ADVERTISEMENT

ಬೆಂಗಳೂರಿನಲ್ಲಿ ಶಾಪಿಂಗ್‌; ಯಾವ ತಾಣ ಬೆಸ್ಟ್‌!

ರೇಷ್ಮಾ
Published 1 ನವೆಂಬರ್ 2021, 2:42 IST
Last Updated 1 ನವೆಂಬರ್ 2021, 2:42 IST
ಖರೀದಿಯಲ್ಲಿ ತೊಡಗಿರುವ ಮಹಿಳೆಯರು ಪ್ರಜಾವಾಣಿ ಚಿತ್ರಗಳು: ಅನೂಪ್ ರಾಘ .ಟಿ.
ಖರೀದಿಯಲ್ಲಿ ತೊಡಗಿರುವ ಮಹಿಳೆಯರು ಪ್ರಜಾವಾಣಿ ಚಿತ್ರಗಳು: ಅನೂಪ್ ರಾಘ .ಟಿ.   

ನಗರದಲ್ಲಿ ಶಾಪಿಂಗ್ ಮಾಡಲು ಕೆಲವೊಂದು ‘ದಿ ಬೆಸ್ಟ್’ ಎನ್ನುವಂತಹ ಜಾಗಗಳಿವೆ. ಅಲ್ಲಿ ಬಡ, ಮಧ್ಯಮ, ಶ್ರೀಮಂತ.. ಹೀಗೆ ಎಲ್ಲಾ ವರ್ಗಗಳಿಗೂ ಸಲ್ಲುವ ಪರಿಕರಗಳು ಸಿಗುತ್ತವೆ. ಒಂದು ದಿನದ ಶಾಪಿಂಗ್‌ಗೆ ಬೆಂಗಳೂರಿನಲ್ಲಿ ಹೇಳಿ ಮಾಡಿಸಿದ ಕೆಲವು ಜಾಗಗಳು ಹೀಗಿವೆ.

***

ಹಬ್ಬ ಎಂದರೆ ಹೊಸ ಬಟ್ಟೆ, ಒಡವೆ, ಸಿಹಿ ತಿನಿಸುಗಳದ್ದೇ ಕಾರುಬಾರು. ಅದರಲ್ಲೂ ಮಹಾ ನಗರಗಳಲ್ಲಿ ವಾಸಿಸುವವರಿಗೆ ಹಬ್ಬ ಬಂತೆಂದರೆ ಶಾಪಿಂಗ್‌ ಖುಷಿ ಮುಂಚೂಣಿಯಲ್ಲಿರುತ್ತದೆ. ಮನೆಮಂದಿಗೆಲ್ಲಾ ಹೊಸ ಬಟ್ಟೆ–ಬರೆಗಳು, ಮನೆಗೆ ಅಲಂಕಾರಿಕ ವಸ್ತುಗಳನ್ನು ಖರೀದಿ ಮಾಡುವುದು, ಹಬ್ಬಕ್ಕೆ ಪೂಜೆ ಸಾಮಗ್ರಿ ಖರೀದಿಸುವುದು ಜೋರಿನಿಂದಲೇ ನಡೆಯುತ್ತದೆ. ಮಾರುಕಟ್ಟೆಯೂ ಈ ಹಬ್ಬಕ್ಕೆ ಸಜ್ಜಾಗಿರುತ್ತದೆ. ಹಬ್ಬಗಳ ಸಮಯದಲ್ಲಿ ತಿಂಗಳ ಮೊದಲೇ ಬೆಂಗಳೂರಿನ ಶಾಪಿಂಗ್ ಮಾರುಕಟ್ಟೆಗಳು ತರಹೇವಾರಿ ವಸ್ತುಗಳಿಂದ ಕಂಗೊಳಿಸುತ್ತಿರುತ್ತವೆ. ಬಟ್ಟೆ, ಚಪ್ಪಲಿಗಳು, ಬ್ಯಾಗ್‌ಗಳು, ಮಕ್ಕಳ ಉಡುಪುಗಳು, ಹಬ್ಬಕ್ಕೆ ಬೇಕಾಗುವ ಸಾಮಗ್ರಿಗಳು, ಅಲಂಕಾರಿಕ ವಸ್ತುಗಳು ಮಾರುಕಟ್ಟೆಯನ್ನು ಅಲಂಕರಿಸುತ್ತವೆ. ನಗರದಲ್ಲಿ ಶಾಪಿಂಗ್ ಮಾಡಲು ಕೆಲವೊಂದು ‘ದಿ ಬೆಸ್ಟ್’ ಎನ್ನುವಂತಹ ಜಾಗಗಳಿವೆ. ಅಲ್ಲಿ ಬಡ, ಮಧ್ಯಮ, ಶ್ರೀಮಂತ.. ಹೀಗೆ ಎಲ್ಲಾ ವರ್ಗಗಳಿಗೂ ಸಲ್ಲುವ ಪರಿಕರಗಳು ಸಿಗುತ್ತವೆ. ಒಂದು ದಿನದ ಶಾಪಿಂಗ್‌ಗೆ ಬೆಂಗಳೂರಿನಲ್ಲಿ ಹೇಳಿ ಮಾಡಿಸಿದ ಕೆಲವು ಜಾಗಗಳು ಹೀಗಿವೆ.

