ADVERTISEMENT

ತಿರುಪತಿ ತಿಮ್ಮಪ್ಪ

ಛಾಯಾಪತಿ
Published 23 ಆಗಸ್ಟ್ 2019, 19:45 IST
Last Updated 23 ಆಗಸ್ಟ್ 2019, 19:45 IST
   

ಶ್ರಾವಣ ಶನಿವಾರಕ್ಕೂ ತಿರುಪತಿ ತಿಮ್ಮಪ್ಪನಿಗೂ ಅವಿನಾಭಾವ ಸಂಬಂಧವಿದೆ. ಅಂದು ತಿಮ್ಮಪ್ಪನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ತಿಮ್ಮನ ಆಲಯಗಳಲ್ಲಿ ಈ ದಿನ ವಿಶೇಷ ಪೂಜೆಗಳೂ ನಡೆಯುತ್ತವೆ.

ತಿರುಪತಿ ಎಂದರೆ ತಿಮ್ಮಪ್ಪ; ತಿಮ್ಮಪ್ಪ ಎಂದರೆ ತಿರುಪತಿ – ಎಂಬ ಸೂತ್ರವೂ ಉಂಟಷ್ಟೆ. ತಿರುಪತಿ ಎಂದ ಕೂಡಲೇ ನಮಗೆ ಹತ್ತಾರು ವಿವರಗಳು ಕಣ್ಮುಂದೆ ಸುಳಿಯುತ್ತವೆ. ಅಲ್ಲಿಯ ಗುಡಿಯ ವೈಭವ, ಹತ್ತಾರು ರೀತಿಯ ಉತ್ಸವಗಳು, ಜಗತ್ತಿನ ಹಲವು ಭಾಗಗಳಿಂದ ಅಲ್ಲಿಗೆ ಹರಿದುಬರುವ ಜನಸಾಗರ, ಲಡ್ಡುಪ್ರಸಾದದ ರುಚಿ, ಅಲ್ಲಿ ಸಂಗ್ರಹವಾಗುವ ಕಾಣಿಕೆಯ ರಾಶಿ, ಅನ್ನಮಾಚಾರ್ಯರ ಸಂಕೀರ್ತನೆ, ಎಂ. ಎಸ್‌. ಸುಬ್ಬುಲಕ್ಷ್ಮೀ ಹಾಡಿರುವ ಸುಪ್ರಭಾತ, ಗರ್ಭಗುಡಿಯಲ್ಲಿ ನೆಲೆ ನಿಂತಿರುವ ವಿಗ್ರಹದ ರಹಸ್ಯ ಮತ್ತು ಅದರ ಸೊಗಸು – ಹೀಗೆ ಹತ್ತಾರು ಸಂಗತಿಗಳು ಮನೋಮುದ್ರಿಕೆಯಲ್ಲಿ ಸಂಚಾರವಾಗುತ್ತವೆ. ಸಾವಿರಾರು ವರ್ಷಗಳಿಂದ ಜನಾದರಣೆಯನ್ನು ಪಡೆದಿರುವ ಈ ಗುಡಿ ನಮ್ಮ ಸಂಸ್ಕೃತಿಯನ್ನು ರೂಪಿಸುವಲ್ಲೂ ಪ್ರಭಾವವನ್ನು ಬೀರುತ್ತಿರುವುದು ಸುಳ್ಳಲ್ಲ.

‘ವೇಂಕಟಾದ್ರಿಸಮಂ ಸ್ಥಾನಂ ಬ್ರಹ್ಮಾಂಡೇ ನಾಸ್ತಿ ಕಿಂಚನ’ (ವೇಂಗಡಬೆಟ್ಟ – ಎಂದರೆ ತಿರುಪತಿಗೆ ಸಮನಾದ ಮತ್ತೊಂದು ನೆಲೆ ಇಡಿಯ ಸೃಷ್ಟಿಯಲ್ಲಿಯೇ ಇಲ್ಲ) – ಎಂಬ ಒಕ್ಕಣೆ ಬ್ರಹ್ಮಾಂಡಪುರಾಣದಲ್ಲಿದೆ. ವೆಂಕಟೇಶ್ವರನು ಈ ಬೆಟ್ಟವನ್ನು ಏರಿ ನಿಲ್ಲಲು ಕಾರಣವೇನು? ವಾದಿರಾಜರು ಇದಕ್ಕೆ ಸೂಚಿಸಿರುವ ಉತ್ತರ ಸೊಗಸಾಗಿದೆ: ‘ಜಗತ್ತಿಗೇ ಕಣ್ಣಾಗಿರುವ ವೇಂಕಟೇಶ್ವರನು ತನ್ನವರನ್ನು ಕಾಪಾಡಬೇಕೆಂಬ ಕಾರುಣ್ಯದಿಂದ ಎಲ್ಲ ದಿಕ್ಕುಗಳಲ್ಲಿಯೂ ಅವರನ್ನು ಕಾಣುವಂತಾಗಲೆಂದು ವೇಂಕಟಪರ್ವತವನ್ನು ಏರಿ ನಿಂತಿದ್ದಾನೆ.’

