ADVERTISEMENT

ಕಾಡಿದ ಲೋಕಸುಂದರಿಯರು

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 19:31 IST
Last Updated 27 ನವೆಂಬರ್ 2021, 19:31 IST
   

‘ಭಾರತ ಮತ್ತು ಭಾರತದ ಮಹಿಳೆಯರ ವರ್ಚಸ್ಸಿಗೆ ಮಸಿ ಬಳಿಯಲಾಗುತ್ತಿದೆ’, ‘ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆಯ ಮೇಲಿನ ದಾಳಿಯಿದು’, ‘ಅಶ್ಲೀಲತೆ ಮತ್ತು ನಗ್ನತೆಯನ್ನು ಪ್ರದರ್ಶಿಸಲಾಗುತ್ತಿದೆ’, ‘ವೇಶ್ಯಾವಾಟಿಕೆ ಮತ್ತು ಮಾದಕ ದ್ರವ್ಯದ ದಂಧೆಯ ಅಂತರರಾಷ್ಟ್ರೀಯ ಗ್ಯಾಂಗುಗಳು ಭಾರತವನ್ನು ಪ್ರವೇಶಿಸುತ್ತವೆ’, ‘ಈ ದುಷ್ಟರು ಏಡ್ಸ್ ಹರಡಬಹುದು’, ‘ಅರೆಬೆತ್ತಲೆ ಅಥವಾ ತುಂಡುಡುಗೆಯ ವಿದೇಶಿ ಮಹಿಳೆಯರಿಂದಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಬಹುದು’...

1996ರಲ್ಲಿ ಬೆಂಗಳೂರಿನಲ್ಲಿ ವಿಶ್ವ ಸುಂದರಿ ಸ್ಪರ್ಧೆಯ ವಿರುದ್ಧ ಹೈಕೋರ್ಟಿನಲ್ಲಿ ಮಹಿಳಾ ಜಾಗರಣ ಮಂಚ್ ಹೂಡಿದ್ದ ದಾವೆಯ ಪ್ರಮುಖ ಅಂಶಗಳಿವು.

25 ವರ್ಷಗಳ ಹಿಂದೆ ನವೆಂಬರ್ 23ರಂದು ವಿಶ್ವ ಸುಂದರಿ ಸ್ಪರ್ಧೆ ನಡೆಸಲು ಬೆಂಗಳೂರು ಆಯ್ಕೆಯಾದಾಗ ಅದು ಜಗತ್ತಿನ ಗಮನ ಸೆಳೆಯಿತು. ಆಗ ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದರು. ಅವರು ರಾಮಕೃಷ್ಣ ಹೆಗಡೆಯವರನ್ನು ಜನತಾ ದಳದಿಂದ ಉಚ್ಚಾಟನೆ ಮಾಡಿಸಿದ್ದರು. ಈ ಇಬ್ಬರು ‘ಮದಗಜ’ಗಳ ಕಾದಾಟದಲ್ಲಿ ಸಿಲುಕಿ ಬೇರೆ ಯಾರಾದರೂ ಆಗಿದ್ದರೆ ನುಜ್ಜು ಗುಜ್ಜಾಗುತ್ತಿದ್ದರೇನೋ. ಆದರೆ, ಆಗ ಮುಖ್ಯಮಂತ್ರಿಯಾಗಿದ್ದ ಜೆ.ಎಚ್. ಪಟೇಲ್ ನಿರ್ಲಿಪ್ತರಾಗಿದ್ದರು. ಅವರು ಬೆಂಗಳೂರಿನಲ್ಲಿ ವಿಶ್ವ ಸುಂದರಿ ಸ್ಪರ್ಧೆಯ ಕಾರ್ಯಕ್ರಮ ಪ್ರಕಟವಾಗುತ್ತಿದ್ದಂತೆ ಪೊರೆ ಕಳಚಿದ ಹಾವಿನಂತೆ ನಿಚ್ಚಳವಾಗಿಬಿಟ್ಟರು. ರಾಜಕೀಯ ಜಂಜಾಟವನ್ನು ಮರೆತು ವಿಚಿತ್ರವಾದ ಲಹರಿಯಲ್ಲಿ ತೇಲಾಡತೊಡಗಿದರು.

