ADVERTISEMENT

ಕಲಹಕ್ಕೆ ತಾಳ್ಮೆಯೇ ಮದ್ದು

ಡಾ.ವೀಣಾ ಸತ್ಯನಾರಾಯಣ
Published 21 ಏಪ್ರಿಲ್ 2020, 19:43 IST
Last Updated 21 ಏಪ್ರಿಲ್ 2020, 19:43 IST
ಡಾ. ವೀಣಾ ಸತ್ಯನಾರಾಯಣ
ಡಾ. ವೀಣಾ ಸತ್ಯನಾರಾಯಣ   

ಅದು ಐವರು ಸದಸ್ಯರಿರುವ ಕುಟುಂಬ. ಎಲ್ಲರ ಜೀವನ ನಿರ್ವಹಣೆ ಮನೆಯ ಯಜಮಾನ ಸುನೀಲ್‌ ಸಂಪಾದನೆಯ ಮೇಲೆ ನಿಂತಿದೆ. ತಂದೆ– ತಾಯಿಗೆ ವಯಸ್ಸಾಗಿದೆ, ಹೆಂಡತಿಗೆ ಮನೆಯ ಖರ್ಚುವೆಚ್ಚವನ್ನು ನಿರ್ವಹಿಸುವಾಗ ಹಗ್ಗದ ಮೇಲೆ ನಡೆದಂತೆ. ಶಾಲೆಗೆ ಹೋಗುವ ಒಬ್ಬಳು ಮಗಳಿದ್ದಾಳೆ. ಆದರೆ ಲಾಕ್‌ಡೌನ್‌ನಿಂದಾಗಿ ಸದ್ಯಕ್ಕೆ ಆತನಿಗೆ ವೇತನ ಸರಿಯಾಗಿ ಸಿಗುತ್ತಿಲ್ಲ. ಖಾಸಗಿ ಕಂಪನಿಯಲ್ಲಿನ ಉದ್ಯೋಗಿಯಾಗಿರುವ ಆತನಿಗೆ ಅಭದ್ರತೆ ಕಾಡುತ್ತಿದೆ. ಮುಂದೆ ಹೇಗೆ ಎಂಬ ಚಿಂತೆ ಮನೆಯಲ್ಲಿ ಕಿರಿಕಿರಿ ಹಾಗೂ ಅಸಮಾಧಾನದಂತಹ ವಾತಾವರಣಕ್ಕೆ ಕಾರಣವಾಗಿದೆ.

ಲಾಕ್‌ಡೌನ್‌ನಿಂದಾಗಿ ಸದಾಕಾಲ ಕುಟುಂಬದ ಎಲ್ಲಾ ಸದಸ್ಯರು ಮನೆಯೊಳಗೇ ಇರಬೇಕಾದ ಈ ಸಂದರ್ಭದಲ್ಲಿ ಅಸಹನೆ, ಜಗಳ ಸಾಮಾನ್ಯ. ಆದರೆ ಉದ್ಯೋಗದ ಅಭದ್ರತೆ, ಮಕ್ಕಳ ಹಾಗೂ ತಮ್ಮ ಭವಿಷ್ಯ, ಹಿರಿಯರ ಆರೋಗ್ಯ.. ಆತಂಕವನ್ನು ಇನ್ನಷ್ಟು ಹೆಚ್ಚಿಸಲು ಕಾರಣ. ಕೋವಿಡ್‌–19 ಪಿಡುಗಿನಿಂದಾಗಿ ಹೆಚ್ಚುಕಡಿಮೆ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಅನಾನುಕೂಲ ಅನುಭವಿಸುವವರೇ. ಆದರೆ ನಮ್ಮ ಮನೆಯ ಹಾಗೂ ಮನಸ್ಸಿನ ಶಾಂತಿ, ನೆಮ್ಮದಿ ಕಾಪಾಡಿಕೊಳ್ಳುವುದು ಕುಟುಂಬದ ಪ್ರತಿ ಸದಸ್ಯನ ಕೈಯಲ್ಲಿರುತ್ತದೆ, ಇದಕ್ಕೆ ಎಲ್ಲರ ಸಹಕಾರ ಕೂಡ ಅಗತ್ಯ.

ಮನೆಯ ಹಾಗೂ ಮನಸ್ಸಿನ ನೆಮ್ಮದಿ ಕಾಪಾಡಿಕೊಳ್ಳುವ ಬಗೆ ಹೇಗೆ?

ADVERTISEMENT

* ಇದರ ಹೊಣೆ ಗಂಡ– ಹೆಂಡತಿ ಇಬ್ಬರ ಮೇಲೂ ಇರುತ್ತದೆ.

* ಈ ಸಮಯದಲ್ಲಿ ಎಲ್ಲರಿಗೂ ಅವರದ್ದೇ ಆದ ಆತಂಕ ಮತ್ತು ಒತ್ತಡ ಇರುವುದರಿಂದ ಸಹನೆಯಿಂದ ವರ್ತಿಸಬೇಕಾಗುತ್ತದೆ.

* ನಿಮ್ಮ ಸಂಗಾತಿ ಮಾತನಾಡುವಾಗ ಕಾಳಜಿಯಿಂದ ಕೇಳಿ.

* ಮುಕ್ತವಾಗಿ ಹಿಂಜರಿಕೆಯಿಲ್ಲದೆ ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಿ.

* ವಿವರವಾಗಿ ಚರ್ಚೆ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.

* ನಕಾರಾತ್ಮಕ ವಿಚಾರಗಳ ಬಗ್ಗೆ ಹೆಚ್ಚು ಯೋಚಿಸದೇ, ಸಕಾರಾತ್ಮಕ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಿ.

* ನೆಂಟರು ಮತ್ತು ಮಿತ್ರರೊಂದಿಗೆ ಫೋನ್ ಸಂಪರ್ಕದಲ್ಲಿರಿ.

* ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ. ಹೊಸದನ್ನು ಕಲಿಯಿರಿ, ಎಲ್ಲರಿಗೂ ಇಷ್ಟವಾಗುವ ಚಟುವಟಿಕೆಗಳನ್ನು ಮಾಡಿ.

* ಮನಸ್ಸಿನ ಸಂತುಲನಕ್ಕೆ ದೈಹಿಕ ವ್ಯಾಯಾಮ, ಪ್ರಾಣಾಯಾಮ ಮುಖ್ಯ. ಇದನ್ನು ನಿಮ್ಮ ಸಂಗಾತಿಯೊಡನೆ ತಪ್ಪದೆ ಪಾಲಿಸಿ.

* ಮನೆ ಸಾಮಾನು, ಔಷಧಿಗಳ ಖರೀದಿಯ ಬಗ್ಗೆ ಮುಂದಾಲೋಚನೆ ಮುಖ್ಯ. ಅದರ ಜವಾಬ್ದಾರಿಗಳನ್ನು ಹಂಚಿಕೊಳ್ಳಿ.

(ಲೇಖಕಿ ಸಹ ಪ್ರಾಧ್ಯಾಪಕರು, ಚಿಕಿತ್ಸಾ ಮನೋವೈಜ್ಞಾನಿಕ ವಿಭಾಗ, ನಿಮ್ಹಾನ್ಸ್, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.