ADVERTISEMENT

Air TAXI: ಹೆಲಿಕಾಫ್ಟರ್‌ಗಿಂತಲೂ ವೇಗವಾಗಿ ಹೋಗಲಿದೆ ಈ ಪುಟ್ಟ ಇ–ಪ್ಲೇನ್

ಸ್ಥಳೀಯ ಸಂಚಾರಕ್ಕೆ ಅನುವಾಗುವ ಬ್ಯಾಟರಿ ಚಾಲಿತ ಇ–ಪ್ಲೇನ್ ಅಭಿವೃದ್ಧಿ

ವಿಶಾಖ ಎನ್.
Published 18 ಫೆಬ್ರುವರಿ 2023, 7:16 IST
Last Updated 18 ಫೆಬ್ರುವರಿ 2023, 7:16 IST
ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾದ ಮಳಿಗೆಯಲ್ಲಿ ಪ್ರದರ್ಶನಕ್ಕೆ ಇಟ್ಟಿರುವ ಇ-ವಿಮಾನ. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾದ ಮಳಿಗೆಯಲ್ಲಿ ಪ್ರದರ್ಶನಕ್ಕೆ ಇಟ್ಟಿರುವ ಇ-ವಿಮಾನ. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.   

ಬೆಂಗಳೂರು: ಬೆಂಗಳೂರೂ ಸೇರಿ ಭಾರತದ ಪ್ರಮುಖ ಮಹಾನಗರಗಳಲ್ಲಿ ಸ್ಥಳೀಯ ಸಂಚಾರಕ್ಕೆ ಅನುವಾಗುವ ಬ್ಯಾಟರಿ ಚಾಲಿತ ಇ-200 ಎಂಬ ಪುಟ್ಟ ವಿಮಾನವನ್ನು (ಕಾಂಪ್ಯಾಕ್ಟ್‌ ಫ್ಲೈಯಿಂಗ್‌ ಎಲೆಕ್ಟ್ರಿಕ್ ಟ್ಯಾಕ್ಸಿ) ಅಭಿವೃದ್ಧಿಪಡಿಸಲಾಗಿದೆ.

ಚೆನ್ನೈನ ಐಐಟಿ ಮದ್ರಾಸ್‌ನ ಪ್ರೊ. ಸತ್ಯ ಚಕ್ರವರ್ತಿ ನೇತೃತ್ವದ ತಂಡ ಇದನ್ನು ಅಭಿವೃದ್ಧಿಪಡಿಸಿದೆ. ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ ‘ಏರೋ ಇಂಡಿಯಾ’ ಪ್ರದರ್ಶನದಲ್ಲಿ ಈ ಪುಟ್ಟ ವಿಮಾನವನ್ನು ನೋಡಬಹುದು.

ಇದು 200 ಕೆ.ಜಿ. ತೂಕ ಹೊರ ಬಲ್ಲದು. 2 ಫಾರ್ಚ್ಯುನರ್ ಕಾರುಗಳನ್ನು ಸೇರಿಸಿದರೆ ಎಷ್ಟು ಅಗಲ ಆದೀತೊ, ಅಷ್ಟೇ ಅಗಲವಿದೆ. ದೊಡ್ಡ ವಿಮಾನಕ್ಕೆ ಅಗತ್ಯವಿರುವಷ್ಟು ಜಾಗ ಟೇಕಾಫ್‌ಗೆ ಬೇಕಾಗಿಲ್ಲ. 200 ಮೀಟರ್‌ ಮೇಲೆಯೂ ಇದು ಸಲೀಸಾಗಿ ಸಾಗಬಲ್ಲದು. ಒಬ್ಬ ಪೈಲಟ್ ಹಾಗೂ ಒಬ್ಬ ಪ್ರಯಾಣಿಕ ಇದರಲ್ಲಿ ಸಾಗಬಹುದು.