ADVERTISEMENT

ವೆಂಕಟೇಶನ ನೆಲೆ ನಿಂತ ಬೆಟ್ಟ ವೇಂಕಟಾಚಲ, ಅಲ್ಲವೆ? ಇದಕ್ಕೂ ಪುರಾಣಗಳು ಉತ್ತರಿಸಿವೆ. ‘ಎಲ್ಲ ಪಾಪಗಳು ಒಂದಾಗಿ – ಎಂದರೆ ಪಾಪಗಳ ಕಟ್ಟು – ‘‘ವೇಂ’’ ಎಂದೆನಿಸಿಕೊಳ್ಳುತ್ತದೆಯಂತೆ. ಅವನ್ನು ಸುಡುವುದೇ ‘‘ಕಟ’’. ಹೀಗಾಗಿ ‘ವೇಂಕಟ’ ಎಂದರೆ ನಮ್ಮ ಎಲ್ಲ ಪಾಪಗಳೂ ಸುಡಲ್ಪಡುವ ಪವಿತ್ರ ಕ್ಷೇತ್ರ. ಏಳು ಬೆಟ್ಟಗಳ ಕೂಟದಲ್ಲಿ ಒಂದಾಗಿರುವ ವೇಂಕಟಾದ್ರಿಯ ಮೇಲೆ ಶ್ರೀನಿವಾಸನ ಗುಡಿ ಇರುವುದು. ಈ ಏಳು ಬೆಟ್ಟಗಳೆಂದರೆ: ಶೇಷಾಚಲ, ವೃಷಭಾಚಲ, ಗರುಡಾಚಲ, ಅಂಜನಾದ್ರಿ, ನಾರಾಯಣಾದ್ರಿ, ವೃಷಾದ್ರಿ (ಸಿಂಹಾಚಲ) ಮತ್ತು ವೇಂಕಟಾದ್ರಿ. ವೈಕುಂಠಕ್ಕೂ ವೇಂಕಟ ಎನ್ನುವುದಕ್ಕೂ ಸಂಬಂಧವಿರುವುದನ್ನೂ ತಳ್ಳಿಹಾಕಲಾಗದು. ಶ್ರೀನಿವಾಸನು ವಿಷ್ಣುವಿನ ಅವತಾರ; ಅವನು ವೈಕುಂಠವನ್ನು ಬಿಟ್ಟು ವೇಂಕಟಾದ್ರಿಯಲ್ಲಿ ನೆಲಸಿದ ಎಂದು ಪುರಾಣಗಳು ಹೇಳುತ್ತವೆ.

ಬೆಟ್ಟದ ಮೇಲೆ ನೆಲೆ ನಿಂತಿರುವ ದೇವರಿಗೆ ಹಲವು ಹೆಸರುಗಳು: ಶ್ರೀನಿವಾಸ, ಬಾಲಾಜಿ, ವೇಂಕಟೇಶ್ವರ, ತಿಮ್ಮಪ್ಪ, ವೆಂಕಟರಮಣ, ವೇಂಕಟೇಶ – ಹೀಗೆ ಹತ್ತು ಹಲವು. ಸಾವಿರಾರು ವರ್ಷಗಳ ಹಿಂದೆಯೇ ಬೆಟ್ಟದ ಮೇಲೆ ಆಲಯ ಇತ್ತೆಂಬುದು ನಿರ್ವಿವಾದ; ಅಂದಿನಿಂದಲೂ ಇದು ಪ್ರಸಿದ್ಧ ಯಾತ್ರಕ್ಷೇತ್ರವೂ ಆಗಿತ್ತು.

