ADVERTISEMENT

ವೈದ್ಯಕೀಯ ಸೀಟು ತಿರಸ್ಕರಿಸಿದ್ದ ಹುಡುಗಿಯರಿಗೆ ಹೆಚ್ಚು ಚಿನ್ನ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 55ನೇ ಘಟಿಕೋತ್ಸವ; ಮೋನಿಕಾ, ಆಶಾ ಕಿರಣ್‌ ಸಾಧನೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 3:12 IST
Last Updated 22 ಸೆಪ್ಟೆಂಬರ್ 2021, 3:12 IST
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 55ನೇ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ಜಿ.ಮೋನಿಕ (ಬಿ.ಎಸ್ಸಿ ಕೃಷಿ; 10 ಚಿನ್ನ) ಅವರಿಗೆ ಪದಕ ಪ್ರದಾನ ಮಾಡಿದರು. ಕೃಷಿ ಸಚಿವ ಬಿ.ಸಿ.ಪಾಟೀಲ, ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್‌.ರಾಜೇಂದ್ರ ಪ್ರಸಾದ್‌ ಇದ್ದರು– ಪ್ರಜಾವಾಣಿ ಚಿತ್ರ/ಎಂ.ಎಸ್‌.ಮಂಜುನಾಥ್‌
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 55ನೇ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ಜಿ.ಮೋನಿಕ (ಬಿ.ಎಸ್ಸಿ ಕೃಷಿ; 10 ಚಿನ್ನ) ಅವರಿಗೆ ಪದಕ ಪ್ರದಾನ ಮಾಡಿದರು. ಕೃಷಿ ಸಚಿವ ಬಿ.ಸಿ.ಪಾಟೀಲ, ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್‌.ರಾಜೇಂದ್ರ ಪ್ರಸಾದ್‌ ಇದ್ದರು– ಪ್ರಜಾವಾಣಿ ಚಿತ್ರ/ಎಂ.ಎಸ್‌.ಮಂಜುನಾಥ್‌   

ಬೆಂಗಳೂರು: ಕೃಷಿ ಕ್ಷೇತ್ರದಲ್ಲೇ ಎತ್ತರದ ಸಾಧನೆ ಮಾಡಬೇಕೆಂಬ ಹಂಬಲದಿಂದ ವೈದ್ಯಕೀಯ ಸೀಟು ತ್ಯಜಿಸಿದ್ದ ಇಬ್ಬರು ವಿದ್ಯಾರ್ಥಿನಿಯರು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 55ನೇ ಘಟಿಕೋತ್ಸವದಲ್ಲಿ ಅತಿ ಹೆಚ್ಚು ಚಿನ್ನದ ಪದಕ ಪಡೆದ ಹಿರಿಮೆಗೆ ಪಾತ್ರರಾಗಿದ್ದಾರೆ.

ಮಂಡ್ಯ ಕೃಷಿ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದ ಜಿ.ಮೋನಿಕ, ಬಿಎಸ್ಸಿ ಕೃಷಿ ವಿಭಾಗದಲ್ಲಿ 10 ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಬೆಂಗಳೂರು ಕೃಷಿ ಮಹಾವಿದ್ಯಾಲಯದ (ಜಿಕೆವಿಕೆ) ವಿದ್ಯಾರ್ಥಿನಿ ಆಶಾ ಕಿರಣ್‌ಗೆ 7 ಚಿನ್ನದ ಪದಕಗಳು ಒಲಿದಿವೆ. ದಾನಿಗಳು ನೀಡುವ 6 ಚಿನ್ನದ ಪದಕದ ಪ್ರಮಾಣ ಪತ್ರವೂ ಅವರಿಗೆ ಲಭಿಸಿದೆ.

ಮಧುಗಿರಿಯ ಶಿಕ್ಷಕ ಗೋವಿಂದರಾಜು ಹಾಗೂ ಅಶ್ವತ್ಥಮ್ಮ ಅವರ ಪುತ್ರಿ ಮೋನಿಕ. ಅವರು 2014ರಲ್ಲಿ ನಡೆದಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ತುಮಕೂರು ಜಿಲ್ಲೆಗೆ ಮೊದಲಿಗರಾಗಿದ್ದರು.

ADVERTISEMENT

‘ಕೃಷಿ ಕ್ಷೇತ್ರದಲ್ಲಿ ಸಂಶೋಧನೆಗಳು ನಡೆಯುತ್ತಲೇ ಇದ್ದರೂ ರೈತರ ಸಮಸ್ಯೆ ಕೊನೆಯಾಗಿಲ್ಲ. ಸರ್ಕಾರದ ಯೋಜನೆಗಳು ಅವರಿಗೆ ಮುಟ್ಟುತ್ತಲೇ ಇಲ್ಲ. ಹಲವು ನೀತಿಗಳ ಬಗ್ಗೆ ಅರಿವಿಲ್ಲ. ಈ ಕುರಿತು ಕೃಷಿಕರನ್ನು ಜಾಗೃತಗೊಳಿಸುವುದು ನನ್ನ ಆದ್ಯತೆ’ ಎಂದು ಮೋನಿಕ ಹೇಳಿದರು.

