ADVERTISEMENT

ಪತಿಗೆ ಮೋಸ ಅಥವಾ ಪತ್ನಿ ಮೇಲೆ ಗೂಢಾಚಾರಿಕೆ: ಯಾವುದು ತೀರಾ ಕೆಟ್ಟದ್ದು?

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2019, 11:38 IST
Last Updated 23 ಅಕ್ಟೋಬರ್ 2019, 11:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಂದು ನಾನು, ನನ್ನ ಸ್ನೇಹಿತೆ ಹಾಗೂ ಆಕೆಯ ಸ್ನೇಹಿತೆ ದೀಪಾ ಕಾಫಿ ಶಾಪ್‌ನಲ್ಲಿ ಭೇಟಿ ಮಾಡಲಿದ್ದೆವು. ನಾನು ಬಂದ ಕೆಲವೇ ನಿಮಿಷಗಳಲ್ಲಿ ದೀಪಾ ಕೂಡ ಅಲ್ಲಿಗೆ ಬಂದಳು. ಕೈ ಬೀಸಿ ಹಾಯ್‌ ಎಂದು ನಗೆ ಬೀರಿದಳು. ನಾವಿಬ್ಬರೂ ನಮ್ಮ ಇಬ್ಬರಿಗೂ ಕೊಂಡಿಯಾಗಿದ್ದ ಸ್ನೇಹಿತೆಗಾಗಿ ಕಾಯುತ್ತಿದ್ದೆವು. ಅಷ್ಟರಲ್ಲೇ ಆಕೆ ಮಾತು ಆರಂಭಿಸಿದಳು.

ದೀಪಾ ಮತ್ತು ಆಕೆಯ ಪತಿ ವಿಚ್ಛೇದನ ಪಡೆಯಲು ನಿರ್ಧರಿಸಿದ್ದರು. ಅದರ ಕಥೆಯೇ ಅಲ್ಲಿ ಬಿಚ್ಚಿಕೊಂಡಿತು.ಕೆಲವೊಮ್ಮೆ ತೀರ ಪರಿಚಿತರೊಂದಿಗೆ ಗುಟ್ಟು ಹೇಳಿಕೊಳ್ಳುವುದಕ್ಕಿಂತ ಅಪರಿಚಿತರೊಂದಿಗೆ ಹಂಚಿಕೊಳ್ಳುವುದು ಸುಲಭ ಎನ್ನಿಸುತ್ತದೆ. ವಿಷಯ ಅಷ್ಟು ಸುಲಭದ್ದಾಗಿರಲಿಲ್ಲ. ಮೋಸಗಾತಿ ಎಂಬ ಹಣೆಪಟ್ಟಿಯನ್ನು ಆತ ಕಟ್ಟಿದ್ದ. ಹಿಡಿತ ಸಾಧಿಸುವ ಚಟ ಎಂದು ಈಕೆ ಕರೆದಿದ್ದಳು.

ದೀಪಾ ಹಾಗೂ ಪ್ರಶೋಬ್‌ ಮದುವೆಯಾಗಿ ಇನ್ನೂ ವರ್ಷವೂ ಕಳೆದಿರಲಿಲ್ಲ. ಗಂಡ ಮರ್ಚೆಂಟ್‌ ನೇವಿ ಕ್ಯಾಪ್ಟನ್‌ ಆಗಿದ್ದರಿಂದ ಆರು ತಿಂಗಳು ಸಮುದ್ರದಲ್ಲಿರಬೇಕು. ಹೀಗೆತಾನು ಜೊತೆಯಲ್ಲಿ ಇಲ್ಲದಾಗ ಪತ್ನಿ ಯಾರೊಂದಿಗಾದರು ಸಂಬಂಧ ಹೊಂದಿರಬಹುದೇ ಎನ್ನುವ ಅನುಮಾನ ಪ್ರಶೋಬ್‌ ತಲೆ ಹೊಕ್ಕಿತು. ಪತ್ನಿಯ ಮೇಲೆಹೇಗೆ ನಿಗಾ ಇಡುವುದು? ಎಂಬ ಆತನ ಪ್ರಶ್ನೆಗೆ ಸ್ನೇಹಿತನೊಬ್ಬ, ಆಕೆಯ ಮೆಸೆಜ್‌ಗಳ ಮೇಲೆ ಕಣ್ಣಿಡು ಎಂದು ಹೇಳಿದ್ದ. ಆ್ಯಪ್‌ನ ಸಹಾಯದಿಂದ ಆತ ಪ್ರತಿದಿನವೂ ಪತ್ನಿಗೆಬರುವ ಹಾಗೂ ಆಕೆ ಕಳುಹಿಸುವ ಸಂದೇಶಗಳನ್ನು ಪರಿಶೀಲಿಸತೊಡಗಿದ.

