ADVERTISEMENT

ಹವಾಮಾನ ಆಧಾರಿತ ಬೆಳೆ ವಿಮೆ ವ್ಯಾಪ್ತಿಗೆ ಎಲೆಚುಕ್ಕಿ ರೋಗ : ಸಿಎಂ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 20:35 IST
Last Updated 27 ನವೆಂಬರ್ 2022, 20:35 IST
 ತೀರ್ಥಹಳ್ಳಿ ತಾಲ್ಲೂಕಿನ ಕೈಮರ ಉಂಟೂರು ಗ್ರಾಮದಲ್ಲಿ ಅಡಿಕೆ ಎಲೆ ಚುಕ್ಕಿ ರೋಗ ಬಾಧಿತ ಹರೀಶ್ ಅವರ ತೋಟವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೀಕ್ಷಣೆ ಮಾಡಿದರು. ಗೃಹಸಚಿವ ಆರಗ ಜ್ಞಾನೇಂದ್ರ, ಶಾಸಕ ಹರತಾಳ ಹಾಲಪ್ಪ, ಸಂಸದ ಬಿ.ವೈ.ರಾಘವೇಂದ್ರ ಇದ್ದರು.
ತೀರ್ಥಹಳ್ಳಿ ತಾಲ್ಲೂಕಿನ ಕೈಮರ ಉಂಟೂರು ಗ್ರಾಮದಲ್ಲಿ ಅಡಿಕೆ ಎಲೆ ಚುಕ್ಕಿ ರೋಗ ಬಾಧಿತ ಹರೀಶ್ ಅವರ ತೋಟವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೀಕ್ಷಣೆ ಮಾಡಿದರು. ಗೃಹಸಚಿವ ಆರಗ ಜ್ಞಾನೇಂದ್ರ, ಶಾಸಕ ಹರತಾಳ ಹಾಲಪ್ಪ, ಸಂಸದ ಬಿ.ವೈ.ರಾಘವೇಂದ್ರ ಇದ್ದರು.   

ಶಿವಮೊಗ್ಗ: ಎಲೆಚುಕ್ಕಿ ರೋಗ ಬಾಧಿತ ಅಡಿಕೆ ತೋಟಗಳ ಬೆಳೆಗಾರರಿಗೆ ತಕ್ಷಣದ ನೆರವು ಆಗಿ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ಲಾಭ ಅವರಿಗೂ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ತೀರ್ಥಹಳ್ಳಿ ತಾಲ್ಲೂಕಿನ ಕೈಮರ ಉಂಟೂರಿನಲ್ಲಿ ಭಾನುವಾರ ಎಲೆ ಚುಕ್ಕಿ ರೋಗ ಬಾಧಿತ ಅಡಿಕೆ ತೋಟ ವೀಕ್ಷಣೆ ಮಾಡಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಪ್ರಾಥಮಿಕ ವರದಿ ಅನ್ವಯ ರಾಜ್ಯದಲ್ಲಿ 42 ಸಾವಿರ ಹೆಕ್ಟೇರ್ ನಷ್ಟು ಅಡಿಕೆ ತೋಟಗಳು ಎಲೆ ಚುಕ್ಕಿ ರೋಗ ಬಾಧಿತವಾಗಿವೆ. ರೋಗದ ಬಗ್ಗೆ ಅಧ್ಯಯನ ನಡೆಸಿ ಸಮಗ್ರ ವರದಿ ನೀಡಲು ಸರ್ಕಾರ ತಜ್ಞರ ತಂಡ ರಚಿಸಿದ್ದು, ವರದಿ ಬಂದ ನಂತರ ಪರಿಹಾರ ಕಾರ್ಯಕ್ಕೆ ಸರ್ಕಾರ ಕಾರ್ಯೋನ್ಮುಖವಾಗಲಿದೆ. ರೋಗ ನಿರ್ವಹಣೆಗೆ ಔಷಧಿ ಕೊಳ್ಳಲು ಈಗಾಗಲೇ ₹10 ಕೋಟಿ ಖರ್ಚು ಮಾಡಿದ್ದೇವೆ. ತಜ್ಞರು ವರದಿ ನೀಡಿದ ನಂತರ ಅದು ಎಷ್ಟೇ ಕೋಟಿ ಆದರೂ ವ್ಯಯಿಸಲು ಸರ್ಕಾರ ಬದ್ಧವಿದೆ ಎಂದರು.

