ADVERTISEMENT

ಜೀವನಕ್ಕೆ ಆಧಾರವಾಯ್ತು ‘ಮೆಟ್ರೊರೈಡ್’ ಇ–ಆಟೋರಿಕ್ಷಾ

ಮಂಜುಶ್ರೀ ಎಂ.ಕಡಕೋಳ
Published 31 ಅಕ್ಟೋಬರ್ 2021, 19:30 IST
Last Updated 31 ಅಕ್ಟೋಬರ್ 2021, 19:30 IST
ಮೆಟ್ರೊ ರೈಡ್‌ನ ಇ– ಆಟೋರಿಕ್ಷಾ
ಮೆಟ್ರೊ ರೈಡ್‌ನ ಇ– ಆಟೋರಿಕ್ಷಾ   

ಹೆಸರು ಸರಸ್ವತಿ. ಹೆಸರಿಗೆ ತಕ್ಕಂತೆ ಹೆಚ್ಚು ಶಿಕ್ಷಣ ಪಡೆಯಲಾಗಲಿಲ್ಲ. ಆದರೆ, ‘ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಲೇಸು’ ಅನ್ನುವಂತೆ ಕಷ್ಟಕಾಲದಲ್ಲಿ ಡ್ರೈವಿಂಗ್ ಕೌಶಲ ಕೈಹಿಡಿಯಿತು... ಎಂದರು ಸರಸ್ವತಿ.

ಕೋವಿಡ್ ಕಾಲದಲ್ಲಿ ಪತಿಯನ್ನು ಕಳೆದುಕೊಂಡು ಅತಂತ್ರರಾಗಿದ್ದ ಅವರಿಗೆ ‘ಮೆಟ್ರೊರೈಡ್’ ನವೋದ್ಯಮ ಸಂಸ್ಥೆಯ ಎಲೆಕ್ಟ್ರಿಕಲ್ ಆಟೋರಿಕ್ಷಾವು ವರದಾನವಾಗಿದೆ. ವಾಹನ ಚಾಲನೆ ತರಬೇತಿ ಪಡೆದಿದ್ದ ಸರಸ್ವತಿ ಈಗ ಆಟೋರಿಕ್ಷಾ ಚಾಲನೆಯ ಮೂಲಕ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ.

ಸಗಾಯ ರಾಣಿ ಅವರು ಜಂಬೂ ಸವಾರಿ ದಿಣ್ಣೆಯಲ್ಲಿ ವಾಹನ ತರಬೇತಿ ನೀಡುತ್ತಿದ್ದನ್ನು ನೋಡಿದ್ದ ಸರಸ್ವತಿ ಅವರಿಗೆ ತಾವೂ ಆಟೋ ಏಕೆ ಓಡಿಸಬಾರದು ಎಂಬ ಆಲೋಚನೆ ಬಂದದ್ದೇ ತಡ ‘ಮೆಟ್ರೊರೈಡ್‌’ನ ಮೊರೆ ಹೊಕ್ಕರು. ಕೋವಿಡ್‌ಗೂ ಮುನ್ನ ಶಾಲಾ ಮಕ್ಕಳಿಗಾಗಿ ಓಮ್ನಿ ವ್ಯಾನ್ ಓಡಿಸಿ ಅನುಭವ ಹೊಂದಿದ್ದ ಅವರಿಗೆ ಆಟೋ ಚಲಾಯಿಸಲು ಕಲಿಯುವುದು ಕಷ್ಟವೆನಿಸಲಿಲ್ಲ. ವಾರದಲ್ಲೇ ತರಬೇತಿ ಪಡೆದು ಆಟೋ ಓಡಿಸುತ್ತಿರುವ ಸರಸ್ವತಿ ಕೆಲಕಾಲ ನೋವು ಮರೆತು ಮಕ್ಕಳ ಭವಿಷ್ಯದ ಕನಸು ಕಾಣತೊಡಗಿದ್ದಾರೆ. ಇಬ್ಬರು ಹೆಣ್ಣುಮಕ್ಕಳಿರುವ ಅವರ ಕನಸಿಗೆ ಅತ್ತೆಯೂ ಕೈಜೋಡಿಸಿದ್ದಾರೆ.

