ADVERTISEMENT

‘ಬಾಂಗ್ಲಾ’ ರೆಮ್‌ಡಿಸಿವಿರ್ ಮಾರಾಟ; ಆಯುರ್ವೇದಿಕ್ ವೈದ್ಯ, ನರ್ಸ್‌ ಬಂಧನ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2021, 11:52 IST
Last Updated 29 ಏಪ್ರಿಲ್ 2021, 11:52 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಕೊರೊನಾ ಸೋಂಕಿತರಿಗೆ ನೀಡುವ ‘ರೆಮ್‌ಡಿಸಿವಿರ್’ ಚುಚ್ಚುಮದ್ದು ಅಕ್ರಮವಾಗಿ ಮಾರಾಟ ಮಾಡುತ್ತಿದ್ದವರ ವಿರುದ್ಧ ಸಿಸಿಬಿ ಕಾರ್ಯಾಚರಣೆ ಮುಂದುವರಿದಿದ್ದು, ವಾರದಲ್ಲಿ 40 ಆರೋಪಿಗಳನ್ನು ಬಂಧಿಸಲಾಗಿದೆ.

‘ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ರೆಮ್‌ಡಿಸಿವಿರ್ ಚುಚ್ಚುಮದ್ದಿಗೆ ಬೇಡಿಕೆ ಬಂದಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಹಲವರು, ಕಾಳಸಂತೆಯಲ್ಲಿ ದುಬಾರಿಗೆ ಬೆಲೆಗೆ ಚುಚ್ಚುಮದ್ದು ಮಾರಾಟ ಮಾಡುತ್ತಿದ್ದಾರೆ’ ಎಂದು ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ ಹೇಳಿದರು.

‘ಚುಚ್ಚುಮದ್ದು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿದ್ದ ಹಾಗೂ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದವರನ್ನು ಕಾರ್ಯಾಚರಣೆ ನಡೆಸಿ ಬಂಧಿಸಲಾಗುತ್ತಿದೆ. ಇದುವರೆಗೂ 40 ಮಂದಿಯನ್ನು ಬಂಧಿಸಲಾಗಿದ್ದು, ಅವರಿಂದ ಒಟ್ಟು 80 ಚುಚ್ಚುಮದ್ದು ಬಾಟಲಿಗಳನ್ನು ಜಪ್ತಿ ಮಾಡಲಾಗಿದೆ’ ಎಂದೂ ತಿಳಿಸಿದರು.

ADVERTISEMENT

‘ಬಂಧಿತರಲ್ಲಿ ಆಯುರ್ವೇದಿಕ್ ವೈದ್ಯ, ಕೆಲವರು ನರ್ಸ್, ಔಷಧಿ ಮಳಿಗೆ ಮಾಲೀಕರು, ಔಷಧಿ ವಿತರಕರೂ ಇದ್ದಾರೆ. ಎಲ್ಲರ ವಿರುದ್ಧವೂ ಪ್ರತ್ಯೇಕವಾಗಿ ನಗರದ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದೂ ಹೇಳಿದರು.

ಕಂಪನಿಯಿಂದ ತರಿಸಿ ಮಾರಾಟ; ‘ಕೊರೊನಾ ಸೋಂಕಿತರ ಮಾಹಿತಿ ಸಮೇತ ಬೇಡಿಕೆ ಇರುವುದಾಗಿ ಹೇಳಿ ಆರೋಪಿಗಳು ಕಂಪನಿಯಿಂದ ರೆಮ್‌ಡಿಸಿವಿರ್ ತರಿಸುತ್ತಿದ್ದರು. ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡು ಪ್ರತಿ ಡೋಸ್‌ಗೆ ₹10.000ದಿಂದ ₹11,500ರವರೆಗೂ ಮಾರಾಟ ಮಾರುತ್ತಿದ್ದರು’ ಎಂದೂ ಪಾಟೀಲ ತಿಳಿಸಿದರು.

ಮೇಡ್‌ ಇನ್‌ ಬಾಂಗ್ಲಾ: ‘ಬಾಂಗ್ಲಾದೇಶದಲ್ಲಿ ಉತ್ಪಾದಿಸಲಾಗಿದೆ ಎನ್ನಲಾದ ರೆಮ್‌ಡಿಸಿವಿಆರ್ ಚುಚ್ಚುಮದ್ದು ಆರೋಪಿಯೊಬ್ಬನ ಬಳಿ ಸಿಕ್ಕಿದೆ. ಅದನ್ನು ಬೆಂಗಳೂರಿಗೆ ತಂದವರು ಯಾರು? ಎಲ್ಲಿಂದ ಬಂತು ? ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.