ADVERTISEMENT

ಎರಿಕ್ ಮೋರ್ಲೆ, ವಿಶ್ವ ಸುಂದರಿ ಸಂಘಟನೆಯ ಮುಖ್ಯಸ್ಥರಾಗಿದ್ದರು. ಸ್ಪರ್ಧೆಯನ್ನು ಆಯೋಜಿಸುವ ಹೊಣೆಯನ್ನು ಅಮಿತಾಬ್‌ ಬಚ್ಚನ್ ಕಾರ್ಪೊರೇಷನ್ ಲಿಮಿಟೆಡ್ (ಎಬಿಸಿಎಲ್) ವಹಿಸಿಕೊಂಡಿತ್ತು. ಗೋದ್ರೇಜ್ ಕಂಪೆನಿಯ ಮುಖ್ಯಸ್ಥ ಪರಮೇಶ್ವರ್ ಗೋದ್ರೇಜ್ ಪ್ರಾಯೋಜಕತ್ವದ ಹೊಣೆ ಹೊತ್ತುಕೊಂಡಿದ್ದರು. ಆದರೆ ಅವರೆಲ್ಲರಿಗಿಂತ ಹೆಚ್ಚಾಗಿ ಮುಖ್ಯಮಂತ್ರಿ ಪಟೇಲರೇ ಸ್ಪರ್ಧೆಯ ವಕ್ತಾರರಂತೆ ಮಾತನಾಡತೊಡಗಿದರು.

ರೈತ ಸಂಘದ ಅಧ್ಯಕ್ಷ ಪ್ರೊ. ಎಂ.ಡಿ. ನಂಜುಂಡಸ್ವಾಮಿ, ‘ಈ ಸ್ಪರ್ಧೆಯ ಹಿಂದೆ ಭಾರತವನ್ನು ಬಹುರಾಷ್ಟ್ರೀಯ ಕಂಪನಿಗಳ ಸೌಂದರ್ಯ ಸಾಧನಗಳ ಮಾರುಕಟ್ಟೆಯನ್ನಾಗಿ ಪರಿವರ್ತಿಸುವ ಹುನ್ನಾರವಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಸ್ಪರ್ಧೆಯ ವೇಳೆ ಸ್ಟೇಜಿಗೆ ಬೆಂಕಿ ಹಚ್ಚುವುದಾಗಿಯೂ ಬೆದರಿಕೆ ಹಾಕಿದ್ದರು. ‘ಇದು ಭಾರತೀಯ ಸಂಸ್ಕೃತಿಯ ಮೇಲಿನ ದಾಳಿ’ ಎಂದು ಹಿಂದೂಪರ ಸಂಘಟನೆಗಳು ಪ್ರತಿಭಟಿಸಿದ್ದವು.

ಮಹಿಳಾ ಜಾಗರಣ ಮಂಚ್ ಮುಖ್ಯಸ್ಥೆ ಕೆ.ಎನ್.ಶಶಿಕಲಾ ನೂರಾರು ಮಹಿಳೆಯರೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಆತ್ಮಾಹುತಿಯ ಬೆದರಿಕೆ ಹಾಕಿದ್ದರು. ಅಖಿಲ ಕರ್ನಾಟಕ ಯುವ ಪರಿಷತ್ತಿನ ಕಾರ್ಯಕರ್ತರು ಪಿಜಾ ಹಟ್ ಮಳಿಗೆಗಗಳ ಮೇಲೆ ದಾಳಿ ಮಾಡಿದ್ದರು. ಎಬಿಸಿಎಲ್ ಮುಖ್ಯಸ್ಥ ಅಮಿತಾಬ್ ಬಚ್ಚನ್ ಬೆತ್ತಲು ಇರುವಂತೆ ಚಿತ್ರಿಸಿದ್ದ ಪೋಸ್ಟರ್‌ನೊಂದಿಗೆ ವಾಟಾಳ್ ನಾಗರಾಜ್ ಪ್ರತಿಭಟಿಸಿದ್ದರು.

