ADVERTISEMENT

ರಾತ್ರಿ ಹೆಣ್ಣು ಮಕ್ಕಳು ನಿರ್ಭಯವಾಗಿ ಓಡಾಡುವ ಸ್ಥಿತಿ ನಿರ್ಮಿಸಿದ್ದೇವಾ?: ಆರಗ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 21:16 IST
Last Updated 22 ಸೆಪ್ಟೆಂಬರ್ 2021, 21:16 IST
ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ   

ಬೆಂಗಳೂರು: ಮೈಸೂರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ನಿಭಾಯಿಸುವಲ್ಲಿ ಪೊಲೀಸ್‌ ಇಲಾಖೆಯ ವೈಫಲ್ಯ ಎದ್ದು ಕಾಣುತ್ತದೆ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.

ವಿಧಾನಸಭೆಯಲ್ಲಿ ಬುಧವಾರ ನಿಯಮ 69 ರಡಿ ವಿಷಯ ಪ್ರಸ್ತಾಪಿಸಿದ ಅವರು, ದೆಹಲಿಯ ನಿರ್ಭಯ ಪ್ರಕರಣ ಮತ್ತು ತೆಲಂಗಾಣದಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕಿಂತಲೂ ಮೈಸೂರಿನ ಅತ್ಯಾಚಾರ ಪ್ರಕರಣ ಗಂಭೀರ ಸ್ವರೂಪದ್ದು. ಆದರೆ ಮೈಸೂರು ಪೊಲೀಸರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ ಎಂದು ಹರಿಹಾಯ್ದರು.

ಘಟನೆ ನಡೆದ ಪ್ರದೇಶವು ರಿಂಗ್‌ ರಸ್ತೆಗೆ ಕೂಗಳತೆಯಲ್ಲೇ ಇದೆ. ಅದು ನಿರ್ಜನ ಪ್ರದೇಶವೇನೂ ಅಲ್ಲ. ಆದರೆ, ಮೈಸೂರು ಪೊಲೀಸ್‌ ಆಯುಕ್ತರು ಆ ಪ್ರದೇಶದಲ್ಲಿ ಅನೇಕ ಬಾರಿ ಇಂತಹ ಕೃತ್ಯಗಳು ನಡೆದಿವೆ ಎಂದು ಹೇಳಿದ್ದಾರೆ. ಹಾಗಿದ್ದರೆ, ಅಲ್ಲಿ ಪೊಲೀಸರ ಗಸ್ತು ಏಕೆ ಹಾಕಿಲ್ಲ. ಈ ಸ್ಥಳ ಆಲನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಗೆ ಸೇರಿದೆ. ಠಾಣೆಯಲ್ಲಿ ಸಾಕಷ್ಟು ಸಿಬ್ಬಂದಿ ಇದ್ದರೂ ಗಸ್ತು ಹಾಕುವುದಿಲ್ಲ ಎಂದರೆ ಆಶ್ಚರ್ಯವಾಗುತ್ತದೆ ಎಂದರು.

