ಉತ್ಸಾಹ ಮೂಡುತ್ತದೆ. ಅತ್ತ ನಂತರದ ನಮ್ಮದೇ ಮುಖ ಅತ್ಯಂತ ಶುದ್ಧವಾಗಿಯೂ ಸುಂದರವಾಗಿಯೂ ಇದೆ ಎನಿಸಿ ನಮ್ಮ ಬಗ್ಗೆ ನಮಗಿರುವ ಕಹಿ ಭಾವವೂ ಕರಗಿಹೋದಂತೆ ಅನಿಸುತ್ತದೆ.

ADVERTISEMENT

ಅಳುವಿಗೆ ಆಳವಾದ ಅರ್ಥವಿದೆ. ಪ್ರತಿಯೊಬ್ಬರೂ ಅಳುವಿನ ಅರ್ಥವನ್ನು ತಮ್ಮ ಬದುಕಿನ ಹಿನ್ನೆಲೆಯಲ್ಲಿ ಕಂಡುಕೊಂಡಿರುತ್ತಾರೆ. ಹಾಗಾಗಿ ಯಾರಾದರೂ ಅಳುತ್ತಿದ್ದರೆ ‘ಅಳಬೇಡ’ ಎಂದು ಹೇಳುವುದೂ, ‘ಇಂಥ ಸನ್ನಿವೇಶದಲ್ಲಿ ಅತ್ತುಬಿಡಬೇಕು, ಅಳು’ ಎಂದು ಬಲವಂತಪಡಿಸುವುದೂ ಎರಡೂ ಪ್ರಯೋಜನವಿಲ್ಲದ್ದು. ಅಳುತ್ತಿರುವವರಿಗೆ ‘ನಿನ್ನ ದುಃಖ ಅರ್ಥವಾಗುತ್ತಿದೆ’ ಎಂದು ನಮ್ಮ ದೇಹಭಾಷೆಯ ಮೂಲಕ ತಿಳಿಯಪಡಿಸಬಹುದು. ಅವರೊಂದಿಗೆ ‘ನಿನ್ನ ಮನಬಂದಂತೆ ಅಳುವುದಕ್ಕೆ ಇಲ್ಲಿ ಅವಕಾಶವಿದೆ, ಹೆದರಬೇಡ’ ಎಂಬ ನಂಬಿಕೆ ಬರುವಂತೆ ನಡೆದುಕೊಂಡರೆ ಸಾಕು.

ಕೆಲವೊಬ್ಬರು ತಮ್ಮ ಅಳುವಿಗೆ ಬೆಲೆಯಿಲ್ಲವೆಂದೋ, ಅಳುವುದು ಅಥವಾ ಭಾವನೆಗಳನ್ನು ತೋರ್ಪಡಿಸುವುದು ಅವಮಾನಕಾರಿಯಾದುದು, ಅದು ತಮ್ಮನ್ನು ದುರ್ಬಲ ಎಂದು ಚಿತ್ರಿಸುತ್ತದೆಯಾದ್ದರಿಂದ ಬೇರೆಯವರು ತಮ್ಮ ಅಸಹಾಯಕತೆಯ ಲಾಭ ಪಡೆಯಬಹುದೆಂಬ ಭಯದಿಂದಲೋ, ಅಳುವುದಿಲ್ಲ. ಹಾಗೆಯೇ ಕೆಲವರು ಅತಿಯಾದ ದುಃಖ, ನಷ್ಟಗಳಿಂದ ಮರಗಟ್ಟಿಹೋಗಿರುತ್ತಾರೆ; ಅಳುವಿನಿಂದ ಅತಿ ಹೆಚ್ಚು ನಿರಾಳತೆ ಪಡೆಯಬಲ್ಲವರು ಇಂಥವರೇ ಆಗಿದ್ದರೂ ಅಳುವುದು ಅವರಿಗೆ ಸಾಧ್ಯವಾಗುವುದಿಲ್ಲ. ಎಷ್ಟೋ ಸಾರಿ ನಾವು ‘ಅರೇ, ಇಷ್ಟು ಸಣ್ಣ ವಿಷಯಕ್ಕೆ ಅಷ್ಟೊಂದು ಅಳುವುದಾ’ ಎಂದು ಯಾರ ಬಗ್ಗೆಯಾದರೂ ಅಂದುಕೊಳ್ಳುತ್ತೇವೆ. ಬೇರೆಯವರ ಕಣ್ಣೀರು ಅಷ್ಟು ಸುಲಭವಾಗಿ ಕೆಲವೊಮ್ಮೆ ನಮಗೆ ಅರ್ಥವಾಗುವುದಿಲ್ಲ.