ಕಾರ್ಯಕ್ರಮದ ವಿವರ ನೀಡಲು ಅಮಿತಾಬ್ ಬಚ್ಚನ್ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರು. ಪ್ರತಿಭಟನಾಕಾರರು, ‘ಮರ್ಯಾದೆಗೇಡಿನ ವ್ಯಾಪಾರಿ ಕಾರ್ಯಕ್ರಮ’ದ ಪತ್ರಿಕಾಗೋಷ್ಠಿಗೆ ವಿಧಾನಸೌಧದಲ್ಲಿ ಅವಕಾಶ ನೀಡಿರುವುದನ್ನು ಖಂಡಿಸಿದ್ದರು. ಅಮಿತಾಬ್ ಬಚ್ಚನ್ ಈ ಟೀಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಆ ವೇಳೆಗಾಗಲೇ ದಿವಾಳಿಯ ಅಂಚಿಗೆ ಬಂದಿದ್ದ ತಮ್ಮ ಕಂಪನಿಯನ್ನು ಹೇಗಾದರೂ ಮಾಡಿ ಲಾಭದ ಹಾದಿಗೆ ತರಬೇಕಿತ್ತು. ಸಾಮಾನ್ಯವಾದ ದೊಗಳೆ ಪ್ಯಾಂಟು, ಶರ್ಟಿನಲ್ಲಿ ತಲೆ ಮೇಲೆ ಒಂದು ಕ್ಯಾಪ್‌ನೊಂದಿಗೆ ಒಬ್ಬ ಮೇಸ್ತ್ರಿಯಂತೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಪೊಲೀಸರ ಬಂದೋಬಸ್ತ್ ನಡುವೆಯೂ ಅಭಿಮಾನಿಗಳು ಅವರಿಗೆ ಮುಗಿ ಬೀಳತೊಡಗಿದ್ದರು. ಆಗ ಮೊಬೈಲ್ ಫೋನ್ ಸೆಲ್ಫಿಗಳು ಇರಲಿಲ್ಲ. ಕೆಲವು ಫೋಟೋಗ್ರಾಫರ್‌ಗಳು ಅಮಿತಾಬ್ ಅವರೊಂದಿಗೆ ಅಭಿಮಾನಿಗಳ ಫೋಟೋ ತೆಗೆದು ಕೊಡಲು ಆರಂಭಿಸಿದ್ದರು.

ಈ ನಡುವೆ ಪ್ರತಿಭಟನಾಕಾರರಿಗೆ ‘ಸ್ಪರ್ಧೆಯ ಸಂದರ್ಭದಲ್ಲಿ ಅತಿಗಣ್ಯ ವ್ಯಕ್ತಿಗಳಿಗೆ ವಿದೇಶಿ ಮದ್ಯದ ಹೊಳೆಯೇ ಹರಿಯಲಿದೆ’ ಎಂಬ ಸುಳಿವು ಸಿಕ್ಕಿತ್ತು. ಅದಕ್ಕೆ ಅವಕಾಶ ನೀಡಬಾರದು ಎಂದು ಪಟ್ಟು ಹಿಡಿದರು. ಬೆಂಗಳೂರಿನಲ್ಲಿ ಪ್ರತಿಭಟನೆಯ ಕಾವು ಏರುತ್ತಿದ್ದಂತೆ ವಿಶ್ವ ಸುಂದರಿ ಸಂಘಟನೆಯ ಮುಖ್ಯಸ್ಥರು ಗಾಬರಿಯಾದರು. ಆದರೆ ಪಟೇಲರು ಇದ್ಯಾವುದಕ್ಕೂ ಜಗ್ಗಲಿಲ್ಲ. ‘ದ್ರೌಪದಿಯ ವಸ್ತ್ರಾಪಹರಣವಾದಾಗ, ಸೀತೆಯನ್ನು ರಾವಣ ಅಪಹರಿಸಿದಾಗ ನಿಮ್ಮ ಸಂಸ್ಕೃತಿ ಎಲ್ಲಿ ಅಡಗಿತ್ತು’ ಎಂದು ಕೆಣಕಿದರು.