ADVERTISEMENT

ಮಲ್ಲೇಶ್ವರ ಮಾರುಕಟ್ಟೆ

ಬೆಂಗಳೂರಿಗೆ ನೆಚ್ಚಿನ ಶಾಪಿಂಗ್ ತಾಣವಿದು. ಮಲ್ಲೇಶ್ವರಂ 18ನೇ ಅಡ್ಡರಸ್ತೆಯಿಂದ ಶಾಪಿಂಗ್ ಬೀದಿ ಆರಂಭವಾಗುತ್ತದೆ. ಸದಾ ಜನ ಜಂಗುಳಿಯಿಂದ ಕೂಡಿರುವ ಮಲ್ಲೇಶ್ವರಂ ಮಾರುಕಟ್ಟೆಯಲ್ಲಿ ಬೇಕಾಗುವ ಎಲ್ಲಾ ವಸ್ತುಗಳು ಸಿಗುತ್ತವೆ. ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ವಸ್ತುಗಳು ಇಲ್ಲಿ ಸಿಗುತ್ತವೆ. ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಇಲ್ಲಿ ಶಾಪಿಂಗ್ ಮಾಡಬಹುದು. ಆದರೂ ಸಂಜೆ ವೇಳೆ ಶಾಪಿಂಗ್‌ಗೆ ತೆರಳುವುದು ಉತ್ತಮ. ಚೂಡಿದಾರ್‌, ಸೀರೆ, ಕುರ್ತಾ, ಚಪ್ಪಲಿಗಳು, ಬ್ಯಾಗ್‌ಗಳನ್ನು ಮಲ್ಲೇಶ್ವರದಲ್ಲಿ ಖರೀದಿಸಬಹುದು. ಇದರೊಂದಿಗೆ ಹೂವು, ಹಣ್ಣು, ತರಕಾರಿಗೂ ಈ ಮಾರುಕಟ್ಟೆ ಬೆಸ್ಟ್ ಎನ್ನಬಹುದು. ಅಲ್ಲದೇ ಕರಾವಳಿ, ಉತ್ತರ ಕರ್ನಾಟಕ, ಉತ್ತರ ಕನ್ನಡದ ಸಾಂಪ್ರದಾಯಿಕ ಶೈಲಿಯ ತಿನಿಸುಗಳು ಈ ಮಾರುಕಟ್ಟೆಯಲ್ಲಿ ಲಭ್ಯ. ಅಷ್ಟೇ ಅಲ್ಲದೇ ಬ್ರ್ಯಾಂಡೆಡ್‌ ಉಡುಪುಗಳ ಖರೀದಿಗೂ ಈ ಮಾರುಕಟ್ಟೆ ಬೆಸ್ಟ್‌.