ADVERTISEMENT

‘ಓದಿದ್ದು ಪಿಯುಸಿ ತನಕ ಮಾತ್ರ. ಗಂಡ ಪ್ರಾವಿಜನ್ ಸ್ಟೋರ್ ನಡೆಸುತ್ತಿದ್ದರು. ಅವರ ಅಕಾಲಿಕ ಮರಣ, ಕೋವಿಡ್‌ನಿಂದ ಕೆಲಸ ಕಳೆದುಕೊಂಡಿದ್ದ ನಮ್ಮ ಬದುಕಿಗೆ ‘ಮೆಟ್ರೊರೈಡ್’ ಆಶಾಕಿರಣವಾಯಿತು. ಮಕ್ಕಳ ವಿದ್ಯಾಭ್ಯಾಸ ಮುಗಿಯುವ ತನಕ ಮೂರು ಹೊತ್ತು ತಿನ್ನುವ ಬದಲು ಎರಡು ಹೊತ್ತು ತಿಂದು ಜೀವನ ಮಾಡ್ತೀವಿ’ ಎಂದು ಭಾವುಕವಾಗಿ ನುಡಿಯುತ್ತಾರೆ ಸರಸ್ವತಿ.

ಸರಸ್ವತಿ ಅವರಂತೆಯೇ ಆರ್ಥಿಕ ಸಂಕಷ್ಟದ ಹಿನ್ನೆಲೆ ಇರುವ ಇತರ ಏಳು ಮಹಿಳೆಯರಿಗೆ ‘ಮೆಟ್ರೊರೈಡ್’ ಇ–ಆಟೋ ರಿಕ್ಷಾ ಚಾಲನೆಯ ತರಬೇತಿ ನೀಡಿ ಉದ್ಯೋಗಕ್ಕೆ ನೇಮಿಸಿಕೊಂಡಿದೆ. ಕೋವಿಡ್ ಎರಡನೇ ಅಲೆ ಸಮಯದಲ್ಲಿ ಕೆಲಸವಿಲ್ಲದಿದ್ದಾಗ ಎರಡು ತಿಂಗಳು ಕಾಲ ಸಂಬಳವನ್ನೂ ನೀಡಿ ಅವರ ಕುಟುಂಬಕ್ಕೆ ಆಸರೆ ನೀಡಿದೆ. ಮೆಟ್ರೊರೈಲು ನಿಲ್ದಾಣಗಳಲ್ಲಿ ಆಟೋರಿಕ್ಷಾ ಸೇವೆ ನೀಡುತ್ತಿರುವ ‘ಮೆಟ್ರೊರೈಡ್’ ಸದ್ಯಕ್ಕೆ ಆಯ್ದ ಮಾರ್ಗಗಳಲ್ಲಿ ಮಾತ್ರ ಸೇವೆ ನೀಡುತ್ತಿದೆ.

‘ನಮ್ಮ ಆಟೋರಿಕ್ಷಾದಲ್ಲಿ ಬರುವ ಗ್ರಾಹಕರೂ ನಮಗೆ ಪ್ರೋತ್ಸಾಹದ ಮಾತುಗಳನ್ನಾಡಿ ಬೆಂಬಲಿಸುತ್ತಾರೆ. ಲಾಕ್‌ಡೌನ್‌ನಲ್ಲಿ ಸಮಯದಲ್ಲಿ ಆರ್ಥಿಕವಾಗಿ ಕಷ್ಟವಾಗಿದ್ದ ಸಮಯದಲ್ಲಿ ‘ಮೆಟ್ರೊರೈಡ್’ ಉದ್ಯೋಗ ನೀಡಿತು. ಸ್ಕೂಟಿಯಷ್ಟೆ ಕಲಿತಿದ್ದ ನಾನೀಗ ಯಾವುದೇ ಭಯವಿಲ್ಲದೆ ಬೆಂಗಳೂರಿನ ಟ್ರಾಫಿಕ್‌ನಲ್ಲಿ ಆಟೋರಿಕ್ಷಾ ಓಡಿಸುತ್ತೇನೆ’ ಎನ್ನುತ್ತಾರೆ ಕೋಣನಕುಂಟೆ ಮೆಟ್ರೊ ರೈಲು ನಿಲ್ದಾಣದಲ್ಲಿ ಆಟೋ ಓಡಿಸುತ್ತಿರುವ ಸುನೀತಾ.