ನಿಜವಾಗಲೂ ಅಳು ಬಲಹೀನತೆಯ ಲಕ್ಷಣವಲ್ಲ; ಬಹುದೀರ್ಘಕಾಲ ಬದುಕಿನ ಹೋರಾಟದಲ್ಲಿ ಗಟ್ಟಿಯಾಗಿ ನಿಂತು, ಬಂದದ್ದನ್ನೆಲ್ಲಾ ಧೈರ್ಯವಾಗಿ ಎದುರಿಸುವ ಛಾತಿಯಿರುವವರೂ ಅಳುತ್ತಾರೆ. ನೀರು ಮೋಡಗಳನ್ನು ಸೇರಿ ಸಾಂದ್ರವಾಗಿ, ದಟ್ಟ ನೀಲಿಯ ಕಡುಬಣ್ಣವನ್ನು ಹೊಂದಿ, ಗುಡುಗು ಮಿಂಚುಗಳಿಗಷ್ಟೇ ಸಮಾಧಾನಗೊಳ್ಳದೆ, ಬರಿ ಗಾಳಿಗೇ ಚದುರಿಹೋಗದೆ ‘ಬಾ ಇಲ್ಲಿ ವಿರಮಿಸು’ ಎಂದು ಕರೆಯುವ ಭೂಮಿಯ ಮಡಿಲಿನ ಆಕರ್ಷಣೆಗೆ ಒಳಗಾಗಿ ತನ್ನ ನೈಜ ನೆಲೆಯಾದ ಮಣ್ಣು, ನದಿ, ತೊರೆ, ಸಾಗರಗಳನ್ನು ಸೇರುತ್ತದೆ. ಅಳು ಕೂಡ ಮಳೆಯಂತೆಯೇ ಜೀವದಾಯಿನಿ. ಬದುಕಿನ ಉರಿಯನ್ನು, ಬಿಸಿಯನ್ನು ತಡೆದುಕೊಳ್ಳುವಷ್ಟೂ ತಡೆದುಕೊಂಡಾಯಿತು; ಸೋಲು-ನಷ್ಟಗಳನ್ನು ಹೀರಿ ಆವಿಯಾಗಿಸಿದ್ದಾಯಿತು; ಬಹುಕಾಲ ವೇದನೆಯನ್ನು ಒಡಲಲ್ಲಿ ಮುಚ್ಚಿಟ್ಟಿದ್ದೂ ಆಯ್ತು; ಸಿಟ್ಟು ರೋಷವುಕ್ಕಿ ಗುಡುಗಿದ್ದೂ ಆಯ್ತು; ಸುಳ್ಳು ಸಮಾಧಾನಗಳಿಂದ ಭ್ರಮನಿರಸನಗೊಂಡಿದ್ದೂ ಆಯ್ತು; ಇನ್ನು ದಣಿದಿದ್ದೇನೆ, ಪ್ರೀತಿಯ ಸಾಂತ್ವಾನಕ್ಕಾಗಿ ಕಾತರಿಸುತ್ತಿದ್ದೇನೆ ಎಂಬ ಒಳ ಅರಿವು ಹೃದಯದಲ್ಲಿ ಮಡುಗಟ್ಟಿದ ದುಃಖ ಕಣ್ಣೀರಾಗಿ ಹರಿಯುವಂತೆ ಮಾಡುತ್ತದೆ.

ನಾವು ಅಳುತ್ತಿರುವಾಗಲೇ ಅದು ನಮ್ಮ ಗಾಯಗಳನ್ನು ವಾಸಿಮಾಡುತ್ತಿರುತ್ತದೆ. ಏಕೆಂದರೆ ಅಳುವುದು ಎಂದರೇ ನಮ್ಮ ನೋವನ್ನು ನಮ್ಮಿಂದ ಕೊಂಚ ದೂರ ಸರಿಸಿ ನೋಡುವುದು; ನಮ್ಮ ನೋವಿಗೆ ನಮ್ಮ ಗಮನ ಕೊಡುವುದು; ನಮ್ಮ ದುಃಖಕ್ಕೆ ಬೇರೆಯವರ ದುಃಖಕ್ಕೆ ಹೇಗೋ ಹಾಗೇ ಕರುಣೆಯಿಂದ ಸ್ಪಂದಿಸುವುದು. ಹಾಗಾಗಿಯೇ ತಾನೆಂಥ ನೋವಿನಲ್ಲಿದ್ದೇನೆಂದು ತಿಳಿಯಲು ಸಾಧ್ಯವಿಲ್ಲದವರು ತನ್ನ ನೋವನ್ನು ತನ್ನಿಂದ ಬೇರೆಯಾಗಿಸಿ ಸಮಗ್ರವಾಗಿ ನೋಡಿ ತನ್ನ ಭಾವನೆಗಳ ಹಿನ್ನೆಲೆಯಲ್ಲಿ ಅರ್ಥೈಸಲಾರದವರು ಅಳುವುದಿಲ್ಲ; ಬದಲಾಗಿ ನೋವನ್ನು ನಿರಾಕರಿಸುತ್ತ, ವಿಶ್ಲೇಷಿಸುತ್ತ, ತನ್ನ ನೋವಿಗೆ ಬೇರೆ ಯಾರನ್ನೋ ಕಾರಣರಾಗಿಸುತ್ತಾ ತಮ್ಮನ್ನು ತಾವೇ ಮೋಸಗೊಳಿಸಿಕೊಳ್ಳುತ್ತಾರೆ.

