ADVERTISEMENT

ಕಾರ್ಗಿಲ್‌ ಯೋಧರನ್ನು ನಿತ್ಯ ಸ್ಮರಿಸುವ ಈಶ್ವರ್

ರಾಹುಲ ಬೆಳಗಲಿ
Published 25 ಜುಲೈ 2019, 12:22 IST
Last Updated 25 ಜುಲೈ 2019, 12:22 IST
ಯೋಧರೊಂದಿಗೆ ಈಶ್ವರ್ ತಡಿಬಿಡಿ
ಯೋಧರೊಂದಿಗೆ ಈಶ್ವರ್ ತಡಿಬಿಡಿ   

‘ಹುತಾತ್ಮ ಯೋಧರ ಪಾರ್ಥಿವ ಶರೀರ ತರುತ್ತಿರುವ ವಿಷಯ ಗೊತ್ತಾದ ಕೂಡಲೇ ಹಾಸನಕ್ಕೆ ಹೊರಟೆ. ಆದರೆ ಕೈಯಲ್ಲಿ ಹಣವಿರಲಿಲ್ಲ. ಸೈಕಲ್‌ನಲ್ಲೇ ಹೊರಟು ಮಧ್ಯಾಹ್ನ 12ಕ್ಕೆ ರಾಯಚೂರು ಜಿಲ್ಲೆಯ ಲಿಂಗಸುಗೂರು ಸಮೀಪದ ಗ್ರಾಮ ತಲುಪಿದಾಗ ರಾತ್ರಿ 8 ಆಗಿತ್ತು. ಮಲಗಲು ಜಾಗ ಹುಡುಕುತ್ತಿದ್ದೆ. ನನ್ನ ಉದ್ದೇಶ ತಿಳಿದ ಅಲ್ಲಿನ ಗ್ರಾಮಸ್ಥರು ಮನೆಯೊಂದರಲ್ಲಿ ಉಳಿಯಲು ಅವಕಾಶ ಮಾಡಿಕೊಟ್ಟರು. ಅಲ್ಲದೇ ಖರ್ಚಿಗೊಂದಿಷ್ಟು ಹಣ ನೀಡಿ ಬಸ್‌ನಲ್ಲಿ ಹಾಸನಕ್ಕೆ ಕಳುಹಿಸಿಕೊಟ್ಟರು..’

ಯೋಧರ ಬಗ್ಗೆ ಅತಿಯಾದ ಪ್ರೀತಿ, ಅಭಿಮಾನವಿಟ್ಟುಕೊಂಡಿರುವ ಯಾದಗಿರಿ ಜಿಲ್ಲೆ ಶಹಾಪುರ ತಾಲ್ಲೂಕಿನ ತಡಿಬಿಡಿ ಗ್ರಾಮದ ಈಶ್ವರ್‌, ಹುತಾತ್ಮ ಯೋಧರ ಕುಟುಂಬವೊಂದರ ಭೇಟಿಗೆ ಹೋಗುವಾಗ ಆದ ಅನುಭವವನ್ನು ಹೀಗೆ ವಿವರಿಸುತ್ತಾರೆ.

ಈಶ್ವರ್, ರಾಜ್ಯದ ಯಾವುದೇ ಭಾಗದಲ್ಲಿ ಯೋಧರು ಮೃತಪಟ್ಟಿರುವ ವಿಷಯ ತಿಳಿದರೂ ಅಲ್ಲಿಗೆ ಹೋಗಿಬರುತ್ತಾರೆ. ಅವರ ಮನೆಗೆ ತೆರಳಿ, ಪಾರ್ಥಿವ ಶರೀರಕ್ಕೆ ಹೂಮಾಲೆ ಅರ್ಪಿಸಿ, ಶ್ರದ್ಧಾಂಜಲಿ ಸಲ್ಲಿಸಿ, ಕುಟುಂಬದವರಿಗೆ ಸಾಂತ್ವನ ಹೇಳಿ, ಗ್ರಾಮಕ್ಕೆ ಹಿಂದಿರುಗುತ್ತಾರೆ. ಇದು ಎಂಟು ವರ್ಷಗಳಿಂದ ಅವರು ಕೈಗೊಂಡಿರುವ ಕಾಯಕ.

ಈಶ್ವರ್‌, ಊರೂರು ಸುತ್ತುತ್ತಾ ಬೆಳ್ಳುಳ್ಳಿ ಮಾರಾಟ ಮಾಡುವ ಸಣ್ಣ ವ್ಯಾಪಾರಿ. ಬಿಡುವು ಸಿಕ್ಕಾಗ ಆಟೊರಿಕ್ಷಾ ಓಡಿಸುತ್ತಾರೆ. ಇಷ್ಟುಬಿಟ್ಟರೆ, ಆರ್ಥಿಕವಾಗಿ ಅಷ್ಟೇನೂ ‘ಚೈತನ್ಯ’ವಿಲ್ಲ. ಆದರೆ, ದೇಶ ಕಾಯುವ ‘ಚೇತನ’ಗಳ ಬಗ್ಗೆ ತುಂಬಾ ಅಭಿಮಾನ. ಹೀಗಾಗಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸುವ ಸಂದರ್ಭ ಬಂದಾಗ ಸಾಲ ಮಾಡಿಯಾದರೂ, ಯೋಧರ ಊರುಗಳಿಗೆ ತೆರಳಿ ಶ್ರದ್ಧಾಂಜಲಿ ಸಲ್ಲಿಸಿ ಬರುತ್ತಾರೆ.