ADVERTISEMENT

ಅದೆಲ್ಲವನ್ನು ನೋಡುತ್ತಿದ್ದಂತೆ ಅವನ ಅನುಮಾನಗಳು ನಿಜವಾಯಿತು. ವಿಚ್ಛೇದಿತ ಸ್ನೇಹಿತನೊಂದಿಕೆ ಆತನಪತ್ನಿ ನಿಜಕ್ಕೂ ಪ್ರೇಮದ ಸಮಾಗಮ ಆರಂಭಿಸಿದ್ದಳು. ಆರು ತಿಂಗಳ ನಂತರ ಮನೆಗೆ ಬಂದ ಪ್ರಶೋಬ್‌ ತನಗೆ ಏನು ತಿಳಿದಿಲ್ಲವೆನ್ನುವಂತೆ ಇದ್ದ. ಟೆಲಿಕಾಂ ಕಂಪೆನಿಯಲ್ಲಿ ಮ್ಯಾನೆಜರ್‌ ಆಗಿ ಕೆಲಸ ಮಾಡುತ್ತಿದ್ದ ದೀಪಾ ಎಂದಿನಂತೆ ಕಚೇರಿಗೆ ತೆರಳುತ್ತಿದ್ದಳು. ಮನೆಗೆ ಬಂದ ನಂತರವೂಪ್ರಶೋಬ್‌ ಆಕೆಯ ಮೆಸೆಜ್‌ಗಳನ್ನು ನೋಡುವುದನ್ನು ಮುಂದುವರಿಸಿದ್ದ.

ಒಂದು ದಿನ, ಇಬ್ಬರು ಜೋರು ಮಾತುಕತೆ ನಡೆಸುತ್ತಿರುವಾಗ ಪ್ರಶೋಬ್‌, ನಿನ್ನ ಪ್ರತಿಯೊಂದು ವಿಷಯವು ನನಗೆ ಗೊತ್ತು ಎಂದು ಬಾಂಬ್‌ ಸಿಡಿಸಿದನು. ದೀಪಾ ದಿಗಿಲುಗೊಂಡಳು, ಆಘಾತಗೊಂಡಳು, ಕೋಪವೂ ಬಂದಿತು ನಂತರ ಭಾವುಕಳಾದಳು. ತನ್ನ ಸ್ನೇಹಿತರ ಬಳಿ ಆಗಿದ್ದೆಲ್ಲವನ್ನೂ ಆಕೆಹೇಳಿಕೊಂಡಳು. ಇಬ್ಬರ ಪ್ರಾಮಾಣಿಕತೆಯನ್ನು ಒರೆಗೆ ಹಚ್ಚಿದ ನಂತರ ಕೆಲವರು ಆಕೆಯ ಪರವಾಗಿ ನಿಂತರು. ಇನ್ನು ಕೆಲವರು ಪ್ರಶೋಬ್‌ ಪರ ವಹಿಸಿದರು.

