ADVERTISEMENT

ಗಣೇಶನ ಅನನ್ಯ ರೂಪ

ಗುರುರಾಜ ಪೋಶೆಟ್ಟಿಹಳ್ಳಿ
Published 31 ಆಗಸ್ಟ್ 2019, 2:26 IST
Last Updated 31 ಆಗಸ್ಟ್ 2019, 2:26 IST
   

ಉತ್ತರಹಳ್ಳಿಯಭಾರತ್ ಹೌಸಿಂಗ್ ಬಡಾವಣೆಯಲ್ಲಿರುವ ಸದ್ಗುರು ಚೈತನ್ಯ ಮಂದಿರದ ‘ಗಣೇಶ ಪ್ರಪಂಚ’ದ ಒಳಹೊಕ್ಕರೆ ಕ್ಷಣಕಾಲ ತಬ್ಬಿಬಾಗುವುದು ಖಚಿತ. ಇಲ್ಲಿ ಕಣ್ಣು ಹಾಯಿಸಿದ ಕಡೆಯಲ್ಲೆಲ್ಲಾ ಗಣಪನೇ ಕಾಣುತ್ತಾನೆ. ರೂಪ, ಆಕಾರದಲ್ಲಿ ಒಂದಕ್ಕಿಂತ ಒಂದು ಮೂರ್ತಿಗಳು ವಿಭಿನ್ನವಾಗಿವೆ. ಚಿತ್ರ– ವಿಚಿತ್ರ ಗಣಪನ ವಿಗ್ರಹಗಳು. ಒಂದೇ ಸೂರಿನಡಿ 2,450 ಗಣಪತಿ ವೈವಿಧ್ಯಮಯ ವಿಗ್ರಹಗಳನ್ನು ನೋಡಬಹುದು.

ಅಲ್ಲೊಂದು ಕಡೆ ಅಂಬೆಗಾಲಿಡುತ್ತಿರುವ ಲಂಬೋದರ, ಐದು ಮುಖದ ಗಜಾನನ, ಇನ್ನೊಂದೆಡೆ ಇಲಿಯ ರಥವೇರಿ ಹೊರಟ ಗಣನಾಥ, ಹಾಗೆಯೆ ಕಣ್ಣಾಡಿಸಿದರೆ ಪುಸ್ತಕ ಹಿಡಿದು ಸುಖಾಸೀನನಾಗಿರುವ ಗಣಪ, ನೃತ್ಯ ಗಣಪ, ವಾದ್ಯ ವಿನಾಯಕ, ರಾಜ ಗಣಪ, ನಾವಿಕ ಗಣಪ ಹೀಗೆ ಏಕದಂತನ ಅನೇಕ ಅವತಾರಗಳನ್ನು ಇಲ್ಲಿ ಒಪ್ಪಓರಣವಾಗಿ ಜೋಡಿಸಿಟ್ಟಿದ್ದಾರೆ. ಇಂಥ ಭಿನ್ನ ಗಣೇಶನ ಮೂರ್ತಿಗಳನ್ನು ಹನುಮಂತನಗರದ ಆದಿತ್ಯಪ್ರಕಾಶ್‌ ಸಂಗ್ರಹಿಸಿದ್ದಾರೆ. ಆದಿತ್ಯ ಪ್ರಿಂಟಿಂಗ್‌ ಹಾಗೂ ಪಬ್ಲಿಷಿಂಗ್‌ ಹೌಸ್‌ನ ಮಾಲೀಕರೂ ಹೌದು.

‘ಗಣಪತಿ ನನ್ನ ಅಚ್ಚುಮೆಚ್ಚಿನ ದೇವರು. ನನ್ನ ತಾಯಿಗೆ ಗಣಪತಿಯ ಮೇಲೆ ವಿಶೇಷ ಒಲವಿತ್ತು. ಇದೇ ಗುಣ ನನ್ನಲ್ಲೂ ಬಂದಿದೆ. ಈ ಸಂಗ್ರಹ ಹಿಂದಿರುವುದು ಉತ್ಕಟವಾದ ಭಕ್ತಿ’ ಎಂಬ ಮಾತು ಅವರದು. ಆದಿತ್ಯಪ್ರಕಾಶ್‌ 1992ರಿಂದ ಗಣಪನ ಮೂರ್ತಿಗಳನ್ನು ಸಂಗ್ರಹಿಸುವ ಹವ್ಯಾಸವನ್ನು ಬೆಳೆಸಿಕೊಂಡು ಬಂದಿದ್ದಾರೆ. ಜರ್ಮನಿ, ಇಂಡೊನೇಷ್ಯಾ ಹಾಗೂ ಭಾರತದ ಬೇರೆ ಬೇರೆ ಭಾಗಗಳಿಗೆ ಪ್ರವಾಸ ಹೋದಾಗ ಅಲ್ಲಿಂದ ಗಣೇಶನ ಮೂರ್ತಿಗಳನ್ನು ತಂದು ಸಂಗ್ರಹಿಸಿದ್ದಾರೆ.

ADVERTISEMENT

ಪುರಾತನ ರಾಜರು ಬಳಸುತ್ತಿದ್ದ ಟಂಕಸಾಲೆ ಗಣಪ, ತೂಗೂಯ್ಯಾಲೆಯಲ್ಲಿನ ಗಣೇಶ, ಕಾಳಿಂಗಮರ್ದನ ವಿನಾಯಕ, ನಾದ ಪ್ರಿಯ ಗಣಪ, ಚಿತ್ರರೂಪದಲ್ಲೂ ಗಣಪನನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು.ಅಕ್ಕಿ ಕಾಳಿನಿಂದ ಕೆತ್ತಿರುವ ಪುಟ್ಟ ಗಣಪನಿಂದ ಹಿಡಿದುದೇಶ ವಿದೇಶಗಳ, ವಿವಿಧ ಭಾವಭಂಗಿಯ ಅಂಗೈಯಲ್ಲಿ ಹಿಡಿಯುವ ಮೂರ್ತಿಯಿಂದ, 1 ಅಡಿ ಎತ್ತರದವರೆಗಿನ ಮೂರ್ತಿಗಳು ಇಲ್ಲಿವೆ.

ಆದಿತ್ಯಪ್ರಕಾಶ್‌ ತಮ್ಮತಮ್ಮ ಸಂಗ್ರಹದಲ್ಲಿರುವ ಪ್ರತಿಯೊಂದು ಗಣಪತಿಯ ವಿಗ್ರಹದ ವಿಶೇಷತೆ, ಅದರ ಹಿಂದಿನ ಕಥೆಯ ಬಗ್ಗೆ ತಿಳಿದುಕೊಂಡಿದ್ದಾರೆ. ‘ಗಣೇಶ ಪ್ರಪಂಚ’ಕ್ಕೆ ಸಾರ್ವಜನಿಕರೂ ಭೇಟಿ ನೀಡಬಹುದು. ಪ್ರತಿದಿನ ಬೆಳಿಗ್ಗೆ 9ರಿಂದ 12 ಹಾಗೂ ಸಂಜೆ 4ರಿಂದ 7.30ರವರೆಗೆ ಇಲ್ಲಿಗೆ ಭೇಟಿ ನೀಡಬಹುದು. ಉಚಿತ ಪ್ರವೇಶ

ಆದಿತ್ಯ ಪ್ರಕಾಶ್‌ ಸಂಪರ್ಕಕ್ಕೆ– 94804 55111

ಗುರುರಾಜ ಪೋಶೆಟ್ಟಿಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.