ಉತ್ತಮ ಸಂಬಳ, ರಜೆ ಸೌಲಭ್ಯ

‘ಮೊದಲು ಉಬರ್ ಕಾರು ಓಡಿಸುತ್ತಿದ್ದೆ. ಕೋವಿಡ್ ಸಮಯದಲ್ಲಿ ಕನಿಷ್ಠ ಸಂಬಳಕ್ಕೂ ಕಷ್ಟವಾಗಿತ್ತು. ಪರಿಚಿತರೊಬ್ಬರು ‘ಮೆಟ್ರೊರೈಡ್‌’ಗೆ ಪರಿಚಯಿಸಿದರು.

ಇಲ್ಲಿ ತಿಂಗಳಿಗೆ ₹ 18–20 ಸಾವಿರದ ತನಕ ಮೋಸವಿಲ್ಲ. ಉಬರ್‌ನಲ್ಲಿ ಗ್ರಾಹಕರು ಬುಕ್ ಮಾಡಿದ ಸ್ಥಳಗಳಿಗೇ ಹೋಗಬೇಕಿತ್ತು. ಆದರೆ, ಇಲ್ಲಿ ಹಾಗಿಲ್ಲ. ನಿರ್ದಿಷ್ಟ ಮಾರ್ಗವಿದೆ. ದಿನಕ್ಕೆ ಐದಾರು ಕಿ.ಮೀ. ಓಡಿಸಿದರೆ ಸಾಕು. ಪ್ರತಿ ಭಾನುವಾರ ರಜೆ ಇರುತ್ತದೆ. ತಿಂಗಳಿಗೆ ಎರಡು ಬಾರಿ ವೈದ್ಯಕೀಯ ರಜೆಯೂ ಇದೆ. ಮನೆ– ಉದ್ಯೋಗ ಎರಡನ್ನೂ ನಿಭಾಯಿಸುತ್ತಿರುವೆ’ ಎನ್ನುತ್ತಾರೆ ಇ–ಆಟೋರಿಕ್ಷಾ ಚಾಲಕಿ ಕೋಕಿಲಾ.

ಸುರಕ್ಷತೆ ಇದೆ

‘ಒಂದು ವರ್ಷದಿಂದ ಇಲ್ಲಿ ಆಟೋರಿಕ್ಷಾ ಓಡಿಸ್ತಾ ಇದ್ದೀನಿ. ಮುಂಚೆ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಕೋವಿಡ್‌ನಿಂದ ಶಾಲೆ ಮುಚ್ಚಿದಾಗ ‘ಮೆಟ್ರೊರೈಡ್’ ನೆರವಿಗೆ ಬಂತು. ಸದ್ಯಕ್ಕೆ ಇಂದಿರಾ ನಗರದ ಮೆಟ್ರೊ ನಿಲ್ದಾಣದಿಂದ ಡೆಲ್ ಕಚೇರಿಯ ತನಕ ಆಟೋಓಡಿಸ್ತಾ ಇದ್ದೀನಿ. ಕೆಲಸದ ಸ್ಥಳದಲ್ಲಿ ಸುರಕ್ಷತೆ ಇದೆ. ಸಂಬಳ ಸರಿಯಾಗಿ ಕೊಡ್ತಾರೆ’ ಎನ್ನುತ್ತಾರೆ ಸಗಾಯ ರಾಣಿ.

ಏನಿದು ಮೆಟ್ರೊರೈಡ್?

ಭಾರತದ ಮೊದಲ ಎಐ- ಚಾಲಿತ ಎಲೆಕ್ಟ್ರಿಕ್ ಸಾರಿಗೆ ವೇದಿಕೆ ಮೆಟ್ರೊರೈಡ್ ನವೋದ್ಯಮ ಸಂಸ್ಥೆಯು ಬೆಂಗಳೂರು ಮೂಲದ್ದು. ಪ್ರಸ್ತುತ ನಗರದ ಇಂದಿರಾನಗರ, ಕೋಣನಕುಂಟೆಯ ಮೆಟ್ರೊ ರೈಲುನಿಲ್ದಾಣಗಳಲ್ಲಿ ಎಲೆಕ್ಟ್ರಿಕ್ ಆಟೋರಿಕ್ಷಾ ಸೇವೆ ನೀಡುತ್ತಿದೆ.