ADVERTISEMENT

ಈಗಾಗಲೇ ಹಳದಿ ರೋಗವನ್ನು ಸಮರ್ಥವಾಗಿ ನಿಭಾಯಿಸಿದ ಅನುಭವ ಸರ್ಕಾರಕ್ಕೆ ಇದ್ದು, ಅಡಿಕೆ ತೋಟ ಹಾಗೂ ಅಡಿಕೆ ಬೆಳೆಗಾರ ಇಬ್ಬರನ್ನು ರಕ್ಷಿಸಲು ನಾವು (ಸರ್ಕಾರ) ಬದ್ದವಾಗಿದ್ದೇವೆ ಎಂದು ಬೊಮ್ಮಾಯಿ ಘೋಷಿಸಿದರು.

ಸಚಿವರಾದ ಆರಗ ಜ್ಞಾನೇಂದ್ರ, ಕೆ.ಸಿ. ನಾರಾಯಣಗೌಡ, ಶಾಸಕ ಹರತಾಳು ಹಾಲಪ್ಪ, ಸಂಸದ ಬಿ.ವೈ.ರಾಘವೇಂದ್ರ ಇದ್ದರು.


ಎಲೆಚುಕ್ಕಿ ರೋಗ ಹರಡುವಿಕೆ, ನಿಗಾಗೆ ಮೂರು ತಂಡ ರಚನೆ

ಅಡಿಕೆ ಗಿಡಗಳಿಗೆ ಎಲೆ ಚುಕ್ಕಿ ಶಿಲೀಂಧ್ರ ಜನ್ಯ ರೋಗವಾಗಿದೆ. ಮೊದಲಿನಿಂದಲೂ ಈ ರೋಗ ಇದ್ದು, ಈ ಬಾರಿ ಮಳೆ ಹೆಚ್ಚಳದಿಂದಾಗಿ ತೀವ್ರ ಸ್ವರೂಪ ಪಡೆದಿದೆ ಎಂದು ಇಲ್ಲಿನ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ.ಜಗದೀಶ್ ಹೇಳಿದರು.

ತೀರ್ಥಹಳ್ಳಿ ತಾಲ್ಲೂಕಿನ ಕೈಮರ ಉಂಟೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಎಲೆಚುಕ್ಕಿ ರೋಗದ ಹರಡುವಿಕೆ ಪ್ರಮಾಣ ಅರಿಯಲು ತೀರ್ಥಹಳ್ಳಿಯ ಆಗುಂಬೆ ಹೋಬಳಿ, ಸಾಗರ ತಾಲ್ಲೂಕಿನ ತುಮರಿ ಹಾಗೂ ಹೊಸನಗರಕ್ಕೆ ವಿಶ್ವವಿದ್ಯಾಲಯದ ತಜ್ಞರನ್ನೊಳಗೊಂಡ ಮೂರು ಅಧ್ಯಯನ ತಂಡಗಳನ್ನು ರಚಿಸಲಾಗಿದೆ' ಎಂದರು.

'ಎಲೆಚುಕ್ಕಿ ರೋಗ ಬಾಧೆಯಿಂದ ಅಡಿಕೆ ತೋಟಗಳು ಸಂಪೂರ್ಣ ನಾಶವಾಗಲಿದ್ದು, ಬೆಳೆಗಾರರು ಪರ್ಯಾಯ ಬೆಳೆಗಳತ್ತ ಗಮನಹರಿಸುವಂತೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಶೀತ ಹಾಗೂ ಮಳೆಯ ವಾತಾವರಣ ಕಡಿಮೆ ಅದರೆ ರೋಗ ಬಾಧೆ ತಾನಾಗಿಯೇ ಕಡಿಮೆ ಆಗಲಿದೆ. ಹೆದರಬೇಡಿ. ವದಂತಿಗಳಿಗೆ ಕಿವಿಗೊಡಬೇಡಿ' ಎಂದು ಬೆಳೆಗಾರರಿಗೆ ಕುಲಪತಿ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.