ತಡಿಬಿಡಿಯಂತಹ ಹಳ್ಳಿಯಿಂದ ದೂರದೂರಿನ ಯೋಧರ ಮನೆಗಳಿಗೆ ಹೋಗುವ ಅವರ ಈ ‘ಪಯಣ’ ಅಷ್ಟೇನೂ ಸುಗಮವಾಗಿ ಇರುವುದಿಲ್ಲ. ಒಮ್ಮೆ ಹಣದ ಕೊರತೆ ಎದುರಾಗುತ್ತದೆ. ಒಮ್ಮೊಮ್ಮೆ ಎಲ್ಲೆಲ್ಲೋ ರಾತ್ರಿ ಕಳೆಯುವ ಪರಿಸ್ಥಿತಿ ಬರುತ್ತದೆ. ಇಷ್ಟೆಲ್ಲ ಕಷ್ಟಪಟ್ಟರೂ, ಒಮ್ಮೊಮ್ಮೆ ಗೌರವ ಸಲ್ಲಿಸಲು ಸಾಧ್ಯವಾಗದಿದ್ದಾಗ ತುಂಬಾ ಚಡಪಡಿಸುತ್ತಾರೆ. ಕೊನೆಗೆ ಶ್ರದ್ಧಾಂಜಲಿ ಸಲ್ಲಿಸಿದ ನಂತರವಷ್ಟೇ ಸಮಾಧಾನಗೊಳ್ಳುತ್ತಾರೆ.

ಇದನ್ನೂ ಓದಿ:ಸೈನಿಕರ ‘ಗೃಹ’ಬಲ

ಒಮ್ಮೆ ಬೆಂಗಳೂರಿನಲ್ಲಿ ಹುತಾತ್ಮ ಯೋಧನಿಗೆ ಶ್ರದ್ಧಾಂಜಲಿ ಸಲ್ಲಿಸಲು ಹೋಗಿದ್ದ ಈಶ್ವರ್‌ ಅವರನ್ನು ಯಲಹಂಕ ರೈಲ್ವೆ ಪೊಲೀಸರು ವಿಚಾರಣೆ ನಡೆಸಿದ್ದರಂತೆ. ‘ಯಾದಗಿರಿಗೆ ಸಂಜೆ 6.30ಕ್ಕೆ ರೈಲು ಇತ್ತು. ಪ್ಲಾಟ್‌ಫಾರಂ ಟಿಕೆಟ್‌ ಕೂಡ ತೆಗೆದುಕೊಳ್ಳದೇ ಯಲಹಂಕ ರೈಲು ನಿಲ್ದಾಣದಲ್ಲಿ ಮಲಗಿದ್ದೆ. ಆಗ ಪೊಲೀಸರು ನನ್ನನ್ನು ಎಬ್ಬಿಸಿ, ವಿಚಾರಣೆ ಮಾಡಿದ್ದರು. ನಾನು ಯೋಧರ ಅಭಿಮಾನಿಯೆಂದು ಪರಿಚಯಿಸಿಕೊಂಡು ವಿವರಿಸಿದಾಗ, ಪೊಲೀಸರು ಹೆಮ್ಮೆಪಟ್ಟರು. ಅವರೇ ₹300 ಕೈಗಿಟ್ಟು ಊರಿಗೆ ಕಳುಹಿಸಿಕೊಟ್ಟರು’ ಎಂದು ಈಶ್ವರ್ ನೆನಪಿಸಿಕೊಳ್ಳುತ್ತಾರೆ.

ರಾಜ್ಯದ ಯಾವುದೇ ಭಾಗದಲ್ಲಿ ಯೋಧ ಹುತಾತ್ಮನಾದರೂ ತಡಿಬಿಡಿ ಗ್ರಾಮಸ್ಥರು ಈಶ್ವರ್‌ಗೆ ಸುದ್ದಿ ಮುಟ್ಟಿಸುತ್ತಾರೆ. ಯೋಧನ ಹೆಸರು, ಜಿಲ್ಲೆ, ಊರಿನ ಮಾಹಿತಿ ನೀಡುತ್ತಾರೆ. ಅಲ್ಲಿಗೆ ಹೋಗಿ ಬರಲು ಈಶ್ವರ್‌ಗೆ ನೆರವಾಗುತ್ತಾರೆ.