ಸಚಿವೆ ಲೀಲಾದೇವಿ ಆರ್. ಪ್ರಸಾದ್, ‘ವಿಶ್ವ ಸುಂದರಿ ಸ್ಪರ್ಧೆ ಅಶ್ಲೀಲ ಎನ್ನುವವರು ಬೇಲೂರು ಶಿಲಾಬಾಲಕಿಗೆ ಉಡುಪು ತೊಡಿಸಿ’ಎಂದು ಸವಾಲು ಹಾಕಿದರು. ‘ಈ ಸ್ಪರ್ಧೆಯನ್ನು ನಾವು ನಡೆಸದಿದ್ದರೆ, ಅಂತರರಾಷ್ಟ್ರೀಯ ಮಟ್ಟದ ಸಮಾವೇಶಗಳನ್ನು ನಡೆಸುವ ಸಾಮರ್ಥ್ಯ ಭಾರತಕ್ಕೆ ಇಲ್ಲ ಎಂಬ ಸಂದೇಶ ರವಾನೆಯಾಗುತ್ತದೆ’ ಎಂದು ಅಮಿತಾಬ್ ಬಚ್ಚನ್ ಆತಂಕ ವ್ಯಕ್ತಪಡಿಸಿದರು.

ಈ ನಡುವೆ ಪಟೇಲರು ದೆಹಲಿಯಲ್ಲಿ ಟಿ.ವಿ. ಸಂದರ್ಶನದಲ್ಲಿ ‘ನನಗೆ ಮದಿರೆ ಮತ್ತು ಮಾನಿನಿಯರು ಇಷ್ಟ’ ಎಂದು ಹೇಳಿಬಿಟ್ಟರು. ಅದು ದೇಶಾದ್ಯಂತ ವಿವಾದವನ್ನು ಸೃಷ್ಟಿಸಿತು. ಪ್ರತಿಭಟನೆಗಳಿಂದ ನಿರ್ಮಾಣವಾಗಿದ್ದ ಉದ್ರಿಕ್ತ ಸ್ಥಿತಿ ರೋಮಾಂಚಕಕಾರಿ ತಿರುವು ಪಡೆಯಿತು. ಅಮಿತಾಬ್ ಬಚ್ಚನ್, ವರನಟ ರಾಜ್‌ಕುಮಾರ್ ನಿವಾಸಕ್ಕೆ ತೆರಳಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಅದನ್ನು ರಾಜ್‌ಕುಮಾರ್ ನಯವಾಗಿಯೇ ತಿರಸ್ಕಸಿದರು.