ಜೀವನ ಸಂಗಾತಿಯಾಗಿ ನನ್ನ ಬಗ್ಗೆ ತನಿಖೆ ಮಾಡುವಷ್ಟು ದೂರವಾದೆನೆ ಎಂಬುದನ್ನೇ ನನಗೆ ಅರಗಿಸಿಕೊಳ್ಳಲುಸಾಧ್ಯವಾಗುತ್ತಿಲ್ಲ. ಹೀಗೆಲ್ಲ ಮಾಡುವ ಮುನ್ನ ನನ್ನನ್ನೇ ಕೇಳಬಹುದಿತ್ತಲ್ಲವೇ? ಎಂಬುದು ಆಕೆಯ ತಲೆಗೆ ಹೊಕ್ಕ ಬಹುಮುಖ್ಯ ಪ್ರಶ್ನೆ.

ಸಾಕ್ಷ್ಯವನ್ನು ನಾನು ಕಲೆಹಾಕುವ ಸಲುವಾಗಿ ಹಾಗೆ ಮಾಡಿದೆ ಎನ್ನುವುದು ಅವನ ಸಿದ್ಧ ಉತ್ತರವಾಗಿತ್ತು. ಅಂತಿಮವಾಗಿ ವಿಚ್ಚೇದನದ ವಿಷಯಕ್ಕೆ ಬಂದರೆ, ಸಾಕ್ಷ್ಯ ಅಗತ್ಯ ಎನ್ನುವುದು ಆತನ ವಾದ. ಅದು ನನ್ನ ಖಾಸಗಿತನದ ಉಲ್ಲಂಘನೆ ಎನ್ನುವುದು ಆಕೆಯ ಮಾತು.

ಇಷ್ಟೆಲ್ಲ ನಡೆದ ನಂತರವೂ ದೀಪಾ ಮತ್ತು ಪ್ರಶೋಬ್‌ ಒಟ್ಟಿಗೆ ಇರಲು ನಿರ್ಧರಿಸಿದರು. ತಾನು ಕೆಲಸ ಬಿಡುವುದಾಗಿ ಮತ್ತು ಆತನೊಂದಿಗೆ ಸಂಪರ್ಕ ಕಡಿದುಕೊಳ್ಳುವುದಾಗಿ ಆಕೆ ಹೇಳಿದಳು. ಯಾವತ್ತು ಗೂಢಾಚಾರಿಕೆ ಮಾಡುವುದಿಲ್ಲ ಎಂದು ಆತನೂ ಮಾತು ನೀಡಿದ. ಈ ನಿಯಮಗಳ ಮೇಲೆ ಅವರಿಬ್ಬರ ಬದುಕಿನ ಬಂಡಿ ಮತ್ತೆ ಚಾಲುಗೊಂಡಿತು.

ರಜೆಯ ನಂತರ ಆತ ಮತ್ತೆ ಕೆಲಸಕ್ಕೆತೆರಳಿದ. ಆತನ ಅನುಪಸ್ಥಿತಿಯಲ್ಲಿ ಇಬ್ಬರ ನಡುವಿನಲ್ಲಿ ಉಂಟಾಗಿದ್ದ ಈ ಗಾಯ ಮಾಯತೊಡಗಿತು.ಪ್ರಶೋಬ್‌ ಮಾತು ತಪ್ಪಿದ. ಆಕೆಯ ಸಂದೇಶಗಳನ್ನು ಓದಲು ಮತ್ತೆ ಶುರುಮಾಡಿದ್ದ. ಈಗ ಆಕೆ ತನ್ನ ದುಃಖ ಹಾಗೂ ಹಿಡಿತ ಸಾಧಿಸುವಪತಿಯ ಚಟದ ಬಗ್ಗೆ ಸ್ನೇಹಿತರೊಂದಿಗೆಹೇಳಿಕೊಳ್ಳುತ್ತಿದ್ದಳು.