‘ನನಗೆ ಸೇನೆ ಸೇರ ಬೇಕೆಂಬ ಬಯಕೆ ಇತ್ತು. ಆದರೆ, ಚಿಕ್ಕವಯಸ್ಸಿನಲ್ಲೇ ಪೋಷಕರನ್ನು ಕಳೆದುಕೊಂಡೆ. 3ನೇ ತರಗತಿಗೆ ಶಾಲೆ ಬಿಟ್ಟೆ. ಸೇನೆ ಸೇರಲು ಸಾಧ್ಯವಾಗಲಿಲ್ಲ. ಈಗ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವುದಕ್ಕಾದರೂ ಅವಕಾಶ ಸಿಕ್ಕಿದೆ’ ಎಂದು ಹೇಳುತ್ತಾರೆ ಈಶ್ವರ್‌.

ಮನೆಯ ತುಂಬಾ ಹುತಾತ್ಮ ಯೋಧರ ಚಿತ್ರಗಳನ್ನು ಸಾಲಾಗಿ ಜೋಡಿಸಿದ್ದಾರೆ. ಆಟೊರಿಕ್ಷಾಗೆ ಸೈನಿಕರ ಚಿತ್ರಗಳಿರುವ ಬ್ಯಾನರ್‌ ಕಟ್ಟಿಸಿದ್ದಾರೆ. ‘ಯೋಧರ ಭಾವಚಿತ್ರಗಳಿಗೆ ಪೂಜೆ ಮಾಡಿದ ನಂತರವಷ್ಟೇ, ಆಯಾ ದಿನದ ಕಾಯಕ ಆರಂಭಿಸುತ್ತೇನೆ’ ಎನ್ನುತ್ತಾರೆ.

ಕನ್ನಡ, ತೆಲುಗು ಮತ್ತು ಹಿಂದಿ ಭಾಷೆ ಮಾತನಾಡಲು ಬಲ್ಲ ಈಶ್ವರ್‌ಗೆ ಓದಲು–ಬರೆಯಲು ಬರುವುದಿಲ್ಲ. ಕನ್ನಡದಷ್ಟು ಸರಾಗವಾಗಿ ಹಿಂದಿ ಮತ್ತು ತೆಲುಗು ಬರುವುದಿಲ್ಲ. ಕರ್ನಾಟಕದಲ್ಲಿ ಯೋಧರ ಊರಿಗೆ ಶ್ರದ್ಧಾಂಜಲಿ ಸಲ್ಲಿಸುವ ಅವರಿಗೆ ಹೊರರಾಜ್ಯಕ್ಕೆ ಹೋಗಿ ಬರಲು ಭಾಷಾ ಸಮಸ್ಯೆ ಕಾಡುತ್ತದೆ.

‘ಹುತಾತ್ಮ ಯೋಧರ ಊರು ಯಾವ ಭಾಗ ಮತ್ತು ಜಿಲ್ಲೆಯಲ್ಲಿದೆ ಎಂಬುದನ್ನು ಪತ್ತೆ ಮಾಡುತ್ತೇನೆ. ಆಯಾ ಊರಿನ ಪೊಲೀಸ್‌ ಠಾಣೆಗೆ ಪರಿಚಯ ಮಾಡಿಕೊಳ್ಳುತ್ತೇನೆ. ಆಗ ಪೊಲೀಸ್‌ನವರೇ ಹುತಾತ್ಮರಾದವರ ಮನೆಗೆ ಕರೆದೊಯ್ಯುತ್ತಾರೆ’ ಎಂದು ಉಲ್ಲೇಖಿಸುತ್ತಾರೆ ಅವರು.

ಕಾರ್ಗಿಲ್ ಹುತಾತ್ಮ ಯೋಧರ ನೆನಪು...

ಕಾರ್ಗಿಲ್ ಯುದ್ಧದ ಹುತಾತ್ಮ ಯೋಧರ ಮನೆಗೆ ತೆರಳಿ ಶ್ರದ್ಧಾಂಜಲಿ ಸಲ್ಲಿಸಲು ಬಯಸಿದ್ದೆ. ಆದರೆ, ತುಂಬಾ ಚಿಕ್ಕವನಾಗಿದ್ದರಿಂದ ಮತ್ತು ಹಣಕಾಸಿನ ಸಮಸ್ಯೆಯೂ ಇದ್ದ ಕಾರಣ ಆಗಲಿಲ್ಲ. ಆದರೆ, ಹುತಾತ್ಮ ಯೋಧರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸುವ ಮೂಲಕ ನಿತ್ಯವೂ ಗೌರವ ಸಲ್ಲಿಸುತ್ತೇನೆ’ ಎಂದು ಈಶ್ವರ್ ಹೇಳುತ್ತಾರೆ.

ಈಶ್ವರ್ದೂರವಾಣಿ ಸಂಖ್ಯೆ: 97311 04876

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.