ಜಯನಗರ 4ನೇ ಹಂತ

ಜಯನಗರ 4ನೇ ಹಂತ ಬೆಂಗಳೂರಿಗರ ನೆಚ್ಚಿನ ತಾಣ. ಜಯನಗರದ 4ನೇ ಹಂತದಲ್ಲಿರುವ ಶಾಪಿಂಗ್ ಕಾಂಪ್ಲೆಕ್ಸ್ ಶಾಪಿಂಗ್ ಮಾಡಲು ಹೇಳಿ ಮಾಡಿಸಿದ ಜಾಗ. ಈ ಒಂದು ಕಾಂಪ್ಲೆಕ್ಸ್ ಹಾಗೂ ಅದರ ಸುತ್ತಮುತ್ತ ನಿಮಗೆ ಬೇಕಾಗಿದ್ದೆಲ್ಲವೂ ಸಿಗುತ್ತವೆ. ಉಡುಪುಗಳು, ಚಪ್ಪಲಿಗಳು, ಅಲಂಕಾರಿಕ ವಸ್ತುಗಳು, ಬ್ಯಾಗ್‌ಗಳು ಸೇರಿದಂತೆ ಹಣ್ಣು, ತರಕಾರಿ ಖರೀದಿಗೂ ಜಯನಗರದ ಕಾಂಪ್ಲೆಕ್ಸ್ ಬೆಸ್ಟ್ ಅಂತಲೇ ಹೇಳಬಹುದು. ಬಗೆ ಬಗೆಯ ಸೀರೆ ಅಂಗಡಿಗಳು, ಸಾಂಪ್ರದಾಯಿಕ ಉಡುಪುಗಳು, ಬ್ರ್ಯಾಂಡೆಡ್‌ ಬಟ್ಟೆಗಳ ಖರೀದಿಗೂ ಜಯನಗರವನ್ನು ಆಯ್ಕೆ ಮಾಡಿಕೊಳ್ಳಬಹುದು. ಹಬ್ಬದ ಸಮಯದಲ್ಲಿ ಪೂಜಾ ಸಾಮಗ್ರಿಗಳ ಖರೀದಿಗೂ ಜಯನಗರವನ್ನೇ ಆಯ್ಕೆ ಮಾಡಿಕೊಳ್ಳಬಹುದು.

ಗಾಂಧಿ ಬಜಾರ್

ಬಹಳ ಹಿಂದಿನಿಂದಲೂ ಗಾಂಧಿಬಜಾರ್‌ ಶಾಪಿಂಗ್ ಪ್ರಿಯರಿಗೆ ನೆಚ್ಚಿನ ತಾಣ.ಗಾಂಧಿ ಬಜಾರ್‌ನಲ್ಲಿ ಏನುಂಟು, ಏನಿಲ್ಲ ಹೇಳಿ. ಮಧ್ಯಮವರ್ಗದ ಮಂದಿಗೆ ಖರೀದಿಗೆ ಹೇಳಿ ಮಾಡಿಸಿದ ಜಾಗವಿದು. ಹೆಣ್ಣುಮಕ್ಕಳು ಗಾಂಧಿ ಬಜಾರ್‌ನಲ್ಲಿ ಶಾಪಿಂಗ್ ಮಾಡಲು ಹೆಚ್ಚು ಇಷ್ಟಪಡುತ್ತಾರೆ. ವಸ್ತ್ರ, ಒಡವೆ, ಪೂಜೆ ಸಾಮಗ್ರಿಗಳು ಮುಂತಾದೆಲ್ಲವೂ ಇಲ್ಲಿ ಒಂದೇ ಕಡೆ ಸಿಗುವ ಕಾರಣ ಈ ಜಾಗ ಶಾಪಿಂಗ್ ಮಾಡಲು ಉತ್ತಮ. ದೀಪಾವಳಿ ಸಮಯದಲ್ಲಿ ಗೂಡುದೀಪ, ದೀಪಗಳು, ಹಣತೆ ಮುಂತಾದವು ಕೂಡ ಇಲ್ಲಿ ಸಿಗುತ್ತವೆ.

ಚಿಕ್ಕಪೇಟೆ

ಚಿಕ್ಕಪೇಟೆ, ಇದು ಕೇವಲ ಬೆಂಗಳೂರಿಗರಿಗೆ ಮಾತ್ರವಲ್ಲ ಕರ್ನಾಟಕದ ಬಹುತೇಕ ಭಾಗದ ಜನರು ಚಿಕ್ಕಪೇಟೆಗೆ ಶಾಪಿಂಗ್ ಮಾಡಲು ಬರುತ್ತಾರೆ. ಹಬ್ಬ ಹರಿದಿನಗಳು ಮಾತ್ರವಲ್ಲದೇ ಮದುವೆ, ಗೃಹಪ್ರವೇಶ, ನಿಶ್ಚಿತಾರ್ಥದಂತಹ ಕಾರ್ಯಕ್ರಮಗಳಿಗೂ ಚಿಕ್ಕಪೇಟೆಯಲ್ಲಿ ಶಾಪಿಂಗ್ ಮಾಡಲು ಬರುತ್ತಾರೆ. ಸೀರೆ ಅಂಗಡಿಗಳು ಸಾಲು ಸಾಲು ಇಲ್ಲಿದ್ದು ಇದನ್ನು ಮಿನಿ ಕಂಚಿ ಅಂತಲೂ ಕರೆಯಬಹುದು. ಚಿಕ್ಕಪೇಟೆಯಲ್ಲಿ ಸೂಜಿ, ದಾರದಿಂದ ಹಿಡಿದು ಒಡವೆ, ವಜ್ರಗಳವರೆಗೆ ಖರೀದಿ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.