ಆರು ತಿಂಗಳ ನಂತರ ಮತ್ತೆ ಆತ ವಾಪಸ್ ಆದ. ಈಗಲೂ ಜಗಳದ ಮಧ್ಯೆ ತನ್ನ ಬಗ್ಗೆ ಏನು ಅನಿಸಿಕೆ ಹೊಂದಿದ್ದೀಯ ಎನ್ನುವುದು ನನಗೆ ಗೊತ್ತು ಎಂದು ಮತ್ತೆ ಬಾಂಬ್‌ ಹಾಕಿದ. ದೀಪಾ ಕೋಪೋದ್ರಿಕ್ತಳಾದಳು.

ಇಬ್ಬರೂ ಆಪ್ತಸಮಾಲೋಚಕರ ಬಳಿ ತೆರಳಿದರು. ನಾನು ಮತ್ತೊಮ್ಮೆ ಆಕೆಯನ್ನು ನಂಬಲು ಸಾಧ್ಯವಿಲ್ಲ. ಒಮ್ಮೆಮೋಸ ಮಾಡಿದವರು ಮತ್ತೊಮ್ಮೆಯೂ ಅದನ್ನೇ ಮಾಡಬಹುದು. ಒಂದು ಬಾರಿ ಮೋಸಗಾರ ಎನಿಸಿಕೊಂಡರೆ, ಅವರು ಯಾವಾಗಲೂ ಮೋಸಗಾರರೆ ಎನ್ನುವುದು ಪ್ರಶೋಬ್‌ ವಾದ.

ನಾನು ಒಮ್ಮೆಯಷ್ಟೇ ತಪ್ಪು ಮಾಡಿದ್ದು, ಅದು ಮತ್ತೊಮ್ಮೆ ಆಗದಂತೆ ನೋಡಿಕೊಳ್ಳುವೆ ಎಂದು ಆಕೆ ಮನವಿ ಮಾಡಿದಳು. ಆದರೆ, ನಾವು ಅಂದುಕೊಳ್ಳುವುದಕ್ಕಿಂತ ಮನುಷ್ಯರು ಸಾಕಷ್ಟು ಸಂಕೀರ್ಣವಾಗಿ ಯೋಚಿಸುತ್ತಾರೆ. ಕಣ್ಣು ನೋಡುವುದಕ್ಕಿಂತ ಆಳವಾಗಿ ಭಾವನೆಗಳು ಹೊಕ್ಕಿರುತ್ತವೆ. ತಪ್ಪು ಒಪ್ಪಿಕೊಂಡರು ಆದ ನೋವು ಮಾತ್ರಹಾಗೆ ಉಳಿದಿರುತ್ತದೆ. ಅದೇ ರೀತಿ ದೀಪಾ ಮತ್ತೊಮ್ಮೆ ತನಗೆ ಮೋಸ ಮಾಡಬಹುದು ಎಂಬನಂಬಿಕೆಪ್ರಶೋಬ್‌ನಲ್ಲಿ ಅಚಲವಾಗಿತ್ತು.

ಆಕೆ ಹೇಳಿದ್ದನ್ನು ಕೇಳುತ್ತ ಕುಳಿತಿದ್ದ ನನಗೆ, ದಿಢೀರನೆ ಪ್ರಶ್ನೆಯೊಂದು ಎದುರಾಯಿತು. ನೀವು ಯಾರ ಪರ? ಏನಪ್ಪ ಉತ್ತರಿಸಲಿ ಎಂದು ಯೋಚಿಸುತ್ತಿರುವಾಗಲೇ ನಾವು ಕಾಯುತ್ತಿದ್ದಸ್ನೇಹಿತೆ ಬಂದಳು. ನಾನು ಯಾರ ಪರ ಇರಬೇಕು? ಅದು ಬಿಡಿ, ನೀವು ಯಾರ ಪರ ವಹಿಸುತ್ತೀರಾ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.