ADVERTISEMENT

ಕೂತು ಮಾತನಾಡಬಾರದೇ...

ವಿನುತ ಮುರಳೀಧರ
Published 24 ಜುಲೈ 2020, 19:31 IST
Last Updated 24 ಜುಲೈ 2020, 19:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಸ್ತ್ರೀಯರು ಸ್ವಭಾವತಃ ವಾಚಾಳಿಗಳು. ಕಷ್ಟ-ಸುಖವನ್ನು ಆಪ್ತರೊಂದಿಗೆ ಹಂಚಿಕೊಂಡಾಗಲಷ್ಟೇ ಅವರಿಗೆ ಸಮಾಧಾನ. ಈ ಕೊರೊನಾ ಸಂದರ್ಭದಲ್ಲಿ ಮನೆಯಲ್ಲೇ ಇರುವ ಕುಟುಂಬದ ಸದಸ್ಯರು ಆಪ್ತವಾಗಿ ಮಾತನಾಡಿದರೆ ಅವರ ದುಗುಡ ಸ್ವಲ್ಪ ಕಡಿಮೆಯಾಗಬಹುದು.

***

‘ಯಾಕೋ ಮನಸ್ಸಿಗೆ ತುಂಬಾ ಬೇಸರ. ಊಟನೂ ಸೇರ‍್ತಿಲ್ಲ, ನಿದ್ದೆ ಕೂಡ ಬರುತ್ತಿಲ್ಲ. ಒಂದೆರಡು ಮಾತನ್ನಾಡಿ ಹಗುರಾಗೋಣ ಅಂದ್ರೆ ಅಕ್ಕಪಕ್ಕದ ಮನೆಯವರು ಸಹಾ ಹೊರಗೆ ಬರ‍್ತಿಲ್ಲ. ಅವ್ರನ್ನೆಲ್ಲಾ ಸರಿಯಾಗಿ ನೋಡದೆ ಯಾವ ಕಾಲ ಆಯ್ತೇನೋ! ನಾನು ಒಂಟಿ ಅನಿಸ್ತಿದೆ ಮ್ಯಾಡಂ’ ತಮ್ಮ ಮನದ ದುಗುಡವನ್ನು ಒಂದೇ ಉಸಿರಿನಲ್ಲಿ ತೋಡಿಕೊಂಡರು ಲಲಿತ.

ADVERTISEMENT

‘ಇತ್ತೀಚೆಗೆ ಬಹಳ ಭಯ ಆಗ್ತಿದೆ. ರಾತ್ರಿ ಲೈಟ್ ಆರಿಸಿ ಮಲಗಲೂ ಹೆದರಿಕೆ. ಒಂದೊಂದ್ಸಲ ಅಳುನೇ ಬಂದ್ಬಿಡುತ್ತೆ. ಏನೇನೋ ಯೋಚನೆಗಳು, ಮತ್ತೆ ನಮ್ಮವರನ್ನೆಲ್ಲ ನೋಡ್ತೀನೋ ಇಲ್ವೋ ಎಂಬ ಚಿಂತೆ ಕಾಡುತ್ತೆ’ ಕಮಲಮ್ಮನ ದುಃಖದ ಕಣ್ಣೀರು!

ಈಗೀಗ ಆಪ್ತಸಮಾಲೋಚನೆಗೆ ಬರುವವರ ಬವಣೆ ಈ ತರಹದ್ದು. ಇದು ಒಬ್ಬಳು ಲಲಿತ, ಕಮಲಮ್ಮ (ಹೆಸರು ಬದಲಾಯಿಸಿದೆ)ನ ಪರಿಸ್ಥಿತಿಯಲ್ಲ. ಹತ್ತಾರು ಮಹಿಳೆಯರು ಇಂತಹದ್ದೇ ಸಮಸ್ಯೆ ಎದುರಿಸುತ್ತಿದ್ದಾರೆ. ಗಂಡಸರು ಮನೆಯಲ್ಲೇ ಇರುವುದರಿಂದ ಮನಸ್ಸು ಬಿಚ್ಚಿ ಮಾತನಾಡಲು ಆಗುತ್ತಿಲ್ಲವೆಂಬುದು ಬಹುತೇಕರ ಅಳಲು! ಹೌದು, ಕೊರೊನಾ ಕಾರಣದಿಂದಾಗಿ ಕೆಲಸವಿಲ್ಲದೆಯೊ ಅಥವ ಮನೆಯಲ್ಲೇ ಕೆಲಸ ನಿರ್ವಹಿಸುವುದರಿಂದಲೋ ಪುರುಷರು ಹೊರಗೆ ಹೋಗುತ್ತಿಲ್ಲ. ಶಾಲಾ-ಕಾಲೇಜುಗಳಿಲ್ಲದೆ ಮಕ್ಕಳೂ ಮನೆಯಲ್ಲೇ. ಇನ್ನು ಹಿರಿಯರು ದೇವಸ್ಥಾನ, ವಾಯುವಿಹಾರವೆಂದು ದಿನದ ಒಂದಷ್ಟು ಹೊತ್ತಾದರೂ ಹೊರಗಿರುತ್ತಿದ್ದರು. ಆದರೀಗ ಎಲ್ಲರೂ ಮನೆಯಲ್ಲೇ ಬಂಧಿ.