ಯಲಚೇನಹಳ್ಳಿಯಲ್ಲಿ ಮುಂದಿನ ತಿಂಗಳು ಸೇವೆ ಪುನರಾರಂಭವಾಗಲಿದೆ. ಆರಂಭಿಕ ಪ್ರಯಾಣ ದರ ₹ 10. ‘ಮೆಟ್ರೊರೈಡ್’ ಆ್ಯಪ್‌ ಮೂಲಕ ಗ್ರಾಹಕರು ಸೇವೆ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಮೊಬೈಲ್‌: 93432 01515.

ಮತ್ತಷ್ಟು ಮಹಿಳೆಯರ ನೇಮಕ

ಒಬ್ಬ ಮಹಿಳೆ ಸಂಪಾದನೆ ಮಾಡಲು ಆರಂಭಿಸಿ ಸ್ವತಂತ್ರಳಾದಾಗ ಕೇವಲ ಒಂದು ಮನೆಯಲ್ಲ, ಇಡೀ ಸಮಾಜ ಮತ್ತು ಇಡೀ ದೇಶ ಪ್ರಗತಿ ಹೊಂದುತ್ತದೆ ಎಂಬುದನ್ನು ನಾನು ಯಾವಾಗಲೂ ನಂಬುತ್ತೇನೆ. ಸದ್ಯಕ್ಕೆ 8 ಮಹಿಳಾ ಚಾಲಕಿಯರಿದ್ದಾರೆ. ಇದೇ ತಿಂಗಳು ಮೂವರು ಮಹಿಳಾ ಚಾಲಕಿಯರ ನೇಮಕವಾಗಲಿದೆ. ಮತ್ತಷ್ಟು ಮಹಿಳೆಯರಿಗೆ ಉದ್ಯೋಗ ನೀಡುವ ಯೋಚನೆ ಇದೆ. ಕಾರ್ಬನ್ ರಹಿತ ಮತ್ತು ಕೈಗೆಟುಕುವ ದರದಲ್ಲಿ ಪ್ರಯಾಣಿಕರನ್ನು ತಲುಪುವುದು ನಮ್ಮ ಗುರಿ.

-ಗಿರೀಶ್ ನಾಗಪಾಲ್, ಸಿಇಒ ಮತ್ತು ಸಹ-ಸಂಸ್ಥಾಪಕ, ಮೆಟ್ರೊರೈಡ್

***

ಮಹಿಳೆಯರು ಶಿಸ್ತುಬದ್ಧರು

ಮಹಿಳಾ ಚಾಲಕರು ಸಾಮಾನ್ಯವಾಗಿ ಶಿಸ್ತುಬದ್ಧವಾಗಿರುತ್ತಾರೆ ಮತ್ತು ಗ್ರಾಹಕರೊಂದಿಗೆ ಸಂಯಮದಿಂದ ಇರುತ್ತಾರೆ. ಇದು ನಮ್ಮ ವ್ಯವಹಾರದ ಮೇಲೆ ನೇರ ಪರಿಣಾಮ ಬೀರುತ್ತದೆ ಮತ್ತು ನಮ್ಮ ಸೇವೆಗಳನ್ನು ಉತ್ತಮಗೊಳಿಸುತ್ತದೆ. ನಮ್ಮ ಎಐ ಎಂಜಿನ್‌ ಆಟೋರಿಕ್ಷಾಗಳಿಂದಾಗಿ ಗ್ರಾಹಕರ ಪ್ರಯಾಣ ಸುರಕ್ಷಿತವಾಗಿದೆ.

-ಕಾಮನ್ ಅಗರ್‌ವಾಲ್, ಸಿಟಿಒ, ಸಹ-ಸಂಸ್ಥಾಪಕ, ಮೆಟ್ರೊರೈಡ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.