ಸ್ಪರ್ಧೆ ಮೂರು ವಾರ ಇರುವಾಗ ಒಂದು ರಾತ್ರಿ ಬೃಹತ್ ವೇದಿಕೆ ನಿರ್ಮಾಣವಾಗುತ್ತಿದ್ದ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಿಡಿಗೇಡಿಗಳು ಸ್ಫೋಟಕಗಳನ್ನು ಸಿಡಿಸಿದರು. ತಮಿಳುನಾಡು ಮದುರೈನ ಟೈಲರ್ ಸುರೇಶ್ ಕುಮಾರ್ ಮನ ನೊಂದು ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡರು. ಸ್ಪರ್ಧೆ ಸಂದರ್ಭದಲ್ಲಿ ಸ್ಟೇಡಿಯಂ ಮೇಲೆ ಬಾಂಬ್ ದಾಳಿಯಾಗಬಹುದು ಎಂದು ಗುಪ್ತಚರ ಸಂಸ್ಥೆಗಳು ವರದಿ ಸಲ್ಲಿಸಿದವು. ಸುಂದರಿಯರ ವಾಸ್ತವ್ಯಕ್ಕೆ ನಿಗದಿಯಾಗಿದ್ದ ವಿಂಡ್ಸರ್ ಮ್ಯಾನರ್ ಹೋಟೆಲ್ಲಿಗೆ ಮತ್ತು ಸ್ಟೇಡಿಯಮ್ಮಿಗೆ ಪೊಲೀಸ್ ಕಾವಲು ಹಾಕಲಾಯಿತು.

ಸುಮಾರು 88 ದೇಶಗಳ ಸೌಂದರ್ಯ ರಾಣಿಯರು ಶೀಷೆಲ್ಸ್ ದ್ವೀಪದಲ್ಲಿ ಈಜುಡುಗೆ ಸೌಂದರ್ಯದ ಸ್ಪರ್ಧೆ ಪೂರೈಸಿಕೊಂಡು ಭಾರತಕ್ಕೆ ಬರುವ ಕಾರ್ಯಕ್ರಮ ನಿಗದಿಯಾಯಿತು. ಶೀಷೆಲ್ಸ್‌ಗೆ ಬೆಂಗಳೂರಿನ ಕೆಲವು ಪತ್ರಕರ್ತರು ಮತ್ತು ಅಧಿಕಾರಿಗಳು ತೆರಳಬೇಕಿತ್ತು. ಅವರು ತರಾತುರಿಯಲ್ಲಿ ಪಾಸ್‌ಪೋರ್ಟ್ ಸಿದ್ಧಪಡಿಸಿಕೊಂಡು ವಿಮಾನ ಪ್ರಯಾಣಕ್ಕೆ ತುದಿಗಾಲ ಮೇಲೆ ನಿಂತಿದ್ದರು. ಆದರೆ ಬೆಂಗಳೂರಿನ ಉದ್ರಿಕ್ತ ಸ್ಥಿತಿ ಹಿನ್ನೆಲೆಯಲ್ಲಿ ಸಂಘಟಕರು ಅವರ ವಿಮಾನದ ಟಿಕೆಟ್ ರದ್ದುಪಡಿಸಿ, ಹೊರಟು ನಿಂತವರಿಗೆ ನಿರಾಸೆ ಉಂಟುಮಾಡಿದರು.

ಸ್ಪರ್ಧೆಗೆ 11 ದಿನಗಳು ಇರುವಾಗ ಸೌಂದರ್ಯ ರಾಣಿಯರು ಪೊಲೀಸ್ ಸರ್ಪಗಾವಲಿನಲ್ಲಿ ವಿಮಾನ ನಿಲ್ದಾಣದಿಂದ ವಿಂಡ್ಸರ್ ಮ್ಯಾನರ್ ಹೋಟೆಲ್ಲಿಗೆ ಆಗಮಿಸಿದರು. ಅವರಿಗೆ ತಿಲಕವಿಟ್ಟು ಆರತಿಯೆತ್ತಿ ಸ್ವಾಗತಿಸಲಾಯಿತು.

