ADVERTISEMENT

ಹಬ್ಬದ ಸಂದರ್ಭಕ್ಕೆ ಹೊಸ ಲುಕ್‌

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 19:31 IST
Last Updated 13 ಅಕ್ಟೋಬರ್ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಬ್ಬ ಎಂದರೆ ಸಂಭ್ರಮ. ಸಂಭ್ರಮವಿದ್ದಾಗ ಹೊಸ ಬಟ್ಟೆ ಧರಿಸುವುದು ಭಾರತೀಯ ಸಂಪ್ರದಾಯವೂ ಹೌದು. ಈ ಬಾರಿಯ ಹಬ್ಬಕ್ಕೆ ಸರಳವಾಗಿ ಆದರೆ ಸುಂದರವಾಗಿ ಕಾಣಲು ಇಚ್ಛಿಸುವವರು ಈ ಫ್ಯಾಷನ್‌ ಟ್ರೆಂಡ್‌ನ ಮೊರೆ ಹೋಗಬಹುದು. ಈ ಉಡುಪುಗಳು ನಿಮ್ಮ ಅಂದವನ್ನು ಹೆಚ್ಚಿಸುವುದಲ್ಲದೇ ಹೊಸ ಟ್ರೆಂಡ್‌ಗೂ ತೆರೆದುಕೊಳ್ಳುವಂತೆ ಮಾಡುತ್ತವೆ.

ಫ್ಲೇರ್ಡ್ ಸ್ಕರ್ಟ್

ಹಿಂದೆಲ್ಲಾ ಸಿನಿಮಾ ನಟಿಯರು ಹೆಚ್ಚಾಗಿ ಫ್ಲೇರ್ಡ್ ಸ್ಕರ್ಟ್ ಧರಿಸುತ್ತಿದ್ದರು. ಮೊಣಕಾಲಿನವರೆಗೂ ಇರುತ್ತಿದ್ದ ಈ ಸ್ಕರ್ಟ್ ಅಂದು ಹೆಚ್ಚು ಚಾಲ್ತಿಯಲ್ಲಿತ್ತು. ಈಗ ಈ ಟ್ರೆಂಡ್‌ ಹೊಸ ರೂಪದಲ್ಲಿ ಫ್ಯಾಷನ್ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಒಂದೇ ಬಣ್ಣದ ಶ್ರಿಂಕ್‌ ಮಾಡಿದಂತೆ ಕಾಣುವ ಫ್ಲೇರ್ಡ್ ಸ್ಕರ್ಟ್ ಮೇಲೆ ಟೀ ಶರ್ಟ್‌, ಟಾಪ್‌ ಹಾಗೂ ಶರ್ಟ್‌ಗಳನ್ನು ಧರಿಸಬಹುದು. ಶಾರ್ಟ್‌, ಲಾಂಗ್‌ ಅಥವಾ ಮೊಣಕಾಲಿನ ಉದ್ದದವರೆಗೆ ಬರುವ ಈ ಸ್ಕರ್ಟ್ ಅನ್ನು ಹಬ್ಬಗಳ ಸಮಯದಲ್ಲಿ ಧರಿಸಬಹುದು. ಇದನ್ನು ಧರಿಸಿದಾಗ ಸಾಂಪ್ರದಾಯಿಕ ನೋಟದೊಂದಿಗೆ ಟ್ರೆಂಡಿ ಆಗಿ ಕೂಡ ಕಾಣಬಹುದು.

