ADVERTISEMENT

ಸಿಖ್‌ ಸಮುದಾಯದ ‘ಪ್ರಕಾಶ್ ಪುರಬ್‌ ಯಾತ್ರೆ’

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2019, 19:45 IST
Last Updated 30 ಆಗಸ್ಟ್ 2019, 19:45 IST
ಗುರುನಾನಕರ 550ನೇ ಜಯಂತಿ ಅಂಗವಾಗಿ ಬೀದರ್‌ನಿಂದ ನಗರಕ್ಕೆ ಆಗಮಿಸಿದ ಪುರಬ್‌ ಯಾತ್ರೆ
ಗುರುನಾನಕರ 550ನೇ ಜಯಂತಿ ಅಂಗವಾಗಿ ಬೀದರ್‌ನಿಂದ ನಗರಕ್ಕೆ ಆಗಮಿಸಿದ ಪುರಬ್‌ ಯಾತ್ರೆ   

ಸಿಖ್ ಧರ್ಮಗುರು ಗುರುನಾನಕರ550ನೇ ಜಯಂತಿ ಅಂಗವಾಗಿ ಬೀದರ್‌ ನಾನಕ್‌ ಝೀರಾ ಗುರುದ್ವಾರದಿಂದ ಹೊರಟು ಬೆಂಗಳೂರು ತಲುಪಿದ ‘ಪ್ರಕಾಶ್‌ ಪುರಬ್‌ ಯಾತ್ರೆ’ಯನ್ನು ಸಿಖ್ ಸಮುದಾಯದವರು ಭಕ್ತಿಭಾವದಿಂದ ಬರಮಾಡಿಕೊಂಡರು.

ಜಾಲಹಳ್ಳಿಯಲ್ಲಿ ಯಾತ್ರೆ ಸ್ವಾಗತಿಸಿದಧರ್ಮಗುರುಗಳು ಅಲಂಕೃತ ವಾಹನದಲ್ಲಿದ್ದ ಸಿಖ್‌ ಧರ್ಮದ ಪವಿತ್ರ ಗ್ರಂಥ ‘ಗುರು ಗ್ರಂಥ್‌ ಸಾಹಿಬ್‌’ಗೆ ಪೂಜೆ ಸಲ್ಲಿಸಿದರು. ನಂತರ ನಗರದ ವಿವಿಧ ರಸ್ತೆಗಳ ಮೂಲಕ ಮೆರವಣಿಗೆ ಹಲಸೂರಿನ ಗುರುದ್ವಾರ ತಲುಪಿತು.ಗುರುದ್ವಾರದಲ್ಲಿ ಗುರುಗ್ರಂಥ ಪಠಣ, ಪ್ರಾರ್ಥನೆ, ಕೀರ್ತನೆ, ಸಂಪತಿ, ಆರತಿ ಕಾರ್ಯಕ್ರಮ ನಡೆದವು.

ಮೆರವಣಿಗೆಯಲ್ಲಿಪಗಡಿಧಾರಿ ಯುವಕರು ಪ್ರದರ್ಶಿಸಿದ ಕತ್ತಿ ವರಸೆ, ಧ್ವಜಗಳ ಪ್ರದರ್ಶನ, ನಿಶಾನ್‌ ಸಾಹಿಬ್,ಕುದುರೆ ಸವಾರಿ ಗಮನ ಸೆಳೆದವು. ಚುನ್ನಿ ಧರಿಸಿದ್ದ ಮಹಿಳೆಯರು, ಮಕ್ಕಳು ‘ನಗರ ಕೀರ್ತನ’ದಲ್ಲಿ ಭಾಗವಹಿಸಿದ್ದರು.

ADVERTISEMENT

ಕೈ ಬರವಣಿಗೆಯ ಮೂಲ ಪ್ರತಿಗಳ ‘ಗುರು ಗ್ರಂಥ್‌ ಸಾಹಿಬ್‌’ ಹೊತ್ತ ಪುರಬ್‌ ಯಾತ್ರೆ ಬೆಂಗಳೂರಿನಿಂದ ಚೆನ್ನೈ ಮೂಲಕ ದೇಶದಾದ್ಯಂತ ಸಂಚರಿಸಿ ನವೆಂಬರ್‌ 13ರಂದು ಅಮೃತಸರ ಸ್ವರ್ಣ ಮಂದಿರ ತಲುಪಲಿದೆ ಎಂದು ಪ್ರೊ. ಎಚ್‌.ಎಸ್‌. ಭಾಟಿಯಾ ಹೇಳಿದರು.

ಕಾರ್ತಿಕ ಮಾಸದ ಪೌರ್ಣಮಿಯ ದಿನವನ್ನು(ನವೆಂಬರ್ ತಿಂಗಳಿನಲ್ಲಿ ಬರುತ್ತದೆ) ಸಿಖ್‌ ಧರ್ಮದ ಮೊದಲ ಗುರುನಾನಕರ ಜಯಂತಿಯಾಗಿ ಆಚರಿಸಲಾಗುತ್ತದೆ. ‘ನಾನಕ್‌ ಪ್ರಕಾಶ್ ಉತ್ಸವ್‌‘ ಎಂದು ಕರೆಯಲಾಗುವ ಇದು ಸಿಖ್ಖರ ಅತ್ಯಂತ ಪವಿತ್ರ ಉತ್ಸವಗಳಲ್ಲಿ ಒಂದಾಗಿದೆ. ಈ ಹಬ್ಬಕ್ಕೆ ಅತಿ ಹೆಚ್ಚಿನ ಪ್ರಾಮುಖ್ಯತೆಯಿದ್ದು, ವಿಶ್ವದಾದ್ಯಂತ ಸಿಖ್ಖರು ಭಕ್ತಿಭಾವದಿಂದ ಆಚರಿಸುತ್ತಾರೆ ಎಂದರು.

ಗ್ರಂಥ್‌ ಸಾಹಿಬ್ ಗ್ರಂಥದಿಂದ ಆಯ್ದ ವಾಕ್ಯ, ಪಂಕ್ತಿಗಳನ್ನು ಪಠಿಸಲಾಗುತ್ತದೆ.ಪ್ರೀತಿ, ಶಾಂತಿ, ಸತ್ಯವನ್ನು ಪ್ರತಿಪಾದಿಸುವ ಸಂದೇಶಗಳು ಸ್ತುತಿಗಳ ರೂಪದಲ್ಲಿರುತ್ತವೆ. ಈ ಸ್ತುತಿಗಳ ಮೂಲಕ ಸಿಖ್ಖರು, ಧರ್ಮಗುರುಗಳ ಬೋಧನೆ ಅನುಸರಿಸುತ್ತಾರೆ ಎಂದು ಭಾಟಿಯಾ ವಿವರಿಸಿದರು. ಮೆರವಣಿಗೆಯಲ್ಲಿ ಗುರುನಾನಕ ಪ್ರಬಂಧಕ ಕಮಿಟಿ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.