ಹವ್ಯಾಸಕ್ಕೂ ತಿಲಾಂಜಲಿ

ಈ ಪರಿಸ್ಥಿತಿ ಹೆಚ್ಚಾಗಿ ಮಹಿಳೆಯರನ್ನು ಮಾನಸಿಕ ಸಮಸ್ಯೆಗೆ ದೂಡುತ್ತಿದೆ. ಗಂಡ ಮಕ್ಕಳು, ಕಚೇರಿ, ಶಾಲಾ-ಕಾಲೇಜೆಂದು ಹೊರ ಹೊರಟ ಮೇಲೆ ಹೆಂಗಸರು ಮನೆಗೆಲಸದ ಜೊತೆಗೆ ತಮ್ಮಿಚ್ಛೆಯ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಫೋನ್‌ನಲ್ಲಿ ನಿತ್ಯವೂ ಆಪ್ತರೊಂದಿಗೆ ಕಷ್ಟ– ಸುಖಗಳ ವಿನಿಮಯವಾದರಷ್ಟೇ ಹಲವರಿಗೆ ಸಮಾಧಾನ. ಮನದ ದುಗುಡಗಳನ್ನು ಆಪ್ತರೊಂದಿಗೆ ಹೇಳಿಕೊಂಡಾಗ ಮನಸ್ಸು ತಿಳಿ ತಿಳಿ. ಈಗ ಬಿಡುವೂ ಕಮ್ಮಿ, ಜೊತೆಗೆ ಪುರುಷರಿಂದ ವಿರೋಧ ಬೇರೆ. ‘ಅದೆಷ್ಟು ಹೊತ್ತು ಫೋನ್‌ನಲ್ಲಿ ಮಾತಾಡೋದು? ಹೊರಗಿನವರೊಂದಿಗೆ ಮನೆಯ ವಿಚಾರವೇಕೆ? ದಿನಾ ಏನು ಮಾತು...?’ ಹೀಗೆ ಆಕ್ಷೇಪಣೆಗಳ ಸುರಿಮಳೆ. ಬಿಡುವಾದಾಗ ಸ್ವಲ್ಪ ಟಿವಿ ನೋಡೋಣವೆಂದರೆ ಮಕ್ಕಳು ರಿಮೋಟ್ ಕೊಡಲ್ಲ. ಗೆಳತಿಯರೊಂದಿಗೆ ಹರಟೆ, ವಾಯುವಿಹಾರ ಸಾಧ್ಯವಿಲ್ಲ. ಸಭೆ, ಸಮಾರಂಭ, ಕಾರ್ಯಕ್ರಮಗಳಿಲ್ಲ. ಬಂಧು-ಮಿತ್ರರ ಭೇಟಿಯೂ ನಿಂತು ಕೆಲವು ತಿಂಗಳುಗಳಾದವು. ತಮ್ಮ ದಿನಚರಿಯ ಈ ಬಲವಂತದ ಬದಲಾವಣೆಯ ಕಾರಣ ಹಲವು ಮಹಿಳೆಯರು ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಇದನ್ನು ನಿರ್ಲಕ್ಷಿಸಿದರೆ ಖಿನ್ನತೆಗೆ ಜಾರುವ ಅಪಾಯವಿದೆ.