ತಿರುಪತಿ ತಿಮ್ಮಪ್ಪನಿಗೆ ಅನೇಕ ರಾಜಮಹಾರಾಜರು ಹೇರಳ ಕಾಣಿಕೆಗಳನ್ನು ನೀಡಿದ್ದಾರೆ; ಇಂದಿಗೂ ಅನೇಕ ಧನಿಕರು, ಗಣ್ಯರು ಕೋಟ್ಯಂತರ ರೂಪಾಯಿಗಳ ಕಾಣಿಕೆಯನ್ನು ಧನದ ರೂಪದಲ್ಲೂ ಆಭರಣಗಳ ರೂಪದಲ್ಲೂ ನೀಡುತ್ತಿದ್ದಾರಷ್ಟೆ. ಕೃಷ್ಣದೇವರಾಯನ ಕೊಡುಗೆಗಳು ತುಂಬ ವಿಶೇಷವಾದವು. ಮೈಸೂರು ಅರಸರೂ ಕೂಡ ಸಾಕಷ್ಟು ಸೇವೆಗಳನ್ನು ನಡೆಸಿದ್ದಾರೆ. ಬ್ರಿಟಿಷರ ಕಾಲದಲ್ಲೂ ದೇವಸ್ಥಾನ ಸಂಪದ್ಭರಿತವಾಗಿತ್ತು. ದೇವಾಲಯದ ಆದಾಯವನ್ನು ಅವರು ಸರ್ಕಾರದ ಬೊಕ್ಕಸಕ್ಕೆ ತುಂಬಿಕೊಳ್ಳುತ್ತಿದ್ದರೆಂಬುದೂ ಇತಿಹಾಸದಲ್ಲಿ ದಾಖಲಾಗಿದೆ. ಗುಡಿಯ ಆದಾಯದಬಗ್ಗೆ ಆರ್‌ಕಾಡು ನವಾಬರಿಗೂ ಫ್ರೆಂಚರಿಗೂ ಇಂಗ್ಲಿಷರಿಗೂ ಕಣ್ಣಿತ್ತು. ಇವರೆಲ್ಲರೂ ಆ ಆದಾಯವನ್ನು ಅನುಭವಿಸಿದವರೇ.

ದಾಸಪರಂಪರೆಯ ಹಲವರು ದಾಸರು ತಿರುಪತಿಯನ್ನೂ ತಿಮ್ಮಪ್ಪನನ್ನೂ ಸ್ತುತಿಸಿದ್ದಾರೆ. ಅನ್ನಮಾಚಾರ್ಯರ ಸಂಕೀರ್ತನೆಗಳನ್ನು ಅಲ್ಲಿಯ ಪೂಜಾಸಮಯದಲ್ಲೂ ಬಳಕೆಯಾಗುತ್ತವೆ. ಆಳ್ವಾರರ ಪಾಶರಗಳೂ ಕೂಡ ವಿಶೇಷ ಮನ್ನಣೆಯನ್ನು ಪಡೆದಿವೆ. ಪ್ರತಿ ದಿನವೂ ಆಲಯದಲ್ಲಿ ಒಂದಲ್ಲ ಒಂದು ವಿಶೇಷ ಪೂಜೆ–ಉತ್ಸವಗಳು ನಡೆಯುತ್ತಲೇ ಇರುತ್ತವೆ. ಇವುಗಳಲ್ಲಿ ಬ್ರಹ್ಮೋತ್ಸವದ ಸಂಭ್ರಮ ಹೆಚ್ಚು. ಆಲಯದ ಸುತ್ತ ನೂರಾರು ಶಾಸನಗಳಿವೆ; ಇವು ಗುಡಿಯ ಇತಿಹಾಸದ ಬಗ್ಗೆ ಹಲವು ವಿವರಗಳನ್ನು ಒದಗಿಸುತ್ತವೆ.

ಅತ್ಯಂತ ಶ್ರೀಮಂತ ದೇವಸ್ಥಾನ ಎಂಬ ಹೆಗ್ಗಳಿಕೆಗೂ ಪಾತ್ರವಾಗಿರುವ ತಿರುಪತಿ ತಿಮ್ಮಪ್ಪನ ಗುಡಿ ಆಸ್ತಿಕರ ಪಾಲಿಗೆ ಭೂವೈಕುಂಠವೇ ಹೌದು. ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಹತ್ತುವ ರೂಢಿ ಇಂದಿಗೂ ಉಳಿದುಬಂದಿದೆ. ಕಲಿಯುಗ ದೈವ ಎನಿಸಿರುವ ವೆಂಕಟೇಶನು ಭಕ್ತರನ್ನು ಪಾಪಗಳಿಂದ ಮುಕ್ತಗೊಳಿಸುತ್ತಾನೆ ಎಂಬ ನಂಬಿಕೆಯೂ ಅಚಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.