ದೀಪಾವಳಿ ವಿಶೇಷ ಕಾರ್ಯಕ್ರಮದ ಮೂಲಕ ವಿದೇಶಿ ಸುಂದರಿಯರಿಗೆ ಭಾರತೀಯ ಪರಂಪರೆಯನ್ನು ಪರಿಚಯಿಸಲಾಯಿತು. ‘ಮಿಸ್ ಫೋಟೋಜೆನಿಕ್ ’, ‘ಮಿಸ್ ಪರ್ಸನಾಲಿಟಿ’ ಮುಂತಾದ ಪೂರ್ವಭಾವಿ ಈವೆಂಟುಗಳು ರೆಸಾರ್ಟ್‌ ಮತ್ತಿತರ ತಾಣಗಳಲ್ಲಿ ನಡೆಯತೊಡಗಿದವು. ದತ್ತಿ ನಿಧಿ ಸಂಗ್ರಹದ ನೆಪದಲ್ಲಿ ದುಬಾರಿ ಬೆಲೆಯ ಟಿಕೆಟ್‌ಗಳನ್ನು ನಿಗದಿಪಡಿಸಲಾಗಿತ್ತು. ಬೆಂಗಳೂರಿನ ಗಣ್ಯರು, ಉದ್ಯಮಿಗಳು ಮತ್ತು ಶ್ರೀಮಂತರು ತಮ್ಮ ಮನೆಗಳಿಂದ ಏಕಾಏಕಿ ಕಣ್ಮರೆಯಾಗಿ ಈ ತಾಣಗಳಲ್ಲಿ ತರಹೇವಾರಿ ಪೋಷಾಕುಗಳಲ್ಲಿ ಕಾಣಿಸಿಕೊಂಡರು.

ಬೆಂಡು-ಬತ್ತಾಸು, ಜಿಲೇಬಿ-ಮೈಸೂರು ಪಾಕ್ ಅಂಗಡಿಗಳು; ಗಿರಗಿರನೆ ತಿರುಗುವ ತೊಟ್ಟಿಲುಗಳೊಂದಿಗೆ ಜಾತ್ರೆಗಳನ್ನು ಹೋಲುವ ಕಾರ್ನಿವಲ್ ಕಾರ್ಯಕ್ರಮದ ಟಿಕೆಟ್ಟಿಗೆ ಭಾರಿ ಬೇಡಿಕೆ ಉಂಟಾಗಿತ್ತು. ಯಾವುದಾದರೂ ಒಂದು ದೇಶದ ಸುಂದರಿಯೊಂದಿಗೆ ರಾತ್ರಿ ಔತಣ ನಡೆಸುವ ಚಾರಿಟಿ ಡಿನ್ನರ್ ಕಾರ್ಯಕ್ರಮವಂತೂ ಆಕರ್ಷಕವಾಗಿತ್ತು. ಆದರೆ ಇದು ವಿವಾದವನ್ನು ಸೃಷ್ಟಿಸಿತು. ಆಗ ಅತಿಥಿಗಳು ತಮ್ಮ ಪತ್ನಿಯರೊಂದಿಗೆ ಭಾಗವಹಿಸುವಂತೆ ತಾಕೀತು ಮಾಡಲಾಯಿತು. ಆದರೆ ಅವರು ನಿಜವಾಗಿಯೂ ಅವರ ಪತ್ನಿಯರೇ ಎಂದು ಖಚಿತಪಡಿಸಿಕೊಳ್ಳುವ ವ್ಯವಸ್ಥೆ ಇರಲಿಲ್ಲ. ಸ್ಪರ್ಧೆಯ ದಿನ ಸಮೀಪಿಸುತ್ತಿದ್ದಂತೆ ಉನ್ಮಾದದ ಸ್ಥಿತಿ ನಿರ್ಮಾಣವಾಗತೊಡಗಿತು.