ಹಾಗಂತ ಈ ಕೊರೊನಾ ಪ್ರಾಯೋಜಿತ ಮಾನಸಿಕ ಒತ್ತಡ ಪುರುಷರನ್ನೂ ಬಿಟ್ಟಿಲ್ಲ. ‘ಮ್ಯಾಡಂ, ನಮ್ಮ ಮನೆಯವ್ರು ಇತ್ತೀಚೆಗೆ ತುಂಬಾ ಕಿರಿಕಿರಿ ಮಾಡ್ತಿದ್ದಾರೆ, ಸುಮ್ಸುಮ್ನೆ ರೇಗ್ತಾರೆ, ಮಕ್ಕಳು ಚೂರು ಗಲಾಟೆ ಮಾಡಂಗಿಲ್ಲ ಅವರಿಗೂ ಸಿಕ್ಕಾಪಟ್ಟೆ ಬೈತಾರೆ. ಹೀಗಿರಲಿಲ್ಲ ಮೊದ್ಲು. ನಿದ್ದೆ, ಊಟ, ತಿಂಡಿನೂ ಸರಿಯಾಗಿ ಮಾಡುತ್ತಿಲ್ಲ, ಎಷ್ಟೊತ್ತಿಗೂ ಏನೋ ಯೋಚನೆ. ನಂಗಂತೂ ಏನು ಮಾಡ್ಬೇಕು ಅಂತ ಗೊತ್ತಾಗ್ತಿಲ್ಲ’ ಫೋನಲ್ಲೇ ಅಳಲು ತೋಡಿಕೊಂಡ ಮಹಿಳೆಯೊಬ್ಬರು ಪುರುಷರ ಪ್ರಸ್ತುತ ಮನಃಸ್ಥಿತಿಯ ಚಿತ್ರಣ ನೀಡಿದ್ದರು.

ಸಮಯ ಮೀಸಲಿಡಿ

ಹೌದು, ಮಹಿಳೆಯರು ಮತ್ತು ಪುರುಷರ ಮನಃಸ್ಥಿತಿಯಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಸ್ತ್ರೀಯರು ಸ್ವಭಾವತಃ ವಾಚಾಳಿಗಳು. ಕಷ್ಟ-ಸುಖವನ್ನು ಆಪ್ತರೊಂದಿಗೆ ಹಂಚಿಕೊಂಡಾಗಲಷ್ಟೇ ಅವರಿಗೆ ಸಮಾಧಾನ. ಈ ಕೊರೊನಾ ಕಾಲಘಟ್ಟದಲ್ಲಿ ತಮ್ಮ ಮನದ ದುಗುಡಗಳನ್ನು ಹೊರ ಹಾಕಲು ಮೊಬೈಲೊಂದೇ ದಾರಿ. ಇದಕ್ಕೆ ಮನೆಯವರಿಂದ ವಿರೋಧ ಸರಿಯಲ್ಲ. ಜೊತೆಗೆ ಮೊಬೈಲ್‌ನ ಅತಿ ಬಳಕೆಯ ಅಪಾಯದ ಅರಿವೂ ಇರಲಿ. ದಿನದ ಒಂದೆರಡು ಗಂಟೆಯಾದರೂ ಮಹಿಳೆಯರು ತಮ್ಮಿಷ್ಟದ ಕೆಲಸ–ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಕುಟುಂಬದ ಸಹಕಾರವಿರಲಿ. ಮನೆಯವರೆಲ್ಲ ಒಟ್ಟಿಗೆ ಕುಳಿತು ಊಟ-ತಿಂಡಿಗಳ ಸೇವನೆ, ಹೆಣ್ಣಿನ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸುವ ಮನೋಭಾವ, ಆಕೆಯ ಬೇಕು– ಬೇಡಗಳ ಜೊತೆಗೆ ಆರೋಗ್ಯದ ಕುರಿತಾಗಿಯೂ ಕಾಳಜಿ ಇರಲಿ. ಬೇರೆಯವರೊಂದಿಗೆ ಮಾತನಾಡುವುದರಿಂದ ರೋಗ ಅಂಟುವುದೆಂಬ ತಪ್ಪು ಕಲ್ಪನೆ ಬೇಡ. ಅಕ್ಕಪಕ್ಕದ ಮನೆಯವರೊಂದಿಗೆ ಅಂತರವಿಟ್ಟುಕೊಂಡು ಮಾತನಾಡಬಹುದು. ಹೆಚ್ಚು ಜನ ಸಂಚಾರವಿಲ್ಲದೆಡೆ ವಾಯುವಿಹಾರ ಮಾಡಬಹುದು. ಮನೆಗೆಲಸದ ಜೊತೆಗೆ ಸ್ವಂತ ಕಾರ್ಯಕ್ಕೂ ಸಮಯ ನಿಗದಿಯಾಗಿರಲಿ. ಕುಟುಂಬದ ಎಲ್ಲರನ್ನೂ ಕೆಲಸದಲ್ಲಿ ತೊಡಗಿಸಿಕೊಳ್ಳಿ. ಏನೇ ಸಮಸ್ಯೆಯಾದರೂ ಮನೆಯವರೊಂದಿಗೆ ಮುಕ್ತವಾಗಿ ಮಾತನಾಡಲು ಹಿಂಜರಿಕೆ ಬೇಡ. ಹೆಂಗಳೆಯರು ಮಾನಸಿಕ ಆರೋಗ್ಯಕ್ಕಾಗಿ ತಮ್ಮ ಹವ್ಯಾಸಗಳಿಗೆ ನೀರೆರೆದು ಪೋಷಿಸಿಕೊಳ್ಳುವುದೂ ಮುಖ್ಯ.