ADVERTISEMENT

ಮಹಾನಗರಗಳಲ್ಲಿ ಟ್ರಾಫಿಕ್ ದಟ್ಟಣೆ ಹೆಚ್ಚಾಗಿದ್ದು, ವಿಮಾನ ನಿಲ್ದಾಣ ತಲುಪಲು ಗಂಟೆಗಟ್ಟಲೆ ಸಮಯ ಬೇಕಾಗುತ್ತದೆ. ಈ ವಿಮಾನದ ಮೂಲಕ ನಗರದ ಎಂ. ಜಿ. ರಸ್ತೆಯಿಂದ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣವನ್ನು ಕೇವಲ 14- 15 ನಿಮಿಷಗಳಲ್ಲಿ ತಲುಪಬಹುದು. ಎಂದು ಇ-ಪ್ಲೇನ್ ಕಂಪನಿ ತಂಡದ ವಿಷ್ಣು ರಾಮಕೃಷ್ಣನ್ ತಿಳಿಸಿದರು. ಅಂದರೆ ಹೆಲಿಕಾಫ್ಟರ್‌ಗಿಂತಲೂ ವೇಗವಾಗಿ ತಲುಪಬಲ್ಲದು.

ವಿಶ್ವದಲ್ಲೇ ಇಷ್ಟು ಚಿಕ್ಕದಾದ ಬ್ಯಾಟರಿ ಚಾಲಿತ ಫ್ಲೈಯಿಂಗ್ ಟ್ಯಾಕ್ಸಿಯನ್ನು ಯಾರೂ ಇದುವರೆಗೆ ಅಭಿವೃದ್ಧಿಪಡಿಸಿಲ್ಲ ಎನ್ನುವ ಅವರು, ‘ಇದರಲ್ಲಿ ಪ್ರಯಾಣಿಸಲು ಉಬರ್‌ಗೆ ನೀಡುವ ದರಕ್ಕಿಂತ ಮೂರುಪಟ್ಟು ಹೆಚ್ಚು ಖರ್ಚಾಗುತ್ತದಷ್ಟೆ’ ಎನ್ನುತ್ತಾರೆ.

ಈ ಪುಟಾಣಿ ವಿಮಾನದ ತೂಕ 1,400 ಕೆ.ಜಿ. ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ ವೈಮಾನಿಕ ಮಾರ್ಗದಲ್ಲಿ 200 ಕಿ.ಮೀ. ಸಾಗಬಲ್ಲದು. ಎಂ.ಜಿ. ರಸ್ತೆಯಿಂದ ವಿಮಾನ ನಿಲ್ದಾಣಕ್ಕೆ ಐದಾರು ಸಲ ಪ್ರಯಾಣಿಕರನ್ನು ಸಾಗಿಸಲು ಇಷ್ಟು ಸಾಕು ಎನ್ನುವುದು ಇ-200 ಅಭಿವೃದ್ಧಿಪಡಿಸಿದ ತಂಡದ ಲೆಕ್ಕಾಚಾರ. ಈಗ ಹೆಲಿಕಾಪ್ಟರ್‌ನಲ್ಲಿ ಸಾಗಲು ಒಬ್ಬರಿಗೆ ಸುಮಾರು ₹4,500 ಖರ್ಚಾಗುತ್ತದೆ. ಆದರೆ, ಹೆಲಿಪ್ಯಾಡ್ ಇರುವಲ್ಲಿಗೆ ಹೋಗಿಯೇ ಹತ್ತಬೇಕು. ಇ-200 ಲ್ಯಾಂಡ್ ಮಾಡಲು 1,600 ಅಡಿಗಳಷ್ಟು ಖಾಲಿ ಜಾಗ ಸಾಕು. ಸ್ಥಳೀಯ ಆಡಳಿತಗಳ ಜತೆ ಚರ್ಚಿಸಿ ಎಲ್ಲೆಲ್ಲಿ ಇಳಿಸಬಹುದು ಎನ್ನುವ ಅಂತಿಮ ನಿರ್ಧಾರಕ್ಕೆ ಬರಲಾಗುವುದು. ಬೆಂಗಳೂರಿನಲ್ಲಿ 11 ಅತಿ ಎತ್ತರದ ಕಟ್ಟಡಗಳಿದ್ದು, ಅವುಗಳ ಮೇಲೆ ಹೆಲಿಪ್ಯಾಡ್‌ಗಳು ಇವೆ. ಇವನ್ನೆಲ್ಲ ಪರಿಗಣಿಸಿದರೆ ಏರ್ ಟ್ಯಾಕ್ಸಿ ಪರಿಕಲ್ಪನೆಯ ಕನಸನ್ನು ಖಂಡಿತ ನನಸಾಗಿಸಬಹುದು ಎನ್ನುತ್ತಾರೆ ವಿಷ್ಣು.