‘ಕೃಷಿ ಕ್ಷೇತ್ರವನ್ನು ಎಲ್ಲರೂ ತಾತ್ಸಾರದಿಂದ ಕಾಣುತ್ತಾರೆ. ಜನರ ಈ ಮನೋಭಾವ ಬದಲಿಸಬೇಕೆಂದು ಮೆಡಿಕಲ್‌ ಸೀಟು ಬಿಟ್ಟು ಕೃಷಿಯಲ್ಲೇ ಬಿಎಸ್ಸಿ ಮಾಡಲು ನಿರ್ಧರಿಸಿದ್ದೆ. ಆಗ ಹಲವರು ಹೀಯಾಳಿಸಿದ್ದರು. ಅವರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಬೇಡಿಕೆ ಇರುವ ಕೋರ್ಸ್‌ನಲ್ಲಿ ಓದುವ ಬದಲು, ನಾವು ಓದುವ ಕೋರ್ಸ್‌ಗೆ ಬೇಡಿಕೆ ಬರುವಂತೆ ಮಾಡಬೇಕು. ಅದು ನನ್ನ ಮಂತ್ರ’ ಎಂದರು.

ಕನಸು ನನಸಾಗಿದೆ: ‘ಹಿರಿಯ ವಿದ್ಯಾರ್ಥಿಗಳು ಘಟಿಕೋತ್ಸವದಲ್ಲಿ ಪದಕ ಪಡೆಯುವುದನ್ನು ನೋಡಿದಾಗ ತುಂಬಾ ಖುಷಿಯಾಗುತ್ತಿತ್ತು. ಅವರಂತೆನಾನು ಕೂಡ ಸಾಧನೆ ಮಾಡಬೇಕೆಂಬ ಕನಸು ಚಿಗುರೊಡೆದಿತ್ತು. ಆ ಕನಸು ಈಗ ನನಸಾಗಿದೆ’ ಎಂದು ಆಶಾ ಕಿರಣ್‌ ಸಂತಸ ವ್ಯಕ್ತಪಡಿಸಿದರು.

ಬೆಂಗಳೂರಿನ ಆರ್‌.ಟಿ.ನಗರದ ನಿವಾಸಿಯಾಗಿರುವ ಪತ್ರಕರ್ತ ಕೃಷ್ಣಪ್ಪ ಅವರ ಪುತ್ರಿಆಶಾ.

‘ಚಾಮರಾಜನಗರದಲ್ಲಿ ಮೆಡಿಕಲ್‌ ಸೀಟು ಸಿಕ್ಕಿತ್ತು. ಅದನ್ನು ಬಿಟ್ಟು ಕೃಷಿಯಲ್ಲೇ ಪದವಿ ಪಡೆಯಲು ನಿರ್ಧರಿಸಿದೆ. ಇದಕ್ಕೆ ಅಪ್ಪ, ಅಮ್ಮ ಕೂಡ ಬೆಂಬಲವಾಗಿ ನಿಂತರು. ರೈತರು ರೈತ ಸಂಪರ್ಕ ಕೇಂದ್ರಗಳತ್ತ ಸುಳಿಯುವುದೇ ಇಲ್ಲ. ಈ ಕುರಿತು ಅವರಲ್ಲಿ ಅರಿವು ಮೂಡಿಸಬೇಕು’ ಎಂದರು.

ನೇಕಾರನ ಮಗನಿಗೆ ಚಿನ್ನದ ಗರಿ

‘ಅಪ್ಪಎಂ.ಆರ್‌.ಶ್ರೀನಿವಾಸ್‌, ಅಮ್ಮತನುಜಾ. ಇಬ್ಬರೂ ನೇಕಾರರು. ಬರುವ ಆದಾಯದಲ್ಲಿ ಜೀವನ ನಿರ್ವಹಣೆಯೇ ಕಷ್ಟ. ಅದರಲ್ಲೇ ಹಣ ಉಳಿತಾಯ ಮಾಡಿ ನನ್ನ ವಿದ್ಯಾಭ್ಯಾಸಕ್ಕೆಂದು ನೀಡುತ್ತಿದ್ದರು. ಅವರಿಗೆ ಹೊರೆಯಾಗಬಾರದೆಂದು ವಿಶ್ವವಿದ್ಯಾಲಯದಲ್ಲಿರುವಪ್ರೊ.ನಂಜುಂಡಸ್ವಾಮಿ ಸಂಶೋಧನಾ ಪೀಠದಲ್ಲಿ ಕೆಲಸಕ್ಕೆ ಸೇರಿದ್ದೆ. ಅಲ್ಲಿ ಸಿಗುತ್ತಿದ್ದ ಫೆಲೋಶಿಪ್‌ನಿಂದ ಎಂ.ಎಸ್ಸಿ ವ್ಯಾಸಂಗ ಮುಂದುವರಿಸಿದೆ’ ಎಂದು ಎಂ.ಎಸ್‌.ರಾಮು ಹೇಳಿದರು.

ದೊಡ್ಡಬಳ್ಳಾಪುರದ ಶಾಂತಿನಗರ ನಿವಾಸಿಯಾಗಿರುವ ರಾಮು, ಕೃಷಿ ಅರ್ಥಶಾಸ್ತ್ರದಲ್ಲಿ (ಸ್ನಾತಕೋತ್ತರ) 6 ಚಿನ್ನದ ಪದಕ ಜಯಿಸಿದ್ದಾರೆ.

‘ಮಾರ್ಗದರ್ಶಕರಾದ ಕೆ.ಬಿ.ಉಮೇಶ್‌ ಎಲ್ಲಾ ಬಗೆಯ ಸಹಕಾರ ನೀಡಿದರು. ಸಂಶೋಧನಾ ಪ್ರಬಂಧ ರಚಿಸಲು ಅವರೇ ಲ್ಯಾಪ್‌ಟ್ಯಾಪ್‌ ಕೊಡಿಸಿದ್ದರು. ಅವರ ಸಹಕಾರ ಮರೆಯುವಂತೆಯೇ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.