ಕೊನೆಗೂ ಸ್ಪರ್ಧೆ ಬಂದೇ ಬಿಟ್ಟಿತು. ಸುಪ್ರೀಂ ಕೋರ್ಟ್ ಕೂಡ ಹಸಿರು ನಿಶಾನೆ ತೋರಿತು. ಪೊಲೀಸರ ಸರ್ಪಗಾವಲಿನಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಏಳು ಸುತ್ತಿನ ಕೋಟೆಯಾಗಿತ್ತು. 10 ಸಾವಿರ ಪೊಲೀಸರು ಸುತ್ತುವರಿದಿದ್ದರು. 1600 ಪ್ರತಿಭಟನಾಕಾರರನ್ನು ಬಂಧಿಸಲಾಗಿತ್ತು. ಚಿನ್ನಸ್ವಾಮಿ ಸ್ಟೇಡಿಯಮ್ಮಿನ ಬೃಹತ್ ವೇದಿಕೆಯಲ್ಲಿ ಕಣ್ಣು ಕೋರೈಸುವ ಬಣ್ಣ ಬಣ್ಣದ ಬೆಳಕಿನಲ್ಲಿ ಸುಂದರಿಯರ ಮೆರವಣಿಗೆಯೊಂದಿಗೆ ರಾತ್ರಿ ಗಂಧರ್ವ ಲೋಕವೇ ಸೃಷ್ಟಿಯಾಗಿತ್ತು. ಕೂಚುಪುಡಿ, ಭರತನಾಟ್ಯ, ಮೋಹಿನಿಯಾಟ್ಟಂ, ಯಕ್ಷಗಾನ, ಕಳರಿಪಯಟ್, ನಾದಸ್ವರ, ಪಂಚವಾದ್ಯ ಕಲಾ ಪ್ರಕಾರಗಳು ಮತ್ತು ಮಲ್ಲಿಕಾ ಸಾರಾಭಾಯ್, ಪ್ರಭುದೇವ್, ಜೂಹಿ ಚಾವ್ಲಾ, ಪೂಜಾ ಭಾತ್ರಾ, ಭಾನುಪ್ರಿಯಾ ಮತ್ತು ಶೋಭನಾ ಅವರ ನೃತ್ಯ ರೂಪಕಗಳು ಭಾರತೀಯ ಸಂಸ್ಕೃತಿಯನ್ನು ಬಿಂಬಿಸಿದವು.

‘ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ವೈವಿಧ್ಯಮಯ ಭಾರತೀಯ ಸಂಸ್ಕೃತಿಯ ದಿಗ್ದರ್ಶನವನ್ನು ಪ್ರಪಂಚದ ಎರಡೂವರೆ ಶತಕೋಟಿ ಟಿ.ವಿ. ವೀಕ್ಷಕರಿಗೆ ನೀಡುತ್ತಿದ್ದೇವೆ’ ಎಂದು ಸಂಘಟಕರು ಪ್ರಕಟಿಸಿದರು. ದೇಶ ವಿದೇಶಗಳ ಕಾರ್ಪೊರೇಟ್, ಜಾಹೀರಾತು ಮತ್ತು ಫ್ಯಾಶನ್ ಲೋಕದ ಕುಳಗಳು, ಗಣ್ಯ ವ್ಯಕ್ತಿಗಳು ಮತ್ತು ಅಂತರರಾಷ್ಟ್ರೀಯ ಮಾಧ್ಯಮ ಪ್ರತಿನಿಧಿಗಳಿಂದ ಸಭಾಂಗಣ ತುಂಬಿತ್ತು. ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ, ಪರಮೇಶ್ವರ್ ಗೋದ್ರೇಜ್, ಕ್ರಿಕೆಟ್ಟಿಗ ಸನತ್ ಜಯಸೂರ್ಯ, ನಟ ಅಮೀರ್ ಖಾನ್ ಸೇರಿದಂತೆ 11 ತೀರ್ಪುಗಾರರ ಮಂಡಳಿಯ ತೀರ್ಪಿನ ಅನ್ವಯ ಗ್ರೀಸ್‌ನ ಹದಿನೆಂಟರ ತರುಣಿ ಸರ್ವಾಂಗ ಸುಂದರಿ, ಸರ್ವಗುಣ ಸಂಪನ್ನೆ ಐರಿನ್ ಸ್ಕ್ಲಿವಾ ಅವರ ಮುಡಿಗೆ ವಿಶ್ವ ಸುಂದರಿ ಕಿರೀಟವನ್ನು ತೊಡಿಸಲಾಯಿತು.