ಶೇ 30 ರಷ್ಟು ಇಂಧನ ಸದಾ ಕಾಲ ಇರುವಂತೆ ನೋಡಿಕೊಂಡು ವಿಮಾನ ಹಾರಾಟ ಮಾಡಬೇಕು ಎನ್ನುವ ನಿಯಮವಿದೆ. ಈ ಬ್ಯಾಟರಿ ಚಾಲಿತ ವಿಮಾನಕ್ಕೂ ಅದೇ ಅನ್ವಯವಾಗಲಿದೆ. ಕನಿಷ್ಠ ಶೇ 30ರಷ್ಟು ಬ್ಯಾಟರಿ ಚಾರ್ಜ್ ಸದಾ ಉಳಿದಿರುವಂತೆ ನೋಡಿಕೊಳ್ಳಬೇಕು. ಹಾರಾಟಕ್ಕೆ ನಾಗರಿಕ ವಿಮಾನ ಯಾನ ನಿರ್ದೇಶನಾಲಯದ (ಡಿಜಿಸಿಎ) ಅನುಮತಿ ಪಡೆಯುವ ಪ್ರಯತ್ನವನ್ನು ಈಗಾಗಲೇ ಇ-200 ಪ್ಲೇನ್ ಕಂಪನಿ ನಡೆಸಿದೆ. ಇದರ ರೆಕ್ಕೆಗಳು ಸದಾ ಅಳವಡಿಸಿದ ಸ್ಥಿತಿಯಲ್ಲೇ ಇರಲಿವೆ. ಒಂದು ವೇಳೆ ತುರ್ತು ಭೂಸ್ಪರ್ಶ ಮಾಡಬೇಕಾದರೆ ಸಲೀಸಾಗಿ ಕೆಳಗಿಳಿಸಬಲ್ಲ ತಂತ್ರಜ್ಞಾನವಿದೆ. ಇನ್ನು ಒಂದು, ಒಂದೂವರೆ ವರ್ಷದಲ್ಲಿ ಬ್ಯಾಟರಿ ಚಾಲಿತ ಪುಟ್ಟ ವಿಮಾನ ಹಾರಾಟದ ಕನಸು ಸಾಕಾರಗೊಳ್ಳಲಿದೆ ಎನ್ನುವುದು ವಿಷ್ಣು ಅವರ ವಿಶ್ವಾಸ.

ದೇಸಿ ನಿರ್ವಾತ ಶೌಚಾಲಯ ವ್ಯವಸ್ಥೆ
ಕೊಯಮತ್ತೂರಿನ ಜೊನಾಥಾ ಕಂಪನಿಯು ಪೂರ್ಣಪ್ರಮಾಣದ ನಿರ್ವಾತ ಶೌಚಾಲಯ (ವ್ಯಾಕ್ಯುಮ್ ಟಾಯ್ಲೆಟ್) ರೂಪಿಸಿದ್ದು, ಇದನ್ನು ವಂದೆಮಾತರಂ ರೈಲುಗಳಲ್ಲಿ ಅಳವಡಿಸಲಾಗುತ್ತಿದೆ. ಮೆಟ್ರೊ ರೈಲು, ಬಿಎಂಟಿಸಿ ಬಸ್‌ಗಳಲ್ಲಿ ಬಾಗಿಲುಗಳಿಗೆ ಸ್ವಯಂಚಾಲಿತ ವ್ಯವಸ್ಥೆಯನ್ನೂ ಇದೇ ಕಂಪನಿ ಒದಗಿಸಿದೆ. ದೇಶದಲ್ಲಿ ಈ ರೀತಿಯ ಶೌಚಾಲಯವನ್ನು ಮೊದಲ ಬಾರಿಗೆ ತಯಾರಿಸಿರುವುದಾಗಿಯೂ ಕಂಪನಿ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.