ಧುತ್ತನೆ ಎದುರಾಗಿರುವ ಈ ವಿಷಮ ಪರಿಸ್ಥಿತಿ ಪುರುಷರನ್ನೂ ಹೈರಾಣಾಗಿಸಿದೆ. ಕೆಲಸ ಕಳೆದುಕೊಂಡೊ, ವ್ಯವಹಾರದ ನಷ್ಟದಿಂದಾಗಿಯೊ ಬಹಳಷ್ಟು ಮಂದಿ ಜವಾಬ್ದಾರಿಗಳನ್ನು ನಿಭಾಯಿಸಲಾಗದೆ ಸಂಕಷ್ಟಕ್ಕೀಡಾಗಿದ್ದಾರೆ. ಹಣಕಾಸಿನ ಮುಗ್ಗಟ್ಟಿನ ಜೊತೆಗೆ ಮುಂದೇನು ಎಂಬ ಚಿಂತೆ. ಮನೆಯಲ್ಲೇ ಕುಳಿತು ಸಮಯ ಕಳೆಯಲಾಗುತ್ತಿಲ್ಲ. ಸ್ನೇಹಿತರೊಂದಿಗೆ ಮೋಜಿಗೂ ಕಡಿವಾಣ ಬಿದ್ದಿದೆ. ಈ ಒತ್ತಡ ಮನೆಯವರ ಮೇಲೆ ತಿರುಗಿದೆ. ಸಣ್ಣಪುಟ್ಟದ್ದಕ್ಕೂ ಸಿಟ್ಟು, ರೇಗಾಟ, ಜಗಳ. ಪತಿ ಹೀಗಾಡುವಾಗ ಪತ್ನಿ ತಾಳ್ಮೆ ಕಳೆದುಕೊಳ್ಳದೆ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಸಮಾಧಾನದ ಮಾತನಾಡಬೇಕು. ಖರ್ಚನ್ನು ಮಿತಿಗೊಳಿಸುವುದರ ಜೊತೆಗೆ ಮಕ್ಕಳಿಗೂ ತಿಳಿ ಹೇಳಿ ಅವರ ವರ್ತನೆಯಲ್ಲಿ ಬದಲಾವಣೆ ತರಬೇಕು. ಗಂಡಸರೂ ಅಷ್ಟೆ. ಕಷ್ಟಗಳು, ತುಮುಲಗಳನ್ನು ತಮ್ಮೊಳಗೇ ಇಟ್ಟುಕೊಳ್ಳದೆ ಮನೆಯವರೊಂದಿಗೆ ಹೇಳಿಕೊಂಡಾಗ ಸಹಜವಾಗಿಯೆ ಒತ್ತಡ ಕಡಿಮೆಯಾಗುತ್ತದೆ. ಹಾಗೆಯೆ ಮುಂದೇನು ಮಾಡಬೇಕೆಂದು ಒಟ್ಟಿಗೆ ಚರ್ಚಿಸಿ ನಿರ್ಧರಿಸಬಹುದು. ಈ ಆಪತ್ಕಾಲದಲ್ಲಿ ಪರಸ್ಪರ ಅರಿತು ಹೊಂದಾಣಿಕೆಯೊಂದಿಗೆ ನಡೆದಾಗ ಕಷ್ಟಗಳನ್ನು ಮೆಟ್ಟಿ ನಿಲ್ಲುವ ಮನೋಸ್ಥೈರ್ಯ ಸಾಧ್ಯ.

(ಲೇಖಕಿ: ಆಪ್ತ ಸಮಾಲೋಚಕಿ, ತೀರ್ಥಹಳ್ಳಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.