ADVERTISEMENT

ಅಷ್ಟೇ ಅಲ್ಲ ಘಟನೆ ನಡೆದ 14–15 ಗಂಟೆಗಳ ಬಳಿಕವಷ್ಟೆ ಎಫ್‌ಐಆರ್‌ ದಾಖಲು ಮಾಡಲಾಗಿದೆ. ಇಷ್ಟು ತಡ ಮಾಡಿದ್ದು ಏಕೆ? ಪ್ರಕರಣವನ್ನು ಮುಚ್ಚಿ ಹಾಕುವ ಉದ್ದೇಶವಿತ್ತೇ? ಜೆ.ಎಸ್‌ ವರ್ಮಾ ಸಮಿತಿ ವರದಿ ಶಿಫಾರಸ್ಸಿನಂತೆ ಅತ್ಯಾಚಾರಕ್ಕೆ ಒಳಗಾದ ಯುವತಿಯನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸದೇ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದು ಏಕೆ? ಆಕೆಯಿಂದ ಹೇಳಿಕೆ ಏಕೆ ಪಡೆಯಲಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಗೃಹ ಸಚಿವರೂ ಈ ಪ್ರಕರಣದ ಬಗ್ಗೆ ಸೂಕ್ಷ್ಮವಾಗಿ ನಡೆದುಕೊಂಡಿಲ್ಲ. ಮೈಸೂರಿಗೆ ಹೋದವರು ಬೆಳಿಗ್ಗೆ ಚಾಮುಂಡಿ ದೇವಸ್ಥಾನಕ್ಕೆ ಹೋದರು, ಆ ಬಳಿಕ ಪೊಲೀಸ್‌ ಅಕಾಡೆಮಿಗೆ ಹೋದರು. ಕೊನೆಯಲ್ಲಿ ಘಟನೆ ಸ್ಥಳಕ್ಕೆ ಹೋದರು. ಪ್ರಕರಣವನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ. ಘಟನ ಸ್ಥಳಕ್ಕೆ ತಡವಾಗಿ ಹೋಗಿದ್ದು ವೈಫಲ್ಯ ಅಲ್ಲವೆ ಎಂದರು.

ಇದಕ್ಕೆ ಸಮಜಾಯಿಷಿ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಘಟನೆ ನಡೆದ ವಿಷಯ ಗೊತ್ತಾಗುತ್ತಿದ್ದಂತೆ ಮೈಸೂರಿಗೆ ಹೋದೆ. ಮಾರನೇ ದಿನ ಮೈಸೂರಿನಲ್ಲೇ ಪೂರ್ವ ನಿಗದಿತ ಕಾರ್ಯಕ್ರಮ ಇತ್ತು. ಮುಂಜಾನೆ ಚಾಮುಂಡಿ ದೇವರ ದರ್ಶನ ಪಡೆದುದರಲ್ಲಿ ತಪ್ಪೇನಿದೆ. ಕೆಲವು ವಕೀಲರು ಘಟನೆ ನಡೆದ ಸ್ಥಳಕ್ಕೆ ಗೃಹ ಸಚಿವರು ಹೋಗುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನೂ ನೀಡಿದ್ದರು ಎಂದರು.

‘ಸಂಜೆ ಬಳಿಕ ಯುವತಿ ಅಲ್ಲಿಗೆ ಹೋಗಿದ್ದು ಏಕೆ ಎಂದೂ ಗೃಹ ಸಚಿವರು ಪ್ರಶ್ನಿಸಿದರು. ಹೆಣ್ಣು ಮಕ್ಕಳು ಸಂಜೆ ಮೇಲೆ ಏಕೆ ಓಡಾಡಬಾರದು’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

‘ನಾನು ಯಾವುದೇ ದುರುದ್ದೇಶದಿಂದ ಹೇಳಿದ್ದಲ್ಲ. ಸಾಮಾನ್ಯವಾಗಿ ನಮ್ಮ ಮನೆಯ ಹೆಣ್ಣು ಮಕ್ಕಳಿಗೂ ಸಂಜೆ ಬೇಗ ಬನ್ನಿ ಎಂದು ಹೇಳಿ ಕಳಿಸುತ್ತೇವೆ. ಅದೇ ರೀತಿಯಲ್ಲಿ, ನನ್ನ ಮಗಳೆಂದು ಭಾವಿಸಿ ಹೇಳಿದ್ದೆ. ದೇಶದಲ್ಲಿ ಎಲ್ಲಾದರೂ ಸರಿ ರಾತ್ರಿ ವೇಳೆ ಹೆಣ್ಣು ಮಕ್ಕಳು ನಿರ್ಭಯದಿಂದ ಓಡಾಡುವ ಸ್ಥಿತಿ ನಿರ್ಮಾಣ ಮಾಡಿದ್ದೇವಾ’ ಹೇಳಿ ಎಂದು ಆರಗ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.