ದುಃಖವನ್ನು ಕೇವಲ ವೈಯಕ್ತಿಕವೆಂದು ಭಾವಿಸುವವರು ಅಳುವಿಗಿರುವ ಮಾಂತ್ರಿಕ ಶಕ್ತಿಯನ್ನು ಅನುಭವಿಸಿದವರಲ್ಲ. ಅಳುವುದು ಎಂದರೆ ‘ಅಯ್ಯೋ ನನಗೆ ಹೀಗಾಯಿತೇ’ ಎಂದು ಸ್ವಮರುಕದಿಂದ ಕೊರಗುವುದಲ್ಲ. ಅಂಥ ಕಣ್ಣೀರು ನಾವು ಕೆಳಗೆ ಬಿದ್ದಾಗ ಮತ್ತೆ ಪುಟಿಯುವಂತೆ ಮಾಡುವ ಚೈತನ್ಯವನ್ನು ನೀಡುವುದಿಲ್ಲ. ಅದು ಅಳು ಕೃತ್ರಿಮವಾದ ಅಳು. ನಮ್ಮ ವೈಯಕ್ತಿಕ ಬದುಕಿನ ಮೂಲಕ ಅನುಭವಕ್ಕೆ ಬರುವ ಸಂಕಟವು ಪ್ರಪಂಚದಲ್ಲಿರುವ ಸಂಕಟವನ್ನು ಕ್ಷಣಾರ್ಧದಲ್ಲಿ ಅರ್ಥಮಾಡಿಸುತ್ತದೆ. ನಮ್ಮ ಸಂಕಟವನ್ನೂ ಹೀಗೆಯೇ ತನ್ನ ಸಂಕಟದ ಅನುಭವಮೂಲದಿಂದ ಅರ್ಥಮಾಡಿಕೊಳ್ಳಬಲ್ಲ ಸಹೃದಯರಿದ್ದಾರೆ ಎನ್ನುವ ನಂಬಿಕೆ ನಮ್ಮನ್ನು ಲೋಕದೊಟ್ಟಿಗೆ ಬೆಸೆಯುತ್ತದೆ. ಈ ಕಾರಣದಿಂದಲೇ ಅಳಲು ನಮಗೆ ಒಂದು ಭುಜ ಬೇಕು. ನಮ್ಮ ದುಃಖವನ್ನು ತನ್ನ ಕಣ್ಣಿನಲ್ಲಿ ಪ್ರತಿಫಲಿಸುವ ಮೂಲಕ ನಮ್ಮ ದುಃಖವನ್ನು ನಮಗೇ ತೋರ್ಪಡಿಸುವ ಕನ್ನಡಿಯಂತಹ ಪ್ರೀತಿಯ ಕಣ್ಣುಗಳು ಬೇಕು. ನಮ್ಮ ಅಳುವನ್ನು ಸಂತೈಸುವವರು ಯಾರೂ ಇಲ್ಲದಿದ್ದಾಗ ಅದನ್ನು ಅರಣ್ಯರೋದನವೆನ್ನುವುದು ಈ ಕಾರಣಕ್ಕಾಗಿಯೇ. ತಾತ್ಕಾಲಿಕವಾಗಿ ಯಾರೂ ಸ್ಪಂದಿಸದಿದ್ದರೂ ಅಳು ನಿಷ್ಪ್ರಯೋಜಕವಲ್ಲ. ಏಕೆಂದರೆ ಅದು ಸಂವಹನದ ಒಂದು ರೀತಿ; ಅದೊಂದು ಭಾಷೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.