ADVERTISEMENT

ಸಿಂಗಲ್‌ ಟಾಪ್‌

ಈ ಹಿಂದೆ ಹಬ್ಬ, ಮದುವೆ–ಮುಂಜಿಯಂತಹ ಸಮಾರಂಭಗಳಲ್ಲಿ ಕುರ್ತಾ ಟಾಪ್‌ ಹೆಚ್ಚು ಸದ್ದು ಮಾಡುತ್ತಿತ್ತು. ಜೆಗ್ಗಿಂಗ್‌, ಲೆಗ್ಗಿಂಗ್‌, ಪೆನ್ಸಿಲ್‌ ಪ್ಯಾಂಟ್ ಜೊತೆ ಹೊಂದುವ ಕುರ್ತಾ ಟಾಪ್‌ಗಳು ಪುರುಷರು ಹಾಗೂ ಮಹಿಳೆಯರು ಇಬ್ಬರಿಗೂ ಇಷ್ಟವಾಗುತ್ತಿತ್ತು. ಆದರೆ ಈಗ ಹೆಣ್ಣುಮಕ್ಕಳು ಕತ್ತಿನಿಂದ ಕಾಲಿನವರೆಗೆ ಇರುವ ಸಿಂಗಲ್‌ ಪೀಸ್‌ ಡ್ರೆಸ್‌ ಅಥವಾ ಸಿಂಗಲ್ ಟಾಪ್ ಧರಿಸಲು ಹೆಚ್ಚು ಇಷ್ಟಪಡುತ್ತಿದ್ದಾರೆ. ಕತ್ತಿನಿಂದ ಎದೆಭಾಗದವರೆಗೆ ಸಂಪೂರ್ಣ ವಿನ್ಯಾಸವಿದ್ದು ಎದೆಭಾಗದಿಂದ ಕೆಳಗಿನವರೆಗೆ ಪ್ಲೇನ್‌ ಆಗಿರುವ ಟಾಪ್‌ಗಳು ಈಗ ಫ್ಯಾಷನ್‌ ಯುಗದಲ್ಲಿ ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಹಬ್ಬಗಳ ಸಂದರ್ಭದಲ್ಲಿ ಇದನ್ನು ಧರಿಸುವುದರಿಂದ ಸಾಂಪ್ರದಾಯಿಕ ನೋಟ ಸಿಗುತ್ತದೆ.

ಶರಾರ ಸೆಟ್‌

ಫ್ಯಾಷನ್ ಕ್ಷೇತ್ರದಲ್ಲಿ ಇತ್ತೀಚೆಗೆ ಹೆಚ್ಚು ಮಂಚೂಣಿಯಲ್ಲಿರುವುದು ಶರಾರ. ವಿವಿಧ ವಿನ್ಯಾಸದ ಶರಾರ ಡ್ರೆಸ್‌ಗಳು ಫ್ಯಾಷನ್‌ ಪ್ರಿಯರಿಗೆ ಅಚ್ಚುಮೆಚ್ಚು ಎನ್ನಿಸಿವೆ. ಇದರೊಂದಿಗೆ ಸೆಲೆಬ್ರೆಟಿಗಳೂ ಶರಾರ ಧರಿಸಿ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸರಳ ವಿನ್ಯಾಸದಿಂದ ಹಿಡಿದು ಭರ್ಜರಿ ವಿನ್ಯಾಸದವರೆಗಿನ ಶರಾರಗಳು ಲಭ್ಯ. ಟಾಪ್‌ ಬಣ್ಣದ್ದೇ ಹೆಚ್ಚು ವಿನ್ಯಾಸ, ಕಸೂತಿ, ಜರಿ ಇರುವ ದುಪಟ್ಟಾ ಧರಿಸುವುದು ಈಗಿನ ಟ್ರೆಂಡ್‌. ಇದು ಗ್ರ್ಯಾಂಡ್ ಲುಕ್ ಸಿಗುವಂತೆ ಮಾಡುತ್ತದೆ.

ಪಲಾಜೊ ಮತ್ತು ಶಾರ್ಟ್ ಟಾಪ್‌

ಪಲಾಜೊದೊಂದಿಗೆ ಶಾರ್ಟ್‌ಟಾಪ್‌ ಧರಿಸುವುದು ಈಗಿನ ಟ್ರೆಂಡ್‌. ಕಸೂತಿ, ಜರಿ ವಿನ್ಯಾಸ ಸೇರಿದಂತೆ ಹೆಚ್ಚು ಆಡಂಬರದ ವಿನ್ಯಾಸವಿರುವ ಟಾಪ್‌ಗಳು ಪಲಾಜೊಗೆ ಹೆಚ್ಚು ಹೊಂದಿಕೆಯಾಗುತ್ತವೆ. ಗಾಢ ಬಣ್ಣಕ್ಕಿಂತ ತಿಳಿ ಬಣ್ಣದ ಪಲಾಜೊ ಹಾಗೂ ಶಾರ್ಟ್‌ ಟಾಪ್‌ಗಳು ಹಬ್ಬದ ಸಮಯದಲ್ಲಿ ಹೆಚ್ಚು ಹೊಂದುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.