‘ಅಹಿತಕರ ಘಟನೆಗಳಿಲ್ಲದೆ ಬೆಂಗಳೂರಿನಲ್ಲಿ ವಿಶ್ವ ಸುಂದರಿ ಸ್ಪರ್ಧೆ ಸುಸೂತ್ರವಾಗಿ ನಡೆಯಿತು’ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ನಿಟ್ಟುಸಿರು ಬಿಟ್ಟವು. ಮಾರನೆಯ ದಿನ ಬೆಳಿಗ್ಗೆ ನೂತನ ವಿಶ್ವ ಸುಂದರಿಯ ಪತ್ರಿಕಾಗೋಷ್ಠಿ ನಿಗದಿಯಾಯಿತು. ಸಂಘಟಕರಿಗೆ ಕೊನೇ ಗಳಿಗೆಯಲ್ಲಿ ಒಂದು ವಿಶೇಷ ಪ್ಲ್ಯಾನ್ ಹೊಳೆಯಿತು. ಅದರ ಪ್ರಕಾರ ವಿಂಡ್ಸರ್ ಮ್ಯಾನರ್ ಹೋಟೆಲ್ಲಿನ ಮಹಿಳಾ ಸಿಬ್ಬಂದಿಯೊಬ್ಬರು ತರಾತುರಿಯಲ್ಲಿ ತಮ್ಮ ಮನೆಯಿಂದ ಕಾಂಜೀವರಂ ರೇಷ್ಮೆ ಸೀರೆಯನ್ನು ತಂದು ವಿಶ್ವ ಸುಂದರಿಗೆ ಸಡಿಲ ಸಡಿಲವಾಗಿ ಉಡಿಸಿ, ಇಷ್ಟಗಲ ಕುಂಕುಮವನ್ನು ಇಟ್ಟು ಪತ್ರಿಕಾಗೋಷ್ಠಿಗೆ ಕರೆದುಕೊಂಡು ಬಂದರು.

ಲೋಕ ಸುಂದರಿ ಸಾಕ್ಷಾತ್ ಗ್ರೀಕ್ ದೇವತೆಯಂತೆ ಕಂಗೊಳಿಸುತ್ತಾ ವಿಶ್ವ ಮನ್ನಣೆ ಪಡೆಯುವುದರ ಜೊತೆಗೆ ಭಾರತೀಯ ಸಂಸ್ಕೃತಿ ವಕ್ತಾರರ ಮನಸ್ಸನ್ನೂ ತಣಿಸಿದರು. ಅಂದು ಸಂಜೆ ಸೌಂದರ್ಯ ರಾಣಿಯರನ್ನು ಬೆಂಗಳೂರು ಒಲ್ಲದ ಮನಸ್ಸಿನಿಂದ ಬೀಳ್ಕೊಟ್ಟಿತು. ಭ್ರಾಮಕ ಲೋಕವನ್ನು ಸೃಷ್ಟಿಸಿದ್ದ ವಿಶ್ವ ಸುಂದರಿ ಸ್ಪರ್ಧೆಗೆ ತೆರೆ ಬಿದ್ದಿತು. ಇದರಲ್ಲಿ ತೊಡಗಿಕೊಂಡಿದ್ದ ಪತ್ರಕರ್ತರು, ಅಧಿಕಾರಿಗಳು ಮತ್ತಿತರರಿಗೆ ಸಹಜಸ್ಥಿತಿಗೆ ಮರಳಲು ಕೆಲವು ದಿನಗಳೇ ಬೇಕಾದವು. 21ನೇ ಶತಮಾನದ ಆರಂಭದಲ್ಲಿ ಬೆಂಗಳೂರು ಒಂದು ಜಾಗತಿಕ ಬ್ರ್ಯಾಂಡ್ ಆಗಲು ಈ ಸ್ಪರ್ಧೆ ಮುನ್ನುಡಿಯನ್ನೂ ಬರೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.